ತಾಲ್ಲೂಕುಗಳಲ್ಲಿ ಪಬ್ಲಿಕ್‌ ಶಾಲೆ

7
ಒಂದರಿಂದ ಪಿಯುವರೆಗೂ ‘ಒಂದೇ ಸೂರಿನಡಿ ಶಿಕ್ಷಣ’

ತಾಲ್ಲೂಕುಗಳಲ್ಲಿ ಪಬ್ಲಿಕ್‌ ಶಾಲೆ

Published:
Updated:
ತಾಲ್ಲೂಕುಗಳಲ್ಲಿ ಪಬ್ಲಿಕ್‌ ಶಾಲೆ

ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಆರೂ ತಾಲ್ಲೂಕಿಗೆ ತಲಾ ಒಂದರಂತೆ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ತೆರೆಯುವ ಸಾಧ್ಯತೆ ಇದೆ.

ಪ್ರಸಕ್ತ 2018 - 19 ರ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದ್ದ ‘ಒಂದೇ ಸೂರಿನಡಿ ಶಿಕ್ಷಣ’ ಯೋಜನೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಡಯಟ್‌ನಿಂದ ಹಿರಿಯ ಉಪನ್ಯಾಸಕರು, ಡಿಡಿಪಿಐ ಕಚೇರಿಯಿಂದ ಶಿಕ್ಷಣಾಧಿಕಾರಿಗಳು, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿಆರ್‌ಸಿ ಒಳಗೊಂಡ ತಂಡವೂ ಪೂರ್ವ ಸಿದ್ಧತೆ ಕುರಿತು ಪರಿಶೀಲನೆ ನಡೆಸಲು ಸಜ್ಜಾಗುತ್ತಿದೆ.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಲಾ 1 ರಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಒಂದು ತಾಲ್ಲೂಕಿನಲ್ಲಿ ಮಾತ್ರ ಪ್ರೌಢಶಾಲೆಯೊಂದು ಕೆಪಿಎಸ್‌ಗೆ ಆಯ್ಕೆಯಾಗಿದ್ದು, ತೆರೆಯಲು ಯೋಜನೆ ಸಿದ್ಧಗೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ಶೈಕ್ಷಣಿಕ ವರ್ಷದಿಂದಲೇ ಅವು ಕಾರ್ಯಾರಂಭ ಮಾಡಲಿವೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂಥೋಣಿ.

ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಳಲ್ಕೆರೆಯ ಕಾಶೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿತ್ರದುರ್ಗದ ಅನ್ನೇಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸದುರ್ಗದ ಶ್ರೀರಾಂಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಿರಿಯೂರಿನ ಹೊಸಯಳನಾಡು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮೊಳಕಾಲ್ಮುರಿನ ಬಿ.ಜಿ.ಕೆರೆಯ ಸರ್ಕಾರಿ ಪ್ರೌಢಶಾಲೆಯೂ ಇನ್ನೂ ಮುಂದೆ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾರ್ಪಾಡಗಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದ 100 ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಹಾಗೂ ಮೂಲಸೌಕರ್ಯ ಒದಗಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಅದರಂತೆ ಅನುದಾನ ಬಿಡುಗಡೆಯಾದರೆ, ಜಿಲ್ಲೆಯ ಈ ಆರೂ ಶಾಲೆಗಳು ಖಂಡಿತ ಅಭಿವೃದ್ಧಿಯಾಗಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕೆಪಿಎಸ್ ವಿಶೇಷತೆ ಏನು ? 

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲೇ ಈ ಶಾಲೆಗಳು ಪ್ರಾರಂಭಗೊಳ್ಳಲಿವೆ ಎಂದು ಡಿಡಿಪಿಐ ಅಂಥೋಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದಿನ ದಿನಗಳಲ್ಲಿ ಈ ಶಾಲೆಗಳಲ್ಲಿ ಆಯಾ ಹಂತದ ಮಕ್ಕಳಿಗೆ ಉತ್ತಮ ಕೊಠಡಿ, ಸುಸಜ್ಜಿತ ಪ್ರಯೋಗಾಲಯ, ಗಣಕಯಂತ್ರ ಶಿಕ್ಷಣ, ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿ ಮೂಲಸೌಕರ್ಯ ಒದಗಿಸಲು ಸರ್ಕಾರದಿಂದ ನೀಡಲಾಗುವ ಅನುದಾನಕ್ಕೆ ತಕ್ಕಂತೆ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಅಲ್ಲದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಯೋಜನೆ ಸ್ವಾಗತಾರ್ಹ:

1 ರಿಂದ 12ನೇ ತರಗತಿವರೆಗೂ ಶೈಕ್ಷಣಿಕ ಅಭ್ಯಾಸ ಕೈಗೊಳ್ಳುವಂಥ ಉತ್ತಮ ಯೋಜನೆ ಇದ್ದಾಗಿದ್ದು, ಸ್ವಾಗತಾರ್ಹ. ತಾತ್ಕಾಲಿಕವಾಗಿ ಒಂದಿಷ್ಟು ತೊಂದರೆ ಆಗಬಹುದು. ಆದರೆ, ಮುಂದೊಂದು ದಿನ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಹೊಳಲ್ಕೆರೆಯ ಕಾಶೀಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಂಜುನಾಥ್.

ಸದ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹಿಂದುಳಿದವರೇ ಅಧಿಕ ಸಂಖ್ಯೆಯಲ್ಲಿರುವ ಕಾರಣ ಈ ಶಾಲೆ ನಮ್ಮಲ್ಲಿ ಪ್ರಾರಂಭವಾದರೆ, ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

**

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇನ್ನು ಮುಂದೆ ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪದವಿಪೂರ್ವ ಕಾಲೇಜಿನವರೆಗೆ ಗುಣಮಟ್ಟದ ಶಿಕ್ಷಣ ಪಡೆಯಬಹುದು

ಅಂಥೋಣಿ, ಡಿಡಿಪಿಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry