ಹೊಸ ಬಸ್‌ ನಿಲ್ದಾಣದ ಹಳೆಯ ಸಮಸ್ಯೆ

7
ದಶಕ ಕಳೆದರೂ ಮೂಲ ಸೌಕರ್ಯಗಳಿಂದ ವಂಚಿತ

ಹೊಸ ಬಸ್‌ ನಿಲ್ದಾಣದ ಹಳೆಯ ಸಮಸ್ಯೆ

Published:
Updated:
ಹೊಸ ಬಸ್‌ ನಿಲ್ದಾಣದ ಹಳೆಯ ಸಮಸ್ಯೆ

ಕಂಪ್ಲಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಇಕೆಆರ್‌ಟಿಸಿ)ಗೆ ಸೇರಿದ ಇಲ್ಲಿನ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ದಶಕ ಕಳೆದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ನಿಲ್ದಾಣದ ಆವರಣ ಮಣ್ಣು ಮತ್ತು ಕಲ್ಲುಗಳಿಂದ ತುಂಬಿದೆ. ಬಸ್‌ಗಳು ನಿಲ್ದಾಣ ಪ್ರವೇಶಿಸುವ ಮತ್ತು ನಿರ್ಗಮಿಸುವ ವೇಳೆ ದೂಳಿನ ಮಜ್ಜನವಾಗುತ್ತದೆ. ದೂಳಿನಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ನಿಲ್ದಾಣವೆಲ್ಲ ಕಲ್ಲುಗಳಿಂದ ಕೂಡಿದ್ದು, ಕೆಲವೊಮ್ಮೆ ಬಸ್‌ ಚಲಿಸುವ ವೇಳೆ ಕಲ್ಲುಗಳು ಸಿಡಿದು ಕೆಲ ಪ್ರಯಾಣಿಕರು ಗಾಯಗೊಂಡಿರುವ ನಿದರ್ಶನಗಳಿವೆ.

ಮಳೆಗಾಲ ಬಂದರೆ ನಿಲ್ದಾಣದಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಪ್ರಯಾಣಿಕರು ತೊಂದರೆ ಅನುಭವಿಸುವುದು ಸಾಮಾನ್ಯ.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆ ಇಲ್ಲ. ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲುಗಡೆಯಾಗದೆ ಬೇಕಾಬಿಟ್ಟಿ ನಿಲ್ಲುತ್ತವೆ. ರಾತ್ರಿಯಲ್ಲಿ ಬಸ್‌ಗಳು ನಿಲ್ದಾಣ ಒಳಗೆ ಬರುವುದೇ ಇಲ್ಲ. ಹೊರಗಡೆಯೇ ನಿಲ್ಲುತ್ತವೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ.

ನಿಲ್ದಾಣದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಪಂಪ್‌ಸೆಟ್‌ ತಾಂತ್ರಿಕ ತೊಂದರೆ ಇದೆ ಎನ್ನಲಾಗಿದ್ದು, ದುರಸ್ತಿ ಮಾಡದೆ ಇರುವುದರಿಂದ ಪ್ರಯಾಣಿಕರಿಗೆ ಸಮರ್ಪಕ ಕುಡಿಯುವ ನೀರು ದೊರೆಯುತ್ತಿಲ್ಲ.

‘ರಾತ್ರಿ ವೇಳೆ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಸ್ವಚ್ಛತೆಯಂತೂ ಮರೀಚಿಕೆ. ನಿಲ್ದಾಣದ ಸಂಚಾರ ನಿಯಂತ್ರಕರು ಹಗಲುವೇಳೆ ಮಾತ್ರ ಕಾರ್ಯನಿರ್ವಹಿಸುತ್ತಾರೆ. ರಾತ್ರಿಯಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸ್ಥಳೀಯ ಹೋರಾಟಗಾರ ಕೆ. ಮೆಹಬೂಬ್ ತಿಳಿಸಿದರು.

‘ಕಂಪ್ಲಿ ವಿಧಾನಸಭಾ ಕ್ಷೇತ್ರವಾಗಿ 10 ವರ್ಷ ಕಳೆದಿವೆ. ಜತೆಗೆ ತಾಲ್ಲೂಕು ಕೇಂದ್ರವಾಗಿ ಜನ್ಮತಳೆದಿದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸ್‌ ನಿಲ್ದಾಣ ಅಭಿವೃದ್ಧಿ ಕಾಣದೆ ಕುಂಠಿತಗೊಂಡಿದೆ. ನೂತನ ಶಾಸಕರಾದರೂ ಇತ್ತ ಗಮನಹರಿಸಿ ಬಸ್‌ ನಿಲ್ದಾಣ ಮೇಲ್ದರ್ಜೆಗೇರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಆಗ್ರಹಿಸಿದರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಕಲ್ಮಠದವರು ಜಾಗ ನೀಡಿದ್ದಾರೆ. ಅವರ ಹೆಸರನ್ನು ನಿಲ್ದಾಣಕ್ಕೆ ನಾಮಕರಣ ಮಾಡಬೇಕು’ ಎಂಬುದು ಅವರ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry