5

ದಲಿತರ ದಮನ ಗುಜರಾತಿನ ಮಾದರಿ

ಡಿ. ಉಮಾಪತಿ
Published:
Updated:
ದಲಿತರ ದಮನ ಗುಜರಾತಿನ ಮಾದರಿ

ಗಾಂಧೀಜಿ ರಾಜಕೀಯ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದ್ದ ಸಂದರ್ಭದಲ್ಲಿ, ಸಾಮಾಜಿಕ- ಶೈಕ್ಷಣಿಕ- ಸಾಂಸ್ಕೃತಿಕ ಸಮಾನತೆಗಾಗಿ ಸಂಘರ್ಷಕ್ಕೆ ಧುಮುಕಿದ್ದರು ಬಾಬಾ ಸಾಹೇಬ ಅಂಬೇಡ್ಕರ್. ‘ಸಾಮಾಜಿಕ ಸಮಾನತೆಯಿಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ, ದಲಿತ ಸಮುದಾಯಗಳ ಗುಲಾಮ

ಗಿರಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರವೂ ತಪ್ಪುವುದಿಲ್ಲ’ ಎಂದಿದ್ದರು ಅಂಬೇಡ್ಕರ್. ಅವರ ಬದುಕು ತಾವು ನಂಬಿದ ಈ ತತ್ವಕ್ಕೇ ಸಮರ್ಪಿತ ಆಯಿತು.

ಅಂಬೇಡ್ಕರ್ ಹೇಳಿದ್ದ ಸತ್ಯವನ್ನು ಭಾರತ ಇಂದಿಗೂ ದೂರ ಇರಿಸಿದೆ. ಈ ಸತ್ಯದ ಹಿಂದಿನ ಕಾರ್ಯಕಾರಣಗಳು ಉದ್ದಗಲಕ್ಕೆ ಸುಡುತ್ತಲಿವೆ ಭಾರತವನ್ನು. ಮಾನವೀಯ ಎದೆಬಡಿತ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿರುವ ಈ ಸಮಾಜಕ್ಕೆ ಆತ್ಮಸಾಕ್ಷಿ ಎಂಬ ಆಮ್ಲಜನಕ ತುರ್ತಾಗಿ ಬೇಕಾಗಿದೆ. ಮೊದಲೇ ದಡ್ಡುಬಿದ್ದಿದ್ದ ನರಮಂಡಲ, ಸನಾತನ ಶಕ್ತಿಗಳ ಅಬ್ಬರದಿಂದ ಕುಂಭಕರ್ಣ ನಿದ್ದೆಗೆ ಜಾರಿದೆ. ಅಂಬೇಡ್ಕರ್ ಸತ್ಯದ ಉರಿಯಲ್ಲಿ ಅವಯವಗಳು ಸುಟ್ಟು ಊನಗೊಳ್ಳತೊಡಗಿವೆ. ಈ ಘೋರ ಕ್ರಿಯೆಯ ದುರಂತ ಮಿದುಳನ್ನು ತಲುಪುತ್ತಿಲ್ಲ. ನಿಷ್ಕ್ರಿಯ ನರಮಂಡಲ ಸನಿಹದಲ್ಲೇ ಎಚ್ಚೆತ್ತುಕೊಳ್ಳದೆ ಹೋದರೆ ಅಪಾಯ ಕಾದಿದೆ.

ಚಿಂತಕ ಶಿವಸುಂದರ್ ಹೇಳುವ ‘ಮಿದುಳು ಮತ್ತು ದೇಹದ ನಂಟು’ ಸತ್ತೇ ಹೋಗಿದೆ. ಇಲ್ಲವಾದರೆ ದೇಶವೆಂಬ ದೇಹದ ಉದ್ದಗಲದಲ್ಲಿ ದಲಿತರ ಮೇಲೆ ವೇಳಾಪಟ್ಟಿ ಹಾಕಿಕೊಟ್ಟಂತೆ ನಡೆಯುತ್ತಿರುವ ಕ್ರೌರ್ಯಕ್ಕೆ ಸಮಾಜದ ಸಾಕ್ಷಿಪ್ರಜ್ಞೆ ಹೀಗೆ ದಡ್ಡಾಗುತ್ತಿರಲಿಲ್ಲ. ಮನೆಯೊಳಗೆ ಕಳೇಬರ ಇರಿಸಿಕೊಂಡು ಏನೂ ಆಗಿಯೇ ಇಲ್ಲ ಎಂಬಂತೆ ಆಮೋದ ಪ್ರಮೋದಗಳಲ್ಲಿ ತೊಡಗುವ ಕುಟುಂಬದ ಸದಸ್ಯರನ್ನು ಮಾನಸಿಕವಾಗಿ ಅಸ್ವಸ್ಥರೆಂದು ಕರೆಯಬೇಕಾಗುತ್ತದೆ. ನರನಾಡಿಗಳಲ್ಲಿ ತಲೆತಲಾಂತರದಿಂದ ಹರಿದು ಬಂದಿರುವ ಈ ಕಾಯಿಲೆಗೆ ಆ ರಾಜ್ಯ, ಈ ರಾಜ್ಯವೆಂಬ ಸರಹದ್ದಿನ ಭೇದ ಭಾವ ಇಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರಗಳೆಂಬ ಹಂಗೂ ಇಲ್ಲ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೊ ಪ್ರತಿವರ್ಷ ಹೊರಹಾಕುವ ಅಂಕಿ ಅಂಶಗಳ ಪ್ರಕಾರ ಈ ವರ್ಷ ತುದಿಯಲ್ಲಿದ್ದ ರಾಜ್ಯ ಎರಡಂಕಿ ಕೆಳಗೆ ಸರಿದಿರಬಹುದು. ಮುಂದಿನ ವರ್ಷ ಮತ್ತೆ ಮೇಲೆ ಏರಬಹುದು. ಆವರ್ತನೆಯ ಪ್ರಕಾರ ಜರುಗುವ ಈ ಕ್ರೌರ್ಯದಾಟದಲ್ಲಿ ಎಲ್ಲಿ ಸೀಮೆಗಳೂ ಸಮಾನ.

ಗುಜರಾತ್ ಎಂಬ ಇಂತಹುದೇ ಒಂದು ಸೀಮೆಯಲ್ಲಿ ಮೊನ್ನೆ ಜರುಗಿದ ಭೀಭತ್ಸವು ಸಂವೇದನೆಗಳು ಸತ್ತಿಲ್ಲದ ಸಮಾಜವನ್ನು ಬೆಚ್ಚಿ ಬೀಳಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿರುವಂತೆ, ಅದಕ್ಕೆ ಅಪಚಾರ ಎಸಗದಂತೆ ಭರತವರ್ಷದ ಜನಜೀವನ ಭಗವದ್ಗೀತೆಯ ಸ್ಥಿತಪ್ರಜ್ಞತೆಯನ್ನು ಮೆರೆಯಿತು, ಎಂದಿನಂತೆ ಯಾವ ತಳಮಳವನ್ನೂ ತೋರದೆ ಸಾಗಿತು. ಮನುಸ್ಮೃತಿಯೇ ವಿಧಿಸಿರುವಂತೆ ದಲಿತರ ಮಾನ ಪ್ರಾಣಗಳು ಬಲು ಅಗ್ಗ. ಅವುಗಳು ಅತ್ತರೂ ಅಳಿದರೂ ಸಮಾಜ ಆಗಲೂ ಮರುಗಲಿಲ್ಲ, ಈಗಲೂ ಮರುಗುತ್ತಿಲ್ಲ. ‘ಹಿಂದೂಗಳೆಲ್ಲ ಒಂದು’ ಎಂಬುದು ಮೋಸದ ಘೋಷಣೆ. ಸಮಾನತೆ- ಕಷ್ಟ- ಕಣ್ಣೀರು- ಅತ್ಯಾಚಾರ- ಅವಮಾನ- ವಂಚನೆಯ ಪ್ರಶ್ನೆ ಬಂದಾಗ ಮೇಲು ಮೇಲೇ, ಕೀಳು ಕೀಳೇ.

ರದ್ದಿ ಮತ್ತು ಲೋಹದ ಚೂರು ಚಾರು ಆಯ್ದು ಪತ್ನಿ ಮತ್ತು ಮೂವರು ಚಿಕ್ಕ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದ 35ರ ಹರೆಯದ ಬಡ ದಲಿತನ ಹೆಸರು ಮುಕೇಶ್ ವಣಿಯ. ರಾಜಕೋಟೆಯ ಕಾರ್ಖಾನೆಯೊಂದರ ಆವರಣದಿಂದ ಕಬ್ಬಿಣದ ಚೂರುಗಳನ್ನು ಕದ್ದನೆಂದು ಇದೇ ಮೇ 20ರ ಮುಂಜಾನೆ ಆತನನ್ನು ಅಲ್ಲಿಯೇ ಕಟ್ಟಿ ಹಾಕಿ ಥಳಿಸಿ ಕೊಲ್ಲಲಾಯಿತು. ಎಡೆಬಿಡದ ಹೊಡೆತಗಳಿಗೆ ಆತನ ಉದರದೊಳಗಿನ ಪಿತ್ತಕೋಶ, ಮೂತ್ರಕೋಶ, ಕರುಳು ಮುಂತಾದ ಅಂಗಾಂಗಗಳು ಚೂರಾದವು ಎಂದು ಮರಣೋತ್ತರ ವೈದ್ಯಕೀಯ ಪರೀಕ್ಷೆಯ ದಾಖಲೆಗಳು ಹೇಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಥಳಿಸುವಿಕೆಯ ಚಿತ್ರೀಕರಣದ ತುಣುಕು ಎದೆ ನಡುಗಿಸುವಷ್ಟು ಭೀಕರ. ಮುಕೇಶ್‌ರ ನೋವಿನ ಆಕ್ರಂದನಕ್ಕೆ ಭರತವರ್ಷದ ಎದೆ ಮಿಡಿಯಲಿಲ್ಲ. ಬೇಸಿಗೆಯಲ್ಲಿ ಹಳ್ಳಿಗಾಡಿನ ಕೃಷಿ ಕೂಲಿಯ ಅವಕಾಶಗಳು ಬತ್ತಿ ಹೋಗುತ್ತವೆ. ಕೃಷಿ ಕಾರ್ಮಿಕ ಕುಟುಂಬಗಳು ಪಟ್ಟಣಗಳ ಕಡೆ ಮುಖ ಮಾಡುತ್ತವೆ. ಕಾರ್ಖಾನೆಗಳಲ್ಲಿ 12-14 ತಾಸು ದುಡಿದರೆ ₹ 300 ದಿನಗೂಲಿಯ ಕೆಲಸ ಸಿಕ್ಕವರೇ ಅದೃಷ್ಟವಂತರು. ಮುಕೇಶ್‌ಗೆ ಅಂತಹ ಅದೃಷ್ಟ ಇರಲಿಲ್ಲ. ಪತ್ನಿ ಕೂಡ ಗಂಡನೊಂದಿಗೆ ರದ್ದಿ- ಲೋಹದ ಚೂರು ಆರಿಸಲು ಕೈಗೂಡಿಸಿದ್ದರು.

‘ಕಾರ್ಖಾನೆಯೊಂದರ ಹೊರಗೆ ರದ್ದಿ ಗುಜರಿ ಆರಿಸುತ್ತಿದ್ದೆವು. ಐವರು ಗಂಡಸರು ನನ್ನನ್ನು ಕರೆದು ಕಾರ್ಖಾನೆಯ ಬಳಿಯಿದ್ದ ಹೊಲಸನ್ನು ಎತ್ತಿ ಶುಚಿ ಮಾಡುವಂತೆ ಹೇಳಿದರು. ಕೂಲಿ ಕೊಟ್ಟರೆ ಮಾಡುತ್ತೇನೆ ಎಂದೆ. ಅವರಲ್ಲೊಬ್ಬ ನನ್ನ ಕೈ ಹಿಡಿದು ಜಗ್ಗಿದಾಗ ನನ್ನ ಪತಿ ಪ್ರತಿಭಟಿಸಿದ. ಅವರು ನಮ್ಮ ಜಾತಿ ಯಾವುದೆಂದು ಕೇಳಿದರು. ದಲಿತರೆಂದು ಗೊತ್ತಾಯಿತು. ಕೆಟ್ಟ ಬೈಗುಳ ಬೈದರು. ಹೊಲಸು ಬಳಿಯುವುದು ನಿಮ್ಮ ಕರ್ತವ್ಯ ಎಂದು ನನ್ನ ಗಂಡನ ಮೇಲೆ ಕೈ ಮಾಡಿದರು. ಪ್ರತಿಭಟಿಸಿದ ನನಗೆ ಬೆಲ್ಟ್‌ನಿಂದ ಥಳಿಸಿದರು. ನನ್ನ ಸಂಬಂಧಿ ಹೆಣ್ಣುಮಗಳನ್ನು ಕರೆತಂದೆ. ಆಕೆಯ ಮೇಲೂ ಕೈ ಮಾಡಿದರು. ನಮ್ಮಿಬ್ಬ

ರನ್ನೂ ಓಡಿಸಿ, ಗಂಡನನ್ನು ಕಂಬಕ್ಕೆ ಕಟ್ಟಿ ಸಾಯಬಡಿದರು’ ಎಂದು ಮುಕೇಶ್‌ರ ಪತ್ನಿ ಜಯಾಬೆನ್ ತನ್ನ ಸಂಕಟ ತೋಡಿಕೊಂಡಿದ್ದಾರೆ.

‘ಲಿಮಡಿ ತಾಲ್ಲೂಕಿನ ಪರ್ನಾಳ ಹಳ್ಳಿಯಲ್ಲಿ ಕೃಷಿ ಕೂಲಿಯೊಂದೇ ದುಡಿಮೆಯ ದಾರಿ. ನೂರು ರೂಪಾಯಿಯ ದಿನಗೂಲಿ ಸಾಲುತ್ತಿರಲಿಲ್ಲ. ಅಹ್ಮದಾಬಾದಿಗೆ ಹೋಗಿ ಕಟ್ಟಡ ನಿರ್ಮಾಣ ಕಂಪನಿ ಸೇರಿದೆ. ದಿನಕ್ಕೆ 300 ರೂಪಾಯಿ ಕೂಲಿ. ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಬಡ್ಡಿ ಸಾಲ ಪಡೆದು ತೂಗಿಸುತ್ತಿದ್ದೆ. ಯಾವಾಗಲಾದರೊಮ್ಮೆ ಹೆಚ್ಚು ಗಳಿಸಿದಾಗ ಕೊಂಚ ಸಾಲ ತೀರಿಸುತ್ತಿದ್ದೆ. ಅಣ್ಣನ (ಮುಕೇಶ್) ಕೂಲಿಯಿಂದ ಆತನ ಸಂಸಾರ ಸಾಗುತ್ತಿರಲಿಲ್ಲ. ನನ್ನ ಅತ್ತಿಗೆಗೆ ಉಸಿರಾಟದ ಕಾಯಿಲೆ. ಔಷಧಿ ಖರ್ಚು ತಿಂಗಳಿಗೆ ಐದು ಸಾವಿರಕ್ಕಿಂತ ಹೆಚ್ಚು. ಅರ್ಧ ಔಷಧಿ ಮಾತ್ರ ಹೇಗೋ ಖರೀದಿಸಿ ಆಕೆಯನ್ನು ಜೀವಂತ ಇರಿಸಿದ್ದ. ಹೊಲಸು ಸ್ವಚ್ಛ ಮಾಡಲು 150 ರೂಪಾಯಿ ಕೂಲಿ ಕೇಳಿದ ಅಣ್ಣನನ್ನು ಹೊಡೆದು ಕೊಂದರು. ಹೊಲಸು ಬಳಿಯುವ ಜಾತಿಯಲ್ಲಿ ಹುಟ್ಟಿದ ನೀನು ಕೂಲಿ ಯಾಕೆ ಕೇಳುತ್ತಿದ್ದೀ ಎಂದ ಅವರು ಜಯಾ ಕೈ ಹಿಡಿದು ಕುಪ್ಪಸ ಎಳೆದರು. ಚೆಂದಗಾತಿಯೆಂದು ಕರೆದು ಆಕೆಗೆ ಬೇಕಾದಷ್ಟು ಸಂಪಾದಿಸಲು ಆನಂತರ ಯಾವಾಗಲಾದರೂ ಬರಬಹುದೆಂದು ಕೆಣಕಿ ಅವಮಾನಿಸಿದರು. ತಪ್ಪಿಸಿಕೊಂಡು ಸಹಾಯಕ್ಕಾಗಿ ಓಡಿ ಬಂದ ಆಕೆ ಹಿಂತಿರುಗುವ ವೇಳೆಗೆ ಮುಕೇಶ್ ಪ್ರಾಣ ಬಿಟ್ಟಿದ್ದ’ ಎಂದಿದ್ದಾರೆ ಮುಕೇಶ್‌ ತಮ್ಮ ಪ್ರಕಾಶ್‌.

ಬುಡಕಟ್ಟು ಜನರು ಮತ್ತು ಪರಿಶಿಷ್ಟ ಜಾತಿಗಳ ಜನರ ಪ್ರಮಾಣದ ಸಂಗತಿ ಬಂದಾಗ ಗುಜರಾತ್ ಇತರೆ ರಾಜ್ಯಗಳಿಗಿಂತ ಭಿನ್ನ. ಇಲ್ಲಿ ಬುಡಕಟ್ಟು ಜನರ ಪ್ರಮಾಣ ಹೆಚ್ಚು (ಶೇ 14.5). ಪರಿಶಿಷ್ಟ ಜಾತಿಗಳ ಜನರ ಪ್ರಮಾಣ ಕಡಿಮೆ (ಶೇ 7.1).

ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ದಲಿತರನ್ನು ಗೋರಕ್ಷಕರು ಬೆತ್ತಲೆ ಎಳೆದು ತಂದು ನಡು ಬಜಾರಿನಲ್ಲಿ ಬಾರಿಸಿದ 2016ರ ಜುಲೈ ತಿಂಗಳ ಅಮಾನುಷ ದೃಶ್ಯ ಸರಣಿಯು ಮಾನವೀಯ ಮಾನಸ ಭಿತ್ತಿಗಳಿಂದ ಮಾಸುವುದು ಸುಲಭ ಅಲ್ಲ. ಆನಂತರ ನಡೆದ ದಲಿತ ಆಂದೋಲನ ಮತ್ತು ಈ ಪ್ರಕರಣಕ್ಕೆ ಸಿಕ್ಕ ಪ್ರಚಾರ- ಎದುರಾದ ಪ್ರತಿಭಟನೆ ಯಾವುದೂ ಆ ಸೀಮೆಯ ದಲಿತ ದಮನವನ್ನು ತಡೆದು ನಿಲ್ಲಿಸಿಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ಕೌಶಿಕ ಪರಮಾರ ಎಂಬ ದಲಿತ ಕಾರ್ಯಕರ್ತರೊಬ್ಬರು ಸರ್ಕಾರದಿಂದ ಪಡೆದಿರುವ ಮಾಹಿತಿಯ ಪ್ರಕಾರ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣ

ಗಳಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. 2017ರ ಸಾಲಿನಲ್ಲಿ 1,515 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 25 ಕೊಲೆಗಳು, ಮಹಿಳೆಯರ ಮೇಲೆ 103 ಅತ್ಯಾಚಾರಗಳು ಸೇರಿವೆ. ಜಾತಿದ್ವೇಷದ ಜ್ವಾಲೆಗಳು ಹಳ್ಳಿಗಾಡಿಗೆ ಸೀಮಿತ ಎಂಬ ಭಾವನೆ ಸುಳ್ಳಾಗಿದೆ. ರಾಜಧಾನಿ ಅಹ್ಮದಾಬಾದ್ 121 ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ಕೊಲೆಗಳು ಐದು ಮತ್ತು ಅತ್ಯಾಚಾರಗಳು17.

ಗುಜರಾತಿನ ಭೂಹೀನ ದಲಿತರ ಪ್ರಮಾಣ ಶೇ 60. ಶೇ 45ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ರಾಜ್ಯ ಸರ್ಕಾರ ಭೂಸುಧಾರಣೆ ಕ್ರಮಗಳನ್ನು ಜಾರಿ ಮಾಡದಿರುವುದು ದಲಿತ ಆಂದೋಲನದ ಮುಖ್ಯ ಕಾರಣಗಳಲ್ಲೊಂದು.

ಪಾಟಣ ಜಿಲ್ಲೆಯ ರಾಮಭಾಯಿ ಚಮಾರ್ ಮತ್ತು ಆತನ ನೆರೆಹೊರೆಯ ಹೇಮಾಬೆನ್ ವಣಕಾರ್ ಸರ್ಕಾರಿ ಜಮೀನಿನ ಒಡೆತನ ಕೋರಿ ವರ್ಷಗಟ್ಟಲೆ ಸರ್ಕಾರಿ ಕಚೇರಿಗಳ ಕಂಬ ಸುತ್ತಿದರೂ ಪ್ರಯೋಜನ ಆಗಲಿಲ್ಲ. ಕನಿಷ್ಠ 30 ಸಲ ಗಾಂಧಿನಗರದ ಹಾದಿ ಸವೆಸಿರಬಹುದು. ತಮ್ಮ ಪೂರ್ವಜರಿಗೆ ಆ ಸೀಮೆಯ ರಾಜ ನೀಡಿದ್ದ ಜಮೀನಿನ ಒಡೆತನವನ್ನು ಈ ಬಡಪಾಯಿಗಳು ಕೇಳಿದ್ದರು. ಕಡೆಗೂ ಈ ಜಮೀನಿನ ಒಡೆತನ ಇವರಿಗೆ ಸಿಗಬೇಕಾದರೆ ಬಾನುಭಾಯಿ ವಣಕರ್ ಎಂಬ ದಲಿತ ಹೋರಾಟಗಾರ ಪಾಟಣ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮೈಗೆ ಬೆಂಕಿ ಇಟ್ಟುಕೊಂಡು ಪ್ರಾಣ ಬಿಡಬೇಕಾಯಿತು. ವಣಕರ್ ದೇಹವನ್ನು ಮಣ್ಣು ಮಾಡಿದ ಮರುದಿನ ಜಮೀನು ಒಡೆತನದ ಕಾಗದಪತ್ರಗಳು ರಾಮಭಾಯಿ ಮತ್ತು ಹೇಮಾಬೆನ್ ಕೈಸೇರಿದವು.

ದಲಿತರಿಗೆ ಭೂಮಿ ಹಂಚಿಕೆ ಕೇವಲ ಕಾಗದದ ಮೇಲೆ. ಅಭಿವೃದ್ಧಿಗೆ ಮತ್ತು ಉತ್ತಮ ಆಡಳಿತಕ್ಕೆ ದೇಶಕ್ಕೇ ಮಾದರಿ ರಾಜ್ಯ ಎನ್ನಲಾಗುವ ನಾಡಿನಲ್ಲಿ ಈ ಅತಿರೇಕಗಳು ಪುನರಾವರ್ತನೆ ಆಗುವುದೇಕೆ ಎಂಬ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಪ್ರಶ್ನೆಗೆ ಆಳುವವರು ಪ್ರಾಮಾಣಿಕ ಉತ್ತರ ನೀಡಬೇಕು.

ಕಷ್ಟ– ಕೋಟಲೆಗಳು, ನೋವು– ಅವಮಾನಗಳು ಸಂಕ್ರಮಣ ಘಟ್ಟದ ಅನಿವಾರ್ಯ ವಿದ್ಯಮಾನಗಳು. ಆದರೆ ದಲಿತರು ಅನುಭವಿಸಿರುವ ಕಷ್ಟ ಕಣ್ಣೀರುಗಳು, ಅವಹೇಳನಗಳನ್ನು ಅವೇ ಸ್ವರೂಪದಲ್ಲಿ ಸಮಾಜದ ಅಂಚಿನಲ್ಲಿ ಜೀವಿಸಿರುವ ಬೇರೆ ಯಾವ ಸಮುದಾಯಗಳೂ ಅನುಭವಿಸಿರುವುದು ಸಾಧ್ಯವಿಲ್ಲ. ಸುಧಾರಣೆ ಮತ್ತು ಪರಿವರ್ತನೆಯ ಎಲ್ಲ ಪ್ರಯತ್ನಗಳನ್ನೂ ಬಲಾಢ್ಯ ವರ್ಗಗಳು ಸತತವಾಗಿ ವಿರೋಧಿಸುತ್ತ ಬಂದಿವೆ ಎನ್ನುತ್ತಾರೆ ಗುಜರಾತಿನ ಚಿಂತಕ ಅಚ್ಯುತ ಯಾಜ್ಞಿಕ್.

ಸ್ವಾತಂತ್ರ್ಯ ಗಳಿಕೆಯ ಕಾಲದಲ್ಲಿ ಗುಜರಾತಿನ ದಲಿತರು ಎರಡು ಆಯ್ಕೆಗಳ ನಡುವೆ ನಿಂತಿದ್ದರು. ಮೇಲು ಕೀಳು ಸ್ವರೂಪದ ವಿಶಾಲ ಹಿಂದೂ ಸಮಾಜದೊಂದಿಗೆ ಬೆರೆತು ಯಥಾಸ್ಥಿತಿಗೆ ಶರಣಾಗಿಬಿಡುವುದು ಮತ್ತು ಅಂಬೇಡ್ಕರ್ ತೋರಿಸಿಕೊಟ್ಟಂತೆ ಸಂಘರ್ಷದ ಹಾದಿ ತುಳಿದು ಅಸ್ಮಿತೆಯನ್ನು ಸಮರ್ಥಿಸಿಕೊಳ್ಳುವುದು. ಈ ಎರಡನ್ನೂ ಇಲ್ಲಿನ ದಲಿತರು ಅನುಸರಿಸಿದ್ದಾರೆ. ಕಾಂಗ್ರೆಸ್ ಮುಂದಾಳತ್ವದ (ಇದೀಗ ಬಿಜೆಪಿ ಮುಂದಾಳತ್ವ ಕೂಡ)

ಜಾತಿ ಆಧಾರಿತ ಚುನಾವಣಾ ರಾಜಕೀಯದ ಹಾದಿಯನ್ನು ಬಹುತೇಕ ದಲಿತರು ಆರಿಸಿಕೊಂಡರು. ಆದರೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಪ್ರಭುತ್ವ, ಸನಾತನ ಹಿಂದೂವಾದವನ್ನೇ ಮುಂದುವರೆಸಿತು. ಆನಂತರ ಕಾಂಗ್ರೆಸ್ ಹುಟ್ಟಿ ಹಾಕಿದ ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ (KHAM) ಮೈತ್ರಿಕೂಟ ಚುನಾವಣೆಯಲ್ಲಿ ಭಾರಿ ಯಶಸ್ಸು ಸಾಧಿಸಿತು. ಆದರೆ ಈ ಸಮುದಾಯಗಳ ಹಿತಸಾಧನೆಯ ಕೆಲಸವನ್ನು ಕಾಂಗ್ರೆಸ್ ಕೂಡ ಮಾಡಲಿಲ್ಲ. ಭೂಸುಧಾರಣೆಗಳ ಗೊಡವೆಗೆ ಹೋಗಲಿಲ್ಲ. 1981 ಮತ್ತು 1985ರ ಮೀಸಲಾತಿ ವಿರೋಧಿ ಆಂದೋಲನಗಳು ದಲಿತರಲ್ಲಿ ಇನ್ನಷ್ಟು ಪರಕೀಯತೆಯನ್ನೂ ಅಭದ್ರತೆಯನ್ನೂ ಬಿತ್ತಿದವು. ಕಾಂಗ್ರೆಸ್ ಕುರಿತು ಭ್ರಮನಿರಸನರಾದ ದಲಿತರು ಹೊಸದಾಗಿ ಹೊರಹೊಮ್ಮಿದ ಹಿಂದುತ್ವದ ಶಕ್ತಿಗಳತ್ತ ಸರಿದರು. ಅಲ್ಲಿಯೂ ಮೋಹ

ಭಂಗವೇ ಕಾದಿತ್ತು. ಸವರ್ಣೀಯರ ಅಸ್ತಿತ್ವ ಹಿಂದೂ ಅಸ್ಮಿತೆಯ ರೂಪ ಧರಿಸಿತು. ಬಿಜೆಪಿ ಆಳ್ವಿಕೆಯಲ್ಲಿ ದಲಿತರಮೇಲಿನ ದೌರ್ಜನ್ಯಗಳು ಮತ್ತಷ್ಟು ಹೆಚ್ಚಿದವು. ಕ್ರೈಸ್ತ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿ ಅಸ್ಮಿತೆಯನ್ನು ಕಾಯ್ದುಕೊಳ್ಳುವ ದಲಿತರ ಪ್ರಯತ್ನಗಳು ಹಿಂದೂವಾದದಿಂದ ತೀವ್ರ ವಿರೋಧ ಎದುರಿಸಿದವು. ದಲಿತರ ಪಾಲಿಗೆ ಆಂದೋಲನ ಮತ್ತು ಸಂಘರ್ಷವೊಂದೇ ಬಿಡುಗಡೆ ಮತ್ತು ಅಸ್ಮಿತೆಯ ಸಾರ್ವತ್ರಿಕ ದಾರಿ.

ಅಂದಹಾಗೆ ಸವರ್ಣೀಯರು ಸಾಯಬಡಿದ ಮುಕೇಶ್ ಅವರ ಚೀಲದಲ್ಲಿ ಕಂಡುಬಂದ ಕಬ್ಬಿಣದ ಚೂರು ಚಾರುಗಳ ಬೆಲೆ 150 ರೂಪಾಯಿಗಳನ್ನು ಮೀರುವುದಿಲ್ಲ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 1

  Angry