ಗೋನಾಳು ಓಣಿಗಳಲ್ಲಿ ಬೂಟಿನ ಸದ್ದು

7
ಗುಂಪು ಘರ್ಷಣೆ ಪ್ರಕರಣ: ಗ್ರಾಮ ತೊರೆದ ಹಲವರು, ಅಧಿಕಾರಿಗಳು, ಪೊಲೀಸರ ಭೇಟಿ

ಗೋನಾಳು ಓಣಿಗಳಲ್ಲಿ ಬೂಟಿನ ಸದ್ದು

Published:
Updated:
ಗೋನಾಳು ಓಣಿಗಳಲ್ಲಿ ಬೂಟಿನ ಸದ್ದು

ಕಂಪ್ಲಿ: ತಾಲ್ಲೂಕಿನ ಗೋನಾಳು ಗ್ರಾಮದಲ್ಲಿ ದಾರಿ ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎರಡು ಗುಂಪುಗಳ ನಡುವೆ ವಾಗ್ವಾದ, ಕಲ್ಲು ತೂರಾಟದಲ್ಲಿ ವ್ಯಕ್ತಿಯೊಬ್ಬರ ಎಡಗೈ ಮುಂಗೈ ತುಂಡಾದ ಘಟನೆಯಿಂದ ಗ್ರಾಮದಲ್ಲಿ ಆತಂಕ ಮನೆಮಾಡಿದೆ.

ಘಟನೆಯ ನಂತರ ಗ್ರಾಮದ ಯುವ ಕರು, ಪುರುಷರು ಗ್ರಾಮ ತೊರೆದಿದ್ದಾರೆ. ಪ್ರತಿ ಮನೆಯಲ್ಲಿ ವೃದ್ಧರು, ಗೃಹಿಣಿಯರು, ಮಕ್ಕಳು ಮಾತ್ರ ಕಂಡು ಬರುತ್ತಿದ್ದಾರೆ. ಕೆಲ ಓಣಿಗಳ ಮನೆಗಳಿಗೆ ಬೀಗ ಹಾಕಲಾಗಿದೆ. ಗ್ರಾಮದಲ್ಲಿ ಪೊಲೀಸ್‌ ಗಸ್ತು ಬಿಗಿಗೊಳಿಸಲಾಗಿದೆ. ಓಣಿಗಳಲ್ಲಿ ಬೂಟಿನ ಸದ್ದು ಕೇಳಿಬರುತ್ತಿದೆ.

ಗ್ರಾಮದ ಮುಖ್ಯರಸ್ತೆ ಪಕ್ಕದ ಹರಿಜನ ಹೊನ್ನೂರಮ್ಮ ಅವರ ಮನೆಯಲ್ಲಿದ್ದ ಹರಿಜನ ದೊಡ್ಡ ದೇವಣ್ಣ ಅವರನ್ನು ಕೆಲ ದುಷ್ಕರ್ಮಿಗಳು ಮನೆ ಹೊಕ್ಕು ಆತನ ಎಡಗೈ ಮುಂಗೈಯನ್ನು ಮಾರಕಾಸ್ತ್ರದಿಂದ ಕಡಿದಿದ್ದರು. ಈ ನಂತರ ಮನೆಯ ಬಾಗಿಲು ಹಾಕಿದ್ದಾರೆ. ಈ ಘಟನೆ ಬೆಳಿಗ್ಗೆ 10ಗಂಟೆಗೆ ನಡೆದಿದೆ ಎಂದು ಗ್ರಾಮದ ಮಹಿಳೆಯೊಬ್ಬರು ಮಾಹಿತಿ ನೀಡಿದರು.

‘ಸಂಜೆ 4ಗಂಟೆಗೆ ನಾನು ಕೊಳಾಯಿ ನೀರನ್ನಾದರೂ ಹಿಡಿದು ತರೋಣ ಎಂದು ಮನೆಗೆ ತೆರಳಿ ನೋಡಿದಾಗ ಎದುರಿಗೆ ಇದ್ದ ಬಕೆಟ್‌ಗೆ ರಕ್ತ ಸಿಡಿದಿರುವುದನ್ನು ನೋಡಿ ಚೀರಾಡುತ್ತ ಹೊರ ಬಂದೆ’ ಎಂದು ಮನೆಯ ಯಜಮಾನಿ ಹೊನ್ನೂರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸರು ಮನೆಯಲ್ಲಿ ವೀಕ್ಷಿಸಿ ದಾಗ ರಕ್ತದ ಮಡುವಿನಲ್ಲಿ ಬಿದಿದ್ದ ದೇವಣ್ಣ ಅವರನ್ನು ಕಂಡು ತಕ್ಷಣ ಬಳ್ಳಾರಿ ವಿಮ್ಸ್‌ಗೆ ದಾಖಲಿಸಿದ್ದಾರೆ. ಸತತ ಆರು ಗಂಟೆ ಜೀವನ್ಮರಣ ನಡುವೆ ಹೋರಾಟ ನಡೆಸಿದ ದೇವಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿ ಸಲಾಗಿದೆ. ‘ವರ್ಸ್‌ಕ್ಕೆ ಒಂದು ಬ್ಯಾರಿ ಈ ರೀತಿ ನಮ್ಮ ಜನರ ಮೇಲೆ ಅನ್ಯಾಯ ಆಗ್ತ ಇದ್ದರೆ ನಾವೇನು ಊರು ಬಿಟ್ಟು ಹೋಗಾನಾ. ನಮ್ಮ ಗಣಮಕ್ಳು ಊರು ಬಿಟ್ಟು ಹೋಗಿದ್ದು, ನಮ್ಮ ಹೊಟ್ಟೆ ಬಟ್ಟೆಗೆ ಏನು ಮೋಡೋಣ. ನಮ್ಮನ್ನ ಕೂಲಿಗೂ ಯಾರು ಕರೆಯೋದಿಲ್ಲ’ ಎಂದು ದಲಿತ ಮಹಿಳೆ ಹರಿಜನ ಹುಲಿಗೆಮ್ಮ ನೊಂದು ನುಡಿದರು. ‘ನಮಗೆ ಸರ್ಕಾರದೋರು ರಕ್ಷಣೆ ಕೊಡಬೇಕು’ ಎಂದು ದಲಿತಕೇರಿಯ ಹುಲಿಗೆಮ್ಮ, ಅಂಬಮ್ಮ, ಲಕ್ಷ್ಮಮ್ಮ, ಈರಮ್ಮ, ಗಂಗಮ್ಮ ಇದೇ ವೇಳೆ ಮನವಿ ಮಾಡಿದರು.

ಕಂಪ್ಲಿ: ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ.ಎಸ್.ಅಲ್ಲಾಭಕಶ್ ಗಾಯಾಳು ಹರಿಜನ ದೊಡ್ಡ ದೇವಣ್ಣ ಪತ್ನಿ ಕಮಲಮ್ಮ ಮತ್ತು ಕುಟುಂಬದವರೊಂದಿಗೆ ಸಮಾಲೋಚಿಸಿದರು.

ಕುಟುಂಬದವರಿಗೆ ಮಾನಸಿಕ ಸ್ಥೈರ್ಯ ತುಂಬಿ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವಂತೆ ಸಲಹೆ ನೀಡಿದರು. ಪರಿಶಿಷ್ಟ ಜಾತಿ ಯೋಜನೆಯಡಿ ಪರಿಹಾರ ನೀಡಲಾಗುವುದು. ಗಾಯಾಳುವಿನ ವೈದ್ಯಕೀಯ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದರು.

ಘರ್ಷಣೆ ಮತ್ತು ಕಲ್ಲುತೂರಾ ಟದಲ್ಲಿ ನಿರತರಾದವರನ್ನು ಚದುರಿಸಲು ಹೋಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಗುಂಪುಗಳ 22ಜನರ ಮೇಲೆ ದೂರು ದಾಖಲಿಸಲಾಗಿದೆ.

‘ಬನ್ನೆಪ್ಪ ಕುಟುಂಬದವರ ಮೇಲೆ ಜಾತಿ ನಿಂದನೆ ಮಾಡಿರುವ ಆರೋಪದ ಮೇಲೆ ಹೊಸಗೇರಪ್ಪ ಕುಟುಂಬದ 5 ಜನ ಮತ್ತು ಇತರರ ಮೇಲೆ ಸ್ವತಃ ಸಿಪಿಐ ಎಸ್.ಆರ್.ಕಾಂತರೆಡ್ಡಿ ಜಾತಿ ನಿಂದನೆ ಪ್ರಕರಕಣ ದಾಖಲಿಸಿದ್ದಾರೆ’ ಎಂದು ಕಂಪ್ಲಿ ಪೊಲೀಸ್ ಠಾಣೆ ಪಿಎಸ್‌ಐ ಬಿ.ನಿರಂಜನ್ ತಿಳಿಸಿದರು.

ಹರಿಜನ ಬನ್ನೆಪ್ಪ ಮಗ ದೊಡ್ಡ ದೇವಣ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.

ಗ್ರಾಮಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಹೆಚ್ಚುವರಿ ಎಸ್‌.ಪಿ ಕೆ.ಎಚ್.ಜಗದೀಶ ಶುಕ್ರವಾರ ಭೇಟಿ ನೀಡಿದರು. ಇಂಡಿಯನ್ ರಿಜರ್ವ್ ಪೊಲೀಸ್ ಬೆಟಾಲಿಯನ್ ಪಡೆ, ಎರಡು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಪೊಲೀಸ್‌ ಸಿಬ್ಬಂದಿ ಗ್ರಾಮದಲ್ಲಿ ಗಸ್ತು ನಡೆಸುತ್ತಿದ್ದಾರೆ.

ಡಿವೈಎಸ್ಪಿ ಸಲೀಮ್‌ಪಾಶ, ಸಿಪಿಐಗಳಾದ ಎಸ್.ಆರ್.ಕಾಂತರೆಡ್ಡಿ, ಎ.ವಿ.ಪಾಟೀಲ, ಪಿಎಸ್‌ಐ ನಿರಂಜನ,

ವಾಸುಕುಮಾರ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.

–ಪಂಡಿತಾರಾಧ್ಯ ಎಚ್‌.ಎಂ.ಮೆಟ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry