ಬಂದ್‌ಗೆ ರೈತ ಸಂಘ ಬೆಂಬಲ ಇಲ್ಲ

7
ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಕಾಲಾವಕಾಶ ಅವಶ್ಯ

ಬಂದ್‌ಗೆ ರೈತ ಸಂಘ ಬೆಂಬಲ ಇಲ್ಲ

Published:
Updated:

ಚನ್ನಪಟ್ಟಣ: ಬಿಜೆಪಿ ಸೋಮವಾರ ಕರೆ ನೀಡಿರುವ ರೈತರ ಸಾಲ ಮನ್ನಾಕ್ಕಾಗಿ ಬಂದ್‌ಗೆ ರಾಜ್ಯ ರೈತಸಂಘ ಬೆಂಬಲ ನೀಡುತ್ತಿಲ್ಲ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗ ತಾನೇ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ವಿಚಾರವಾಗಿ ಸಮಯಾವಕಾಶ ಕೋರಿದ್ದಾರೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರ ಕೋರಿಯನ್ನು ಮಾನ್ಯ ಮಾಡಿ ಅವರಿಗೆ ಕಾಲಾವಕಾಶ ನೀಡುವುದು ಸರಿಯಾದ ಕ್ರಮ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ಅವರಿಗೂ ಕಾಲಾವಕಾಶ ಬೇಕಿರುವುದರಿಂದ ರೈತಸಂಘ ಬಂದ್ ಗೆ ಬೆಂಬಲ ನೀಡುತ್ತಿಲ್ಲ ಎಂದಿದ್ದಾರೆ.

ನೂತನ ರಾಜ್ಯ ಸರ್ಕಾರವು ತಾನು ನೀಡಿರುವ ಭರವಸೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸದಿದ್ದಲ್ಲಿ ಹೋರಾಟದ ರೂಪುರೇಷೆಗಳನ್ನು ರೈತಸಂಘವೇ ಸಿದ್ಧಪಡಿಸುತ್ತದೆ ಎಂದಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಅವರ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಕುಮಾರಸ್ವಾಮಿ ಅವರು ರೈತರ ಬಗ್ಗೆ ಉದಾರ ಧೋರಣೆ ತಾಳುತ್ತಾರೆ ಎಂಬ ಭರವಸೆ ಇದೆ. ಅವರು ತಮ್ಮ ಮಾತಿನಂತೆ ನಡೆದುಕೊಳ್ಳದಿದ್ದರೆ ರೈತಸಂಘದಿಂದ ಹೋರಾಟ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಅದು ಕಾಣುತ್ತಿಲ್ಲ. ತಾವೇ ರೈತರ ಸಾಲ ಮನ್ನಾ ಮಾಡುವ ಅವಕಾಶವಿದ್ದರೂ ಮನ್ನಾ ಮಾಡುವ ಗೋಜಿಗೆ ಹೋಗಿಲ್ಲ ಎಂದರು.

ಯಡಿಯೂರಪ್ಪ ಅವರಿಗೆ ಇದು ತಿಳಿಯುತ್ತಿಲ್ಲ. ಈಗ ರಾಜ್ಯ ಸರ್ಕಾರದ ಮೇಲೆ ಕಾಲಾವಕಾಶವನ್ನೂ ಕೊಡದೆ ಹೋರಾಟ ಮಾಡುತ್ತಿದ್ದೇವೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.

ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಕಾಲಾವಕಾಶ ಕೊಡಿ ಎಂದಿದ್ದಾರೆ ಅಷ್ಟೇ ಎಂದು ತಿಳಿಸಿದ್ದಾರೆ.

ಸಾಲ ಮನ್ನಾದ ಪೂರ್ತಿ ರೂಪುರೇಷೆ ಸಿದ್ಧಪಡಿಸುತ್ತೇವೆ. ನಂತರ ಅದನ್ನು ಶೀಘ್ರ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಬಂದ್ ಮಾಡುತ್ತೇವೆ ಎಂದು ಹೊರಟಿರುವುದು ರಾಜಕೀಯವೇ ಹೊರತು ರೈತರ ಅಭ್ಯುದಯಕ್ಕಾಗಿ ಅಲ್ಲ, ಹಾಗಾಗಿ ರೈತಸಂಘ ಈ ಬಂದ್ ನಿಂದ ದೂರ ಉಳಿಯಲಿದೆ ಎಂದು ಅವರು ತಿಳಿಸಿದ್ದಾರೆ.ಬಿಜೆಪಿಗೆ ನಿಜವಾಗಿಯೂ ರೈತರ ಮೇಲೆ ಕಾಳಜಿ ಇದ್ದರೆ ತಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರೈತರು ವ್ಯವಸಾಯಕ್ಕಾಗಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಮಾಡಿರುವ ಎಲ್ಲ ಸಾಲಗಳನ್ನೂ ಮನ್ನಾ ಮಾಡಿಸಲು ಒತ್ತಡ ಹೇರಲಿ ಎಂದು ಲಕ್ಷ್ಮಣಸ್ವಾಮಿ ಸಲಹೆ ನೀಡಿದ್ದಾರೆ.

**

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಗಳು ಕಳೆದರೂ ರೈತರ ಬಗ್ಗೆ ಯಾವುದೇ ಉಪಯುಕ್ತ ಕಾರ್ಯಕ್ರಮಗಳನ್ನು ರೂಪಿಸಿಲ್ಲ

ಕೆ.ಎಸ್.ಲಕ್ಷ್ಮಣಸ್ವಾಮಿ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry