ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಚಡ’ ಮನೆ ಕಟ್ಟಿ ನೋಡು

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ವಿಶಾಲವಾದ ಪ್ರಾಂಗಣ, ಸುತ್ತಲು ಹಸಿರು ಕೈತೋಟ, ಅಗಲವಾದ ಕಿಟಿಕಿ, ಮನೆಯ ಒಳಗೆಲ್ಲಾ ಚೆಲ್ಲಿರುವ ಬೆಳಕು, ಸ್ವಚ್ಛಂದ ಗಾಳಿ, ಛಾವಣಿಯಲ್ಲಿ ಚಿಂವ್‌ಗುಡುವ ಅಳಿಲುಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು... ಇದು ನಗರದ ಹೊರವಲಯದಲ್ಲಿನ ಯಾವುದೊ ರೆಸಾರ್ಟ್‌ನ ನೋಟವಲ್ಲ. ಸ್ಯಾಂಕಿಕೆರೆಯಿಂದ ಕೂಗಳತೆಯ ದೂರದಲ್ಲಿ ಸದಾಶಿವನಗರದಲ್ಲಿರುವ ಜಿ.ವಿ.ದಾಸರಥಿ ಅವರ ‘ಕಚಡ ಮನೆ’!

‘ನಗರದ ಗುಡಿಸಲು’, ‘ತ್ಯಾಜ್ಯ ಮನೆ’ ಎಂಬೆಲ್ಲ ಹೆಸರುಗಳಿಂದ ಕರೆಸಿಕೊಳ್ಳುವ ಈ ಮನೆ ನೈಸರ್ಗಿಕ ಹವಾ ನಿಯಂತ್ರಕದಂತಿದೆ. 1,500 ಚದರ ಅಡಿ ವಿಸ್ತೀರ್ಣದಲ್ಲಿ ಒಂದಿಂಚು ಜಾಗವೂ ವ್ಯರ್ಥವಾಗದಂತೆ ನಿರ್ಮಿಸಿರುವ ಈ ಪರಿಸರ ‍ಪ್ರೇಮಿಯ ಮನೆ ಬೆರಗು ಹುಟ್ಟಿಸುತ್ತದೆ. ಸುಡು ಬೇಸಿಗೆಯ ಮಧ್ಯಾಹ್ನದಲ್ಲಿಯೂ ತಂಪಾಗಿರುವ ಈ ಮನೆಯಲ್ಲಿನ ಫ್ಯಾನ್‌ಗಳಿಗೆ ಸುತ್ತುವ ಭಾಗ್ಯ ದೊರಕುವುದೇ ಅಪರೂಪ.

ದಾಸರಥಿ ಅವರಿಗೆ ಬಾಲ್ಯದಿಂದಲೇ ಇದ್ದ ಪರಿಸರದ ಒಡನಾಟ ಪರಿಸರ ಕಾಳಜಿಯನ್ನು ಕಲಿಸಿತ್ತು. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಜಾರ್ಖಾಂಡ್, ಒಡಿಶಾ, ಛತ್ತೀಸ್‌ಗಡ, ಪಶ್ಚಿಮ ಬಂಗಾಳದ ವಿವಿಧ ಶಾಲೆಗಳಲ್ಲಿ ಶಿಕ್ಷಣವನ್ನು ಪೂರೈಸಿದರು. ಗುಜರಾತ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿ ಖರಗ್‌ಪುರದ ‘ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ನಲ್ಲಿ ಎಂ.ಟೆಕ್‌ ಪದವಿ ಪಡೆದರು. ದೇಶದ ವಿವಿಧ ಹಳ್ಳಿಗಳನ್ನು ಸುತ್ತಿದ್ದ ಇವರು ಬೆಂಗಳೂರಿನ ತ್ಯಾಜ್ಯ ನೋಡಿ ದಂಗಾಗಿದ್ದರು. ಮರುಬಳಕೆಗೆ ಆದ್ಯತೆ ನೀಡುವ ಸಲುವಾಗಿ ಕಟ್ಟಡ ತ್ಯಾಜ್ಯಗಳಿಂದಲೇ ಕಚಡ ಮನೆ ನಿರ್ಮಿಸಿದರು. ಮರುಬಳಕೆ, ಪುನರ್‌ಬಳಕೆ, ಸುಸ್ಥಿರಜೀವನ ಅವರ ಜೀವನದ ಆದರ್ಶವಾಯಿತು.

ಕಚಡ ಮನೆ ನಿರ್ಮಾಣಗೊಂಡು 10 ವರ್ಷ ಕಳೆದಿವೆ. ಸಾಮಾನ್ಯ ಮನೆಗಳ ನಿರ್ಮಾಣಕ್ಕೆ ಬಳಸುವ ಶೇ 5ಕ್ಕಿಂತಲೂ ಕಡಿಮೆ ಮರಗಳನ್ನು ಇದಕ್ಕೆ ಬಳಸಲಾಗಿದೆ. ಸಿಮೆಂಟ್‌ ಹಾಗೂ ಸ್ಟೀಲ್‌ಗಳ ಬಳಕೆಯನ್ನು ಶೇ 90ರಷ್ಟು ಕಡಿಮೆ ಮಾಡಿದ್ದಾರೆ. ಬಹುತೇಕ ಗಾಜು ಹಾಗೂ ಕಿಟಕಿಯೇ ಮನೆಯ ಗೋಡೆಯಾಗಿ ನಿಂತಿವೆ. ಅದು ಸಹ ಕಟ್ಟಡ ತ್ಯಾಜ್ಯದಿಂದಲೇ ಹೆಕ್ಕಿ ತಂದ ಗಾಜು. ಮನೆಯ ಛಾವಣಿಯನ್ನು ಬಿದಿರಿನ ಶೀಟ್‌ಗಳಿಂದ ನಿರ್ಮಿಸಿದ್ದಾರೆ. ಮನೆಯ ಯಾವ ಮೂಲೆ ಹುಡುಕಿದರೂ ಒಂದೂ ಟೈಲ್ಸ್‌ ಸಿಗುವುದಿಲ್ಲ. ಬಣ್ಣರಹಿತ ಸಿಮೆಂಟ್‌ ಮನೆಯನ್ನು ಅಲಂಕರಿಸಿದೆ.

‘ಸಿಮೆಂಟ್‌ನ ತೆಳು ಪದರವಿರುವುದರಿಂದ ಮಳೆ ಬರುವಾಗ ಮಣ್ಣಿನ ಘಮ, ಮಳೆಯ ನಿನಾದವನ್ನು ಅನುಭವಿಸಬಹುದು. ಗೂಗಲ್‌ನಲ್ಲಿ ಕಟ್ಟಡ ಉರುಳಿಸುವ ಕಂಪೆನಿಗಳು, ಗುತ್ತಿಗೆದಾರರ ಸಂಪರ್ಕ ಪಡೆದು ಕಟ್ಟಡ ತ್ಯಾಜ್ಯದ ವಸ್ತುಗಳನ್ನು ಪಡೆದುಕೊಂಡೆ. ಜೊತೆಗೆ ನಗರದಲ್ಲಿನ ಬ್ಯಾಂಬೂ ಮಾರ್ಕೆಟ್‌, ಸಂಡೇ ಬಜಾರ್‌ಗಳಿಂದ ತ್ಯಾಜ್ಯಗಳನ್ನು ಖರೀದಿಸಿದೆ’ ಎನ್ನುತ್ತಾರೆ ದಾಸರಥಿ.

ಛಾವಣಿ, ಕಿಟಿಕಿ, ಸ್ಟೇರ್‌ಕೇಸ್‌, ಅಡುಗೆಕೋಣೆ, ಕಬೋರ್ಡ್‌, ಪುಸ್ತಕದ ರ‍್ಯಾಕ್‌ಗಳು ಸಂಪೂರ್ಣ ಮರುಬಳಕೆಯ ಮರದಿಂದಲೇ ನಿರ್ಮಾಣಗೊಂಡಿವೆ. ಜೊತೆಗೆ ಬಾತ್‌ರೂಮ್‌ ಪರಿಕರಗಳು ಯಾರದೋ ಮನೆಯ ಕಟ್ಟಡ ತ್ಯಾಜ್ಯಗಳು. ಕಮೋಡ್, ಬಾತ್‌ಟಬ್‌, ಪೈಪ್‌, ಅಡುಗೆಕೋಣೆಯ ಸಿಂಕ್‌ಗಳನ್ನು ಸಹ ತ್ಯಾಜ್ಯದಿಂದಲೇ ಸಂಗ್ರಹಿಸಿದ್ದಾರೆ.

‘ಬಾತ್‌ರೂಮ್‌ ಹಾಗೂ ಅಡುಗೆಮನೆಯಲ್ಲಿ ಬಳಸಿರುವ ಎಲ್ಲ ಸಾಧನಗಳು ಪ್ರತಿಷ್ಠಿತ ಕಂಪೆನಿಯ ಲಕ್ಷಗಟ್ಟಲೆ ಬೆಲೆಬಾಳುವ ಉಪಕರಣಗಳು. ಆದರೆ ನಾನು ಅದರ ಬೆಲೆಯ ಶೇ 10 ರಷ್ಟನ್ನು ನೀಡಿ ಖರೀದಿಸಿದ್ದೇವೆ’ ಎನ್ನುತ್ತಾರೆ ದಾಸರಥಿ. 

ಕುರ್ಚಿಗಳು, ಊಟದ ಟೇಬಲ್‌, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌, ಮೈಕ್ರೋವೇವ್‌ ಓವನ್‌, ಗ್ಯಾಸ್‌ ಸ್ಟೌ ಎಲ್ಲವೂ ಇಲ್ಲಿ ಸೆಕೆಂಡ್‌ ಹ್ಯಾಂಡ್‌. ಆದರೆ ಇದು ಸುಸ್ಥಿತಿಯಲ್ಲಿರುವಂತವು. ಸ್ಟೀಲ್‌ ಬಳಕೆಯನ್ನು ವಿರೋಧಿಸುವ ಇವರು ಮನೆಯ ಕಿಟಕಿಗಳಿಗೆ ಯಾವುದೇ ಗ್ರಿಲ್ ಉಪಯೋಗಿಸಿಲ್ಲ.

‘ಮನೆಯ ಹೊರಗಿನ ಒಳಗಿನ ಬಹುತೇಕ ವಸ್ತುಗಳನ್ನು ತ್ಯಾಜ್ಯದಿಂದಲೇ ಸಂಗ್ರಹಿಸಿದ್ದೇವೆ. ಹಾಗಾಗಿ ‘ಕಚಡ ಮನೆ’ ಎಂದು ನಾಮಕರಣ ಮಾಡಿದ್ದೇವೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿನ ಗುಡಿಸಲು ಮಾದರಿಯಲ್ಲಿ ನಿರ್ಮಿಸಿರುವುದರಿಂದ ‘ನಗರದ ಗುಡಿಸಲು’ ಎಂದು ಕರೆಯುತ್ತೇನೆ’ ಎನ್ನುತ್ತಾರೆ ದಾಸರಥಿ.

‘ಇದೇ ವಿಸ್ತೀರ್ಣ, ವಿನ್ಯಾಸದಲ್ಲಿ 10 ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆ ಕನಿಷ್ಟ 40 ಲಕ್ಷ ಖರ್ಚಾಗುತ್ತಿತ್ತು. ಆದರೆ ನಮ್ಮ ಮನೆ ಕೇವಲ 15 ಲಕ್ಷದಲ್ಲಿ ನಿರ್ಮಾಣವಾಯಿತು. ಕೇವಲ 7 ತಿಂಗಳಲ್ಲಿ ಮನೆಯ ನಿರ್ಮಾಣವೂ ಮುಗಿಯಿತು’ ಎನ್ನುತ್ತಾರೆ ಅವರು.

ಕಚಡ ಮನೆ ಸದ್ಯ ನಗರದ ಸಣ್ಣ ಪ್ರವಾಸಿ ಸ್ಥಳದಂತಾಗಿದೆ. ಪ್ರತಿ ವಾರಾಂತ್ಯಗಳಲ್ಲಿಯೂ ಪರಿಸರ ಪ್ರೇಮಿಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು, ಆಸಕ್ತರು ಇವರ
ಮನೆಗೆ ಭೇಟಿ ನೀಡಿ ಈ ಮಾದರಿಯನ್ನು ಅನುಕರಿಸ ಬಯಸುತ್ತಿದ್ದಾರೆ. 

ಪರಿಸರದೊಂದಿಗೆ ಜೀವನ
ದಾಸರಥಿ ಅವರು ಕಚಡ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದಾರೆ. ಜೊತೆಗೆ ಬೀದಿನಾಯಿಯೊಂದನ್ನು ದತ್ತು ಪಡೆದು ಸಾಕುತ್ತಿದ್ದಾರೆ.  ಛಾವಣಿಯಲ್ಲಿ ಅನೇಕ ಅಳಿಲು, ಹಕ್ಕಿಗಳು ಆಶ್ರಯ ಪಡೆದಿವೆ. ಮಂಗಗಳು, ಬಾವಲಿ, ಚಿಟ್ಟೆ, ಅನೇಕ ಜಾತಿಯ ಹುಳುಗಳು ಇವರ ಮನೆಗೆ ನಿತ್ಯ ಭೇಟಿ ನೀಡುವ ಅತಿಥಿಗಳು. ‘ಮೃಗಾಲಯದಲ್ಲಿ ಬದುಕುವಂತಿದೆ’ ಎನ್ನುತ್ತಾರೆ ದಾಸರಥಿ.

ಸೈಕಲ್‌ ಸವಾರಿ: ದಾಸರಥಿ ಅವರು ಜಯನಗರಲ್ಲಿ ಸ್ವಂತ ಕಂಪೆನಿ ಹೊಂದಿದ್ದಾರೆ. ಕಳೆದ 15 ವರ್ಷಗಳಿಂದ ಸದಾಶಿವನಗರದಿಂದ ಜಯನಗರದವರೆಗೆ ನಿತ್ಯ ಸೈಕಲ್ ಸವಾರಿ ಮಾಡುತ್ತಾರೆ. ಕೆಲವೊಮ್ಮೆ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ. ಪರಿಸರ ಕಾಳಜಿಗಾಗಿ ಇಲ್ಲಿ ತನಕ ಅವರು ಯಾವುದೇ ಸ್ವಂತ ವಾಹನ ಖರೀದಿಸಿಲ್ಲ.

ನೀರಿನ ಮರುಬಳಕೆ
ಕಚಡ ಮನೆಯಲ್ಲಿ ಮಳೆನೀರುಕೊಯ್ಲಿಗೆ 20,000 ಲೀಟರ್ ಟ್ಯಾಂಕ್ ಅಳವಡಿಸಿದ್ದಾರೆ. ಪಾಲಿಕೆಯ ನೀರಿನ ಬಳಕೆಯನ್ನು ಅರ್ಧದಷ್ಟು ಇದು ಕಡಿತಗೊಳಿಸಿದೆ. ಅಡುಗೆ ಮನೆ, ವಾಷಿಂಗ್‌ ಮಷಿನ್‌ ನೀರು ಸೇರಿದಂತೆ ಉಪಯೋಗಿಸುವ ಎಲ್ಲ ನೀರನ್ನೂ ಮರುಬಳಕೆ ಮಾಡುವ ಸಲುವಾಗಿ ‘ಗ್ರೇ ವಾಟರ್‌ ಸಿಸ್ಟಮ್‌’ ಅಳವಡಿಸಿದ್ದಾರೆ. ಈ ನೀರನ್ನು ಟಾಯ್ಲೆಟ್‌ ಹಾಗೂ ಮನೆಯ ಸುತ್ತಲಿನ ಕೈತೋಟಕ್ಕೆ ಬಳಸುತ್ತಿದ್ದಾರೆ.

ತ್ಯಾಜ್ಯ ಬೇರ್ಪಡಿಸುವಿಕೆ
ದಾಸರತಿ ಅವರು ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸುತ್ತಾರೆ. ಹಸಿ ಕಸವನ್ನು ಕೈತೋಟದಲ್ಲಿನ ಗುಂಡಿಗೆ ಹಾಕಿ ಗೊಬ್ಬರ ತಯಾರಿಸಿ ಬಳಸುತ್ತಾರೆ. ಒಣ ಕಸವನ್ನು ಚಿಂದಿ ಆಯುವವರಿಗೆ ನೀಡುತ್ತಾರೆ. ಇದನ್ನು ಬಿಬಿಎಂಪಿಗೆ ನೀಡಿದರೆ ಅಲ್ಲಿ ಸರಿಯಾಗಿ ಸಂಸ್ಕರಣೆ ಆಗುವುದಿಲ್ಲ. ಹಸಿಕಸದೊಂದಿಗೆ ಒಣಕಸವನ್ನೂ ಸೇರಿಸುತ್ತಾರೆ ಎನ್ನುವುದು ಅವರ ಆರೋಪ.

ನೀರಿನ ಮರುಬಳಕೆ
ಕಚಡ ಮನೆಯಲ್ಲಿ ಮಳೆನೀರುಕೊಯ್ಲಿಗೆ 20,000 ಲೀಟರ್ ಟ್ಯಾಂಕ್ ಅಳವಡಿಸಿದ್ದಾರೆ. ಪಾಲಿಕೆಯ ನೀರಿನ ಬಳಕೆಯನ್ನು ಅರ್ಧದಷ್ಟು ಇದು ಕಡಿತಗೊಳಿಸಿದೆ. ಅಡುಗೆ ಮನೆ, ವಾಷಿಂಗ್‌ ಮಷಿನ್‌ ನೀರು ಸೇರಿದಂತೆ ಉಪಯೋಗಿಸುವ ಎಲ್ಲ ನೀರನ್ನೂ ಮರುಬಳಕೆ ಮಾಡುವ ಸಲುವಾಗಿ ‘ಗ್ರೇ ವಾಟರ್‌ ಸಿಸ್ಟಮ್‌’ ಅಳವಡಿಸಿದ್ದಾರೆ. ಈ ನೀರನ್ನು ಟಾಯ್ಲೆಟ್‌ ಹಾಗೂ ಮನೆಯ ಸುತ್ತಲಿನ ಕೈತೋಟಕ್ಕೆ ಬಳಸುತ್ತಿದ್ದಾರೆ.

ತ್ಯಾಜ್ಯ ಬೇರ್ಪಡಿಸುವಿಕೆ
ದಾಸರತಿ ಒಣ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯಗಳನ್ನು ಬೇರೆ ಬೇರೆಯಾಗಿ ಸಂಗ್ರಹಿಸುತ್ತಾರೆ. ಹಸಿ ಕಸವನ್ನು ಕೈತೋಟದಲ್ಲಿನ ಗುಂಡಿಗೆ ಹಾಕಿ ಗೊಬ್ಬರ ತಯಾರಿಸುತ್ತಾರೆ. ಒಣ ಕಸವನ್ನು ಚಿಂದಿ ಆಯುವವರಿಗೆ ನೀಡುತ್ತಾರೆ. ಇದನ್ನು ಬಿಬಿಎಂಪಿಗೆ ನೀಡಿದರೆ ಸಂಸ್ಕರಣೆ ಮಾಡುವುದಿಲ್ಲ. ಹಸಿಕಸದೊಂದಿಗೆ ಒಣಕಸವನ್ನೂ ಸೇರಿಸುತ್ತಾರೆ ಎಂಬುದು ದಾಸರಥಿ ಆರೋಪ.


ಜಿ.ವಿ.ದಾಸರಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT