ಕೈಗೂಡುವುದೇ ಪದಕದ ಕನಸು?

7

ಕೈಗೂಡುವುದೇ ಪದಕದ ಕನಸು?

Published:
Updated:
ಕೈಗೂಡುವುದೇ ಪದಕದ ಕನಸು?

ವಿಶ್ವಕಪ್‌–11, ಪದಕ–0!

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಸಾಧನೆ ಇದು. 1974ರಿಂದ ಟೂರ್ನಿ ನಡೆಯುತ್ತಿದೆ. ಇದುವರೆಗೂ 11 ಸಲ ವಿಶ್ವಕಪ್‌ ಟೂರ್ನಿಗಳು ನಡೆದಿವೆ. ಭಾರತ ಆರು ಸಲ ಪಾಲ್ಗೊಂಡಿದೆ. ಆದರೆ, ಒಂದೇ ಒಂದು ಸಲ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

ಆದ್ದರಿಂದ ಪ್ರತಿ ವಿಶ್ವಕಪ್‌ ಟೂರ್ನಿ ಬಂದಾಗಲೊಮ್ಮೆ ಭಾರತ ತಂಡ ಈ ಬಾರಿಯಾದರೂ ಪದಕ ಗೆಲ್ಲುವುದೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ತಂಡ ಈ ಸಲ ಬಲಿಷ್ಠವಾಗಿದೆ, ಪದಕ ಗೆಲ್ಲದಿದ್ದರೂ, ಆಟದ ಗುಣಮಟ್ಟ ಸುಧಾರಿಸಿಕೊಳ್ಳುತ್ತದೆ ಎನ್ನುವ ಭರವಸೆ ಇರುತ್ತದೆ. ಆದರೆ, ಅದು ಕೂಡ ಸಾಧ್ಯವಾಗುತ್ತಿಲ್ಲ. 44 ವರ್ಷಗಳ ಹಿಂದೆ ನಾಲ್ಕನೇ ಸ್ಥಾನ ಪಡೆದಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿದೆ!

ಭಾರತದ ವನಿತೆಯರು ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿ ನೆದರ್‌ಲ್ಯಾಂಡ್ಸ್‌, ಬೆಲ್ಜಿಯಂ, ಸ್ಪೇನ್‌, ಮೆಕ್ಸಿಕೊ ತಂಡಗಳ ಸವಾಲನ್ನು ಸಮರ್ಥವಾಗಿ ಎದುರಿಸಿದ್ದರು. ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಮತ್ತು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಪರಾಭವಗೊಂಡಿದ್ದರು. ಆ ಬಳಿಕ ಒಮ್ಮೆಯೂ ಪದಕದ ಸನಿಹ ಹೋಗಿಲ್ಲ. ಕನಿಷ್ಠ ಐದರ ಒಳಗೂ ಸ್ಥಾನ ಪಡೆದಿಲ್ಲ!

1978ರಲ್ಲಿ ಏಳನೇ ಸ್ಥಾನ, 1983ರಲ್ಲಿ 11ನೇ ಸ್ಥಾನ, 1998ರಲ್ಲಿ 12ನೇ ಸ್ಥಾನ, 2006ರಲ್ಲಿ 11ನೇ ಸ್ಥಾನ ಮತ್ತು 2010ರಲ್ಲಿ 9ನೇ ಸ್ಥಾನ ಪಡೆದುಕೊಂಡಿತ್ತು. ನಾಲ್ಕು ವರ್ಷಗಳ ಹಿಂದೆ ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ನಡೆದ ಟೂರ್ನಿ ಸೇರಿದಂತೆ ಒಟ್ಟು ಐದು ವಿಶ್ವಕಪ್‌ಗಳಿಗೆ ಅರ್ಹತೆಯೇ ಪಡೆದುಕೊಂಡಿರಲಿಲ್ಲ.

ಪ್ರತಿ ವಲಯದ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಐದು ತಂಡಗಳು, ಟೂರ್ನಿಗೆ ಆತಿಥ್ಯ ವಹಿಸುವ ದೇಶ ಮತ್ತು ಎಫ್‌ಐಎಚ್‌ ವಿಶ್ವ ಹಾಕಿ ಲೀಗ್‌ನಲ್ಲಿ ಮೊದಲ ಆರು ರ‍್ಯಾಂಕ್‌ ಹೊಂದಿರುವ ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಳಿಸುತ್ತವೆ. 2012–13ರ ಎಫ್‌ಐಎಚ್‌ ಲೀಗ್‌ನಲ್ಲಿ ಭಾರತದ ವನಿತೆಯರು 14ನೇ ಸ್ಥಾನ ಪಡೆದಿದ್ದ ಕಾರಣ ಅರ್ಹತೆ ಸಿಗಲಿಲ್ಲ.

ಮೂಡಿದ ಭರವಸೆ

ಭಾರತ ಮಹಿಳಾ ಹಾಕಿ ತಂಡ ಇತ್ತೀಚಿನ ವರ್ಷಗಳಲ್ಲಿ ಭರವಸೆಯ ಪ್ರದರ್ಶನ ನೀಡುತ್ತಿದೆ. ಎರಡು ವರ್ಷಗಳ ಹಿಂದೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದೇ ಇದಕ್ಕೆ ಸಾಕ್ಷಿ. ಏಕೆಂದರೆ ಭಾರತದ ವನಿತೆಯರು 36 ವರ್ಷಗಳ ಬಳಿಕ ಒಲಿಂಪಿಕ್ಸ್‌ ಅಂಗಳಕ್ಕೆ ಕಾಲಿಟ್ಟಿದ್ದರು. ಹೋದ ವರ್ಷ ಜಪಾನ್‌ನಲ್ಲಿ ನಡೆದಿದ್ದ ಏಷ್ಯಾ ಕಪ್‌ನಲ್ಲಿ ಚಾಂಪಿಯನ್‌ ಆಗುವ ಮೂಲಕ ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಕೂಡ ಗಳಿಸಿಕೊಂಡಿದ್ದಾರೆ.

ಏಷ್ಯಾ ಕಪ್‌ನಲ್ಲಿ ಚೀನಾ, ಮಲೇಷ್ಯಾ, ಸಿಂಗಪುರ, ದಕ್ಷಿಣ ಕೊರಿಯಾ, ಜಪಾನ್‌, ಥಾಯ್ಲೆಂಡ್‌ ಮತ್ತು ಕಜಕಸ್ತಾನ ದೇಶಗಳ ಸವಾಲನ್ನು ಮೆಟ್ಟಿ ನಿಂತು ಭಾರತ ತಂಡ ಪ್ರಶಸ್ತಿ ಜಯಿಸಿದೆ. ನವನೀತ್‌ ಕೌರ್‌, ರಿತು ರಾಣಿ, ದೀಪ್‌ ಗ್ರೇಸ್ ಎಕ್ಕಾ, ನವಜೋತ್ ಕೌರ್‌, ಗುರ್ಜಿತ್‌ ಕೌರ್‌, ಸೋನಿಕಾ, ನೇಹಾ ಗೋಯಲ್‌ ಹೀಗೆ ಪ್ರಮುಖ ಆಟಗಾರ್ತಿಯರು ಉತ್ತಮವಾಗಿ ಆಡಿದ್ದರಿಂದ ಭಾರತಕ್ಕೆ ವಿಶ್ವಕಪ್‌ ಟೂರ್ನಿ ಪ್ರವೇಶಿಸುವ ಹಾದಿ ಸುಗಮವಾಗಿದೆ.

ಮುಂದಿವೆ ಸರಣಿ ಸವಾಲು

ವಿಶ್ವಕಪ್‌ ಟೂರ್ನಿ ಮುಗಿದ ಬಳಿಕ ಭಾರತ ಮಹಿಳಾ ತಂಡಕ್ಕೆ ಸರಣಿ ಸವಾಲುಗಳಿವೆ. ಇದೇ ವರ್ಷದ ಆಗಸ್ಟ್‌ನಲ್ಲಿ ಜಕಾರ್ತದಲ್ಲಿ ಏಷ್ಯನ್‌ ಕ್ರೀಡಾಕೂಟ ನಡೆಯಲಿದೆ.

ಏಷ್ಯನ್‌ ಕೂಟದಲ್ಲಿ ಭಾರತದ ವನಿತೆಯರು 36 ವರ್ಷಗಳಿಂದ ಚಿನ್ನದ ಪದಕ ಜಯಿಸಿಲ್ಲ. 1982ರಲ್ಲಿ ನವದೆಹಲಿಯಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿ ಚಿನ್ನದ ಸಾಧನೆ ಮಾಡಿದ್ದರು. ನಂತರದ ಕೂಟಗಳಲ್ಲಿ ಕಂಚು, 1998ರಲ್ಲಿ ಬೆಳ್ಳಿ, 2006 ಮತ್ತು 2014ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 1990, 1994 ಮತ್ತು 2010ರಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಮುಂದಿನ ಈ ಸವಾಲುಗಳನ್ನು ಎದುರಿಸಲು ಭಾರತ ತಂಡ ಈಗಾಗಲೇ ತರಬೇತಿ ಆರಂಭಿಸಿದೆ. ಕೊರಿಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಮಹಿಳಾ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಬಲಿಷ್ಠ ರಾಷ್ಟ್ರಗಳ ತಂಡಗಳ ಜೊತೆ ಹೆಚ್ಚು ಪಂದ್ಯಗಳನ್ನು ಆಡುತ್ತಿದೆ. ವಿಶ್ವಕಪ್‌ ಮತ್ತು ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದರೆ 2020ರ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಲಭಿಸುತ್ತಿದೆ.

ವಿಶ್ವಕಪ್‌: ‘ಬಿ’ ಗುಂಪಿನಲ್ಲಿ ಭಾರತ

16 ತಂಡಗಳು ಭಾಗವಹಿಸಲಿರುವ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಹೊಂದಿದೆ. ಆತಿಥ್ಯ ರಾಷ್ಟ್ರ ಇಂಗ್ಲೆಂಡ್‌, ಅಮೆರಿಕ ಮತ್ತು ಐರ್ಲೆಂಡ್‌ ದೇಶಗಳು ಇದೇ ಗುಂಪಿನಲ್ಲಿವೆ.

ಲೀಗ್‌ ಹಂತದಲ್ಲಿ ಪ್ರತಿ ತಂಡ ಮೂರು ಪಂದ್ಯಗಳನ್ನು  ಆಡಬೇಕಿದ್ದು, ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡು ಮತ್ತು ಮೂರನೇ ಸ್ಥಾನ ಗಳಿಸುವ ತಂಡಗಳು ಪ್ಲೇ ಆಫ್‌ ಹಂತದಲ್ಲಿ ಆಡಬೇಕು. ಗುಂಪಿನ ಕೊನೆಯ ತಂಡ ಟೂರ್ನಿಯಿಂದ ಹೊರಬೀಳುತ್ತದೆ. ಜುಲೈ 21ರಿಂದ ಆರಂಭವಾಗುವ ವಿಶ್ವಕಪ್‌ ಆಗಸ್ಟ್‌ 5ರ ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry