3
ಕ್ರಮಬದ್ಧವಾಗಿ ಚರಂಡಿ ನಿರ್ಮಿಸದಿದ್ದರೆ ಡಿ.ಸಿಗೆ ದೂರು

ಕಳಪೆ ಕಾಮಗಾರಿ: ಜಲ್ಲಿ ಕಿತ್ತು ಆಕ್ರೋಶ

Published:
Updated:
ಕಳಪೆ ಕಾಮಗಾರಿ: ಜಲ್ಲಿ ಕಿತ್ತು ಆಕ್ರೋಶ

ನಾಲತವಾಡ: ಇಲ್ಲಿನ ಲೊಟಗೇರಿ ಗ್ರಾಮದ ದಲಿತ ಕೇರಿಯಲ್ಲಿ ಕೈಗೊಂಡಿರುವ ಚರಂಡಿ ಕಾಮಗಾರಿಗೆ ಸಮರ್ಪಕವಾಗಿ ಸಿಮೆಂಟ್, ಉಸುಕು ಬೆರೆಸದೇ ಕಳಪೆ ಕಾಮಗಾರಿ ಮಾಡಿದ್ದು, ಭಾರಿ ಗೋಲ್‌ಮಾಲ್‌ ನಡೆದಿದೆ ಎಂದು ಆರೋಪಿಸಿ ಡಿಎಸ್‌ಎಸ್‌ ಮುಖಂಡರು ಚರಂಡಿಗೆ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಕಿತ್ತು ಹಾಕಿ ಪ್ರತಿಭಟಿಸಿದರು.

ಕಳೆದ 3 ತಿಂಗಳಿಂದ ಆರ್ ಅಂಡ್‌ ಆರ್ ಕಂಪನಿ ₹80 ಲಕ್ಷ ವೆಚ್ಚದಲ್ಲಿ ಚರಂಡಿ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸುತ್ತಿದೆ. ಗ್ರಾಮದಲ್ಲಿ ಸದ್ಯ ನಿರ್ಮಿಸುತ್ತಿರುವ ಚರಂಡಿಗಳನ್ನು ಸಮತಲವಾಗಿ ನಿರ್ಮಿಸುತ್ತಿಲ್ಲ. ಅಂದಾಜು (ಎಸ್ಟಿಮೇಟ್‌) ಪ್ರಕಾರ ಜಲ್ಲಿ, ಸಿಮೆಂಟ್, ಉಸುಕು ಹಾಗೂ ಕಬ್ಬಿಣ ಬಳಸುತ್ತಿಲ್ಲ. ಕೇವಲ ತೋರಿಕೆಗೆ ಮಾತ್ರ ಚರಂಡಿ ತಳಭಾಗದಲ್ಲಿ ಒಂದು ಕಬ್ಬಿಣದ ರಾಡು ಅಳವಡಿಸಿ ರಾತ್ರೋರಾತ್ರಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಂಜಿನಿಯರ್‌ ನಾಪತ್ತೆ: ಕಾಮಗಾರಿ ನಡೆದು 3 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆಯ ಯಾವ ಅಧಿಕಾರಿಯೂ ಬಂದು ಕಾಮಗಾರಿ ಪರಿಶೀಲನೆ ನಡೆಸಿಲ್ಲ. ಜೋಗಿ ಎಂಬ ಅಧಿಕಾರಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ದೂರಿದರು.

ನಿಯಮಬದ್ಧವಾಗಿ ನಿರ್ಮಿಸಿ: ಬೇಕಾಬಿಟ್ಟಿ ನಿರ್ಮಿಸಿರುವ ಚರಂಡಿಗಳನ್ನು ಕಿತ್ತೆಸೆದು, ಎಸ್ಟಿಮೇಟ್‌ ಪ್ರಕಾರವೇ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಗುತ್ತಿಗೆದಾರರು ಹಾಗೂ ಎಂಜಿನಿಯರ್ ಜೋಗಿ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಡಿಎಸ್ಎಸ್ ಮುಖಂಡರಾದ ನಾಗಪ್ಪ ಮಾದರ, ಗಂಗಪ್ಪ ಮಾದರ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry