ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌

7
ಒತ್ತುವರಿಗೆ ನಲುಗಿದ ವಾರದ ಸಂತೆ ಮೈದಾನ; ನಿರ್ಲಕ್ಷ್ಯದಿಂದ ಅಧ್ವಾನಗೊಂಡ ವರ್ತಕರ ನೆರಳಿನ ತಾಣಗಳು

ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌

Published:
Updated:
ವಾಹನ ನಿಲುಗಡೆ ತಾಣವಾದ ಸಂತೆ ಶೆಡ್‌

ಬಾಗೇಪಲ್ಲಿ: ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ ವಾರದ ಸಂತೆಗಾಗಿ ನಿರ್ಮಿಸಿರುವ ಶೆಡ್‌ಗಳು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ವಾಹನ ನಿಲುಗಡೆ ತಾಣವಾಗಿ, ನಿರ್ಗತಿಕರು, ಪ್ರಾಣಿಗಳ ಸೂರಾಗಿ ಪರಿವರ್ತನೆ ಯಾಗಿರುವುದು ಸಾರ್ವಜನಿಕರ ವಲಯದಲ್ಲಿ ಅಸಮಾಧಾನ ಉಂಟು ಮಾಡಿದೆ.

ಮೈಸೂರು ಬ್ಯಾಂಕ್ ರಸ್ತೆಯ ಹುಣಸೆ ತೋಪಿನಲ್ಲಿ ಪ್ರತಿ ಸೋಮ ವಾರ ನಡೆಯುವ ಸಂತೆಗೆ ಬರುವವರ ಅನುಕೂಲಕ್ಕಾಗಿ 10 ವರ್ಷಗಳ ಹಿಂದೆ ಆರು ಶೆಡ್‌ಗಳನ್ನು ನಿರ್ಮಿಸಲಾಗಿತ್ತು. ವಾರದ ಸಂತೆಗಾಗಿ ಮೀಸಲಿಟ್ಟ ಜಾಗ ಒತ್ತುವರಿಗೆ ನಲುಗುತ್ತಿದ್ದರೆ, ಇತ್ತ ಶೆಡ್‌ಗಳು ದಿನೇ ದಿನೇ ಅಧ್ವಾನಗೊಳ್ಳುತ್ತಿವೆ. ಪುರಸಭೆ ಅಧಿಕಾರಿಗಳು ಇದನ್ನೆಲ್ಲ ಕಂಡರೂ ಕಾಣದಂತೆ ಜಾಣ ಕುರುಡುತನ ತೋರುತ್ತಿದ್ದಾರೆ ಎನ್ನುವುದು ಪಟ್ಟಣದ ಹಿರಿಯರ ಆರೋಪ.

ಒಂದು ಕಾಲದಲ್ಲಿ ವಿಶಾಲವಾಗಿದ್ದ ವಾರದ ಸಂತೆಯ ಜಾಗ ಪುರಸಭೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇದೀಗ ಸ್ವಲ್ಪ ಮಾತ್ರ ಉಳಿದಿದೆ. ಅದರಲ್ಲಿ ಈ ಶೆಡ್‌ ಪುರಾತನ ಕಾಲದ ಸ್ಮಾರಕಗಳ ಪಳೆಯುಳಿಕೆಯಂತೆ ಗೋಚರಿಸುತ್ತಿವೆ. ಶಿಥಿಲಗೊಂಡಿರುವ ಶೆಡ್‌ಗಳು ಬೀಳುವ ಸ್ಥಿತಿಯಲ್ಲಿವೆ.

‘ಶೆಡ್‌ಗಳಿಗೆ ಪುರಸಭೆ ವತಿಯಿಂದ ಸೂಕ್ತವಾದ ನಿರ್ವಹಣೆ ಇಲ್ಲದಿರುವುದರಿಂದ ಸುತ್ತಮುತ್ತಲಿ ನವರು ಕಸ, ಕಡ್ಡಿ, ಗಲೀಜನ್ನು ತಂದು ಹಾಕುತ್ತಿದ್ದಾರೆ. ಇದರಿಂದ ಶುಚಿತ್ವ ಇಲ್ಲದೇ ದುರ್ನಾತ ಬೀರುತ್ತಿದೆ. ಮುರಿದಿರುವ ಶೆಡ್‌ಗಳಲ್ಲಿ ನಿರ್ಗತಿಕರು ಬೀಡು ಬಿಟ್ಟು ಮತ್ತಷ್ಟು ಗಲೀಜು ವಾತಾವರಣ ಸೃಷ್ಟಿಸುತ್ತಿದ್ದಾರೆ. ಅದರ ನಿರ್ವಹಣೆ ಆಗುತ್ತಿಲ್ಲ. ಪ್ರಾಣಿಗಳು ಕೆಲವೊಮ್ಮೆ ಇಲ್ಲಿ ಠಿಕಾಣಿ ಹೂಡುತ್ತವೆ. ನೆರಳಿನ ಕಾರಣಕ್ಕೆ ವಾಹನಗಳನ್ನು ನಿಲ್ಲಿಸುವವರಿಗೆ ಇದು ಮೆಚ್ಚಿನ ತಾಣವಾಗಿದೆ.

‘ಪಟ್ಟಣದಲ್ಲಿ ಇದೀಗ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಆದರೆ ಬಹು ಮೌಲ್ಯದ ಪುರಸಭೆಯ ಸ್ವತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನ್ಯರ ಪಾಲಾಗುತ್ತಿವೆ. ಇದರಿಂದ ಪುರಸಭೆಯ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸು ತ್ತಿಲ್ಲ’ ಎಂದು 4ನೇ ವಾರ್ಡ್ ನಿವಾಸಿ ಅಶೋಕ್ ಬೇಸರ ವ್ಯಕ್ತಪಡಿಸಿದರು.

‘ಪಟ್ಟಣದ ಮುಖ್ಯರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಸಿಗದ ಕಾರಣಕ್ಕೆ ಅದನ್ನು ಸಹ ಸಂತೆ ತೋಪಿನ ಜಾಗದಲ್ಲಿಯೇ ತೆರೆಯಲು ಭೂಮಿ ಪೂಜೆ ಮಾಡಲಾಗಿದೆ. ಇದರಿಂದ ಸಂತೆಗೆ ಬರುವವರಿಗೆ ತೊಂದರೆಯಾಗಲಿದೆ. ನಿತ್ಯ ಜನದಟ್ಟಣೆ ಇರುವ ಸ್ಥಳದತ್ತ ಕ್ಯಾಂಟೀನ್ ಸ್ಥಳಾಂತರಿಸಿದರೆ ಉತ್ತಮ’ ಎಂದು ಹೇಳಿದರು.

ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ವಾರದ ಸಂತೆ ಸಂಸ್ಕೃತಿ ಉಳಿವಿಗಾಗಿ ಶೆಡ್‌ಗಳ ಜಾಗವನ್ನು ಅಭಿವೃದ್ಧಿಪಡಿಸಿ, ಶುಚಿತ್ವ ಕಾಪಾಡಲು ಕ್ರಮಕೈಗೊಳ್ಳಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

**

ಶೆಡ್‌ಗಳಿಗೆ ರಕ್ಷಣೆ ನೀಡಲು ಪುರಸಭೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಎಲ್ಲರಿಗೂ ತೊಂದರೆಯಾಗಿದೆ

ಎ.ಎಂ. ಅಶೋಕ್, ರೈತ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry