ಪಾಕಿಸ್ತಾನ: ಜುಲೈ 25ಕ್ಕೆ ಸಾರ್ವತ್ರಿಕ ಚುನಾವಣೆ

7

ಪಾಕಿಸ್ತಾನ: ಜುಲೈ 25ಕ್ಕೆ ಸಾರ್ವತ್ರಿಕ ಚುನಾವಣೆ

Published:
Updated:
ಪಾಕಿಸ್ತಾನ: ಜುಲೈ 25ಕ್ಕೆ ಸಾರ್ವತ್ರಿಕ ಚುನಾವಣೆ

ಇಸ್ಲಾಮಾಬಾದ್‌: ಹಂಗಾಮಿ ಪ್ರಧಾನಿ ಆಯ್ಕೆ ಸಂಬಂಧ ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌–ಎನ್‌) ಮತ್ತು ವಿರೋಧ ಪಕ್ಷಗಳ ನಡುವೆ ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.

‘ನ್ಯಾಷನಲ್‌ ಅಸೆಂಬ್ಲಿ’ ಮತ್ತು ನಾಲ್ಕು ಪ್ರಾಂತ್ಯಗಳ ವಿಧಾನಸಭೆಗೆ ಜುಲೈ 25ರಿಂದ 27ರ ಒಳಗೆ ಚುನಾವಣೆ ನಡೆಸಲು ಅನುಮತಿ ನೀಡುವಂತೆ ಕೋರಿ ಚುನಾವಣಾ ಆಯೋಗವು ಮೇ 21ರಂದು ಅಧ್ಯಕ್ಷರಿಗೆ ಪತ್ರ ಬರೆದಿತ್ತು. ಜುಲೈ 25ರಂದು ಚುನಾವಣೆ ನಡೆಸಲು ಶನಿವಾರ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತಾರೂಢ ಪಿಎಂಎಲ್‌–ಎನ್‌ಗೆ, ಮಾಜಿ ಕ್ರಿಕೆಟ್‌ ಆಟಗಾರ ಇಮ್ರಾನ್‌ ಖಾನ್‌ ಅವರ ತೆಹ್ರಿಕ್‌ ಎ–ಇನ್ಸಾಫ್‌ ಪಕ್ಷವು ಸವಾಲಾಗಿ ಪರಿಣಮಿಸಿದೆ.

ಶಾಹಿದ್‌ ಖಾನ್‌ ಅಬ್ಬಾಸಿ ನೇತೃತ್ವದ ಸರ್ಕಾರದ ಅವಧಿ ಮೇ 31ಕ್ಕೆ ಮುಗಿಯಲಿದೆ. 2013ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಎಂಎಲ್-ಎನ್ ಅಧಿಕಾರಕ್ಕೆ ಬಂದಿತ್ತು.

ಹೊಸ ಸರ್ಕಾರ ರಚನೆ ಆಗುವ ತನಕ ದೈನಂದಿನ ಆಡಳಿತದ ನಿರ್ವಹಣೆಗೆ ಕೇಂದ್ರ ಹಾಗೂ ನಾಲ್ಕು ಪ್ರಾಂತ್ಯಗಳಿಗೆ ಮುಂದಿನ ವಾರ ಉಸ್ತುವಾರಿಗಳನ್ನು ನೇಮಿಸಲಾಗುತ್ತದೆ.

ಉಸ್ತುವಾರಿ ಪ್ರಧಾನಿ ಆಯ್ಕೆ ಸಂಬಂಧ ಪ್ರಧಾನಿ ಶಾಹಿದ್‌ ಖಾನ್‌ ಅಬ್ಬಾಸಿ ಹಾಗೂ ವಿರೋಧ ಪಕ್ಷದ ನಾಯಕ ಖುರ್ಷಿದ್‌ ಶಾ ಅವರು ಆರು ಬಾರಿ ಸಭೆ ನಡೆಸಿದರೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.

ಪಾಕಿಸ್ತಾನದಲ್ಲಿ 10.95 ಕೋಟಿ ಮತದಾರರಿದ್ದು, ಇದರಲ್ಲಿ 5.2 ಕೋಟಿ ಪುರುಷರು ಹಾಗು 4.6 ಕೋಟಿ ಮಹಿಳಾ ಮತದಾರರು ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry