ಮಂದಹಾಸ ಮೂಡಿಸಿದ ಡಬ್ಬು

7
20 ಗುಂಟೆ ಜಮೀನಿನಲ್ಲಿ ನಾಲ್ಕೈದು ಲಕ್ಷ ಆದಾಯದ ನಿರೀಕ್ಷೆ

ಮಂದಹಾಸ ಮೂಡಿಸಿದ ಡಬ್ಬು

Published:
Updated:
ಮಂದಹಾಸ ಮೂಡಿಸಿದ ಡಬ್ಬು

ನೀರಿನ ಕೊರತೆಯಿಂದ ದ್ರಾಕ್ಷಿ ಬೆಳೆ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ ರೈತರ ಮೊಗದಲ್ಲಿ ಡಬ್ಬು ಮೆಣಸಿನ ಕಾಯಿ ಮಂದಹಾಸ ಮೂಡಿಸಿದೆ.

ತಾಲ್ಲೂಕಿನ ಹೊನಗನಹಳ್ಳಿ ಗ್ರಾಮದ ರೈತ ಸಿದ್ದನಗೌಡ ಬಗಲಿ ಎಂಬುವರು ತಮ್ಮ ತೋಟದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಬೆಳೆದಿದ್ದರು. ನೀರಿನ ಕೊರತೆಯಿಂದ ಬೆಳೆ ಒಣಗಿ ಹೋದರೂ ಎದೆಗುಂದದೇ ತೋಟಗಾರಿಕಾ ಇಲಾಖೆ ನೀಡಿದ ಸಹಾಯಧನದೊಂದಿಗೆ ₹22 ಲಕ್ಷ ಖರ್ಚು ಮಾಡಿ 20 ಗುಂಟೆ ಜಮೀನಿನಲ್ಲಿ 100X200 ಅಳತೆಯ ಪಾಲಿಹೌಸ್‌ ನಿರ್ಮಿಸಿ ಡಬ್ಬು ಮೆಣಸಿನಕಾಯಿ ಬೆಳೆದಿದ್ದಾರೆ, ಇದರಿಂದ ಒಳ್ಳೆಯ ಆದಾಯವೂ ಬರುತ್ತಿದೆ.

‘ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ತುಡಿತದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದ್ರಾಕ್ಷಿ ಹಚ್ಚಿದ್ದೆ. ಐದಾರೂ ವರ್ಷ ಚಲೋ ಲಾಭಾನೂ ತಗೊಂಡೀನಿ. ಆದ್ರ ಒಂದೆರಡ ವರ್ಷ ಹಿಂದ ನೀರಿನ ಸಮಸ್ಯೆ ಆಯ್ತು. ಮೂರ್ನಾಲ್ಕು ಬೋರ್‌ವೆಲ್‌ ಕೊರೆಸಿದರೂ ನೀರಿನ ಕೊರತೆ ನೀಗಲಿಲ್ಲ. ಅರ್ಧ ಕಿಲೋ ಮೀಟರ್ ದೂರದಿಂದ ಬೇರೆಯವರ ಹೊಲದಿಂದ ಪೈಪ್‌ಲೈನ್‌ನಿಂದ ನೀರು ತಂದ್ರು ಸಾಕಾಗ್ಲಿಲ್ಲ. ದ್ರಾಕ್ಷಿ ಒಣಗಿ ಹೋಯ್ತು’ ಎಂದು ಸಿದ್ದನಗೌಡ ಬಗಲಿ ಅವರು ಅಳಲು ತೋಡಿಕೊಂಡರು

ತೋಟಗಾರಿಕಾ ಇಲಾಖೆಯ ಸಹಾಯಧನ ಪಡೆದು ಪಾಲಿಹೌಸ್‌ ನಿರ್ಮಿಸಿದೆ. ಜನವರಿಯಲ್ಲಿ ಬೆಳಗಾವಿಯಿಂದ ಐದು ರೂಪಾಯಿಯಂತೆ ಐದು ಸಾವಿರ ಡಬ್ಬು ಮೆಣಸಿನಕಾಯಿ ಸಸಿ ತಂದು ಹಚ್ಚಿದ್ದೆ. ಎಣ್ಣೆ, ಗೊಬ್ಬರ, ಸದಿ ಆಳು ಸೇರಿ ಲಕ್ಷದವರೆಗೆ ಖರ್ಚಾಗಿರಬಹುದು. ಮಾರ್ಚ್‌ನಿಂದ ಮಾರಾಟ ಚಾಲೂ ಮಾಡೀನಿ. ಇಲ್ಲಿವರ್ಗೆ ತಿಂಗಳಿಗೆ ಏನಿಲ್ಲ ಅಂದ್ರು ಮೂವತ್ತರಿಂದ ಮೂವತೈದು ಸಾವಿರ ಲಾಭ ಬಂದಾದ. ಎಂಟತ್ತು ತಿಂಗಳತನಕ ಮಾರಬಹುದು. ಎಲ್ಲಾ ಖರ್ಚ್‌ ತೆಗೆದು ನಾಲ್ಕೈದು ಲಕ್ಷ ಲಾಭ ಆಗಬಹುದು ಅಂಥ ಅನ್ಕೋಂಡೀನಿ. ಡಬ್ಬು ಮೆಣಸಿನಕಾಯಿ ಆದ್ಮೇಲೆ ಬ್ಯಾರೆ ಬೆಳೆ ಹಾಕ್ತೀನಿ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರುಕಟ್ಟೆ ಸಮಸ್ಯೆ: ವಿಜಯಪುರ, ಬಾಗಲಕೋಟೆ ಮಾರ್ಕೆಟ್‌ಗಿಂತ ಬೆಂಗಳೂರು, ಮುಂಬೈ, ಕೊಲ್ಕತ್ತದಲ್ಲಿ ನಮ್ಮ ಮಾಲಿಗೆ ಬಾಳ ಬೇಡಿಕೆ ಐತಿ. ಅಲ್ಲಿ ಒಂದ್‌ ಕಿಲೋ ನಲವತ್ತರಿಂದ ಐವತ್ತು ರೂಪಾಯಿವರೆಗೆ ಮಾರ್ತೀವಿ. ಜೋಡಿ ಯಾರಾದ್ರೂ ಇದ್ರೆ ಬಾಡಿಗಿ ಕಡಿಮೆ ಆಗ್ತಿತ್ತು.

ವಿಜಾಪುರದಾಗ ಬರೀ ಇಪ್ಪತ್ತು ರೂಪಾಯಿ ಹೋಗ್ತಾದ. ಅನಿವಾರ್ಯವಾಗಿ ವಾರದಾಗ ಮೂರು ದಿನ ಇಲ್ಲೆ ಮಾರ್ತಿವಿ. ಇದೆ ರೇಟ್‌ನ್ಯಾಗ ಮಾರಿದ್ರು ತುಸು ಲಾಭ ಆಗತೈತಿ’ ಎಂದು ಸಿದ್ದನಗೌಡ ಹೇಳಿದರು.

**

ಡಬ್ಬು ಮೆಣಸಿನಕಾಯಿಯಲ್ಲಿ ತಿಂಗಳಿಗೆ ಮೂವತ್ತರಿಂದ ಮೂವತೈದು ಸಾವಿರ ಆದಾಯ ಬರುತ್ತಿದೆ. ಪಾಲಿಹೌಸ್‌ ನಿರ್ಮಾಣದಿಂದ ನೀರಿನ ಸಮಸ್ಯೆ ಆಗಿಲ್ಲ ‌

ಸಿದ್ದನಗೌಡ ಬಗಲಿ, ಹೊನಗನಹಳ್ಳಿ ರೈತ

ಬಾಬುಗೌಡ ರೋಡಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry