7
ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆಯಾದರೂ ಆರಂಭವಾಗದ ಕಾಮಗಾರಿ

ಸೋರುತಿಹುದು ಕಾಲೇಜು ಮಾಳಿಗೆ: ಭಯದಲ್ಲೇ ಪಾಠ

Published:
Updated:
ಸೋರುತಿಹುದು ಕಾಲೇಜು ಮಾಳಿಗೆ: ಭಯದಲ್ಲೇ ಪಾಠ

ಮಂಡ್ಯ: ಮಳೆಗಾಲ ಆರಂಭ ವಾದೊಡನೆ ಅರಕೇಶ್ವರನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಭಯದಲ್ಲೇ ತರಗತಿಗೆ ತೆರಳುತ್ತಾರೆ. ಸೋರುವ ಕೊಠಡಿಗಳಲ್ಲಿ ಪಾಠ ಕೇಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು ಕಟ್ಟಡ ಕುಸಿದು ಬೀಳುವ ಆತಂಕ ಸದಾ ಅವರನ್ನು ಕಾಡುತ್ತದೆ.

60 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಕೊಠಡಿಗಳು ಹಳೆಯದಾಗಿರುವ ಕಾರಣ ಕಟ್ಟಡ ಬಳಕೆಗೆ ಅಯೋಗ್ಯವಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ. ಆದರೂ ದಶಕದಿಂದ ಸೋರುತ್ತಿರುವ ಕಟ್ಟಡದಲ್ಲೇ ಪಾಠ ಪ್ರವಚನ ನಡೆಯುತ್ತಿದೆ. ಮಳೆಗಾಲ ಆರಂಭವಾದಾಗ ಕೊಠಡಿಗಳಲ್ಲಿ ನೀರು ನಿಂತಿರುತ್ತದೆ. ಆ ಸಂದರ್ಭದಲ್ಲಿ ಉಪನ್ಯಾಸಕರು ಕಾಲೇಜು ಅಂಗಳದ ಮರದ ಕೆಳಗೆ ಪಾಠ ಮಾಡುತ್ತಾರೆ. ಕಳೆದ 15 ದಿನಗಳಿಂದ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಕೊಠಡಿಯೊಳಗೆ ನೀರು ನಿಂತಿದೆ. ಆತಂಕಗೊಂಡಿರುವ ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರು ಹಾಜರಾಗುತ್ತಿದ್ದಾರೆ.

ಸುತ್ತಮುತ್ತಲ ಹಳ್ಳಿಗಳ ಬಡ ವಿದ್ಯಾರ್ಥಿನಿಯರು ಈ ಕಾಲೇಜಿಗೆ ಬರುತ್ತಾರೆ. ಕಟ್ಟಡ ಕುಸಿದು ಬೀಳುವ ಹಂತ ತಲುಪಿದರೂ ಪುನರ್ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಉಪನ್ಯಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದಾರೆ. ಅಹಿತಕರ ಘಟನೆ ನಡೆಯುವ ಮೊದಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಆದರೂ ಕಾಲೇಜು ಪುನರ್ನಿರ್ಮಾಣದ ನಿರೀಕ್ಷೆ ಮರೀಚಿಕೆಯಾಗಿಯೇ ಉಳಿದಿದೆ.

‘ಮಳೆಗಾಲದಲ್ಲಿ ಪಾಠ ಪ್ರವಚನ ಮಾಡಲು ನಮಗೂ ಭಯವಾಗುತ್ತದೆ. ವಿದ್ಯಾರ್ಥಿನಿಯರೂ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಗೋಡೆಗಳಲ್ಲಿ ಮಳೆ ನೀರು ಇಳಿದು ಕಚೇರಿಯಲ್ಲಿರುವ ದಾಖಲೆಗಳು ಹಾಳಾಗುವ ಸಂಭವವಿದೆ. ಆದಷ್ಟು ಬೇಗ ಈ ಕಟ್ಟಡ ಸಮಸ್ಯೆಗೆ ಒಂದು ಪರಿಹಾರ ಬೇಕಿದೆ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಆರಂಭವಾಗಬೇಕು’ ಎಂದು ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಹೇಳಿದರು.

ಮೈಷುಗರ್‌ ಕಾರ್ಖಾನೆ ಕಟ್ಟಡ : ಕಾಲೇಜು ಕಟ್ಟಡ ಮೈಷುಗರ್‌ ಕಾರ್ಖಾನೆಗೆ ಸೇರಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕಾದರೆ ಮೈಷುಗರ್‌ ಕಾರ್ಖಾನೆಯ ಅನುಮತಿ ಅವಶ್ಯ. ಕಳೆದ ಒಂದು ದಶಕದಿಂದಲೂ ಇಲಾಖೆ ಹಾಗೂ ಕಾರ್ಖಾನೆಯ ನಡುವಿನ ಸಂವಹನದ ಕೊರತೆಯಿಂದಾಗಿ ಹೊಸ ಕಟ್ಟಡ ನಿರ್ಮಾಣದ ಚಟುವಟಿಕೆಗಳು ನಡೆದಿಲ್ಲ. ವಿದ್ಯಾರ್ಥಿಗಳು ಹೋರಾಟದ ಹಾದಿ ಹಿಡಿದ ನಂತರ ಎರಡೂ ಇಲಾಖೆಗಳು ಮಾತುಕತೆ ನಡೆಸಿದವು. ನಂತರ ಹೊಸ ಕಟ್ಟಡ ನಿರ್ಮಾಣಕ್ಕೆ ಮೈಷುಗರ್‌ ಕಾರ್ಖಾನೆ ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಆದರೆ ಇನ್ನೂ ಕಾಮಗಾರಿ ಆರಂಭವಾಗದ ಕಾರಣ ವಿದ್ಯಾರ್ಥಿನಿಯರ ಸಮಸ್ಯೆ ಮುಂದುವರಿದಿದೆ.

‘ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಹಾಗೂ ಮೈಷುಗರ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ನಾಗಭೂಷಣ್‌ ಅವರು ಮಾತುಕತೆ ನಡೆಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ‘ಹೊಸ ಕಟ್ಟಡ ನಿರ್ಮಿಸಲು ಯಾವುದೇ ಅಭ್ಯಂತರ ಇಲ್ಲ ಎಂದು ಅಜಯ್‌ ನಾಗಭೂಷಣ್‌ ಎನ್‌ಒಸಿ ಕೊಟ್ಟಿದ್ದಾರೆ. ಅದರಂತೆ ನಮ್ಮ ಇಲಾಖೆ ಹೊಸ ಕಟ್ಟಡ ನಿರ್ಮಾಣಕ್ಕೆ ₹ 1 ಕೋಟಿ ಬಿಡುಗಡೆ ಮಾಡಿದೆ. ಮುಂದೆ ಟೆಂಡರ್‌ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಆರಂಭವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷವನ್ನು ಹೊಸ ಕಟ್ಟಡದಲ್ಲಿ ಆರಂಭಿಸಲಾಗುವುದು’ ಎಂದು ಡಿಡಿಪಿಯು ಎಚ್‌.ಸಿ.ಕೃಷ್ಣ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry