ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಜಾಗೃತಿ ಅಗತ್ಯ

7
‘ಸಂವಿಧಾನ ಬದಲಾವಣೆ ಹುನ್ನಾರ ಮತ್ತು ಜಾತಿ ಪ್ರಜ್ಞೆ’ ವಿಷಯ ಕುರಿತು ಪ್ರೊ. ರವಿವರ್ಮ ಕುಮಾರ್ ಅಭಿಮತ

ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಜಾಗೃತಿ ಅಗತ್ಯ

Published:
Updated:

ಧಾರವಾಡ: ‘ಸಂವಿಧಾನ ಬದಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಆ ಕುರಿತು ಜಾಗರೂಕರಾಗಿರುವುದು ಒಳಿತು’ ಎಂದು ಕಾನೂನು ತಜ್ಞ ಪ್ರೊ. ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.

ಶನಿವಾರದಿಂದ ಆರಂಭವಾದ 5ನೇ ಆವೃತ್ತಿಯ ಮೇ ಸಾಹಿತ್ಯ ಮೇಳದಲ್ಲಿ ‘ಸಂವಿಧಾನದ ಸವಾಲುಗಳು’ ಎಂಬ ಗೋಷ್ಠಿಯಲ್ಲಿ ‘ಸಂವಿಧಾನ ಬದಲಾವಣೆ ಹುನ್ನಾರ ಮತ್ತು ಜಾತಿ ಪ್ರಜ್ಞೆ’ ಕುರಿತು ಅವರು ಮಾತನಾಡಿದರು.

‘ಸ್ವಾತಂತ್ರ್ಯ, ಸಮಾನತೆ, ಸೋದರತೆಯ ಜೊತೆಗೆ ಭಾರತದ ಸಂವಿಧಾನ ಸಾಮಾಜಿಕ ನ್ಯಾಯ ಕಲ್ಪಿಸಿದೆ. ಆದರೆ ನಿರಕ್ಷರಕುಕ್ಷಿಗಳು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಇಂಥ ದಾರಿಹೋಕರ ಮಾತಿಗೆ ಬೆಲೆ ಇಲ್ಲವಾದರೂ, ದೇಶದ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆಯ ಗಂಟೆ’ ಎಂದರು.

‘ಸಂವಿಧಾನ ಕಲ್ಪಿಸಿದ ಸಾಮಾಜಿಕ ನ್ಯಾಯದಡಿ ರಾಜ್ಯದಲ್ಲಿ ಶೇ 26ರಷ್ಟು ಹಿಂದುಳಿದ ಜಾತಿ, ಪಂಗಡಕ್ಕೆ ಸೇರಿದವರು ಇದ್ದಾರೆ. ಇವರಿಗಿರುವ ಮೀಸಲಾತಿ ಶೇ 18ರಷ್ಟು ಮಾತ್ರ. ಆದರೆ ಪುರೋಹಿತಶಾಹಿಗಳಿಗೆ ಕೆಲವೆಡೆ ಇಂದಿಗೂ ಶೇ 100ರಷ್ಟು ಮೀಸಲಾತಿ ಇದೆ. ಇವರಿಂದ ಆಗುತ್ತಿರುವ ಅವಕಾಶಗಳ ದರೋಡೆಯನ್ನು ಯಾರೂ ಪ್ರಶ್ನಿಸುವುದಿಲ್ಲ’ ಎಂದರು.

‘ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಲ್ಲಿ 2013ರಿಂದ ಇಲ್ಲಿಯವರೆಗೆ 4200 ಜನ ಹಸಿವಿನಿಂದ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತಂದ ಅನ್ನಭಾಗ್ಯ, ಕ್ಷೀರಭಾಗ್ಯ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಹಸಿವಿನಿಂದ ಮೃತಪಟ್ಟ ಉದಾಹರಣೆ ಇಲ್ಲ. ಇದು 4 ವರ್ಷ ಪೂರೈಸಿದ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿದೆ’ ಎಂದರು.

‘ಪ್ರತಿಯೊಬ್ಬರ ಖಾತೆಗೆ ಹಾಕುತ್ತೇನೆ ಎಂದಿದ್ದ ₹ 15 ಲಕ್ಷ ಹಾಗೂ ಕಪ್ಪು ಹಣ ದೇಶಕ್ಕೆ ಬಂದಿಲ್ಲ. ಆದರೆ ಪ್ರತಿ ರಸ್ತೆಯಲ್ಲಿ ದೇವಸ್ಥಾನಗಳು ನಿರ್ಮಾಣಗೊಂಡು 4 ಕುಟುಂಬಗಳಿಗೆ ಉದ್ಯೋಗ ಸೃಷ್ಟಿಯಾಗಿವೆ’ ಎಂದು ಟೀಕಿಸಿದರು.

‘ಪ್ರಜಾಪ್ರಭುತ್ವದ ಆತಂಕಗಳು’ ಕುರಿತು ಮಾತನಾಡಿದ ಪ್ರೊ. ಮುಜಾಫರ್ ಅಸ್ಸಾದಿ, ‘ಪ್ರಜಾಪ್ರಭುತ್ವ ಸುಳ್ಳುಗಳ ಮಧ್ಯೆ ಸಿಲುಕಿ ಬಹುಸಂಸ್ಕೃತಿ ನಾಶವಾಗುತ್ತಿದೆ. ತೀವ್ರತರ ರಾಷ್ಟ್ರೀಯತೆ ಕೂಡಾ ದೇಶಕ್ಕೆ ಮಾರಕವೇ. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಬಂಡವಾಳಶಾಹಿತ್ವವನ್ನು ಅಂಬಾನಿ, ಅದಾನಿ ನಿಯಂತ್ರಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಆಧಾರ್ ಮೂಲಕ ಜನಸಾಮಾನ್ಯರ ಚಲನವಲನಗಳ ಮೇಲೆ ನಿಗಾ ಇಟ್ಟು ಹಿಡಿತ ಸಾಧಿಸಲಾಗುತ್ತಿದೆ. ಪ್ರಜಾಪ್ರಭುತ್ವ ಎನ್ನುವುದು ಸುಳ್ಳು ರಾಜಕಾರಣದ ಭಾಗವಾಗಿ, ಜನಮಾನಸದಲ್ಲಿ ಅಫೀಮಿನ ನಶೆಯಂತೆ ಆವರಿಸಿದೆ.

ಇದು ಸತ್ಯೋತ್ತರ ನಂತರದ ಕಾಲಾವಧಿಯಾಗಿರುವುದೂ ಇದಕ್ಕೆ ಕಾರಣ’ ಎಂದರು. ಬಸವಪ್ರಭು ಹೊಸಕೇರಿ ಗೋಷ್ಠಿ ಸಂಯೋಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry