ಬಜರಂಗಿಯ ವಿಶ್ವರೂಪ ದರ್ಶನವಿದು...

7

ಬಜರಂಗಿಯ ವಿಶ್ವರೂಪ ದರ್ಶನವಿದು...

Published:
Updated:
ಬಜರಂಗಿಯ ವಿಶ್ವರೂಪ ದರ್ಶನವಿದು...

ಜಯ ಹನುಮಾನ್ ಜ್ಞಾನ ಗುಣಸಾಗರ

ಜಯ ಕಪೀಶ ತಿಹುಲೋಕ ಉಜಾಗರ

ರಾಮದೂತ ಆತುಲಿತ ಬಲ ಧಾಮಾ

ಅಂಜನೀಪ್ರತ್ರ- ಪವನಸುತ ನಾಮಾ

ಮಹಾವೀರ ವಿಕ್ರಮ ಬಜರಂಗೀ

ಕುಮತಿ ನಿವಾರಾ ಸುಮತಿ ಕೇ ಸಂಗೀ...

ಇವು ಶ್ರೀರಾಮಚಂದ್ರನ ಪರಮ ಭಕ್ತ ತುಳಸೀದಾಸ ರಚಿಸಿದ ಹನುಮಾನ್ ಚಾಲೀಸಾದ ಪ್ರಾರಂಭಿಕ ಸಾಲುಗಳು. ಹನುಮಾನ್ ಚಾಲೀಸಾದಲ್ಲಿ ಒಟ್ಟು 40 ಸಾಲುಗಳಿದ್ದು, ಅವುಗಳ ಪಠಣದಿಂದ ಏಕಾಗ್ರತೆ, ಶಕ್ತಿ, ಧೈರ್ಯ, ಯಶಸ್ಸು, ಆರೋಗ್ಯ, ವಾಕ್ ಶಕ್ತಿ ಲಭಿಸುತ್ತದೆಂದು ನೂರಾರು ವರ್ಷಗಳ ನಂಬಿಕೆ ಜನರಲ್ಲಿ ಗಾಢವಾಗಿ ಹರಡಿದೆ. ಅದೇ ನಂಬಿಕೆವುಳ್ಳ ಕಲಾವಿದೆ ಚಂಪಾ ಶರತ್ ಅವರು ಹನುಮಾನ್ ಚಾಲೀಸಾಕ್ಕೆ ‘ವುಡ್‌ಕಟ್‌ ಪ್ರಿಂಟ್’ ಕಲೆಯ ಸ್ಪರ್ಶ ನೀಡಿದ್ದಾರೆ.

ಹನುಮಾನ್ ಚಾಲೀಸಾದ ಪ್ರತಿ ಸಾಲುಗಳಲ್ಲಿ ಬಜರಂಗಿಯ ವಿಶ್ವರೂಪ ಹಾಗೂ ಹೃದಯವಂತಿಕೆಯನ್ನು ಬಣ್ಣಿಸಲಾಗಿದೆ. ತುಳಸೀದಾಸರ ಬಣ್ಣನೆಯಲ್ಲಿ ಮೂಡಿರುವ ಈ ಸಾಲುಗಳು ಧ್ವನಿಸುವ ಅರ್ಥಕ್ಕೆ ಚಂಪಾ ಶರತ್ ಅವರು ತನ್ನದೇ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸಿದ್ದಾರೆ. ನೋಡಲು ಅದ್ಭುತವಾಗಿವೆ.

ಬೆಂಗಳೂರು ಮೂಲದ ಚಂಪಾ ಅವರು ‘ವುಡ್‌ಕಟ್‌ ಪ್ರಿಂಟ್’ ಕಲಾಕೃತಿಗಳ ರಚನೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಸುಮಾರು 15 ವರ್ಷಗಳಿಂದ ಈ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿರುವ ಅವರು ಹತ್ತು ವರ್ಷಗಳ ಹಿಂದೆಯೇ ಹನುಮಾನ್ ಚಾಲೀಸಾದಲ್ಲಿನ ಮೊದಲ 20 ಸಾಲುಗಳ ಅರ್ಥ ಧ್ವನಿಸುವ ಕಲಾಕೃತಿಗಳನ್ನು ರಚಿಸಿ ‘ಗ್ಯಾಲರಿ ಸುಮುಖ’ದಲ್ಲಿ ಪ್ರದರ್ಶಿಸಿದ್ದರು. ಅವು ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಬಳಿಕ ಕೌಟುಂಬಿಕ ಕಾರಣಕ್ಕಾಗಿ ಬಿಡುವು ಪಡೆದ ಅವರು ಕಳೆದ ಐದು ವರ್ಷಗಳಿಂದ ಮತ್ತೆ ತನ್ನ ನೆಚ್ಚಿನ ವುಡ್‌ಕಟ್‌ ಪ್ರಿಂಟ್‌ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ನಗರದ ಹಲವೆಡೆ ಹಾಗೂ ಹೈದರಾಬಾದ್‌ನಲ್ಲಿ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ.

ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶ್ಯುವಲ್ ಆರ್ಟ್ಸ್‌ನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್‌ ಕೋರ್ಸ್ ಪೂರ್ಣಗೊಳಿಸಿದ ಅವರು ಎಂ.ಎಸ್.ಯೂನಿವರ್ಸಿಟಿ ಆಫ್ ಬರೋಡಾದಲ್ಲಿ ‘ಪ್ರಿಂಟ್ ಮೇಕಿಂಗ್’ ಕೋರ್ಸ್‌ನಲ್ಲಿ ಸ್ನಾತಕೋತ್ತರ ಮುಗಿಸಿದ್ದಾರೆ. ‘ಬರೋಡಾದ ವಿಶ್ವವಿದ್ಯಾಲಯದಲ್ಲಿ ಕಲೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಲ್ಲಿ ಓದಲು ಬರುವ ಬಹುತೇಕ ಭಾರತೀಯರು ಆ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ಕಲಾರಾಧನೆಯ ವಾತಾವರಣವೇ ನನ್ನಲ್ಲಿನ ಕಲಾ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಕಲೆಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿ ಈ ಕ್ಷೇತ್ರದಲ್ಲಿ ನನ್ನನ್ನು ನಾನು ಈಚೆಗೆ ಸಂಪೂರ್ಣವಾಗಿ ತೊಡಗಿಸಿಕೊಂಡೆ’ ಎನ್ನುತ್ತಾರೆ ಚಂಪಾ.

ಕಲಾಕೃತಿಯಲ್ಲಿ ರಾಮಾಯಣ:

ಅವರ ಕಲಾಕೃತಿಗಳ ವಿಚಾರಕ್ಕೆ ಬರುವುದಾದರೆ, ಸೂರ್ಯನನ್ನು ಹಣ್ಣು ಎಂದು ಭಾವಿಸಿ ಅದನ್ನು ತಿನ್ನಲು ಹೊರಟ ಹನುಮಂತ ಚಿತ್ರವು ನೈಜತೆಯ ಸ್ಪರ್ಶವನ್ನು ಕಟ್ಟಿಕೊಡುತ್ತದೆ. ರಾವಣ ಹಾಗೂ ಹನುಮ ಪರಸ್ಪರ ಎದುರಾಗುವ ದೃಶ್ಯವಂತೂ ಆಜನ್ಮ ವೈರಿಗಳು ಎದುರಾದ ಸನ್ನಿವೇಶ ಕಟ್ಟಿಕೊಡುತ್ತದೆ. ಇದೇ ಕಲಾಕೃತಿಯಲ್ಲಿನ ರಾವಣ ಹಾಗೂ ಹನುಮನ ನಡುವೆ ಇರುವ ಶ್ರೀಲಂಕಾ (ಆಗಿನ ಲಂಕೆ) ನಕ್ಷೆ ವಾಸ್ತವವನ್ನು ಕಟ್ಟಿಕೊಡುತ್ತದೆ.

ರಾಮಸೇತುವೆ ನಿರ್ಮಾಣ ಮಾಡುತ್ತಿರುವ ಕಪಿಸೇನೆ, ರಾಮನ ಉಂಗುರವನ್ನು ಬಾಯಲ್ಲಿ ಕಚ್ಚಿಕೊಂಡು ಸಮುದ್ರದ ಮೂಲಕ ಲಂಕೆಗೆ ಹಾರುವ, ಲಂಕೆಗೆ ಬೆಂಕಿ ಹಚ್ಚಿ ಹಿಂದಿರುಗುವ, ಯುದ್ಧದ ಸಂದರ್ಭದಲ್ಲಿ ವೈರಿ ದಾಳಿಗೀಡಾಗಿ ಪ್ರಜ್ಞೆ ಕಳೆದುಕೊಳ್ಳುವ ಲಕ್ಷ್ಮಣನ ಪ್ರಾಣ ಉಳಿಸಲು ಸಂಜೀವಿನಿ ಬೆಟ್ಟ ಹೊತ್ತು ತರುವ ಹಾಗೂ ರಾವಣ ಹಾಗೂ ಇನ್ನಿತರ ಜತೆಗೆ ಹನುಮನ ಕಾದಾಟದ ಕಲಾಕೃತಿಗಳ ಮೂಲಕ ಚಂಪಾ ಅವರು ರಾಮಾಯಣ ದರ್ಶನ ಮಾಡಿಸಿದ್ದಾರೆ. ರಾಮ ಹಾಗೂ ಲಕ್ಷ್ಮಣನ ಮಾತು ಆಲಿಸುತ್ತಿರುವ ಹಾಗೂ ಎದೆ ಸೀಳಿ ತನ್ನ ರಾಮಭಕ್ತಿಯನ್ನು ತೋರುವ ಚಿತ್ರಗಳು ಮಾರುತಿಯ ನಿಷ್ಠೆಯನ್ನು ತೋರುತ್ತವೆ.

ಮೈ ಮೇಲೆ ಪುಟ್ಟ ಪುಟ್ಟ ಕೋತಿಗಳ ಚಿತ್ರಗಳುಳ್ಳ ವಾನರ (ದೇವರು ಗಾಢ್ ಆಫ್ ಮಂಕೀಸ್) ಎಂಬ ಸಂದೇಶ ಸಾರುವ ಕಲಾಕೃತಿ ಹಾಗೂ ಮನುಷ್ಯರೆಲ್ಲರೂ ಸತ್ತ ಮೇಲೆ ರಾಮಚರಣ ಸೇರುತ್ತಾರೆ ಎಂಬ ಸಂಕೇತ ಬಿಂಬಿಸುವ ಕಲಾಕೃತಿಯೂ ಅದ್ಬುತವಾಗಿ ರಚಿತಗೊಂಡಿವೆ. ಈ ಕಲಾಕೃತಿಗಳು ಚಂಪಾ ಅವರ ನೆಚ್ಚಿನವು ಅಂತೆ.

ಸುಮುಖದಲ್ಲಿ ಪ್ರದರ್ಶನ

ಜೂನ್ 23ರ ವರೆಗೆ ವಿಲ್ಸ್‌ನ್‌ಗಾರ್ಡನ್‌ನಲ್ಲಿರುವ ‘ಗ್ಯಾಲರಿ ಸುಮುಖಾ'ದಲ್ಲಿ ಚಂಪಾ ಅವರ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಒಂದೇ ಜಾಗದಲ್ಲಿ ಬಜರಂಗಿಯ ವಿವಿಧ ರೂಪಗಳನ್ನು ಕಣ್ತುಂಬಿಕೊಳ್ಳವ ಅವಕಾಶವಿದೆ. ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5.30ರ ವರೆಗೆ ಕಲಾಕೃತಿಗಳ ವೀಕ್ಷಣೆಗೆ ಅವಕಾಶವಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಭಾನುವಾರ ರಜೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry