ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಬೆಳಗಿದ ‘ಜ್ಞಾನದೇಗುಲ’ದ ದೀಪ

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಆಶ್ರಯದಲ್ಲಿ ಎಜುವರ್ಸ್‌ ಶೈಕ್ಷಣಿಕ ಮೇಳ
Last Updated 26 ಮೇ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣದ ಬದುಕಿನ ಕನಸು ಕಟ್ಟಿಕೊಂಡವರಿಗೆ ಬೆಳಕು ತೋರುವ ‘ಜ್ಞಾನದೇಗುಲ’ದ ದೀಪ ನಗರದ ಜಯಮಹಲ್‌ ಪ್ಯಾಲೇಸ್‌ ಮೈದಾನದಲ್ಲಿ ಶನಿವಾರ ಬೆಳಗಿತು. ಹೊಸ ನಿರೀಕ್ಷೆಯಿಂದ ಬಂದಿದ್ದ ನೂರಾರು ಮನಸುಗಳ ತವಕ ತಲ್ಲಣಗಳಿಗೆ ಈ ಶಿಕ್ಷಣ ಮೇಳ ಉತ್ತರ ನೀಡಿ ನಿರಾಳಗೊಳಿಸಿತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಎಜುವರ್ಸ್‌’ ಶೈಕ್ಷಣಿಕ ಮೇಳದ 10ನೇ ಆವೃತ್ತಿಗೆ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಎನ್‌.ವಿದ್ಯಾಶಂಕರ್‌, ಕಾಮೆಡ್‌ – ಕೆ ಪರಿಣತ ಡಾ.ಶಾಂತಾರಾಂ ನಾಯಕ್‌, ವಿದ್ಯಾರ್ಥಿಗಳಾದ ಪ್ರಾಜ್ಞಾ ಮತ್ತು ಯೋಗಾವಿನಂದ ಅವರು ಚಾಲನೆ ನೀಡಿದರು.

ಅವಕಾಶಗಳ ಪರಿಚಯ...
ಉದ್ಘಾಟನಾ ಭಾಷಣದಲ್ಲಿ ಶಿಕ್ಷಣ ಬದುಕಿನ ಅನಂತರ ತೆರೆಯುವ ಅವಕಾಶಗಳ ಆಗರವನ್ನೇ ವಿದ್ಯಾಶಂಕರ್‌ ಅವರು ಸಮಗ್ರವಾಗಿ ತೆರೆದಿಟ್ಟರು. ಇದುವರೆಗೆ ಊಹಿಸಲಾಗದ, ಭಿನ್ನವೆನಿಸುವ, ಯಾರೂ ಅಷ್ಟಾಗಿ ಗಮನಿಸದ ಕ್ಷೇತ್ರಗಳನ್ನು ಅವರು ತಮ್ಮ ವಿಚಾರ ಮಂಡನೆಯಲ್ಲಿ ವಿವರಿಸಿದರು. ಮುಂದಿನ 5ರಿಂದ 10 ವರ್ಷಗಳಲ್ಲಿ ತೆರೆಯುವ ಉದ್ಯೋಗಾವಕಾಶಗಳ ವಿನ್ಯಾಸ, ಆ ಕ್ಷೇತ್ರದ ಬೇಡಿಕೆಗಳು, ಆದ್ಯತೆಗಳು ಅವರ ಭಾಷಣದಲ್ಲಿ ವ್ಯಕ್ತವಾದವು.

‘ಇ– ಕಾಮರ್ಸ್‌, ಮಾಹಿತಿ ತಂತ್ರಜ್ಞಾನ, ಟೆಲಿಕಮ್ಯೂನಿಕೇಷನ್‌, ಯಂತ್ರ ಆಧಾರಿತ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆ, ಮಾಹಿತಿ ವಿಶ್ಲೇಷಣೆ, ಎಥಿಕಲ್‌ ಹ್ಯಾಕಿಂಗ್‌ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಎಥಿಕಲ್‌ ಹ್ಯಾಕಿಂಗ್‌ (ಅಂತರ್ಜಾಲ ತಾಣಗಳನ್ನು ಅನುಮತಿಯಿಲ್ಲದೇ ನೈತಿಕ ಉದ್ದೇಶಗಳಿಗಾಗಿ ಪರಿಶೀಲಿಸುವುದು), ಸೈಬರ್‌ ಭದ್ರತೆ, ರೋಬೋಟಿಕ್‌ ತಂತ್ರಜ್ಞಾನದಂಥ ಕ್ಷೇತ್ರಗಳು ಮುಂದೆ ಭವ್ಯವಾದ ಅವಕಾಶಗಳ ಬಾಗಿಲನ್ನೇ ತೆರೆದಿಡಲಿವೆ’ ಎಂದರು.

‘ಸದ್ಯ ವಿವಿಧ ಉದ್ಯಮಗಳಲ್ಲಿ ಶೇ 10ರಷ್ಟು ಕೆಲಸಗಳು ರೋಬೋಟಿಕ್‌ ತಂತ್ರಜ್ಞಾನದ ಮೂಲಕ ನಡೆಯುತ್ತಿವೆ. 2025ರ ವೇಳೆಗೆ ಈ ಪ್ರಮಾಣ ಶೇ 25ಕ್ಕೆ ಏರಲಿದೆ. ಚಾಲಕರಹಿತ ವಾಹನಗಳು ವ್ಯಾಪಕವಾಗಿ ರಸ್ತೆಗಿಳಿಯಲಿವೆ. ಸಾಮಾನ್ಯ ಶಿಕ್ಷಣದ ಜತೆಗೆ ಪ್ರಸ್ತುತ ವಿದ್ಯಮಾನಗಳಿಗೆ ತಕ್ಕಂತೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ವಿಶೇಷ ಪರಿಣತಿ ಪಡೆಯಬೇಕು. ಹೀಗೆ ಪರಿಷ್ಕರಣೆಗೊಳಗಾಗುತ್ತಲೇ ಇದ್ದರೆ ಉದ್ಯಮ ಕ್ಷೇತ್ರದಲ್ಲಿ ನಾವು ಅಸ್ತಿತ್ವ ಉಳಿದುಕೊಳ್ಳಲು ಸಾಧ್ಯ. ಉದ್ಯೋಗ ಕ್ಷೇತ್ರ ಮತ್ತು ಶೈಕ್ಷಣಿಕ ವ್ಯವಸ್ಥೆಯ ನಡುವೆ ಸಂಪರ್ಕ ಕಡಿತವಾಗಿಲ್ಲ. ಪ್ರಸ್ತುತ ವಿದ್ಯಮಾನಗಳಿಗೆ ತಕ್ಕಂತಹ ಪರಿಷ್ಕೃತ ಶಿಕ್ಷಣವನ್ನು ಸಂಸ್ಥೆಗಳು ಒದಗಿಸಬೇಕು’ ಎಂದರು.

ಎಲ್ಲ ಶಿಕ್ಷಣ ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ಶಿಕ್ಷಣ ಮೇಳವನ್ನು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ವಿದ್ಯಾಶಂಕರ್‌, ಮೇಳ ಯಶಸ್ವಿಯಾಗಿ 10 ವರ್ಷ ಪೂರೈಸಿರುವುದಕ್ಕೆ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಬಳಗವನ್ನು ಅಭಿನಂದಿಸಿದರು.

ಕಾಮೆಡ್‌–ಕೆ ಬಾಗಿಲಲ್ಲಿ...
ಕಾಮೆಡ್‌ – ಕೆ ಪರಿಣತ ಡಾ.ಶಾಂತಾರಾಂ ನಾಯಕ್‌ ಮಾತನಾಡಿ, ‘ಕಾಮೆಡ್‌ – ಕೆ ವ್ಯವಸ್ಥೆಯೊಳಗೆ ಕೋರ್ಸ್‌ಗೆ ಸೇರುವ ಎಲ್ಲ ಪ್ರಕ್ರಿಯೆಗಳು (https://www.comedk.org) ಆನ್‌ಲೈನ್‌ ವ್ಯವಸ್ಥೆಯ ಮೂಲಕವೇ ನಡೆಯುತ್ತದೆ. ಕೌನ್ಸೆಲಿಂಗ್‌ ಪ್ರಕ್ರಿಯೆಗೆ ₹ 5 ಸಾವಿರವನ್ನು ಪಾವತಿಸಬೇಕಾಗುತ್ತದೆ. ಇದು ಬೋಧನಾ ಶುಲ್ಕದ ಒಂದು ಭಾಗವಾಗಿರುತ್ತದೆ. ನಂತರ ಐಚ್ಛಿಕ ಪ್ರವೇಶಕ್ಕೆ (ಆಪ್ಷನಲ್‌ ಎಂಟ್ರಿ) ಅವಕಾಶ ಕೊಡಲಾಗುತ್ತದೆ. ಇದೇ ಪ್ರಕ್ರಿಯೆಯಲ್ಲಿ ಕಾಲೇಜಿನ ಹೆಸರು, ಬೇಕಾಗುವ ಕೋರ್ಸ್‌ ನಮೂದಿಸಬೇಕು. ಕೋರ್ಸ್‌ ನಮೂದಿಸಿದರೆ ನಿಮಗೆ ಬೇಕಾಗುವ ಕಾಲೇಜು ಅದರ ಗುಣಮಟ್ಟದ ರ‍್ಯಾಂಕ್‌ ಕೂಡಾ ಕಂಪ್ಯೂಟರ್‌ ತೆರೆಯ ಮೇಲೆ ಮೂಡುತ್ತದೆ. ನಿರ್ದಿಷ್ಟವಾದ ಕೋರ್ಸ್‌, ನಿಮ್ಮ ಆಯ್ಕೆಯ ಕಾಲೇಜು ಬೇಕೆಂದಾದರೆ ವಿದ್ಯಾರ್ಥಿಯ ಕಾರ್ಯಕ್ಷಮತೆ ಅತ್ಯುತ್ತಮವಾಗಿರಬೇಕು’ ಎಂದು ಹೇಳಿದರು.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನದವರೆಗೆ ಕಾಯಬಾರದು. ಸಾಕಷ್ಟು ಮುಂಚಿತವಾಗಿ ಸಿದ್ಧತೆ ಇರಬೇಕು. ಎಲ್ಲ ದಾಖಲೆಗಳು ಸಮರ್ಪಕವಾಗಿರಬೇಕು. ಎಲ್ಲ ಮೂಲದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ನಿಜವಾದ ಪ್ರವೇಶಾವಕಾಶ ಕೊಡಲಾಗುತ್ತದೆ ಎಂದರು.

ಆಪ್ಷನಲ್‌ ಎಂಟ್ರಿ: ಎಚ್ಚರ ಅಗತ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌.ರವಿ ಮಾತನಾಡಿ, ‘ಸೀಟು ಆಯ್ಕೆ ಸಂದರ್ಭ ಯಾವುದೇ ಒಂದು ಹಂತ ತಪ್ಪಿದರೂ ಸೀಟು ಕೈತಪ್ಪಿ ಹೋಗಬಹುದು. ಆದ್ದರಿಂದ ಜಾಲತಾಣದಲ್ಲಿ ಸುಮ್ಮನೆ ಪರೀಕ್ಷಾರ್ಥ ಪ್ರಯೋಗ ನಡೆಸಲು ಹೋಗಬಾರದು. ಕಾಲೇಜು ಮತ್ತು ಕೋರ್ಸ್‌ ಆಯ್ಕೆಯಲ್ಲಿ ಆದ್ಯತೆ ನೀಡುವಾಗ ತುಂಬಾ ಎಚ್ಚರ ವಹಿಸಬೇಕು. ಸಿಇಟಿ ಫಲಿತಾಂಶ ಬಂದ ಒಂದೆರಡು ದಿನಗಳಲ್ಲೇ ನಾವು ದಾಖಲಾತಿ ಪರಿಶೀಲನೆಗೆ ವೇಳಾಪಟ್ಟಿ ಹಾಕುತ್ತೇವೆ. ರಾಜ್ಯದ 16 ಕೇಂದ್ರಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತದೆ’ ಎಂದರು.

‘ಸಿಇಟಿ ಫಲಿತಾಂಶದ ಪ್ರಮಾಣ ಪತ್ರ, ಅಧ್ಯಯನ ಪ್ರಮಾಣಪತ್ರ, ಜಾತಿ, ಆದಾಯ ಪ್ರಮಾಣ ಪತ್ರ, ಮೀಸಲಾತಿ, ಗ್ರಾಮೀಣ ಪ್ರದೇಶ ಸಂಬಂಧಿಸಿದ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಓದಿರುವುದು, ಕನ್ನಡ ಮಾಧ್ಯಮದಲ್ಲಿ ಓದಿರುವ, ಹೈದರಾಬಾದ್‌ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಾತಿ ಇದೆ. ಕನ್ನಡ ಭಾಷೆ, ಉಪಭಾಷೆ ಆಡುವವರಿಗೆ ಶುಲ್ಕದಲ್ಲಿ ರಿಯಾಯಿತಿ ಪಡೆಯುವ ಅವಕಾಶವಿದೆ. ಆದರೆ, ಅದಕ್ಕೆ ಸರಳವಾದ ಕನ್ನಡ ಪರೀಕ್ಷೆಯೊಂದನ್ನು ಬರೆಯಬೇಕಾಗುತ್ತದೆ’ ಎಂದರು.

ಸಿಇಟಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ದಾಖಲಾತಿ ಪರಿಶೀಲನೆಯಿಂದ ಹಿಡಿದು, ಕೌನ್ಸೆಲಿಂಗ್‌ ಪ್ರಕ್ರಿಯೆವರೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ದಾಖಲಾತಿ ಪರಿಶೀಲನೆ ನಂತರ 8 ಅಂಕಿಗಳ ಬಳಕೆದಾರನ ಹೆಸರನ್ನು ಕೊಡಲಾಗುತ್ತದೆ. ಅದನ್ನು ಗೋಪ್ಯವಾಗಿಟ್ಟುಕೊಳ್ಳಬೇಕು. ಮುಂದಿನ ಪ್ರಕ್ರಿಯೆಗಳಿಗೆ ಆ ಹೆಸರನ್ನೇ ಬಳಸಿ ತಾವೇ ದಾಖಲಾತಿ ಸಂಬಂಧಿಸಿದ ಪ್ರಕ್ರಿಯೆ ಮಾಡಬಹುದು. ಗೊಂದಲ ಇದ್ದರೆ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಯಾವುದೇ ವೇಳೆ ಬರಬಹುದು’ ಎಂದರು.

ಕೆ.ವಿ.ಬಾಲಸುಬ್ರಹ್ಮಣ್ಯ ಅವರು ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಶಿಕ್ಷಣ ಸಂಸ್ಥೆಗಳು
ಸಿಎಂಆರ್ ವಿಶ್ವವಿದ್ಯಾಲಯ, ಗೀತಂ ವಿಶ್ವವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ ವಿಶ್ವವಿದ್ಯಾಲಯ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಅಮಿಟಿ ಶಿಕ್ಷಣ ಸಂಸ್ಥೆ, ಗಾರ್ಡನ್‌ಸಿಟಿ ಕಾಲೇಜು, ಆಚಾರ್ಯ ಶಿಕ್ಷಣ ಸಂಸ್ಥೆ, ಕೆಂಬ್ರಿಡ್ಜ್‌ ತಾಂತ್ರಿಕ ಶಿಕ್ಷಣ ಸಂಸ್ಥೆ, ಎಂ.ಎಸ್‌.ಎಂಜಿನಿಯರಿಂಗ್‌ ಕಾಲೇಜು, ಎಚ್‌ಕೆಬಿಕೆ ಎಂಜಿನಿಯರಿಂಗ್‌ ಕಾಲೇಜು, ಜೆಜಿಐ ಶಿಕ್ಷಣ ಸಂಸ್ಥೆಗಳು, ದೀಕ್ಷಾ ಶಿಕ್ಷಣ ಸಂಸ್ಥೆ, ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವಾರು ಸಂಸ್ಥೆಗಳು ಭಾಗವಹಿಸಿದ್ದವು.

ಪರೀಕ್ಷಾ ಪ್ರಾಧಿಕಾರದವರು ಹೇಳಿದ್ದು
* ಸಿಇಟಿ ಮೂಲಕ ವೃತ್ತಿ ಶಿಕ್ಷಣ ಕೋರ್ಸ್‌ಗಳ ಸೀಟು ಆಯ್ಕೆಯ ನಾಲ್ಕು ಹಂತಗಳು ಮುಗಿದ ಬಳಿಕ ಒಂದು ವೇಳೆ ಸೀಟು ಬೇಡ
ವಾದಲ್ಲಿ ಅದನ್ನು ರದ್ದುಗೊಳಿಸಲು ಅವಕಾಶ ಇರುವುದಿಲ್ಲ. ಮೊದಲೇ ಎಚ್ಚರ ವಹಿಸಬೇಕು. ಹಾಗೇನಾದರೂ ಮಾಡಿದಲ್ಲಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಲೂ ಅವಕಾಶವಿದೆ.

* ವಿದ್ಯಾರ್ಥಿ 18 ವರ್ಷಕ್ಕಿಂತ ಕೆಳಗಿನವರಾಗಿದ್ದರೆ ದಾಖಲೆಗಳಿಗೆ ಪತ್ರಾಂಕಿತ ಅಧಿಕಾರಿ ಅಥವಾ ನೋಟರಿಯವರ ದೃಢೀಕರಣ ಬೇಕಾಗುತ್ತದೆ. 18 ವರ್ಷ ಮೇಲ್ಪ
ಟ್ಟವರಾಗಿದ್ದರೆ ಸ್ವಯಂ ದೃಢೀಕೃತ ದಾಖಲೆಗಳನ್ನು ಸಲ್ಲಿಸಬಹುದು

* ದ್ವಿತೀಯ ಪಿಯು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಲ್ಲಿ ರ‍್ಯಾಂಕ್‌ ಬದಲಾವಣೆಗೂ ಅವಕಾಶವಿದೆ. ಪರಿಷ್ಕೃತ ಅಂಕಪಟ್ಟಿಯನ್ನು ಪ್ರಾಧಿಕಾರವು ಪಿಯು ಪರೀಕ್ಷಾ ಮಂಡಳಿಯಿಂದ ಪಡೆಯುತ್ತದೆ. ಆಪ್ಷನಲ್‌ ಎಂಟ್ರಿ ಮುಗಿದ ಬಳಿಕವಾದರೆ ವಿದ್ಯಾರ್ಥಿಯೇ ಪರಿಷ್ಕೃತ
ಅಂಕಪಟ್ಟಿಯನ್ನು ಸಲ್ಲಿಸಬೇಕು.

* ಪ್ರಾಧಿಕಾರದ ವ್ಯವಸ್ಥೆ ಪಾರದರ್ಶಕವಾಗಿದೆ. ಇಲ್ಲಿ ಅರ್ಹತೆ ಇದ್ದವರಿಗೆ ಮಾತ್ರ ಅವಕಾಶ. ಯಾವುದೇ ಮಧ್ಯವರ್ತಿಗಳು, ಏಜೆಂಟರ ಮೊರೆ ಹೋಗಿ ಮೋಸಕ್ಕೊಳಗಾಗಬಾರದು.

ಮೇಳದ ಆಚೆ ಈಚೆಗಿನ ಝಲಕ್‌
ಜಯಮಹಲ್‌ ಅರಮನೆ ಮೈದಾನದ ಆವರಣದಲ್ಲಿ ಶನಿವಾರ ಸ್ವಲ್ಪ ಹೆಚ್ಚೇ ಎನಿಸುವಷ್ಟು ತಂಪು ವಾತಾವರಣ ಇತ್ತು. ಶುಕ್ರವಾರ ಮಳೆರಾಯ ಇಡೀ ಪ್ರದೇಶವನ್ನು ತೋಯಿಸಿಬಿಟ್ಟಿದ್ದ. ಇಂದು ಬಿಡುವು ನೀಡಿ ಮೇಳದ ಯಶಸ್ಸಿಗೆ ಸಹಕರಿಸಿದ.

ಬೆಳ್ಳನೆಯ ಸೂರಿನ ಸಭಾಂಗಣದೊಳಗೆ ಬೃಹತ್‌ ಎಲ್‌ ಇಡಿ ಪರದೆಯ ಮೇಲೆ ಪವರ್‌ ಪಾಯಿಂಟ್‌ ಮೂಲಕ ಮಾಹಿತಿ ಮೂಡುತ್ತಿದ್ದವು. ಪೋಷಕರ, ವಿದ್ಯಾರ್ಥಿಗಳ ಕೆಲವು ಸಮಸ್ಯೆಗಳು ಸಣ್ಣದೇ ಅನಿಸಿದರೂ ಸರಿಯಾಗಿ ಪ್ರತಿಕ್ರಿಯಿಸುವ ಮೂಲಕ ಕೊನೇ ಕ್ಷಣದಲ್ಲಿ ಮಾಡಬಹುದಾದ ಗೊಂದಲವನ್ನು ಇಂದೇ ತಜ್ಞರು ನಿವಾರಿಸಿದರು. 

ಸುಮಾರು ಎರಡು ಗಂಟೆಗಳ ಕಾಲ ಸಾಗಿದ ಮೂರು ಉಪನ್ಯಾಸಗಳು ಒಂದನ್ನೊಂದು ಮೀರಿಸಿದವು ಎಂದು ಪೋಷಕರು ಶ್ಲಾಘನೆ ವ್ಯಕ್ತಪಡಿಸಿದರು.

ಪ್ರದರ್ಶನ ಅಂಗಣದೊಳಗೆ ಹಲವಾರು ವಿದ್ಯಾಸಂಸ್ಥೆಗಳು, ವಿಶ್ವ
ವಿದ್ಯಾಲಯಗಳು ಟಿವಿ ಪರದೆ, ಕೈಪಿಡಿ, ಮಾಹಿತಿ ಪತ್ರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆದರು. ಕರ್ಣಾಟಕ ಬ್ಯಾಂಕ್‌, ಎಸ್‌ಬಿಐ, ಕೆನರಾ ಬ್ಯಾಂಕ್‌ ಪ್ರತಿನಿಧಿಗಳು ತಮ್ಮ ಸ್ಟಾಲ್‌ಗಳಲ್ಲಿ ಶೈಕ್ಷಣಿಕ ಸಾಲಗಳು ಮತ್ತು ಬ್ಯಾಂಕಿಂಗ್‌ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.

ಇವೆಲ್ಲದರ ನಡುವೆ ಹೊಂಡಾ ಕಂಪನಿಯ ಪುಟಾಣಿ ನವಿ ಬೈಕ್‌ ಮತ್ತು ಎಕ್ಸ್‌–ಬ್ಲೇಡ್‌ ಬೈಕ್‌ ಪ್ರದರ್ಶನ ಯುವಜನರನ್ನು ಸೆಳೆದವು. ಭಾನುವಾರ (ಮೇ 27) ಕೂಡಾ ಶೈಕ್ಷಣಿಕ ಮೇಳ ಬೆಳಿಗ್ಗೆ 9.30ರಿಂದ ನಡೆಯಲಿದೆ.

*
ಸಂವಾದ ನಮ್ಮಲ್ಲಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಮೂವರು ಸಂಪನ್ಮೂಲ ವ್ಯಕ್ತಿಗಳ ಉಪನ್ಯಾಸ ತುಂಬಾ ಉಪಯುಕ್ತ ಮಾಹಿತಿ ಒಳಗೊಂಡಿತ್ತು.
-ಗಣೇಶ್‌ರಾಜ್‌ ಕೆ. ಬೆಂಗಳೂರು

*
ಮೊದಲ ಸುತ್ತಿನ ಆಪ್ಷನ್‌ ಎಂಟ್ರಿ ಮುಗಿದ ಮೇಲೆ ಎರಡನೇ ಸುತ್ತಿನಲ್ಲಿ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಗೊಂದಲ ಇತ್ತು. ಅದು ಬಗೆಹರಿದಿದೆ.
-ಆನಂದರಾವ್‌, ಬೆಂಗಳೂರು

*
ನಮಗೆ ಉದ್ಯೋಗಿಗಳಲ್ಲ, ಉದ್ಯೋಗ ಸೃಷ್ಟಿಸುವವರು ಬೇಕು. ಅವರಿಗೆ ಇಂದಿನ ಜಗತ್ತು ಆದ್ಯತೆ ನೀಡುತ್ತದೆ. ನವೋದ್ಯಮ ನಮ್ಮಲ್ಲಿ ವೇಗವಾಗಿ ಬೆಳೆಯುತ್ತಿದೆ.
-ಎಂ.ಎನ್‌. ವಿದ್ಯಾಶಂಕರ್‌, ನಿವೃತ್ತ ಐಎಎಸ್‌ ಅಧಿಕಾರಿ

*

ವಿದ್ಯಾರ್ಥಿಗಳ ಮನದ ಮಾತು

ಭಿನ್ನ ಕೋರ್ಸ್‌ಗಳಿಗೆ ಯಾವ ರೀತಿಯ ಶುಲ್ಕಗಳಿವೆ ಎಂಬುದನ್ನು ತಿಳಿಯಲು ಹಾಗೂ ಹೊಸ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆಯಲು ಈ ಮೇಳಕ್ಕೆ ಬಂದಿದ್ದೇನೆ. ಸಾಕಷ್ಟು ಕಾಲೇಜುಗಳು ಇಲ್ಲಿರುವುದರಿಂದ ಉಪಯುಕ್ತ ಮಾಹಿತಿ ಸಿಗುವ ನಿರೀಕ್ಷೆ ಇದೆ.
–ಎಂ.ಚೇತನ್‌, ಬೆಂಗಳೂರು

*
ವೈಮಾನಿಕ ಎಂಜಿನಿಯರಿಂಗ್‌ ಕೋರ್ಸ್‌ ಬಗ್ಗೆ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೆ. ಸಾಕಷ್ಟು ವಿಷಯಗಳು ತಿಳಿಯಿತು. ಎಲ್ಲಾ ಕಾಲೇಜುಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಖುಷಿಯಾಯಿತು.
–ಹರ್ಷಿತಾ, ವಿಜಯನಗರ

*
ಉತ್ತಮ ಕೋರ್ಸ್‌ಗಳನ್ನು ಅರಸಿ ಇಲ್ಲಿಗೆ ಬಂದಿದ್ದೇನೆ. ಯಾವ ಕೋರ್ಸ್‌ಗೆ ಎಷ್ಟು ಬೇಡಿಕೆ ಇದೆ, ಏನೆಲ್ಲ ಉದ್ಯೋಗಾವಕಾಶಗಳಿವೆ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ನನಗೆ ಇಷ್ಟವಾದ ಕೋರ್ಸ್‌ಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ.
–ಉತ್ಕರ್ಷ್‌ ಗುಪ್ತ, ದೊಮ್ಮಲೂರು

*
ಬಿಬಿಎ, ಬಿಸಿಎ ಹಾಗೂ ಎಂಜಿನಿಯರಿಂಗ್‌ನಲ್ಲಿ ಏನೆಲ್ಲ ಕೋರ್ಸ್‌ಗಳಿವೆ ಎಂಬುದನ್ನು ತಿಳಿದುಕೊಂಡೆ. ಕೋರ್ಸ್‌ಗಳು ಅಲ್ಲದೆ, ವಿವಿಧ ಕಾಲೇಜುಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಯಿತು. ಇದೇ ಮೊದಲ ಬಾರಿಗೆ ಶೈಕ್ಷಣಿಕ ಮೇಳಕ್ಕೆ ಬಂದಿದ್ದೇನೆ. ತುಂಬಾ ಖುಷಿಯಾಯಿತು.
–ಸೋನು ಜಿತ್‌, ಕೇರಳ

*
ವೈದ್ಯಕೀಯ ವಿಷಯಗಳಲ್ಲಿ ಹೆಚ್ಚು ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೆ. ಆದರೆ, ಇಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಖ್ಯೆಯೇ ಸಾಕಷ್ಟಿದೆ. ವೈದ್ಯಕೀಯ ಕೋರ್ಸ್‌ಗಳ ಬಗ್ಗೆಯೂ ಸಾಕಷ್ಟು ಮಾಹಿತಿಗಳನ್ನು ನೀಡಬೇಕು.
–ವರ್ಷಾ, ಕೆಂಗೇರಿ ಉಪನಗರ

*
ಈ ಶೈಕ್ಷಣಿಕ ಮೇಳದಿಂದ ವಿವಿಧ ಕಾಲೇಜುಗಳನ್ನು ಭೇಟಿ ಮಾಡಿದ ಅನುಭವ ದೊರೆಯಿತು. ಏರೋಸ್ಪೇಸ್‌ ಕೋರ್ಸ್‌ ಕುರಿತು ಸಾಕಷ್ಟು ವಿಷಯಗಳು ತಿಳಿಯಿತು. ಕೆಲವೊಂದು ಕಾಲೇಜುಗಳಲ್ಲಿ ಈ ಕೋರ್ಸ್‌ ಹೊಸದಾಗಿ ಪ್ರಾರಂಭಿಸಿದ್ದಾರೆ. ಅದನ್ನು ತಿಳಿದುಕೊಳ್ಳಲು ಅನುಕೂಲವಾಯಿತು.
–ಎಚ್‌.ಕೆ.ಶಶಾಂಕ್‌, ಬೆಂಗಳೂರು

*
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಹಾಗೂ ಕಾಮೆಡ್‌–ಕೆ ಕುರಿತು ಇದ್ದ ಗೋಷ್ಠಿಗಳು ಮಾಹಿತಿಪೂರ್ಣವಾಗಿದ್ದವು. ಕಾಲೇಜುಗಳ ಬಗ್ಗೆ ತಿಳಿಯಲು ಇಲ್ಲಿಗೆ ಬಂದಿದ್ದೆ. ಅದರೊಂದಿಗೆ ಇತರೆ ಮಾರ್ಗದರ್ಶನ ದೊರೆತದ್ದು, ತೃಪ್ತಿದಾಯಕವಾಯಿತು.
–ಮಾಳವಿಕಾ ಆನಂದ್‌, ಹೆಬ್ಬಾಳ

*
ಶೈಕ್ಷಣಿಕ ಮೇಳ ಮಾಹಿತಿಯ ಆಗರವಾಗಿತ್ತು. ದ್ವಿತೀಯ ಪಿಯು ಪರೀಕ್ಷೆ ಮುಗಿಸಿ, ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿದ್ದ ನನಗೆ ಸಾಕಷ್ಟು ವಿಷಯಗಳು ಗೊತ್ತಾದವು. ಎಂಜಿನಿಯರಿಂಗ್‌ನಲ್ಲಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂಬ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನೆರವಾಯಿತು.
–ಎಸ್‌. ಹರಿಹರನ್, ರಾಮಮೂರ್ತಿನಗರ

*
ಸಿಇಟಿ ಪ್ರಕ್ರಿಯೆ ಬಗ್ಗೆ ಇದ್ದ ಸಾಕಷ್ಟು ಗೊಂದಲಗಳು ಪರಿಹಾರವಾದವು. ಇನ್ನಷ್ಟು ಭಿನ್ನ ವಿಷಯಗಳ ಬಗ್ಗೆ ಉಪನ್ಯಾಸ ಹಮ್ಮಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಯಿತು.
–ಎಂ. ಶ್ರಾವ್ಯ, ಕನಕಪುರ

*
ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ಗಳನ್ನು ಹೊಂದಿರುವ ಕಾಲೇಜುಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯುವ ಆಕಾಂಕ್ಷೆಯಿಂದ ಇಲ್ಲಿಗೆ ಬಂದಿದ್ದೆ. ನನ್ನ ನಿರೀಕ್ಷೆಗೂ ಮೀರಿ, ಮಾಹಿತಿ ದೊರೆತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಈ ಮೇಳ.
–ಸ್ವರೂಪ್ ಶಂಕರ್‌, ಬನ್ನೇರುಘಟ್ಟ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT