ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

7
ಆಯಕಟ್ಟಿನ ಖಾತೆಗಳಿಗೆ ಕಾಂಗ್ರೆಸ್ ಪಟ್ಟು: ಹಣಕಾಸು ಇಲಾಖೆಗೆ ಜೆಡಿಎಸ್‌ ಹಟ

ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

Published:
Updated:
ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

ನವದೆಹಲಿ: ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸ ಮತ ಗೆದ್ದ ಬಳಿಕ ಆಯಕಟ್ಟಿನ ಖಾತೆಗಳ ಹಂಚಿಕೆ ವಿಷಯದಲ್ಲಿ ‘ದೋಸ್ತಿ’ಗಳ ಮಧ್ಯೆ ಹಗ್ಗ ಜಗ್ಗಾಟ ಬಿರುಸುಗೊಂಡಿದ್ದು, ಸಂಪುಟ ವಿಸ್ತರಣೆ ವಿಳಂಬವಾಗುವ ಸಾಧ್ಯತೆ ಇದೆ.

ಹಣಕಾಸು ಖಾತೆಗಾಗಿ ಜೆಡಿಎಸ್‌ ಬಿಗಿಪಟ್ಟು ಮುಂದುವರಿಸಿದೆ. ಇದರಿಂದ ಬೆದರಿರುವ ಕಾಂಗ್ರೆಸ್ ವರಿಷ್ಠರು ಈ ಖಾತೆ ಬಿಟ್ಟು ಕೊಡುವ ಆಲೋಚನೆಯಲ್ಲಿದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟದ ಉಳಿದ ಸದಸ್ಯರ ಪ್ರಮಾಣ ವಚನಕ್ಕೆ ವಾರಾಂತ್ಯದವರೆಗೆ ಮುಹೂರ್ತ ನಿಗದಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಜೆಡಿಎಸ್‌ಗೆ ಬೇಷರತ್‌ ಬೆಂಬಲ ಸೂಚಿಸಿದ್ದ ಕಾಂಗ್ರೆಸ್‌, ಸರ್ಕಾರ ರಚನೆಯಲ್ಲಿ ಭಾಗಿದಾರನಾಗುತ್ತಿದ್ದಂತೆ ‘ಪ್ರಭಾವಿ’ ಖಾತೆಗಳಿಗೆ ಹಕ್ಕು ಪ್ರತಿಪಾದಿಸಿತು. ಲೋಕೋಪಯೋಗಿ, ಕಂದಾಯ, ಅರಣ್ಯ ಮತ್ತು ಪರಿಸರ, ಪಶು ಸಂಗೋಪನೆ, ಜವಳಿ, ಕಾರ್ಮಿಕ, ಮೀನುಗಾರಿಕೆ, ಮುಜರಾಯಿ ಮತ್ತಿತರ ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಹೇಳಿತು

ಪ್ರಮುಖ ಖಾತೆಗಳಾಗಿರುವ ಗೃಹ, ಜಲಸಂಪನ್ಮೂಲ, ಇಂಧನ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಅಬಕಾರಿ ಖಾತೆಗಳು ತನ್ನ ಬಳಿಯೇ ಇರಲಿ ಎಂದು ಈಗಲೂ ಹಟ ಮುಂದುವರಿಸಿದೆ.

‘ಹಣಕಾಸು ಖಾತೆ ಜತೆಗೆ ಜಲಸಂಪನ್ಮೂಲ ಖಾತೆಯನ್ನು ತಮಗೇ ಬಿಟ್ಟುಕೊಡುವಂತೆ ಜೆಡಿಎಸ್‌ ನಾಯಕರು ಬೇಡಿಕೆ ಇರಿಸಿದ್ದಾರೆ. ಈ ಕಿತ್ತಾಟ ಎಷ್ಟು ದಿನ ಮುಂದುವರಿಯುತ್ತದೋ ಗೊತ್ತಿಲ್ಲ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಡೆಯದ ಸಭೆ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪಕ್ಷದ ರಾಜ್ಯ ಮುಖಂಡರೊಂದಿಗೆ ಭಾನುವಾರ ಬೆಳಿಗ್ಗೆ ನಿಗದಿಪಡಿಸಿದ್ದ ಸಭೆಯನ್ನು ರದ್ದು

ಪಡಿಸಿದರು. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಜತೆ ಚರ್ಚಿಸಿದ ಬಳಿಕ ವಿದೇಶಕ್ಕೆ ತೆರಳಿದರು.

ಖಾತೆಗಳ ಹಂಚಿಕೆ ಮತ್ತು ಕಾಂಗ್ರೆಸ್‌ನ ಸಚಿವರ ಆಯ್ಕೆ ಕುರಿತು ರಾಹುಲ್‌ ಅವರೊಂದಿಗೆ ಚರ್ಚಿಸಿದ್ದ ವೇಣುಗೋಪಾಲ್‌ ಅವರು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಜೊತೆ ಸಭೆ ನಡೆಸಿ ಮತ್ತೊಂದು ಸುತ್ತಿನ ಮಾತುಕತೆಯನ್ನು ಮಧ್ಯಾಹ್ನ ನಡೆಸಿದರು.

ಮೈತ್ರಿ ಸರ್ಕಾರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರ ಜತೆ ಪರಮೇಶ್ವರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸಭೆ ನಡೆಸಿದರು. ಸಭೆಯ ತೀರ್ಮಾನಗಳನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದು ಮುಂದಿನ ಹೆಜ್ಜೆ ಇಡಲು ಸಭೆ ತೀರ್ಮಾನಿಸಿತು.

ಪಟ್ಟು ಬಿಡದ ಜೆಡಿಎಸ್‌: ‘2004ರಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಸರ್ಕಾರ ರಚಿಸಿ ಮುಖ್ಯಮಂತ್ರಿ ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಪಕ್ಷ, ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಹಣಕಾಸು ಖಾತೆಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. 2006ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದ ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಸ್ಥಾನದೊಂದಿಗೆ ಹಣಕಾಸು ಖಾತೆಯನ್ನು ಬಿಜೆಪಿಗೇ ಬಿಟ್ಟುಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಉಪ ಮುಖ್ಯಮಂತ್ರಿ ಸ್ಥಾನವನ್ನು ನಾವು ಪಡೆದಿದ್ದೇವೆ. ಹಣಕಾಸು ಖಾತೆಯೂ ನಮಗೇ ಇರಲಿ ಎಂಬ ಸಹಜ ಬೇಡಿಕೆ ಇರಿಸಿದ್ದೆವು. ಆದರೆ, ಅದಕ್ಕೆ ಜೆಡಿಎಸ್‌ ಸಮ್ಮತಿ ಸೂಚಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ಮೂಲಗಳು ಖಚಿತಪಡಿಸಿವೆ.

‘ರೈತರ ಸಾಲ ಮನ್ನಾ ಮಾತ್ರವಲ್ಲದೆ, ಸಾಮಾಜಿಕ ಭದ್ರತಾ ಕಾರ್ಯಕ್ರಮದಡಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ಮಾಸಾಶನ ಹೆಚ್ಚಳ, ಬಡ ಕುಟುಂಬದ ಮಹಿಳೆಯರಿಗೆ ನಿರ್ವಹಣಾ ವೆಚ್ಚ ಭರವಸೆಗಳ ಈಡೇರಿಕೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಅನೇಕ ಭರವಸೆಗಳ ಈಡೇರಿಕೆ ಮತ್ತು ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಜನಪ್ರಿಯ ಯೋಜನೆಗಳನ್ನು ಮುಂದುವರಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಣಕಾಸು ಖಾತೆಗೆ ಪಟ್ಟು ಹಿಡಿದಿದ್ದಾರೆ. ಈ ಖಾತೆ ನೀಡದಿದ್ದರೆ ನನಗೆ ಮುಖ್ಯಮಂತ್ರಿ ಪದವಿಯೇ ಬೇಡ ಎಂದೂ ಅವರು ಸ್ಪಷ್ಟಪಡಿಸಿದ್ದರಿಂದ ಅನಿವಾರ್ಯವಾಗಿ ಹಣಕಾಸು ಖಾತೆ ಬಿಟ್ಟುಕೊಡಲೇಬೇಕಾಗಿದೆ. ಅದೇ ಕಾರಣಕ್ಕೆ ರಾಹುಲ್ ಗಾಂಧಿ ಕೂಡ ಇದಕ್ಕೆ ಸಮ್ಮತಿ ಸೂಚಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಹೇಳಿದರು.

ನೀರಾವರಿ ಯೋಜನೆಗಳಿಗಾಗಿ ಐದು ವರ್ಷಗಳ ಅವಧಿಗೆ ₹ 1.50 ಲಕ್ಷ ಕೋಟಿ ಮೀಸಲಿರಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವ ಜೆಡಿಎಸ್‌, ಜಲಸಂಪನ್ಮೂಲ ಖಾತೆ ಬೇಕೇಬೇಕು ಎಂಬ ಪಟ್ಟು ಹಿಡಿದಿದೆ. ಈ ಬಗ್ಗೆ ಕಾಂಗ್ರೆಸ್‌ ವರಿಷ್ಠರು ಗಂಭೀರವಾಗಿ ಚರ್ಚಿಸಿದ್ದು, ಈ ಖಾತೆಯನ್ನೂ ಜೆಡಿಎಸ್‌ಗೆ ಬಿಟ್ಟುಕೊಡುವ ಕುರಿತು ಚಿಂತನೆ ನಡೆದಿದೆ ಎಂರು.

ಕಾಂಗ್ರೆಸ್‌ನಲ್ಲಿ ಯಾರಿಗೆ ಸಿಗಲಿದೆ ‘ಸಚಿವ ಭಾಗ್ಯ’

ಕಾಂಗ್ರೆಸ್‌ ಪಕ್ಷದ 78 ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರಾಜ್ಯ ನಾಯಕರು ಸಿದ್ಧ ಪಡಿಸಿರುವ ಪಟ್ಟಿಯ ಕುರಿತು ಚರ್ಚೆ ನಡೆಯಿತಾದರೂ ಅಂತಿಮ ತೀರ್ಮಾನಕ್ಕೆ ಬರಲು ವರಿಷ್ಠರಿಗೆ ಸಾಧ್ಯವಾಗಿಲ್ಲ.

‘ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಎಲ್ಲ ಸಮುದಾಯ ಮತ್ತು ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಸಚಿವ ಸ್ಥಾನಗಳ ಹಂಚಿಕೆ ಮಾಡಬೇಕಿದೆ. ವಿದೇಶಕ್ಕೆ ತೆರಳಿರುವ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಮುಂದಿನ ಗುರುವಾರ ಮರಳಲಿದ್ದಾರೆ. ನಂತರವೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

* ಕಾಂಗ್ರೆಸ್ ನವರು ಹಣಕಾಸು ಖಾತೆ ಕೇಳುತ್ತಿದ್ದಾರೆ. ಸಂಪುಟ ರಚನೆ ಸಂದರ್ಭದಲ್ಲಿ ಪ್ರಮುಖ ಖಾತೆ ಕೇಳುವುದು ಸಹಜ. ಖಾತೆಗಳ ಹಂಚಿಕೆಯಲ್ಲಿ ಬಿಕ್ಕಟ್ಟು ಇಲ್ಲ

-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಮಹಿಳೆಯರಿಗೆ ಮತ್ತು ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ. ಅನುಭವಿಗಳಿಗೂ ಆದ್ಯತೆ ನೀಡಬೇಕಿದೆ.

-ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry