ರೋಡ್‌ ರೋಲರ್‌ ಹರಿದು ಬಾಲಕ ದುರ್ಮರಣ

7
ಹೆಮ್ಮಿಗೆಪುರದ ಗಾಣಿಗೇರ ಪಾಳ್ಯದಲ್ಲಿ ಘಟನೆ * ಬಿಡಿಎ ವತಿಯಿಂದ ನಡೆಯುತ್ತಿದ್ದ ಕಾಮಗಾರಿ

ರೋಡ್‌ ರೋಲರ್‌ ಹರಿದು ಬಾಲಕ ದುರ್ಮರಣ

Published:
Updated:
ರೋಡ್‌ ರೋಲರ್‌ ಹರಿದು ಬಾಲಕ ದುರ್ಮರಣ

ಬೆಂಗಳೂರು: ಹೆಮ್ಮಿಗೆಪುರದಲ್ಲಿ ರೋಡ್ ರೋಲರ್‌ ಹರಿದಿದ್ದರಿಂದ ಮನು (11) ಎಂಬಾತ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ.

ಆತ, ಸ್ಥಳೀಯ ಗಾಣಿಗೇರ ಪಾಳ್ಯದ ನಿವಾಸಿ ರವಿ ಮತ್ತು ಮಂಜುಳಾ ದಂಪತಿ ಪುತ್ರ. ಸೈಕಲ್‌ನಲ್ಲಿ ಶಾಲೆಗೆ ಹೊರಟಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾನೆ.

ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಪೂರ್ಣಗೊಳಿಸಿದ್ದ ಮನು, ಹೊಸ ಶೈಕ್ಷಣಿಕ ವರ್ಷದಿಂದ 6ನೇ ತರಗತಿಗೆ ಹೋಗಬೇಕಿತ್ತು. ಜೂನ್‌ 1ರಿಂದ ಶಾಲೆ ಆರಂಭವಾಗುವ ಹಿನ್ನೆಲೆಯಲ್ಲಿ ಶಿಕ್ಷಕರು, ಮಕ್ಕಳ ಜತೆ ಸೇರಿ ಶಾಲೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅದಕ್ಕಾಗಿ ಮನು ಹಾಗೂ ಆತನ ಸ್ನೇಹಿತರನ್ನು ಶುಕ್ರವಾರ ಬೆಳಿಗ್ಗೆ ಶಾಲೆಗೆ ಕರೆಸಿಕೊಂಡಿದ್ದರು ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ತಿಳಿಸಿದರು.

ಮಧ್ಯಾಹ್ನ ವಾಪಸ್‌ ಮನೆಗೆ ಹೋಗಿದ್ದ ಬಾಲಕ, ಊಟ ಮುಗಿಸಿಕೊಂಡು ಪುನಃ ಶಾಲೆಯತ್ತ ಹೊರಟಿದ್ದ. ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ರೋಡ್ ರೋಲರ್‌ ಚಾಲಕ, ಜಲ್ಲಿ ಕಲ್ಲುಗಳನ್ನು ಸಮ ಮಾಡುತ್ತಿದ್ದ. ಅದೇ ಮಾರ್ಗವಾಗಿ ಬಾಲಕ ಹೋಗುತ್ತಿದ್ದ. ಅಜಾಗರೂಕತೆಯಿಂದ ರೋಡ್‌ ರೋಲರ್‌ ಚಲಾಯಿಸಿದ ಚಾಲಕ, ಸೈಕಲ್‌ಗೆ ಗುದ್ದಿಸಿದ್ದ. ಕೆಳಗೆ ಬಿದ್ದ ಬಾಲಕನ ಹೊಟ್ಟೆ ಮೇಲೆಯೇ ರೋಡ್ ರೋಲರ್‌ ಚಕ್ರವು ಹರಿದು ಹೋಗಿತ್ತು. ಜತೆಗೆ, ತಲೆಗೂ ತೀವ್ರ ಪೆಟ್ಟು ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟ ಎಂದು ಹೇಳಿದರು.

ಬಾಲಕನ ತಂದೆ– ತಾಯಿ ಚಾಮರಾಜನಗರದವರು. ಕೂಲಿ ಕೆಲಸ ಅರಸಿ ತಮ್ಮಿಬ್ಬರು ಮಕ್ಕಳ ಸಮೇತ ನಗರಕ್ಕೆ ಬಂದಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರಿಗೆ ಹಸ್ತಾಂತರಿಸಿದ್ದೇವೆ. ಅದನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಬಾಲಕನ ತಂದೆ ರವಿ ದೂರು ನೀಡಿದ್ದಾರೆ. ಅದರನ್ವಯ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ರೋಡ್ ರೋಲರ್‌ ಜಪ್ತಿ ಮಾಡಿದ್ದೇವೆ ಎಂದರು.

ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

‘ರಸ್ತೆ ಕಾಮಗಾರಿ ನಡೆಸುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ’ ಎಂದು ಸಂಬಂಧಿಕರು ದೂರಿದರು.

ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಕಿಮ್ಸ್‌ ಆಸ್ಪತ್ರೆ ಬಳಿ ಸುದ್ದಿಗಾರರ ಜತೆ ಮಾತನಾಡಿದ ಸಂಬಂಧಿಯೊಬ್ಬರು, ‘ಘಟನೆ ನಡೆದ ಬಳಿಕ ಅಧಿಕಾರಿಗಳು ಯಾರೂ ಸ್ಥಳಕ್ಕೆ ಬಂದು ವಿಚಾರಿಸಿಲ್ಲ. ರಾಜಕಾರಣಿಗಳು, ಅಧಿಕಾರಿಗಳ ಮಕ್ಕಳಿಗೇ ಈ ಸ್ಥಿತಿ ಬಂದಿದ್ದರೆ ಮಾತ್ರ ತ್ವರಿತವಾಗಿ ಸ್ಪಂದಿಸುತ್ತಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

ಮೇಯರ್‌ ಆರ್‌. ಸಂಪತ್‌ರಾಜ್, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ಕಾಮಗಾರಿ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಸಂಚಾರ ನಿರ್ಬಂಧಿಸಬೇಕಿತ್ತು. ಆದರೆ, ಇಲ್ಲಿ ಆ ಕೆಲಸ ಆಗಿಲ್ಲ’ ಎಂದ ಅವರು, ‘ಬಾಲಕನ ಕುಟುಂಬಕ್ಕೆ ಬಿಡಿಎ ಪರಿಹಾರ ನೀಡಬೇಕು. ಅವರು ಕೊಡದಿದ್ದರೆ, ಬಿಬಿಎಂಪಿಯಿಂದಲೇ ನೀಡಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ತಿಂಗಳ ಹಿಂದೆ ಸೈಕಲ್ ಕೊಡಿಸಿದ್ದರು’

ಬಾಲಕನ ತಾಯಿ ಮಂಜುಳಾ ಅವರಿಗೆ ನಾಲ್ವರು ಅಕ್ಕ–ತಂಗಿಯರಿದ್ದಾರೆ. ಅವರೆಲ್ಲರಿಗೂ ತಲಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಕುಟುಂಬಕ್ಕೆ ಮನು ಒಬ್ಬನೇ ಗಂಡು ಮಗನಾಗಿದ್ದ. ಹೀಗಾಗಿ, ಸಂಬಂಧಿಕರೆಲ್ಲರೂ ಆತನನ್ನು ತುಂಬಾ ಹಚ್ಚಿಕೊಂಡಿದ್ದರು. ತಿಂಗಳ ಹಿಂದಷ್ಟೇ ಆತನಿಗೆ ಸೈಕಲ್‌ ಸಹ ಕೊಡಿಸಿದ್ದರು. ಘಟನೆಯಲ್ಲಿ ಆ ಸೈಕಲ್‌ ಸಹ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry