7
ಜಿಲ್ಲೆಯಲ್ಲಿ 2,680 ಹೆಕ್ಟೇರ್‌ ಪ್ರದೇಶದಲ್ಲಿ ಮಾವು

26 ಸಾವಿರ ಟನ್‌ ಉತ್ಪಾದನೆ ಗುರಿ

Published:
Updated:
26 ಸಾವಿರ ಟನ್‌ ಉತ್ಪಾದನೆ ಗುರಿ

ಹಾಸನ: ‘ಹಣ್ಣುಗಳ ರಾಜ’ ಮಾರುಕಟ್ಟೆಗೆ ತಡವಾಗಿ ಲಗ್ಗೆ ಇಟ್ಟಿದ್ದು, ಆದರೆ ಈ ಬಾರಿ ಹಣ್ಣಿನ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ.

ಬೆಲೆ ಕಡಿಮೆಯಾದರೂ ಸತತವಾಗಿ ಬೀಳುತ್ತಿರುವ ಮಳೆಯಿಂದ ಗ್ರಾಹಕರು ಹಣ್ಣು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ನಗರದ ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರ ಬಾ ರಸ್ತೆ, ಆರ್‌.ಸಿ ರಸ್ತೆಯಲ್ಲಿ ಹಣ್ಣಿನ ವ್ಯಾಪಾರ ನಡೆಯುತ್ತಿದೆ.

ಕಳೆದ ವರ್ಷ ಆಲ್ಫಾನ್ಸೊ ತಳಿ ಮಾವು ಕೆ.ಜಿ ಗೆ ₹ 60 ಇದ್ದದ್ದು ಈ ಬಾರಿ ₹ 80ಕ್ಕೆ ಏರಿಕೆಯಾಗಿದೆ. ರಸಪುರಿ ಮಾವು ಕೆ.ಜಿ.ಗೆ ₹ 50 ರಿಂದ 60, ಬಾದಾಮಿ ಕೆ.ಜಿ ಗೆ ₹ 50, ಮಲಗೋವ ಕೆ.ಜಿ.ಗೆ ₹ 60 ಇದೆ. ನೀಲಂ ಮಾವಿನ ದರ ಕೆ.ಜಿ. ₹ 40, ಸಿಂಧೂರ ಹಣ್ಣು ₹ 30ಕ್ಕೆ ಮಾರಾಟವಾಗುತ್ತಿದೆ. ಬಹುತೇಕ ಎಲ್ಲಾ ಮಾವಿನ ತಳಿಗಳ ಬೆಲೆಯಲ್ಲೂ ಇಳಿಕೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 2,680 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅರಕಲಗೂಡು, ಹಾಸನ, ಅರಸೀಕೆರೆಯಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ, ಹವಾಮಾನ, ಮಣ್ಣಿನ ಗುಣಕ್ಕೆ ಅನುಗುಣವಾಗಿ ಮಾವಿನ ತಳಿ ಬೆಳೆಯಲಾಗುತ್ತದೆ. ಆಲ್ಫಾನ್ಸೊ (ಆಪೂಸ್‌), ತೊತಾಪುರಿ, ಕಲಮಿ, ಮಲ್ಲಿಕಾ, ಮಲ್ಗೊವಾ ಮುಂತಾದ ತಳಿಯ ಮಾವು ಬೆಳೆಯಲಾಗುತ್ತದೆ.

‘ಈ ವರ್ಷ 26 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಜಿಲ್ಲೆಯಲ್ಲಿ ಹೆಚ್ಚಾಗಿ ರಸಪುರಿ, ಬದಾಮಿ, ಮಲ್ಲಿಕಾ ಬೆಳೆಯಲಾಗುತ್ತದೆ. ಕಳೆದ ವರ್ಷ ಎಕರೆಗೆ 35 ಕ್ವಿಂಟಲ್ ಬೆಳೆಯಲಾಗಿತ್ತು, ಈ ವರ್ಷ ಎಕರೆಗೆ 40 ಕ್ವಿಂಟಲ್‌ ಮಾವು ನಿರೀಕ್ಷಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಾಸನದ ಎಪಿಎಂಸಿ ಯಾರ್ಡ್‌ಗೆ ಮಾವಿನ ಹಣ್ಣುಗಳನ್ನು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಂದ ಆವಕ ಮಾಡಿಕೊಳ್ಳಲಾಗುತ್ತಿದೆ. ಮಾವಿನ ಹಣ್ಣಿನ ಮಾರಾಟ ಜೂನ್‌ ಅಂತ್ಯದವರೆಗೂ ಇರುತ್ತದೆ.

‘ಜನವರಿಯಲ್ಲಿ ಮಾವಿನ ಹೂವು ಚೆನ್ನಾಗಿ ಬಂದಿದ್ದರೂ ಮಳೆ ಬಂದ ಕಾರಣ ಹೂವು ಉದುರಿ ಇಳುವರಿ ಕಡಿಮೆಯಾಗಿದೆ. ಅರಸೀಕೆರೆ, ನಿಟ್ಟೂರು, ಸಾಲಗಾಮೆ, ದುದ್ದದಿಂದ ಹಣ್ಣು ತರಿಸಿಕೊಳ್ಳಲಾಗುತ್ತಿದೆ. ಬೆಲೆ ಕಡಿಮೆಯಾದರೂ ನಿತ್ಯ ಬೀಳುತ್ತಿರುವ ಮಳೆಯಿಂದ ಗ್ರಾಹಕರು ಬರುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ಮೊಹಮ್ಮದ ಜುನೇದ್‌.

ಅವಧಿ ಪೂರ್ವದಲ್ಲೇ ಹಣ್ಣು ಮಾಗಿಸಲು ರಾಸಾಯನಿಕ ದ್ರವ(ಕಾರ್ಬೈಡ್‌) ಹಾಗೂ ಪೌಡರ್‌ ಬಳಸಲಾಗುತ್ತದೆ. ಹಾಗಾಗಿ ಹಣ್ಣು ಖರೀದಿಯಲ್ಲಿ ಎಚ್ಚರ ವಹಿಸಬೇಕು. ಅವಧಿಗೆ ಮೊದಲೇ ಮಾಗಿಸಿದ ಹಣ್ಣುಗಳು ನೋಡಲು ಆಕರ್ಷಕವಾಗಿ ಕಂಡರೂ ತಿನ್ನಲು ಯೋಗ್ಯವಲ್ಲ. ಈ ವರ್ಷ ಮಾವು ಹೂ ಬಿಟ್ಟಿರುವುದು ತಡವಾಗಿರುವ ಕಾರಣ ಮಾರುಕಟ್ಟೆಗೆ ಬಂದಿರುವ ಹೆಚ್ಚಿನ ಹಣ್ಣುಗಳಿಗೆ ರಾಸಾಯನಿಕ ಸಿಂಪರಣೆಯಾಗಿರುತ್ತವೆ.

ಹಣ್ಣು ಖರೀದಿ; ಗ್ರಾಹಕರಿಗೆ ಸಲಹೆ

‘ಹಣ್ಣಿನ ವಾಸನೆ ನೋಡಿದಾಗ ಅದರೊಂದಿಗೆ ರಾಸಾಯನಿಕ ದ್ರವ ಅಥವಾ ಪೌಡರ್‌ ವಾಸನೆ ಬಂದರೆ ಹಣ್ಣು ಖರೀದಿಸದಿರುವುದು ಒಳಿತು. ನೈಸರ್ಗಿಕವಾಗಿ ಗಾಢ ಬಣ್ಣಕ್ಕೆ ತಿರುಗಿದ ಹಣ್ಣು ತಿನ್ನಲು ಯೋಗ್ಯ. ಹಣ್ಣು ಖರೀದಿಸುವ ಮುನ್ನ ತಿಂದು ನೋಡಿ ರುಚಿ ಯೋಗ್ಯವೆನಿಸಿದರೆ ಮಾತ್ರ ಖರೀದಿಸಬೇಕು. ಹುಳಿ ಹೆಚ್ಚಾಗಿದ್ದರೆ ಅವಧಿ ಪೂರ್ವದಲ್ಲೇ ಹಣ್ಣು ಮಾಗಿ ಸಲಾಗಿರುತ್ತದೆ. ಹಣ್ಣಿನ ಮೇಲೆ ಕಲೆ ಬಿದ್ದ, ನೆಗ್ಗಿದ, ಕೀಟದ ಕಲೆ ಇರದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮಾವಿನ ಹಣ್ಣಿನ ಮೇಲೆ ರಂಧ್ರಗಳಿದ್ದರೆ ಅದರಲ್ಲಿ ಹುಳುಗಳಿರುವ ಸಾಧ್ಯತೆ ಇರುತ್ತದೆ’ ಎನ್ನುತ್ತಾರೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌.

‘ಈ ವರ್ಷವೂ ಮಾವು ಮತ್ತು ಹಳಸು ಮೇಳವನ್ನು ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶೀಘ್ರ ನಡೆಸಲಾಗುವುದು. ಈ ಸಂಬಂಧ ಸೋಮವಾರ ಮಾವು ಬೆಳೆಗಾರರ ಸಭೆ ನಡೆಸಿ, ಅವರಿಂದ ಮಾಹಿತಿ ಪಡೆದು ರೂಪುರೇಷೆ ಸಿದ್ಧಪಡಿಸಲಾಗುವುದು. ಮಾವು ಬೆಳೆಯುವ ಎಲ್ಲಾ ಜಿಲ್ಲೆಯ ರೈತರಿಗೂ ಆಹ್ವಾನ ನೀಡಲಾಗುವುದು. ಜಿಲ್ಲೆಯವರಿಗೆ ಮೊದಲ ಆದ್ಯತೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್‌ ತಿಳಿಸಿದರು.

‘ಗ್ರಾಹಕರಿಗೆ ಎಲ್ಲಾ ತಳಿಯ ಮಾವು ಒಂದೇ ಕಡೆ ದೊರೆಯಬೇಕು ಹಾಗೂ ರೈತರಿಗೆ ಒಂದೇ ವೇದಿಕೆಯಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮೇಳ ಆಯೋಜಿಸಲಾಗುತ್ತಿದೆ. ಗ್ರಾಹಕರಿಗೆ ಕಾರ್ಬೈಡ್‌ ಮುಕ್ತ ಹಣ್ಣು ದೊರೆಯಬೇಕು. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಹಣ್ಣುಗಳನ್ನು ನೀಡಲಾಗುವುದು. ಮಾವು ಬೆಳೆಗಾರರ ಸಂಘದಲ್ಲಿ ನೋಂದಣಿ ಮಾಡಿಸಿದವರಿಗೆ ಮಾತ್ರ ಮಾರಾಟಕ್ಕೆ ಅವಕಾಶ ಹೊರತು ವರ್ತಕರಿಗೆ ಇಲ್ಲ. ಕೋಲಾರ, ಮಾಲೂರು, ತುಮಕೂರು, ರಾಮನಗರ ಜಿಲ್ಲೆಯೂ ರೈತರು ಕಳೆದ ಬಾರಿ ಭಾಗವಹಿಸಿದ್ದರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry