ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯೊಳಗೆ ನದಿ ಬೆರಸಿ

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ನಮ್ಮದು ಬಹುತ್ವದ ಸಮಾಜ. ಇಲ್ಲಿ ಸಮಾನತೆಗಿಂತ ಅಸಮಾನತೆಯೇ ಸಮೃದ್ಧ ಕಳೆ. ಇದು ಕಿತ್ತಷ್ಟೂ ಬೆಳೆಯುವ ರಕ್ತಬೀಜಾಸುರ ಸಂತಾನ. ಶ್ರೇಷ್ಠ-ಕನಿಷ್ಠ, ಮೇಲು-ಕೀಳು, ಬಡವ-ಶ್ರೀಮಂತ, ಸ್ಪೃಶ್ಯ-ಅಸ್ಪೃಶ್ಯ, ಒಳಗಿನವ-ಹೊರಗಿನವ ಈ ಇತ್ಯಾದಿ ಭೇದಭಾವಗಳ ಹಳವಂಡದಲ್ಲಿ ಇಡೀ ಸಮಾಜ ನರಳುತ್ತಿದೆ. ಇಂಥ ರೋಗವನ್ನು ಬಿತ್ತುವ ಕೇಂದ್ರಗಳು ಜಾತಿಮೂಲದ ಮಠಪೀಠಗಳು.

ಶಿಕ್ಷಣ ಎಲ್ಲ ಸಮುದಾಯಗಳಿಗೆ ಸಿಗುತ್ತಿರುವ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಸಂದರ್ಭದಲ್ಲೂ ಮಠಪೀಠಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುತ್ತಿಲ್ಲ. ವಿಪರ್ಯಾಸವೆಂದರೆ ಶಿಕ್ಷಣವನ್ನೇ ವ್ಯಾಪಾರೀಕರಣದ ಸರಕಾಗಿಸಿಕೊಂಡು ಅದನ್ನೇ ತಮ್ಮ ಆರ್ಥಿಕಾಭಿವೃದ್ಧಿಯ ಉತ್ಪನ್ನ ಮೂಲವಾಗಿಸಿಕೊಂಡಿವೆ ಈ ಮಠಪೀಠಗಳು. ಹಿಂದೆ ಶಿಕ್ಷಣವೆಂಬುದು ಮಠಗಳಿಗೆ ಒಂದು ಸಮಾಜಸೇವೆಯ ಕಾರ್ಯವಾಗಿತ್ತು. ಇಂದು ಶಿಕ್ಷಣ ಜಾತಿಸ್ಥಿರೀಕರಣದ ಕೈಗಾರಿಕೆಯಾಗಿದೆ, ಹಣ ಅಧಿಕಾರ ಸಂಪಾದನೆಯ ಬಂಡವಾಳವಾಗಿದೆ.

ಯಾವ ಜಾತಿ ಬಲಿಷ್ಠಗೊಂಡಿರುತ್ತದೆಯೋ ಅದು ಕಟ್ಟುವ ಮಠವೂ ಅಷ್ಟೇ ಬಲವಾದ ಧಾರ್ಮಿಕ ಮುಖವಾಡದ ಕೇಂದ್ರವಾಗಿ ಬಿಂಬಿತವಾಗುತ್ತದೆ. ಯಾವ ಜಾತಿ ದುರ್ಬಲವಾಗಿರುತ್ತದೋ ಅಂಥ ಮೂಲದಲ್ಲಿ ಸ್ಥಾಪಿತವಾಗುವ ಮಠಗಳು ಜಾತಿಯ ಆವರಣದಲ್ಲಿ ಪರಿಗಣಿತವಾದ ಜಾತಿ ಗುಂಪಿನ ಸಂಸ್ಥೆಯಾಗುತ್ತವೆ. ಅದಕ್ಕೆ ಧಾರ್ಮಿಕ ಕೇಂದ್ರದ ವ್ಯಾಪ್ತಿ ಪ್ರಾಪ್ತವಾಗುವುದಿಲ್ಲ. ಮಠಗಳು ಅನ್ನಿಸಿಕೊಂಡರೂ ಅವು ಭಿಕ್ಷಾಟನೆಯ ಹಾಗೂ ತಾತ್ಸಾರಕ್ಕೆ ಒಳಗಾಗುವ ಬಡಮಠಗಳು. ಇಂಥ ಮಠಗಳ ಯಾವುದೇ ಸ್ವಾಮಿಯ ಕಾಲಿಗೆ ಯಾವುದೇ ಮೇಲ್ಜಾತಿಯವರೂ ನಮಸ್ಕಾರ ಮಾಡುವುದಿಲ್ಲ. ಸ್ವಜಾತಿಯವರು ಮಾತ್ರ ನಮ್ಮ ಮಠ ನಮ್ಮ ಸ್ವಾಮಿ ಎಂಬ ಅಭಿಮಾನದಲ್ಲಿ ನಮಸ್ಕಾರ ಮಾಡುತ್ತಾರೆ. ಆದರೆ ಧಾರ್ಮಿಕ ಕೇಂದ್ರದಲ್ಲಿ ಬಿಂಬಿತವಾಗಿರುವ ಎಲ್ಲ ಮಠಗಳ ಸ್ವಾಮಿಗಳಿಗೆ ಎಲ್ಲ ವರ್ಣಮೂಲದವರೂ ಕಾಲಿಗೆರಗುತ್ತಾರೆ. ಹೀಗಾಗಿ ಜಾತಿಯ ಅಸಮಾನತೆಯ ಅಂಶ ಮೇಲುಕೀಳಿನ ಪುರಸ್ಕಾರ ತಿರಸ್ಕಾರದ ವರ್ತನೆ ಮಠಗಳನ್ನು ಮಠದ ಸ್ವಾಮಿಗಳನ್ನೂ ಬಿಟ್ಟಿಲ್ಲವೆಂಬುದು ಕಟುಸತ್ಯ.

ಈ ತಿರಸ್ಕಾರ-ಪುರಸ್ಕಾರ ಭಾವ ಕೆಲವು ನ್ಯಾಯಾಧೀಶರನ್ನೂ ಬಿಟ್ಟಿಲ್ಲ. ಅಂದರೆ ಮೇಲ್ಜಾತಿಯ ಸ್ವಾಮಿ ತಪ್ಪು ಮಾಡಿದಾಗ ನ್ಯಾಯಪೀಠದಿಂದ ಹಿಂದೆ ಸರಿಯುವ ನ್ಯಾಯಾಧೀಶರು ಅಂಥದ್ದೇ ತಪ್ಪು ಕೆಳಜಾತಿಯ ಸ್ವಾಮಿಯಿಂದ ನಡೆದಿದ್ದಾಗ ಅಷ್ಟೇ ಮುತುವರ್ಜಿಯಿಂದ ಆಸಕ್ತಿಯಿಂದ ದಂಡನೆ ಕೊಡಲು ಮುಂದಾಗುತ್ತಾರೆ. ಅಂದರೆ ದೊಡ್ಡ ಜಾತಿ ಸ್ವಾಮಿಗೆ ಒಂದು ನೀತಿ; ಸಣ್ಣ ಜಾತಿ ಸ್ವಾಮಿಗೆ ಮತ್ತೊಂದು ನೀತಿ ಎಂಬಂತೆ ವರ್ತಿಸುತ್ತಾರೆ. ಅಷ್ಟೇ ಅಲ್ಲದೆ ಜಾತಿಗಳು ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷಗಳಿಗೆ ಹಂಚಿಕೆಯಾಗಿವೆ; ಈ ಹಂಚಿಕೆಗೆ ಮಠಪೀಠಗಳೂ ಸ್ವಾಮೀಜಿಗಳೂ ಸಹಕರಿಸಿದ್ದಾರೆ. ಇಂಥಲ್ಲಿ ಯಾವ ಮಠಪೀಠಗಳನ್ನೂ ಕಟ್ಟಿಕೊಳ್ಳದ ಜಾತಿಗಳು ದಾಳಗಳಂತೆ ಸೈನಿಕರಂತೆ ಬಳಕೆಯಾಗಿವೆ. ಈ ಮುಖೇನ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆ ತನ್ನ ಮೌಲ್ಯಾಧಾರಿತ ನಡೆಯಿಂದ ದೂರ ಸರಿದು ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ವಾಸ್ತವದ ಗತಿಯಾಗಿದೆ. ಲಿಂಗವ ಪೂಜಿಸಿ ಫಲವೇನಯ್ಯ ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯಾ ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರೆಸಿದಂತಾಗದನ್ನಕ್ಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT