ಏರದ ಮದ್ಯದ ನಶೆ: ತಗ್ಗಿದ ವಹಿವಾಟು

7
ಚುನಾವಣಾ ನೀತಿಸಂಹಿತೆ ಬಿಸಿಯಿಂದ ಅಬಕಾರಿ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಖೋತಾ

ಏರದ ಮದ್ಯದ ನಶೆ: ತಗ್ಗಿದ ವಹಿವಾಟು

Published:
Updated:
ಏರದ ಮದ್ಯದ ನಶೆ: ತಗ್ಗಿದ ವಹಿವಾಟು

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಬಿಸಿಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಮದ್ಯದ ವಹಿವಾಟು ಕುಸಿದು, ಅಬಕಾರಿ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಖೋತಾ ಆಗಿದೆ.

ಸಾಮಾನ್ಯವಾಗಿ ಚುನಾವಣೆಗಳ ಸಂದರ್ಭದಲ್ಲಿ ಝಣ ಝಣ ಕಾಂಚಣ ಸದ್ದು ಮಾಡುತ್ತದೆ. ಜತೆಗೆ ಮದಿರೆಯ ನಶೆ ಏರುತ್ತದೆ. ಮತದಾರರ ಓಲೈಕೆಗಾಗಿ ರಾಜಕಾರಣಿಗಳು ಹಣ, ಹೆಂಡದ ಹೊಳೆ ಹರಿಸುತ್ತಾರೆ. ಎಲ್ಲೆಡೆ ಮದ್ಯದ ವಹಿವಾಟು, ದಾಸ್ತಾನು ಹಾಗೂ ಸಾಗಣೆ ಜೋರಾಗಿರುತ್ತದೆ.

ಆದರೆ, ಈ ಬಾರಿ ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆ ದೃಷ್ಟಿಯಿಂದ ಮದ್ಯದ ವಹಿವಾಟು ಹಾಗೂ ಸಾಗಣೆ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಜಿಲ್ಲೆಯ 20 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿತ್ತು. ಅಕ್ರಮ ಮದ್ಯ ಮಾರಾಟ ತಡೆಗೆ ಆಯೋಗವು ಬಿಗಿ ಕ್ರಮ ಕೈಗೊಂಡಿದ್ದರಿಂದ ಜಿಲ್ಲೆಯೂ ಸೇರಿದಂತೆ ರಾಜ್ಯದೆಲ್ಲೆಡೆ ಮದ್ಯದ ವಹಿವಾಟು ತಗ್ಗಿತು.

2017ರ ಏಪ್ರಿಲ್ ಮತ್ತು ಮೇ ತಿಂಗಳ ಮದ್ಯದ ವಹಿವಾಟಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಎರಡು ತಿಂಗಳಿಂದ ಶೇ 19.16ರಷ್ಟು ವಹಿವಾಟು ಕುಸಿದಿದೆ. ಅಬಕಾರಿ ಇಲಾಖೆಯು ಒಟ್ಟಾರೆ ಎರಡು ತಿಂಗಳಲ್ಲಿ (ಮೇ 25ವರೆಗೆ) 17,57,245 ಲೀಟರ್‌ ಸ್ವದೇಶಿ ನಿರ್ಮಿತ ಮದ್ಯ (ಐಎಂಎಲ್‌) ಮಾರಾಟದ ಗುರಿ ಹೊಂದಿತ್ತು. ಅಂತಿಮವಾಗಿ 14,20,630 ಲೀಟರ್‌ ಮದ್ಯ ಮಾರಾಟವಾಗಿ ಶೇ 80.84ರಷ್ಟು ಗುರಿ ಸಾಧನೆಯಾಯಿತು.

2017ರ ಏಪ್ರಿಲ್‌ನಲ್ಲಿ 7,78,904 ಹಾಗೂ ಮೇ ತಿಂಗಳಲ್ಲಿ 9,62,832 ಲೀಟರ್‌ ಮದ್ಯ ಮಾರಾಟವಾಗಿತ್ತು. ಪ್ರಸಕ್ತ ವರ್ಷ ಏಪ್ರಿಲ್‌ನಲ್ಲಿ 7,04,937 ಹಾಗೂ ಮೇ ತಿಂಗಳಲ್ಲಿ 7,15,383 ಲೀಟರ್‌ ಮದ್ಯ ಮಾರಾಟವಾಗಿದೆ. ಹಿಂದಿನ ಅಬಕಾರಿ ವರ್ಷದ ಎಪ್ರಿಲ್‌ ಮತ್ತು ಮೇ ತಿಂಗಳ ವಹಿವಾಟಿಗೆ ಹೋಲಿಸಿದರೆ ಈ ಬಾರಿ ಎರಡು ತಿಂಗಳಿಂದ ಒಟ್ಟಾರೆ 3,36,615 ಲೀಟರ್‌ನಷ್ಟು ಮದ್ಯದ ವಹಿವಾಟು ಕಡಿಮೆಯಾಗಿದೆ.

ಕುಸಿತಕ್ಕೆ ಕಾರಣವೇನು?: ಮಾರ್ಚ್‌ 27ರಿಂದ ಮೇ 18ರವರೆಗೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿತ್ತು. ನೀತಿಸಂಹಿತೆ ಜಾರಿಗೂ ಮುನ್ನವೇ ರಾಜಕಾರಣಿಗಳು ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡಿದ್ದರಿಂದ ಹಾಗೂ ನೀತಿಸಂಹಿತೆ ಜಾರಿಯಾದ ನಂತರ ಇಲಾಖೆಯ ಕಣ್ತಪ್ಪಿಸಿ ಹೊರ ರಾಜ್ಯಗಳಿಂದ ಮದ್ಯ ಖರೀದಿಸಿಕೊಂಡು ಬಂದಿದ್ದರಿಂದ ಸ್ಥಳೀಯವಾಗಿ ಮದ್ಯದ ವಹಿವಾಟು ತಗ್ಗಿತು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಅತಿ ಹೆಚ್ಚು ಪ್ರಕರಣ: ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಣೆಯನ್ನು ಗಂಭೀರವಾಗಿ ಪರಿಗಣಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು 2013ರ ಚುನಾವಣೆಗಿಂತ ಈ ಬಾರಿ ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದರು. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮದ್ಯ ಜಪ್ತಿ ಮಾಡಿದರು.

ಇಲಾಖೆ ಸಿಬ್ಬಂದಿಯು ಈ ಬಾರಿ ಜಿಲ್ಲೆಯ ವಿವಿಧೆಡೆ 1,350 ದಾಳಿ ನಡೆಸಿ 474 ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, 398 ಮಂದಿಯನ್ನು ಬಂಧಿಸಿ ₹ 6.67 ಲಕ್ಷ ದಂಡ ವಿಧಿಸಿದ್ದಾರೆ. ಜತೆಗೆ 21,224 ಲೀಟರ್‌ ಮದ್ಯ, 29 ವಾಹನಗಳು ಸೇರಿದಂತೆ ಸುಮಾರು ₹ 1.05 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 2013ರ ಚುನಾವಣೆ ಸಂದರ್ಭದಲ್ಲಿ 116 ಪ್ರಕರಣ ದಾಖಲಿಸಿ 75 ಮಂದಿಯನ್ನು ಬಂಧಿಸಲಾಗಿತ್ತು. ಜತೆಗೆ 363 ಲೀಟರ್‌ ಮದ್ಯ ಮತ್ತು 6 ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಮದ್ಯದ ವಹಿವಾಟು ತಗ್ಗಿದ್ದರಿಂದ ಒಂದೆಡೆ ಅಬಕಾರಿ ಇಲಾಖೆ ಆದಾಯಕ್ಕೆ ಹೊಡೆತ ಬಿದ್ದಿತು. ಮತ್ತೊಂದೆಡೆ ಮದ್ಯದ ವ್ಯಾಪಾರಿಗಳ ಸಂಪಾದನೆಗೆ ದೊಡ್ಡ ಪೆಟ್ಟು ಕೊಟ್ಟಿತು.

ಗುರಿ ಸಾಧ್ಯವಾಗಿಲ್ಲ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಮದ್ಯದ ವಹಿವಾಟು ನಿರೀಕ್ಷಿಸಲಾಗಿತ್ತು. ಆದರೆ, ಎರಡು ತಿಂಗಳಿಂದ ಶೇ 19.16ರಷ್ಟು ಮದ್ಯದ ವಹಿವಾಟು ತಗ್ಗಿತು. ವಹಿವಾಟು ಗುರಿ ಸಾಧನೆ ಸಹ ಸಾಧ್ಯವಾಗಲಿಲ್ಲ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಕೆ.ಕೆ.ಸುಮಿತಾ ತಿಳಿಸಿದರು.

ಕಟ್ಟುನಿಟ್ಟಿನ ಕ್ರಮದಿಂದ ಪೆಟ್ಟು

ವಿಧಾನಸಭಾ ಚುನಾವಣೆ ನೀತಿಸಂಹಿತೆಯಿಂದ ಮದ್ಯದ ವಹಿವಾಟಿಗೆ ಪೆಟ್ಟು ಬಿದ್ದಿತು. ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ವಹಿವಾಟಿನ ಮೇಲೆ ತೀವ್ರ ನಿಗಾ ವಹಿಸಿದರು. ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ ವಹಿವಾಟು ಕುಸಿಯಿತು ಎಂದು ಮದ್ಯದಂಗಡಿ ಮಾಲೀಕ ಗಿರೀಶ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry