ರಸ್ತೆಯಂಚಿನಲ್ಲೇ ಸಾಗಿದೆ ಕಾಮಗಾರಿಯ ಚಳಕು

7

ರಸ್ತೆಯಂಚಿನಲ್ಲೇ ಸಾಗಿದೆ ಕಾಮಗಾರಿಯ ಚಳಕು

Published:
Updated:
ರಸ್ತೆಯಂಚಿನಲ್ಲೇ ಸಾಗಿದೆ ಕಾಮಗಾರಿಯ ಚಳಕು

ಈ ಹಾದಿ ಬದಿ ಕರ್ಮಚಾರಿಯ ‘ಕಿಡಿಗಳ ನಡುವೆಯ ಕಾಯಕವನ್ನು’ ಜೆ.ಪಿ. ನಗರದಲ್ಲಿ ಒಂದೆಡೆ, ಒಂದು ಮಧ್ಯಾಹ್ನ ಕ್ಯಾಮೆರಾದಲ್ಲಿ ಸೆರೆಹಿಡಿದವರು, ಕೋಣನಕುಂಟೆ ವಾಸಿ, ಶ್ರೀಕಾಂತ್ ಪ್ರಭು. ಪುಣೆಯ ಎಫ್.ಟಿ.ಐ.ಐ. ಸಂಸ್ಥೆಯಿಂದ ಸಿನಿಮಾ ವಿರ್ದೇಶನದ ಪದವಿ ಪಡೆದು, ಸಾಕ್ಷ ಚಿತ್ರ, ಕಿರು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಅವರು ಬಳಸಿದ ಕ್ಯಾಮೆರಾ, ಪ್ಯಾನಸೊನಿಕ್ ಲುಮಿಕ್ಸ್ ಡಿ.ಎಂ.ಸಿ.- ಜಿ. ಎಚ್ 2, ಜೊತೆಗೆ 28-200 ಎಂ.ಎಂ. ಜೂಂ ಲೆನ್ಸ್. ಅವರ ಕ್ಯಾಮೆರಾದ ಎಕ್ಸ್ಪೋಶರ್ ವಿವರ, ಇಂತಿವೆ: ಶಟರ್ 1/ 160 ಸೆಕೆಂಡ್, ಐ.ಎಸ್.ಒ 160, ಫ್ಲಾಶ್ ಮತ್ತು ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಗುಣಗಳ ಅನುಸಂಧಾನ ಇಂತಿವೆ:

* ವಸ್ತು ನಿರೂಪಣೆಯಲ್ಲಿ, ಕ್ಯಾಮೆರಾದ ತಾಂತ್ರಿಕ ಗುಣಮಟ್ಟ ಉತ್ತಮವಾಗಿದೆ. ಸಾಂದರ್ಭಿಕವಾಗಿ ಕಾರ್ಮಿಕನೊಬ್ಬನ ಏಕಾಗ್ರತೆ, ಕಬ್ಬಿಣದ ಸರಳುಗಳನ್ನು ಗರಗಸದ ಮೊನುಚಾದ ಚಕ್ರ ಸೀಳಿ, ಸಿಡಿದೆದ್ದು ಪಕ್ಕದ ಸಿಮೆಂಟ್ ಕಟ್ಟೆಗೆ ಬಡಿಯುತ್ತಿರುವ ಬಿಸಿ ಬಿಸಿ ಕಿರಣಗಳ ರಭಸ ಎಲ್ಲವೂ ಸಮರ್ಪಕವಾಗಿ ಮೂಡಿವೆ. ಅಲ್ಲೇ ಬದುಕನ್ನೂ ಕಟ್ಟಿ ಕೊಂಡಿರಬಹುದೆಂಬ ಕುರುಹಾಗಿ, ಹೆಂಗಸೊಬ್ಬಳ ಇರುವು, ಒಣ ಹಾಕಿದ ಬಟ್ಟೆಗಳು, ಕುಡಿಯುವ ನೀರಿನ ಕ್ಯಾನ್, ಇತ್ಯಾದಿ ಸೂಕ್ಷ್ಮಗಳೂ ಕಾಣಿಸುವಂತೆ ಮಾಡಿರುವ ವಿಸ್ತಾರ ಗ್ರಹಣ ಮಸೂರದ ( ವೈಡ್ ಯ್ಯಾಂಗಲ್) ಬಳಕೆ ಸಮರ್ಪಕವಾಗಿದೆ.

* ಮಧ್ಯಾಹ್ನದ ಬೆಳಕಿನ ಸಂದರ್ಭದಲ್ಲಿ, ಸಿಡಿದೇಳುವ ಈ ಕಿರಣಗಳನ್ನು ಕಣ್ಣಿಗೆ ಪರಿಣಾಮಕಾರಿಯಾಗಿ ಕಾಣಿಸುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು, ತಾಂತ್ರಿಕವಾಗಿ ಕ್ಲಿಷ್ಟಕರವಾದದ್ದು. ಇಲ್ಲಿ, ಕಡಿಮೆ ಸೆನ್ಸಿಟಿವಿಟಿಯ ಐ.ಎಸ್.ಒ. ಬದಲು ಹೆಚ್ಚಿನ ಐ.ಎಸ್.ಒ ಬಳಕೆಯಾಗಿದ್ದರೆ, ಕೆಂಪು ಕಿರಣಗಳು ಬಿಳಿಸಿಕೊಂಡು, ಚಿತ್ರ ಕೆಡುತಿತ್ತು.

* ಶಟರ್ ವೇಗ ಅತಿ ಕಡಿಮೆಯಾಗದೆ, ಅತಿ ಹೆಚ್ಚೂ ಆಗದೆ , ಮಧ್ಯಮ ವೇಗವಾಗಿದ್ದು, ವ್ಯಕ್ತಿಯ ಚಲನೆಯುಳ್ಳ ಕೈನ ಭಾಗವನ್ನು ಅಲುಗಿಸದೇ (ಶೇಕ್), ಸ್ಫುಟಿದು ಸಿಡಿಯುತ್ತಿರುವ ಕಿರಣಗಳ ರಭಸದ ಮಾಟವನ್ನೂ ಸರಿಯಾಗಿಯೇ ಮೂಡಿಸಲು ಸಹಕಾರಿಯಾಗಿದೆ.

* ಕಲಾತ್ಮಕವಾಗಿ, ಈ ಬಗೆಯ ದೃಶ್ಯಗಳಲ್ಲಿ ಹೆಚ್ಚು ಹೇಳುವುದು ಮುಖ್ಯವಲ್ಲ. ಆದರೂ, ಚಿತ್ರಣದ ಪರಿಣಾಮ ನೋಡುಗನ ಮನಸ್ಸಿನಲ್ಲಿ ಮೂಡಿಸಬಹುದಾದ ಗುಣಾತ್ಮಕ ಅಂಶ ಮುಖ್ಯ. ಇಲ್ಲಿ, ಸಿಡಿದೆದ್ದ ಕೆಂಪು ಕಿರಣಗಳ ಧಾರೆಯನ್ನೇ ರೂಪಿಸಿರುವುದು, ನೋಡುಗನ ಕಣ್ಣನ್ನು ತನ್ನೆಡೆಗೆ ಸೆಳೆಯುತ್ತಿವೆ ಹಾಗೂ ನಿರ್ಲಿಪ್ತವಾದ ಇಡೀ ಚೌಕಟ್ಟಿಗೆ ಒಮ್ಮೆಲೇ ಜೀವ ತುಂಬಿದಂತಾಗುತ್ತದೆ.

* ಚಿತ್ರ ಸಂಯೋಜನೆಯ ವಿಶ್ಲೇಷಣೆಯ ಪ್ರಕಾರ, ಕಾರ್ಮಿಕನ ಕೈಂಕರ್ಯದ ಕೈ ಭಾಗ ಮತ್ತು ಸಿಡಿದೇಳುತ್ತಿರುವ ಕೆಂಪು ಕಿಡಿಗಳು ಚೌಕಟ್ಟಿನ ಒಂದು ಮೂರಾಂಶದಲ್ಲಿದ್ದು, ಅವುಗಳ ಮುಂಬದಿಯಲ್ಲಿ ಸಾಕಷ್ಟು ಜಾಗ (ಸ್ಪೇಸ್) ಬಿಟ್ಟಿರುವುದು ಸೂಕ್ತವಾಗಿದೆ.

* ವಸ್ತು- ವಿಷಯ ನಿರೂಪಣೆಯಲ್ಲಿ, ಚೌಕಟ್ಟೊಂದರಲ್ಲಿ ಕಾಣಸಿಗುವ ಭಾಗಗಳೆಲ್ಲವೂ, ಒಂದಕ್ಕೊಂದು ಸಂಬಂಧ ಹೊಂದಿದ್ದು, ಅನವಶ್ಯಕವಾದದ್ದು ಅಲ್ಲಿ ಮೂಗು ತೂರಿಸ ಬಾರದು. ಆ ದೃಷ್ಟಿಯಿಂದ ಈ ಚಿತ್ರದಲ್ಲಿ, ಕಣ್ಣಿಗೆ ಕಾಣಿಸುವ ಎಲ್ಲವೂ ಒಟ್ಟಾರೆ ಭಾವನೆಗೆ ಪೂರಕವಾಗಿಯೇ ಇರುವುದು ‘ಚಿತ್ರ ಕತೆ’ಯನ್ನು ಪರಿಣಾಮಕಾರಿಯಾಗಿ ಹೆಣೆಯುವಲ್ಲಿ ಸಹಕಾರಿ. ಶ್ರೀಕಾಂತ್ ಪ್ರಭು ಅವರ ಅನುಭವ ಮತ್ತು ಪರಿಣಿತಿಗೆ ಈ ಚೌಕಟ್ಟು ಕನ್ನಡಿಹಿಡಿಯ ಬಲ್ಲದ್ದಾದ್ದರಿಂದ, ಆ ದಿಸೆಯಲ್ಲಿ ಅವರು ಪ್ರಶಂಸನೀಯರು ಕೂಡ.ಶ್ರೀಕಾಂತ್ ಪ್ರಭು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry