ಮೊಗ್ಗಿನ ಜಡೆಗಳ ಚಿತ್ತಾರ; ಸಡಗರ

7

ಮೊಗ್ಗಿನ ಜಡೆಗಳ ಚಿತ್ತಾರ; ಸಡಗರ

Published:
Updated:
ಮೊಗ್ಗಿನ ಜಡೆಗಳ ಚಿತ್ತಾರ; ಸಡಗರ

ಬೇಸಿಗೆ ರಜೆ ಮಜವಾಗಿ ಕಳೆಯಲು ಮಕ್ಕಳು ಅಜ್ಜಿ ಮನೆಗೆ ಬರುವುದು ವಾಡಿಕೆ. ಬಂದ ಮೇಲೆ ಸ್ಥಳೀಯ ಸುತ್ತಮು

ತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ನೋಡುವುದೆ ಇನ್ನೊಂದು ಮಜ. ವಿಶೇಷ ಭಕ್ಷ್ಯ ಭೋಜನ ಸವಿದು ಹೊರಡುವ ಮುನ್ನ ಪ್ರತಿ ಅಜ್ಜಿಯ ಮನದಲ್ಲಿ ಒಂದು ಆಸೆ, ತನ್ನ ಮೊಮ್ಮಗಳಿಗೆ ಮಲ್ಲಿಗೆ ಮೊಗ್ಗಿನ ಜಡೆ ಹಾಕಿ, ತನ್ನೆಲ್ಲ ಒಡವೆಗಳನ್ನು ತೊಡಿಸಿ ನೋಡುವ ಆಸೆ.

ಒಂದು ಫೋಟೊ ತೆಗೆಸಿ, ಕಟ್ಟುಗಾಜು ಹಾಕಿಸಿ ಗೋಡೆಗೆ ತಗುಲಿಸಿ, ಮೊಮ್ಮಕ್ಕಳು ಊರಿಗೆ ಹೋದರೂ ನೋಡುತ್ತಲೇ ಕಾಲ ಕಳೆಯುವ ಆಸೆ ಅಜ್ಜಿಯರದು. ಆದರೆ ಅಜ್ಜಿ ಮನೆಗೆ ಬೇಸಿಗೆ ರಜಕ್ಕೆಂದು ಹೋದಾಗ ತೆಗೆಸಿಕೊಂಡ ಮಲ್ಲಿಗೆ ಮೊಗ್ಗಿನ ಜಡೆಯ ಫೋಟೊ ಎಂದು ತೆಗೆದಿಟ್ಟುಕೊಂಡು ಜೀವನದ ಪಯಣದಲ್ಲಿ ಆಗ್ಗಿಂದಾಗೆ ನೋಡಿಕೊಳ್ಳವ ಪರಿ ಮೊಮ್ಮಗಳದು.

ಬೇಸಿಗೆ ಕಾಲದಲ್ಲಿ ಮಾವು, ಹಲಸು ಮಾರುಕಟ್ಟೆಗೆ ಬಂದು ರುಚಿ ಸವಿಯುವವರು ಒಂದೆಡೆಯಾದರೆ, ಮಾರುಕಟ್ಟೆ ಬೀದಿಯಲ್ಲಿ ಸಂಚರಿಸುವ ಪ್ರತಿ ಹೆಣ್ಣು ಮಕ್ಕಳಿಗೂ ಘಮ್ಮೆಂದು ಮೂಗಿಗೆ ಬಡಿಯುವ ಮಲ್ಲಿಗೆ ಹೂವಿನ ಸುವಾಸನೆಗೆ ಮನಸೋತು ಮೊಗ್ಗಿನ ಜಡೆಗೆ ಸಿದ್ಧತೆ ನಡೆಸುವವರು ಮತ್ತೊಂದೆಡೆ.

ಮಲ್ಲಿಗೆ ತನ್ನ ಸುವಾಸನೆಯಿಂದ ಎಲ್ಲರ ಮನಗೆದ್ದ ಹೂವಾಗಿದೆ. ಮಾನಸಿಕ ಒತ್ತಡಗಳನ್ನು ದೂರ ಮಾಡಿ ಪ್ರಶಾಂತತೆ ನೀಡುವ ಶಕ್ತಿ ಮಲ್ಲಿಗೆ ಹೂವಿಗಿದೆ. ಹಿಂದಿನ ದಿನಗಳಲ್ಲಿ ಅಜ್ಜಿಯಂದಿರು, ಮನೆಯ ಹಿತ್ತಲಲ್ಲಿ ಬೆಳೆಯುತ್ತಿದ್ದ ದುಂಡು ಮಲ್ಲಿಗೆ ಹೂವುಗಳನ್ನು ಮಧ್ಯಾಹ್ನ ಕಿತ್ತು ತಂದು ಅಚ್ಚುಕಟ್ಟಾಗಿ ಮಕ್ಕಳ ಜಡೆಯ ಉದ್ದಕ್ಕೆ ಮುತ್ತಿನಂತೆ ಪೋಣಿಸುತ್ತಿದ್ದರು.

ಇನ್ನೂ ಹೆಚ್ಚು ಅಂದಗಾಣಲೆಂದು ಮಲ್ಲಿಗೆ ಹೂವಿನ ಜತೆ ಕನಕಾಂಬರ ಮತ್ತು ಗುಲಾಬಿ ಹೂವುಗಳನ್ನು ಸೇರಿಸಿ ಜಡೆಹೆಣೆಯುತ್ತಿದ್ದರು. ಅಲ್ಲದೆ ಮೊಮ್ಮಗಳ ಅಂದ ಹೆಚ್ಚಿಸಲು ತಮ್ಮ ಪೆಠಾರಿಯಲ್ಲಿಟ್ಟಿದ್ದ ತಮ್ಮ ಜಮಾನದ ಆಭರಣಗಳಾದ ಡಾಬು, ಮಾಟೀಲು, ನತ್ತು, ಬೈತಲೆಬೊಟ್ಟು, ಕೆನ್ನೆಚೈನು, ಕಾಸಿನ ಸರ, ಬೆಂಡೋಲೆಗಳನ್ನು ಹಾಕ್ಕಿ ಮೊಮ್ಮಗಳ ಅಂದವನ್ನು ನೋಡಿ ಸಂಭ್ರಮಿಸಿ ದೃಷ್ಠಿಯನ್ನು ನಿವಾಳಿಸುತ್ತಿದ್ದರು. ಈಗ ಪದ್ಧತಿ ಬದಲಾಗಿದೆ. ಮಾರುಕಟ್ಟೆಯಲ್ಲಿ ರೆಡಿಮೆಡ್‌ ಸಿಗುವ ಮೊಗ್ಗಿನ ಜಡೆಯನ್ನು ತಂದು ಜಡೆಗೆ ಹೆಣೆಯುತ್ತಿದ್ದಾರೆ. ಆದರೂ ಸಂಭ್ರಮಕ್ಕೆ ಕೊರತೆ ಇಲ್ಲ ಎಂದು ಹೇಳಬಹುದು.

ಪಟ್ಟಣದ ಬಿ.ಟಿ.ನಾಗರತ್ನಮ್ಮ ಅವರಿಗೆ ತಮ್ಮ ಮೊಮಕ್ಕಳಾದ ಸ್ನೇಹಾ ಮತ್ತು ನಿವೇದಿತಾ ಅವರಿಗೆ ಪ್ರತಿ ಬೇಸಿಗೆ ರಜೆಯಲ್ಲಿ ಮಲ್ಲಿಗೆ ಮೊಗ್ಗಿನಜಡೆ ಹಾಕಿಸಿ, ಫೋಟೊ ಸ್ಟುಡಿಯೋಗೆ ಕರೆದುಕೊಂಡು ಹೋಗಿ ವಿವಿಧ ಭಂಗಿಯ ಭಾವಚಿತ್ರಗಳನ್ನು ತೆಗೆಸುತ್ತಾರೆ. ಇಲ್ಲದೆ ಹೋದರೆ ಬೇಸಿಗೆ ರಜಾ ಕಳೆದುಹೋಗುವುದೇ ಗೊತ್ತಾಗುವುದಿಲ್ಲ ಎನ್ನುತ್ತಾರೆ ನಾಗರತ್ನಮ್ಮ. ಈ ಬಾರಿಯೂ ಮಲ್ಲಿಗೆ ಮೊಗ್ಗು ತಂದು ಪರಿಚಿತರಿಂದ ಪೋಣಿಸಿ, ಮೊಮ್ಮಕಳಿಗೆ ಜಡೆ ಹಾಕಿಸಿ ಸಂಭ್ರಮಿಸಿದ್ದಾರೆ.

ಕಾಲ ಬದಲಾಗಿದ್ದರೂ ಪ್ರತಿವರ್ಷ ಮಲ್ಲಿಗೆ ಹೂವಿನ ಋತುವಿನಲ್ಲಿ ಸಾಂಪ್ರದಾಯಿಕ ಹಿಂದೂ ಕುಟುಂಬಗಳು ಸೇರಿದಂತೆ ಮುಸ್ಲಿಂ ಕುಟುಂಬದವರೂ ತಮ್ಮ ಮಕ್ಕಳಿಗೆ ಮೊಗ್ಗಿನ ಜಡೆ ಹಾಕಿ, ತಮ್ಮ ಆಧುನಿಕ ಮೊಬೈಲ್ ಫೋನ್‌ಗಳಿದ್ದರೂ ಸ್ಟುಡಿಯೋಗಳಿಗೆ ಬಂದು ಫೋಟೊ ತೆಗೆಸಿಕೊಂಡು ಹೋಗುವ ಪರಿಪಾಠ ಬೆಳೆದು ಬಂದಿರುವುದರಿಂದ ಸ್ಟುಡಿಯೋ ಮಾಲೀಕರಿಗೆ ಎರಡು ತಿಂಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶಗಳಿವೆ ಎಂದು ಸಾಯಿ ಸ್ಟುಡಿಯೋ ಮಾಲೀಕ ಸುಪ್ರೀತ್ ತಿಳಿಸಿದರು.

ಹಿಂದಿನ ದಿನಗಳಲ್ಲಿ ಕೆಲ ಸಂಘ–ಸಂಸ್ಥೆಗಳು ಮಲ್ಲಿಗೆ ಮೊಗ್ಗಿನ ಜಡೆಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದ್ದವು, ಕಾಲ ಬದಲಾದಂತೆ ಸ್ಪರ್ಧೆಗಳು ಮಾಯವಾಗಿವೆ. ಮುಂದಿನ ದಿನಗಳಲ್ಲಿ ಈ ರೀತಿಯ ಸ್ಪರ್ಧೆಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಂಡು ಸಾಂಪ್ರದಾಯಿಕ ಕಲೆಯನ್ನು ಪ್ರೋತ್ಸಾಹಿಸಲಿ ಎಂದು ವಿಷ್ಣು ಭಜನಾ ಮಂಡಳಿಯ ಮಹಾಲಕ್ಷ್ಮಿ, ಶ್ರೀಮತಿ, ಪ್ರಮೀಳಾ, ಶಶಿಕಲಾ ಅಭಿಪ್ರಾಯ ವ್ಯಕ್ತಪಡಿಸಿದರು.

-ಟಿ.ಎಚ್‌.ಗುರುಚರಣ್‌ಸಿಂಗ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry