ಮೂರು ದಿನಗಳ ಮಾವು ಮೇಳ ಆರಂಭ

7
71 ಬಗೆಯ ಮಾವು ತಳಿಗಳ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಚಾಲನೆ

ಮೂರು ದಿನಗಳ ಮಾವು ಮೇಳ ಆರಂಭ

Published:
Updated:
ಮೂರು ದಿನಗಳ ಮಾವು ಮೇಳ ಆರಂಭ

ಧಾರವಾಡ: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಆಶ್ರಯದಲ್ಲಿ ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೂರು ದಿನಗಳ ಮಾವು ಮೇಳಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ರೈತರು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾವುಗಳನ್ನು ಮಾರಾಟ ಮಾಡಲು ಮೇಳ ಅನುಕೂಲವಾಗಿದೆ. ಪ್ರತಿ ವರ್ಷವೂ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲೂ ಇನ್ನೂ ಹೆಚ್ಚಿನ ರೈತರು ಮೇಳದಲ್ಲಿ ಪಾಲ್ಗೊಳ್ಳುವಂತಾಗಲಿ’ ಎಂದರು.

‘ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ಮೇ 28ರವರೆಗೆ ಮಾವು ಮೇಳ ಜರುಗಲಿದೆ’ ಎಂದರು.

ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಈಶ್ವರಚಂದ್ರ ಹೊಸಮನಿ ಮಾತನಾಡಿ, ‘ರೈತ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆತರೆ ಮೇಳ ನಡೆಸಿದ್ದು ಸಾರ್ಥಕವಾಗುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಮಾವು ಇಳುವರಿ ಕುಂಠಿತಗೊಂಡಿದೆ. ಆದರೂ ರೈತರು ಅತ್ಯಂತ ಉತ್ಸಾಹದಿಂದ ಮೇಳದಲ್ಲಿ ಭಾವಹಿಸಿದ್ದಾರೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ಮಡಿವಾಳ, ‘ರೈತರೊಂದಿಗೆ ಚರ್ಚಿಸಿ ವಿವಿಧ ತಳಿಗಳ ಮಾರಾಟಕ್ಕೆ ಸರಾಸರಿ ದರ ನಿಗದಿ ಮಾಡಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮ್ಯಾಂಗೋ ಪ್ರವಾಸೋದ್ಯಮವನ್ನೂ ಆಯೋಜಿಸ

ಲಾಗುವುದು’ ಎಂದರು.

ಮಾವು ರುಚಿ ಮಾತ್ರವಲ್ಲ, ಅದರ ಸುವಾಸನೆಯಲ್ಲೂ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಮೇಳದ ಮೊದಲ ದಿನವೇ ಸಾಕಷ್ಟು ಜನರು ಭೇಟಿ ನೀಡಿ ಹಣ್ಣಿನ ರುಚಿ ಸವಿದರು. ತೋಟಗಾರಿಕೆ ಇಲಾಖೆ ಆವರಣದಲ್ಲಿ ನಿರ್ಮಿಸಿರುವ ಸುಮಾರು 30 ಮಳಿಗೆಗಳಲ್ಲಿ ಜಿಲ್ಲೆಯ ಸುತ್ತಲಿನ ಭಾಗದ ರೈತರು ತಾವು ಬೆಳೆದ ಕರಿ ಈಶಾಡಿ, ವನರಾಜ, ಆಪೂಸ್, ಕಲಮಿ, ಬೆನಸಾನ್ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟ ನಡೆಸಿದ್ದಾರೆ.

ಅಲ್ಲದೇ ಸುವರ್ಣರೇಖಾ, ಮಲ್ಲಿಕಾ, ಮಂಟಪ, ಆಮ್ಲಟ್, ಲಾಂಗ್ರಾ, ಪ್ರಿನ್ಸಸ್ (ಇಸ್ರೇಲ್‌ ತಳಿ), ಪೆದ್ದರಸಂ, ಶುಗರ್ ಬೇಬಿ, ಆಪೂಸ್, ಅಡಿಕೆ ಮಾವು, ಗೋವಾ ಮಂಕೂರ, ಸುಂದರ ಶಾ ತಳಿಗಳು ಸೇರಿದಂತೆ ಸುಮಾರು 71 ತಳಿಗಳ ಮಾವುಗಳನ್ನು ಇಡಲಾಗಿದೆ.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸಿಇಒ ಸ್ನೇಹಲ್ ರಾಯಮಾನೆ, ಸದಸ್ಯರಾದ ನಿಂಗಪ್ಪ ಘಾಟೀನ, ಭಾವನಾ ಬೇಲೂರ, ನಾಗನಗೌಡ ಪಾಟೀಲ, ಈರಮ್ಮ ದಾಸನಕೊಪ್ಪ, ಸುರೇಶಗೌಡ ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry