ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಾಗುವ ಧ್ಯಾನದಲ್ಲಿ ಸ್ವಾತಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸು’ ಚಿತ್ರದುದ್ದಕ್ಕೂ ತೆರೆಯ ಮೇಲೆ ಆವರಿಸಿಕೊಳ್ಳುವ ನಟಿ ಶ್ರುತಿ ಹರಿಹರನ್. ಆದರೆ ಚಿತ್ರದ ಕೊನೆಯಲ್ಲಿ ಹುಡುಗಿಯೊಬ್ಬಳು ಭ್ರಷ್ಟ ಪೊಲೀಸ್ ಅಧಿಕಾರಿಯಾದ ತನ್ನ ತಂದೆಯ ವಿರುದ್ಧವೇ ಸಿಡಿದು ನಿಲ್ಲುವ ಸನ್ನಿವೇಶವಿದೆ. ಮಿಂಚಿನಂತೆ ಬಂದು ಹೋಗುವ ಆ ಪಾತ್ರವನ್ನು ಮಿಂಚಿನ ಬೆಳಕಷ್ಟೇ ಚುರುಕಾಗಿ ಮಾಡಿ ಪ್ರೇಕ್ಷಕನ ಮನಸ್ಸು ಗೆದ್ದ ಪ್ರತಿಭಾವಂತ ನಟಿ ಸ್ವಾತಿ ಕೊಂಡೆ.

ಬೇಲೂರಿನಲ್ಲಿ ಹುಟ್ಟಿ, ತುಮಕೂರಿನಲ್ಲಿ ಬೆಳೆದು ಈಗ ಅಲ್ಲಿಯೇ ಆಟೊಮೊಬೈಲ್‌ನಲ್ಲಿ ಡಿಪ್ಲೊಮಾ ಓದುತ್ತಿರುವ ಈ ಹುಡುಗಿಯ ಮೊದಲ ಸಿನಿಮಾ ‘ಬ್ಯೂಟಿಫುಲ್‌ ಮನಸುಗಳು’. ಮೊದಲ ಅವಕಾಶದಲ್ಲಿಯೇ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಿದ ಅವರಿಗೆ ಈಗ ಒಂದರ ಹಿಂದೆ ಇನ್ನೊಂದು ಅವಕಾಶಗಳು ಬರುತ್ತಿವೆ. ಜೂನ್‌ 1ರಂದು ಬಿಡುಗಡೆಯಾಗುತ್ತಿರುವ ಜಯತೀರ್ಥ ಅವರದೇ ನಿರ್ದೇಶನದ ‘ವೆನಿಲ್ಲಾ’ ಚಿತ್ರದಲ್ಲಿಯೂ ಸ್ವಾತಿಯೇ ನಾಯಕಿ.

‌ಡಾನ್ಸ್‌ ಎಂದರೆ ಸ್ವಾತಿಗೆ ಚಿಕ್ಕಂದಿನಿಂದಲೂ ಮನಸ್ಸು ಅರಳುತ್ತಿತ್ತು. ಯಾವುದೇ ತರಬೇತಿ ಪಡೆದುಕೊಳ್ಳದಿದ್ದರೂ ಅವರು ಭಾಗವಹಿಸಿದ ನೃತ್ಯಸ್ಪರ್ಧೆಗಳಲ್ಲೆಲ್ಲ ಬಹುಮಾನ ಗ್ಯಾರಂಟಿಯಾಗಿತ್ತು. ಸ್ವಾತಿಯ ತಂದೆಗೆ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಆದರೆ ಅದು ಈಡೇರಿರಲಿಲ್ಲ. ಇದರ ಫಲವಾಗಿಯೇ ಮಗಳಿಗೆ ನಟನೆಯೆಡೆಗೆ ಹೊರಳಿಕೊಳ್ಳಲು ಉತ್ತೇಜನ ನೀಡಿದರು.

ಸಿನಿಮಾ ಕ್ಷೇತ್ರಕ್ಕೆ ಬರಬೇಕು ಎಂದು ನಿರ್ಧರಿಸಿದ ಮೇಲೆ ಸ್ವಾತಿ ಆರೇಳು ಕಡೆಗಳಲ್ಲಿ ಆಡಿಷನ್‌ನಲ್ಲಿಯೂ ಭಾಗವಹಿಸಿದರು. ‘ನಾನು ಎಷ್ಟು ಆಡಿಶನ್‌ನಲ್ಲಿ ಭಾಗವಹಿಸಿದ್ದೆನೋ ಅವೆಲ್ಲವುಗಳಲ್ಲಿಯೂ ಆಯ್ಕೆಯಾಗಿದ್ದೆ. ಆದರೆ ಕಥೆ ಇಷ್ಟವಾಗದೆ, ತಂಡ ಚೆನ್ನಾಗಿಲ್ಲ ಎಂಬ ಕಾರಣಕ್ಕೆ, ಸಿನಿಮಾ ಪೂರ್ಣವಾಗುತ್ತದೋ ಇಲ್ಲವೋ ಎಂಬ ಅನುಮಾನದಿಂದ ಹೀಗೆ ಹಲವು ಕಾರಣಗಳಿಗೆ ನನ್ನ ತಂದೆ ಆ ಎಲ್ಲ ಅವಕಾಶಗಳನ್ನೂ ತಿರಸ್ಕರಿಸಿದರು. ಕೊನೆಗೆ ಜಯತೀರ್ಥ ಅವರ ‘ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು’ ಎಂದು ತಾವು ಚಂದನವನದಲ್ಲಿ ಮೊದಲ ಹೆಜ್ಜೆ ಇಟ್ಟ ಬಗೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಈಗಲೂ ಅವರು ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳಬೇಕಾದರೆ ತಂದೆಯ ಮಾರ್ಗದರ್ಶನವನ್ನು ತೆಗೆದುಕೊಂಡೇ ಮುಂದಡಿ ಇಡುತ್ತಾರೆ.

ಮೊದಲ ಚಿತ್ರ ಅವರ ಪಾಲಿಗೆ ಅದೃಷ್ಟದ ಬಾಗಿಲು ತೆರೆಯಿತು ಎಂದೇ ಹೇಳಬಹುದು. ಯಾವುದೇ ನಟನೆಯ ಹಿನ್ನೆಲೆ ಇಲ್ಲದೆ, ಗಾಡ್‌ಫಾದರ್‌ಗಳ ನೆರವಿಲ್ಲದೆ ಬರೀ ಪ್ರತಿಭೆಯ ಬಲದಿಂದ ತನಗೆ ಸಿಕ್ಕ ಪುಟ್ಟ ಪಾತ್ರವನ್ನು ಶ್ರದ್ಧೆಯಿಂದ ಮಾಡಿದ ಸ್ವಾತಿಗೆ ನಂತರ ಒಂದೊಂದಾಗಿ ಅವಕಾಶಗಳು ಸಿಗುತ್ತಲೇ ಹೋದವು. ಇದೀಗ ಅವರು ನಾಯಕಿಯಾಗಿ ನಟಿಸಿರುವ, ರಾಜ್‌ ಪ್ರವೀಣ್‌ ಎಂಬ ಹೊಸ ನಿರ್ದೇಶಕರ ‘ಕಟ್ಟುಕಥೆ’ ಎಂಬ ಸಿನಿಮಾ ಕೂಡ ಪೂರ್ತಿಗೊಂಡು ಬಿಡುಗಡೆಗೆ ಅಣಿಯಾಗಿದೆ. ಇದರೊಟ್ಟಿಗೆ ‘ಭರಣಿ’ ಎಂಬ ಇನ್ನೊಂದು ಸಿನಿಮಾದಲ್ಲಿಯೂ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ಸ್ವಾತಿ ಯಾವುದೇ ನಟನಾ ತರಬೇತಿ ಪಡೆದುಕೊಂಡವರಲ್ಲ. ‘ಜಯತೀರ್ಥ ಅವರ ಸಿನಿಮಾದಲ್ಲಿ ಕೆಲಸ ಮಾಡಿದ್ದೇ ನನ್ನ ಪಾಲಿಗೆ ನಟನೆಯ ದೊಡ್ಡ ಪಾಠಶಾಲೆ. ಅವರ ಬಳಿ ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ ಒಂದು ರೀತಿಯಲ್ಲಿ ಅವರೇ ನನಗೆ ಗಾಡ್‌ ಫಾದರ್‌’ ಎಂದು ಹೇಳಿಕೊಳ್ಳುತ್ತಾರೆ ಅವರು.

‘ವೆನಿಲ್ಲಾ, ಕಟ್ಟುಕಥೆ, ಭರಣಿ ಈ ಚಿತ್ರಗಳಲ್ಲಿ ನಾನು ಯಾವ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದೇನೋ ಅವೆಲ್ಲವೂ ನನ್ನ ಮನಸ್ಸಿನಲ್ಲಿ ಇದ್ದ  ಪಾತ್ರಗಳೇ ಆಗಿದ್ದವು. ವೆನಿಲ್ಲಾ’ದಲ್ಲಿ ಕ್ಯಾಪ್ನೋಫೋಭಿಯಾ ಎಂಬ ವಿಚಿತ್ರ ಕಾಯಿಲೆ ಇರುವ ಹುಡುಗಿಯ ಪಾತ್ರ. ‘ಕಟ್ಟುಕಥೆ’ಯಲ್ಲಿ ಮಾಡರ್ನ್‌, ರಗಡ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ‘ಭರಣಿ’ಯಲ್ಲಿ ಈ ಎರಡೂ ಪಾತ್ರಗಳಿಗಿಂತ ಪೂರ್ತಿ ಭಿನ್ನ ರೀತಿಯ ಪಕ್ಕಾ ಹಳ್ಳಿಯ ಬಜಾರಿಯಾಗಿ ನಟಿಸುತ್ತಿದ್ದೇನೆ’ ಎಂದು ತಮ್ಮ ಪಾತ್ರವೈವಿಧ್ಯವನ್ನು ಪರಿಚಯಿಸುತ್ತಾರೆ ಅವರು.

ನಟನೆಯಿಂದ ಬಿಡುವು ದೊರೆತಾಗೆಲ್ಲ ಸ್ವಾತಿ ಕುಂಚವನ್ನು ಹಿಡಿದು ಕೂಡುತ್ತಾರೆ. ‘ಯಾವುದೇ ದೃಶ್ಯವನ್ನು ನೋಡಿದರೂ ಅದನ್ನು ಕ್ಯಾನ್ವಾಸ್‌ ಮೇಲೆ ಮೂಡಿಸಬಲ್ಲೆ’ ಎಂದು ವಿಶ್ವಾಸದಿಂದ ಅವರು ಹೇಳುತ್ತಾರೆ.

ಸಿನಿಮಾ ಒಪ್ಪಿಕೊಳ್ಳಬೇಕಾದರೆ ಕಥೆಯಷ್ಟೇ ತಂಡವೂ ಮುಖ್ಯ ಎನ್ನುತ್ತಾರೆ ಅವರು. ‘ನನಗೆ ಕ್ಯಾರಾವಾನ್ ಕೊಡದಿದ್ದರೂ ಪರವಾಗಿಲ್ಲ. ಆದರೆ ನನಗೆ ಸುರಕ್ಷಿತ ಭಾವ ಮೂಡಿಸಬೇಕು. ಅವರ ಜತೆ ಕೆಲಸ ಮಾಡಿದರೆ ನನಗೇನೂ ತೊಂದರೆ ಆಗಲಾರದು ಎಂಬ ನಂಬಿಕೆ ಬೆಳೆಯಬೇಕು. ಈ ಚಿತ್ರ ನನ್ನ ವೃತ್ತಿಬದುಕಿನ ಮುಖ್ಯ ಸಿನಿಮಾ ಆಗುತ್ತದೆ ಎಂಬ ವಿಶ್ವಾಸವನ್ನೂ ಹುಟ್ಟಿಸಬೇಕು’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT