ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಮೈತ್ರಿ: ನಾಯಕರು ಬಂದಿದ್ದೇಕೆ..?

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಜನತಾದಳ (ಜಾತ್ಯತೀತ) ಪಕ್ಷದ ಜೊತೆ ಕಾಂಗ್ರೆಸ್ ಸಾಧಿಸಿರುವ ಮೈತ್ರಿಯ ಸಂಭ್ರಮವನ್ನು ಆಚರಿಸಲು ವಿರೋಧ ಪಕ್ಷಗಳ ನಾಯಕರು ಬೆಂಗಳೂರಿನಲ್ಲಿ ಒಟ್ಟಾಗಿ ಸೇರಿದ್ದು ಏನನ್ನು ಸೂಚಿಸುತ್ತದೆ? ಅವರೆಲ್ಲರೂ ಒಗ್ಗಟ್ಟಾಗಿರುವುದಕ್ಕೆ ಕಾರಣ ಏನು, ದೇಶ ಚುನಾವಣೆ ಎದುರಿಸಲು ಇನ್ನೂ 12 ತಿಂಗಳು ಇದ್ದು, ಅಲ್ಲಿಯವರೆಗೆ ಈ ಒಗ್ಗಟ್ಟು ಉಳಿದುಕೊಳ್ಳುತ್ತದೆಯೇ?

ಇದನ್ನು ನಾವು ಪರಿಶೀಲಿಸೋಣ. ಅದಕ್ಕಿಂತ ಮೊದಲು, ಬೆಂಗಳೂರಿಗೆ ಬಾರದಿರುವ ತೀರ್ಮಾನ ಕೈಗೊಂಡ ನಾಯಕರನ್ನು ಗಮನಿಸೋಣ. ನವೀನ್ ಪಟ್ನಾಯಕ್ ಅವರು ಒಡಿಶಾದಲ್ಲಿ ಜನತಾದಳದ ತಮ್ಮದೇ ಆದ ಒಂದು ಗುಂಪನ್ನು ಮುನ್ನಡೆಸುತ್ತಿದ್ದಾರೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಪಟ್ನಾಯಕ್ ಅವರ ಪಕ್ಷ ಶೇಕಡ 43ರಷ್ಟು ಮತಗಳನ್ನು ಪಡೆದಿದೆ. ಆಗ ಬಿಜೆಪಿ ಶೇಕಡ 18ರಷ್ಟು ಮತಗಳನ್ನು, ಕಾಂಗ್ರೆಸ್ ಪಕ್ಷ ಶೇಕಡ 25ರಷ್ಟು ಮತಗಳನ್ನು ಪಡೆದಿದ್ದವು.

ಪಟ್ನಾಯಕ್ ಅವರು ಬೆಂಗಳೂರಿಗೆ ಏಕೆ ಬರಲಿಲ್ಲ ಎಂಬುದನ್ನು ಇದು ವಿವರಿಸುತ್ತದೆ. ಅವರ ಪಾಲಿಗೆ ಕಾಂಗ್ರೆಸ್ ಪಕ್ಷವೆಂಬುದು ದೊಡ್ಡ ಎದುರಾಳಿ. ಅಥವಾ, ಕನಿಷ್ಠಪಕ್ಷ ಬಿಜೆಪಿಯಷ್ಟೇ ದೊಡ್ಡದಾದ ಎದುರಾಳಿ. ಭವಿಷ್ಯದಲ್ಲಿ ಈ ಸಮೀಕರಣ ಬದಲಾಗಬಹುದು. ಮುಂದಿನ ವರ್ಷದೊಳಗೆ ಬಿಜೆಪಿಯು ಪಟ್ನಾಯಕ್ ಅವರ ಕಾಲಬುಡಕ್ಕೆ ಬಂದಿರುತ್ತದೆ, ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಹಾಗೆಯೇ, ಪಟ್ನಾಯಕ್ ಅವರಿಗೆ ತಮ್ಮ ಎದುರು ಇರುವ ಆಯ್ಕೆಗಳನ್ನು ಇನ್ನಿಲ್ಲವಾಗಿಸಿಕೊಳ್ಳುವ ಅಗತ್ಯ ಕೂಡ ಇಲ್ಲ. ಹಾಗಾಗಿ, ಅವರು ಕಾದು ನೋಡುವ ತಂತ್ರದ ಮೊರೆ ಹೋಗಿ, ಬುದ್ಧಿವಂತಿಕೆ ತೋರಿಸಿದ್ದಾರೆ.

ಪಟ್ನಾಯಕ್ ಅವರು ಈ ಮೊದಲು ಬಿಜೆಪಿ ಜೊತೆ ಮೈತ್ರಿ ಹೊಂದಿದ್ದವರು. 2019ರಲ್ಲಿ ಚರ್ಚೆಯಾಗಲಿರುವ ವಿಷಯಗಳು ಯಾವುವು ಎಂಬುದು ತೀರ್ಮಾನವಾಗದಿರುವ ಹೊತ್ತಿನಲ್ಲಿ ರಾಹುಲ್ ಗಾಂಧಿ ಜೊತೆ ಪಟ್ನಾಯಕ್ ಸಂಬಂಧ ಕುದುರಿಸಿಕೊಳ್ಳುವುದರಲ್ಲಿ ಅರ್ಥ ಇಲ್ಲ.

ತೆಲಂಗಾಣದಲ್ಲಿ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ಸಿಗೆ ಸೇರಿದವರು. ಲೋಕಸಭಾ ಚುನಾವಣೆವರೆಗೂ ಇದು ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ. ಆ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಇರುವಂತಹ ಶಕ್ತಿ ಬಿಜೆಪಿಗೆ ಇಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ದೇವೇಗೌಡರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರಾದರೂ, ಈಗ ಹೇಳಿದ ಕಾರಣಕ್ಕಾಗಿ ಅವರು ವಿರೋಧ ಪಕ್ಷದ ಒಗ್ಗಟ್ಟು ಪ್ರದರ್ಶಿಸುವ ರ‍್ಯಾಲಿಯಲ್ಲಿ ಇರಲಿಲ್ಲ.

ಈಗ, ಬೆಂಗಳೂರಿಗೆ ಬಂದಿದ್ದವರ ಬಗ್ಗೆ ಒಂದು ನೋಟ ಹರಿಸೋಣ. ಬಿಹಾರದ ಮತದಾರರು ಸ್ವಲ್ಪ ಹಂಚಿಹೋಗಿದ್ದಾರೆ. 2015ರಲ್ಲಿ ಬಿಜೆಪಿಯನ್ನು ಸೋಲಿಸಿದ್ದ, ಲಾಲು ಪ್ರಸಾದ್, ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ಸಿನ ‘ಮಹಾಘಟಬಂಧನ’ವು ಶೇಕಡ 40ರಷ್ಟಕ್ಕಿಂತ ಹೆಚ್ಚಿನ ಮತಗಳನ್ನು ಪಡೆದಿತ್ತು. ಈ ಮೈತ್ರಿಕೂಟದ ಪ್ರಮುಖ ಪಕ್ಷಗಳಾಗಿದ್ದ ಎರಡು ಜನತಾದಳಗಳು ಪಡೆದ ಮತಗಳ ಪ್ರಮಾಣ ಸರಿಸುಮಾರು ಒಂದೇ ಆಗಿತ್ತು. ನಿತೀಶ್ ಕುಮಾರ್ ಅವರ ಜೆಡಿ(ಯು) ನಂತರದ ದಿನಗಳಲ್ಲಿ ಬಿಜೆಪಿ ಜೊತೆ ಸೇರಿಕೊಂಡಿತು. ಲಾಲು ಅವರ ಜನತಾದಳವು ಕಾಂಗ್ರೆಸ್ ಜೊತೆ ಉಳಿದುಕೊಂಡಿತು.

ಬಿಹಾರದಲ್ಲಿ ಯಾವ ರಾಜಕೀಯ ಪಕ್ಷವೂ ತನ್ನ ಶಕ್ತಿಯೊಂದನ್ನೇ ನೆಚ್ಚಿಕೊಂಡು ಇರುವಂತಿಲ್ಲ. ಹಾಗಾಗಿ, ಅಲ್ಲಿನ ಎರಡೂ ಜನತಾದಳಗಳು ಮೈತ್ರಿಕೂಟದ ಭಾಗ ಆಗಿರುವುದರಲ್ಲಿ ಅರ್ಥವಿದೆ. ಅಂಕಿ–ಅಂಶಗಳನ್ನು ನೋಡಿ ಹೇಳುವುದಾದರೆ ಬಿಜೆಪಿ–ನಿತೀಶ್ ಮೈತ್ರಿಕೂಟ ಬಲಿಷ್ಠವಾಗಿದೆ. ಹಾಗಾಗಿ, ಲಾಲುಪ್ರಸಾದ್ ಕುಟುಂಬಕ್ಕೆ ಬೇರೊಂದು ಮೈತ್ರಿಕೂಟದ ನೆರವು ಪಡೆಯದೆ ಬೇರೆ ಆಯ್ಕೆ ಇಲ್ಲ. ಬಿಜೆಪಿ ವಿರೋಧಿ ರಾಷ್ಟ್ರವ್ಯಾಪಿ ಒಕ್ಕೂಟ ಕಟ್ಟುವಲ್ಲಿ ಅವರು ತೋರುತ್ತಿರುವ ಉತ್ಸಾಹವನ್ನು ಈ ವಾಸ್ತವವು ಚೆನ್ನಾಗಿ ವಿವರಿಸುತ್ತದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮತಗಳು ಈ ರೀತಿ ಹಂಚಿಹೋದವು: ಬಿಜೆಪಿಗೆ ಶೇಕಡ 41ರಷ್ಟು, ಎಸ್‌ಪಿಗೆ ಶೇಕಡ 28ರಷ್ಟು, ಬಿಎಸ್‌ಪಿಗೆ ಶೇಕಡ 22ರಷ್ಟು. ಶೇಕಡ 29ರಷ್ಟು ಮತಗಳನ್ನು ಪಡೆದು ಮುಲಾಯಂ ಸಿಂಗ್ ಅವರ ಎಸ್‌ಪಿ ಪಕ್ಷ 2012ರಲ್ಲಿ ಅಲ್ಲಿ ಬಹುಮತ ಪಡೆದಿತ್ತು. ಆ ಚುನಾವಣೆಗೆ ಹೋಲಿಸಿದರೆ ಕಳೆದ ಚುನಾವಣೆಯಲ್ಲಿ ಎಸ್‌ಪಿ ತನ್ನ ಮತಗಳನ್ನು ಉಳಿಸಿಕೊಂಡಿದೆ. ನರೇಂದ್ರ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಬಂದ ನಂತರ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಇನ್ನಷ್ಟು ವಿಸ್ತರಣೆ ಕಂಡುಕೊಂಡಿದೆ.

ಆ ರಾಜ್ಯದ ಅಧಿಕಾರಕ್ಕಾಗಿ ಮಾಯಾವತಿ ಮತ್ತು ಯಾದವ್ ಪಕ್ಷಗಳ ನಡುವೆ ಸ್ಪರ್ಧೆ ಇದೆ. ಈ ದೃಷ್ಟಿಯಿಂದ ನೋಡುವುದಾದರೆ, 2019ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದಿಲ್ಲ ಎನ್ನುವುದು ಅವರಿಬ್ಬರ ಪಾಲಿಗೆ ಒಳ್ಳೆಯ ಸಂಗತಿ. ವಿಧಾನಸಭಾ ಚುನಾವಣೆ ಇಲ್ಲದಿರುವ ಕಾರಣದಿಂದಾಗಿ, ಬಿಜೆಪಿ ವಿರೋಧಿ ಒಕ್ಕೂಟ ರಚಿಸುವ ಪ್ರಯತ್ನಕ್ಕೆ ಮುಂದಾಗಲು ಅವರಿಬ್ಬರಿಗೂ ಸಾಧ್ಯವಾಗುತ್ತದೆ.

ಆದರೆ, ರಾಜ್ಯದಲ್ಲಿ ಅಧಿಕಾರ ಹಂಚಿಕೊಳ್ಳುವ ವಿಚಾರ ಮುನ್ನೆಲೆಗೆ ಬಂದಾಗ ಈ ಒಗ್ಗಟ್ಟು ಕುಸಿದುಬೀಳುವ ಸಾಧ್ಯತೆ ಇದೆ. ಈ ಹಂತದಲ್ಲಿ ಅವರ ಒಬಿಸಿ – ಮುಸ್ಲಿಂ – ದಲಿತ ಸಮೀಕರಣ ಬಲಿಷ್ಠವಾಗಿರುವಂತೆ ಕಾಣುತ್ತದೆ. ಆದರೆ, ಮತಗಳ ಚಲಾವಣೆಯು ತೀರಾ ಸರಳವಾಗಿ ನಡೆಯುವುದಿಲ್ಲ ಎಂಬುದು ಸತ್ಯ. ಭಾರತದಲ್ಲಿ ಮೈತ್ರಿಕೂಟಗಳು ಏಕೆ ನಿರೀಕ್ಷಿತ ಕೆಲಸ ಮಾಡುತ್ತವೆಯೆಂದರೆ, ಆ ರಾಜಕೀಯ ಮೈತ್ರಿಕೂಟಗಳು ಜಾತಿಗಳ ಮೈತ್ರಿಕೂಟ ಕೂಡ ಆಗಿರುತ್ತವೆ ಎಂದು ಚುನಾವಣಾ ವಿಶ್ಲೇಷಕ ದೊರಾಬ್ ಸೊಪಾರಿವಾಲಾ ಒಮ್ಮೆ ಹೇಳಿದ್ದರು. ಆದರೆ, ಇಲ್ಲಿನ ಹಲವು ಪಕ್ಷಗಳು ಅಧಿಕಾರಕ್ಕೆ ಹಾತೊರೆಯುತ್ತಿವೆ, ವಿರೋಧ ಪಕ್ಷಗಳ ಸಾಲಿನಲ್ಲಿ ದಶಕಗಳ ಕಾಲ ಕುಳಿತುಕೊಳ್ಳಲು ಅವು ಸಿದ್ಧವಿಲ್ಲ.

42 ಲೋಕಸಭಾ ಸ್ಥಾನಗಳು ಇರುವ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಕುಸಿದುಬಿದ್ದಿವೆ, ಕಾಂಗ್ರೆಸ್ ಪಕ್ಷ ಮಹತ್ವ ಕಳೆದುಕೊಂಡಿದೆ. ಅಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಬಿಜೆಪಿ ಬಾಚಿಕೊಂಡಿದೆ. ಹಾಗಾಗಿ, ಅಲ್ಲಿ ಮೋದಿ ಅವರನ್ನು ವಿರೋಧಿಸುವ ಒಂದು ಮೈತ್ರಿಕೂಟದ ಜೊತೆ ಗುರುತಿಸಿಕೊಳ್ಳುವಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಯಾವುದೇ ಸಮಸ್ಯೆ ಇಲ್ಲ.

ಬಂಗಾಳದಲ್ಲಿ ಆದಂತೆಯೇ ಮಹಾರಾಷ್ಟ್ರದಲ್ಲಿ ಕೂಡ ಕಾಂಗ್ರೆಸ್ ಪಕ್ಷ ಹೋಳಾಯಿತು. ಆದರೆ, ಶರದ್ ಪವಾರ್ ಅವರಿಗೆ ಮಮತಾ ಅವರಿಗೆ ಸಾಧ್ಯವಾದಂತೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಆಗಲಿಲ್ಲ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಟ್ಟಾಗಿರುವುದು ಬಿಜೆಪಿಗೆ ಸಮಸ್ಯೆ ತಂದೊಡ್ಡಬಹುದು. ಉತ್ತರ ಭಾರತದಲ್ಲಿ ಇರುವಂತಹ ಬಲಿಷ್ಠ ಮತಬ್ಯಾಂಕ್‌ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಇಲ್ಲ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಶೇಕಡ 27ರಷ್ಟು ಮತಗಳನ್ನು (ಬಿಜೆಪಿಯು ಅಲ್ಲಿ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಲಿಲ್ಲ) ಪಡೆಯಿತು, ಬಹುಮತಕ್ಕೆ ಹತ್ತಿರ ಬಂತು. ಶಿವಸೇನೆ ಸೇರಿದಂತೆ ಉಳಿದ ಮೂರು ಪಕ್ಷಗಳು ತಲಾ ಶೇಕಡ 18ರಷ್ಟರ ಆಸುಪಾಸಿನಲ್ಲಿ ಮತಗಳನ್ನು ಪಡೆದವು.

ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸಿದ್ಧಾಂತ ಸರಿಸುಮಾರು ಒಂದೇ ಆಗಿದೆ. ಎರಡು ದಶಕಗಳ ಅಷ್ಟೇನೂ ಮಧುರವಲ್ಲದ ಹೊಂದಾಣಿಕೆಯ ನಂತರ, ಎನ್‌ಸಿಪಿ ಮತ್ತು ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಸಾಧ್ಯತೆ ಇದೆ.

ಆಂಧ್ರಪ್ರದೇಶದಲ್ಲಿ ಪ್ರಧಾನ ವಿರೋಧ ಪಕ್ಷದಲ್ಲಿ ಇರುವವರು ವೈ.ಎಸ್. ಜಗನ್ಮೋಹನ ರೆಡ್ಡಿ. ಬಂಗಾಳದಲ್ಲಿ ಆಗಿರುವಂತೆಯೇ, ಆಂಧ್ರಪ್ರದೇಶದಲ್ಲಿ ಕೂಡ ಚರಿಷ್ಮಾ ಇರುವ ಸ್ಥಳೀಯ ನಾಯಕ ಕಾಂಗ್ರೆಸ್ಸನ್ನು ನಿಯಂತ್ರಿಸುತ್ತಿದ್ದಾನೆ. ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರಪ್ರದೇಶದಲ್ಲಿ ಸವಾಲು ಇರುವುದು ಬಿಜೆಪಿಯಿಂದ ಮಾತ್ರವೇ ಅಲ್ಲ. ಹಾಗಾಗಿ, ಅವರು ತಮ್ಮ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಳ್ಳುವುದರಲ್ಲಿ ಅರ್ಥವಿದೆ.

ಈಗಿನ ಮೈತ್ರಿಕೂಟದ ಭಾಗ ಆಗಿರದ ಪಕ್ಷಗಳನ್ನು ಕೆರಳಿಸದೆ ಇರುವುದು ಬಿಜೆಪಿಯ ಕಾರ್ಯತಂತ್ರ ಆಗಿರುತ್ತದೆ. ಚುನಾವಣೋತ್ತರ ಹೊಂದಾಣಿಕೆಗಳಿಗೆ ಸಿದ್ಧವಿರುವ ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಸಿಟ್ಟು ತರಿಸದೆ ಇರುವುದು ಕಾರ್ಯತಂತ್ರದ ಭಾಗ ಆಗಿರುತ್ತದೆ.

ಮೈತ್ರಿ ಸಾಧಿಸಿಕೊಳ್ಳುವುದು ಕಾಂಗ್ರೆಸ್ ಪಾಲಿಗೆ ಅನಿವಾರ್ಯ ಆಗಿದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಇದನ್ನು ಸಾಧ್ಯವಾಗಿಸುವುದು ಸುಲಭದ ಮಾತಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಮುಂದಿದೆ ಎಂದು ಈಚೆಗೆ ಬಂದ ಸಮೀಕ್ಷಾ ವರದಿಯೊಂದು ಹೇಳಿದೆ. ಅದಕ್ಕಿಂತಲೂ ಆಶ್ಚರ್ಯದ ಸಂಗತಿಯೆಂದರೆ, ನಿರಂತರವಾಗಿ 15 ವರ್ಷಗಳಿಂದ ಬಿಜೆಪಿ ಆಡಳಿತ ಕಂಡಿರುವ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್ ಮುಂದಿದೆ ಎಂದು ಸಮೀಕ್ಷೆ ಹೇಳಿದೆ. 2013ರಲ್ಲಿ ಮಧ್ಯಪ್ರದೇಶದಲ್ಲಿ ಬಿಎಸ್‌ಪಿ ಪಕ್ಷ ಕೇವಲ ನಾಲ್ಕು ಸ್ಥಾನಗಳನ್ನು (ಹಿಂದಿನ ಬಾರಿಗಿಂತ ಮೂರು ಕಡಿಮೆ) ಗೆದ್ದುಕೊಂಡಿತು. ಆದರೆ ಶೇಕಡ 6ರಷ್ಟಕ್ಕಿಂತ ಹೆಚ್ಚು ಮತಗಳಿಕೆಯ ಪ್ರಮಾಣವನ್ನು ಉಳಿಸಿಕೊಂಡಿತು.

ಈ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಕಾಂಗ್ರೆಸ್ಸಿನ ಕೇಂದ್ರ ನಾಯಕರಿಗೆ ಸುಲಭದ ಕೆಲಸವಲ್ಲ. ಏಕೆಂದರೆ, ಗೆಲುವು ಸಿಗುವ ವಾಸನೆ ದೊರೆತರೆ ಈ ಪಕ್ಷಗಳ ನಾಯಕರು ಹೆಚ್ಚಿನ ಷರತ್ತುಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಮಧ್ಯಪ್ರದೇಶದಲ್ಲಿ ಬಿಎಸ್‌ಪಿ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯ ಓಟವನ್ನು ನಿಲ್ಲಿಸಲು ಸಾಧ್ಯವಾಗಬಹುದು. ಇಂತಹ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಗಾಂಧಿ ಕುಟುಂಬದವರು ಬಹಳ ದೊಡ್ಡ ಮಟ್ಟದ ರಾಜಕೀಯ ಪ್ರಬುದ್ಧತೆ ಪ್ರದರ್ಶಿಸಬೇಕು.

ಅಂತಹ ಕೆಲಸವನ್ನು ಅವರು ಮಾಡಿದ್ದೇ ಆದಲ್ಲಿ, 2019ರ ಲೋಕಸಭಾ ಚುನಾವಣೆಯು ನಮ್ಮೆಲ್ಲರ ಪಾಲಿಗೆ, ನಾವು ಯಾವುದೇ ಪಕ್ಷದ ಬೆಂಬಲಿಗರಾಗಿದ್ದರೂ ಬಹಳ ಆಸಕ್ತಿದಾಯಕ ಆಗಿರಲಿದೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT