ಸಾಂಕ್ರಾಮಿಕ ರೋಗ ಭೀತಿ: ಆತಂಕ

7
ಎಚ್.ಡಿ.ಕೋಟೆಯ ಹ್ಯಾಂಡ್‌ಪೋಸ್ಟ್ ವೃತ್ತದ ಬಳಿ ಕಸದ ರಾಶಿ

ಸಾಂಕ್ರಾಮಿಕ ರೋಗ ಭೀತಿ: ಆತಂಕ

Published:
Updated:
ಸಾಂಕ್ರಾಮಿಕ ರೋಗ ಭೀತಿ: ಆತಂಕ

ಎಚ್.ಡಿ.ಕೋಟೆ: ಹ್ಯಾಂಡ್‌ಪೋಸ್ಟ್ ವೃತ್ತದ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೈಸೂರು-ಮಾನಂದವಾಡಿ ರಸ್ತೆ, ಸರಗೂರು ರಸ್ತೆ ಮತ್ತು ಎಚ್.ಡಿ.ಕೋಟೆಯ ಕಡೆಗೆ ಬರುವ ರಸ್ತೆ ಬದಿಯಲ್ಲಿ ಕೋಳಿ, ಕುರಿ ಕತ್ತರಿಸುವ ಕಸಾಯಿಖಾನೆಯವರು ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡಿದ್ದಾರೆ. ಇದಲ್ಲದೇ ಆರ್.ಪಿ. ವೃತ್ತದಲ್ಲಿರುವ ಹಲವು ಅಂಗಡಿಯವರು ಕಸವನ್ನೂ ಸಹ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ಇದರಿಂದ ವಾತಾವರಣ ಗಬ್ಬೆದ್ದು ನಾರುತ್ತಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರಾಗಲಿ ಹಾಗೂ ಪುರಸಭೆಯವರಾಗಲಿ ಕಸ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಸ ಸುರಿಯಲು ಜಾಗ ನಿಗದಿಪಡಿಸಿಲ್ಲ. ಆದ್ದರಿಂದ ಸಮಸ್ಯೆ ಉಲ್ಬಣಿಸುತ್ತಿದ್ದು, ಅಧಿಕಾರಿಗಳು ಕಸ ಸುರಿಯುವುದಕ್ಕೆ ಜಾಗವನ್ನು ಗುರುತಿಸಬೇಕೆಂದು ಮಂಜು ಮನವಿ ಮಾಡಿದ್ದಾರೆ.

ಕಸದ ರಾಶಿ ತೆರವುಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಎಚ್.ಡಿ.ಕೋಟೆ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ಸ್ಥಳೀಯ ವ್ಯಾಪಾರಿ ನಂದಕುಮಾರ್ ಎಚ್ಚರಿಸಿದ್ದಾರೆ.

ಹ್ಯಾಂಡ್‌ಪೋಸ್ಟ್‌ ಮತ್ತು ಯರಹಳ್ಳಿ ಗ್ರಾಮವು ಹೈರಿಗೆ ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟು ಪುರಸಭೆಗೆ ಸೇರಿವೆ. ಆದರೂ ಇಲ್ಲಿನ ಕಸದ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆಯ ಅಧಿಕಾರಿಗಳು ಗಮನಹರಿಸಿಲ್ಲ ಎಂದು ಹೋಟೆಲ್ ಮಾಲೀಕ ಸೋಮು ಆರೋಪಿಸಿದ್ದಾರೆ.

ಕಸದ ರಾಶಿ ತೆರವುಗೊಳಿಸುವ ವಿಚಾರವಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಹ್ಯಾಂಡ್‌ಪೋಸ್ಟ್‌ನ ವಾಹನ ಚಾಲಕರ ಸಂಘದ ಅಧ್ಯಕ್ಷ ಶಿವಪ್ಪ ದೂರಿದ್ದಾರೆ.

ಮುಖ್ಯ ರಸ್ತೆಯ ಬದಿ ಕಸ ಹಾಕಬೇಡಿ ಎಂದು ಹೋಟೆಲ್ ಮಾಲೀಕರಿಗೆ ಹಾಗೂ ಕೋಳಿ ಅಂಗಡಿ ಮಾಲೀಕರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಜೊತೆಗೆ ಇಲ್ಲಿ ಕಸದ ರಾಶಿ ಸುರಿವ ವಿಚಾರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ತಿಳಿವಳಿಕೆಯನ್ನು ಕೊಡಲಾಗಿದೆ. ಆದರೆ ರಾತ್ರಿ ಬಂದು ರಸ್ತೆಬದಿ ಕಸ ಸುರಿಯುತ್ತಿದ್ದಾರೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಪ್ರತಿಕ್ರಿಯಿಸಿದರು.

**

ಕಸದ ರಾಶಿಗಳನ್ನು ತೆರವುಗೊಳಿಸಲು ಮುಂಜಾಗ್ರತೆ ವಹಿಸುತ್ತೇವೆ. ಜೊತೆಗೆ ಹೋಟೆಲ್ ಮಾಲೀಕರಿಗೂ ಹಾಗೂ ಕೋಳಿ ಅಂಗಡಿ ಮಾಲೀಕರಿಗೂ ಈ ವಿಚಾರದಲ್ಲಿ ಅರಿವು ಮೂಡಿಸಲಾಗುವುದು

ರಮೇಶ್, ಪುರಸಭೆ, ಮುಖ್ಯಾಧಿಕಾರಿ, ಎಚ್.ಡಿ.ಕೋಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry