ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಕಗ್ಗಂಟು

7

ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಕಗ್ಗಂಟು

Published:
Updated:
ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಕಗ್ಗಂಟು

ನವದೆಹಲಿ: ಪ್ರಮುಖ ಖಾತೆಗಳ ಹಂಚಿಕೆ ಮತ್ತು ಕಾಂಗ್ರೆಸ್‌ನಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವಿಷಯದಲ್ಲಿ ಜೆಡಿಎಸ್‌ ವರಿಷ್ಠರ ಆಣತಿಯನ್ನು ಪಾಲಿಸಬೇಕೇ ಬೇಡವೇ ಎಂಬ ಕುರಿತು ಒಮ್ಮತ ಮೂಡದ್ದರಿಂದ ಸಚಿವ ಸಂಪುಟ ರಚನೆ ಕಗ್ಗಂಟು ಶನಿವಾರವೂ ಮುಂದುವರಿದಿದೆ.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಂಜೆ ಎರಡು ಗಂಟೆ ಚರ್ಚೆ ನಡೆಸಿದರೂ, ಖಾತೆಗಳ ಹಂಚಿಕೆ ಮತ್ತು ಸಚಿವರ ಆಯ್ಕೆ ಕುರಿತು ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಪ್ರಮುಖವಾದ ಐದಕ್ಕೂ ಅಧಿಕ ಖಾತೆಗಳಿಗೆ ಬಿಗಿ ಪಟ್ಟು ಹಿಡಿದಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ನಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿರ್ದೇಶನ ನೀಡುತ್ತಿರುವುದರಿಂದ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೇ ಸಭೆಯನ್ನು ಭಾನುವಾರಕ್ಕೆ ಮುಂದೂಡಲಾಯಿತು.

ರಾಹುಲ್‌ ಗಾಂಧಿ ಅವರು ಮಧ್ಯಾಹ್ನ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ, ಭಾನುವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಚಿವ ಸ್ಥಾನಗಳ ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಜೆಡಿಎಸ್‌ ಬೇಡಿಕೆ ಇರಿಸಿರುವ ಖಾತೆಗಳನ್ನು ಬಿಟ್ಟುಕೊಟ್ಟು, ಅವರು ಸೂಚಿಸಿರುವ ಕಾಂಗ್ರೆಸ್‌ ಮುಖಂಡರನ್ನು ಸಂಪುಟದಿಂದ ಹೊರಗಿರಿಸಿ ಬೇರೆಯವರಿಗೆ ಸಚಿವ ಸ್ಥಾನ ನೀಡಬೇಕೇ ಎಂದು ಪ್ರಮುಖವಾಗಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕಾಂಗ್ರೆಸ್‌ನ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಸೋಮವಾರ ನಡೆಯಲಿದ್ದು, ಮಂಗಳವಾರ ಸಚಿವ ಸ್ಥಾನ ಅಲಂಕರಿಸಲಿರುವ ನಾಯಕರ ಪಟ್ಟಿ ಬಿಡುಗಡೆಯಾಗಲಿದೆ. ಬುಧವಾರ ಪ್ರಮಾಣ ವಚನ ಸಮಾರಂಭ ನಿಗದಿಯಾಗಲಿದೆ.ಒಂದೊಮ್ಮೆ ಭಾನುವಾರ ಈ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಾಗದಿದ್ದರೆ, ಖಾತೆಗಳ ಹಂಚಿಕೆ ಮತ್ತು ಸಚಿವರ ಆಯ್ಕೆ ಪ್ರಕ್ರಿಯೆಯು ಮತ್ತೆ ಐದಾರು ದಿನಗಳ ಕಾಲ ವಿಳಂಬವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry