ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್ ಮ್ಯಾಡ್ರಿಡ್‌ ‘ಚಾಂಪಿಯನ್‌’

Last Updated 27 ಮೇ 2018, 19:30 IST
ಅಕ್ಷರ ಗಾತ್ರ

ಕೀವ್‌: ಚಾಂಪಿಯನ್ಸ್ ಲೀಗ್‌ನ ಅತ್ಯುತ್ತಮ ಗೋಲುಗಳಲ್ಲಿ ಒಂದು ಈ ಬಾರಿಯ ಟೂರ್ನಿಯಲ್ಲಿ ಮೂಡಿ ಬಂತು. ಗರೆತ್ ಬೇಲ್‌ ಈ ಗೋಲಿನೊಂದಿಗೆ ಮಿಂಚಿ, ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ಅವರ ಅಮೋಘ ಆಟದ ಬಲದಿಂದ ರಿಯಲ್ ಮ್ಯಾಡ್ರಿಡ್ ತಂಡ ಪ್ರಶಸ್ತಿ ಎತ್ತಿ ಹಿಡಿಯಿತು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಲಿವರ್‌ಪೂಲ್ ತಂಡವನ್ನು ಮ್ಯಾಡ್ರಿಡ್‌ 3–1ರಿಂದ ಮಣಿಸಿತು.

ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದ್ದ ಸಂದರ್ಭ 64ನೇ ನಿಮಿಷದಲ್ಲಿ ದೇಹವನ್ನು ಗಾಳಿಯಲ್ಲಿ ತೂರಿಬಿಟ್ಟು ಕಿಕ್‌ ಮಾಡಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಬೇಲ್ ತಂಡಕ್ಕೆ ಮಹತ್ವದ ಮುನ್ನಡೆ ಗಳಿಸಿಕೊಟ್ಟರು.

ಈ ಗೋಲಿಗೆ ಸಾಕ್ಷಿಯಾದ ಪ್ರೇಕ್ಷಕರು ಗ್ಯಾಲರಿಗಳಲ್ಲಿ ಮೆಕ್ಸಿಕನ್ ಅಲೆ ಎಬ್ಬಿಸುತ್ತಿದ್ದಂತೆ ಮ್ಯಾಡ್ರಿಡ್‌ ತಂಡದ ಆಟಗಾರರು ಸಂಭ್ರಮದಿಂದ ಕುಣಿದರು. 82ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಬೇಲ್ ತಂಡದ ಜಯವನ್ನು ಖಚಿತಪಡಿಸಿದರು.

ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿ ಸಲು ಸಾಧ್ಯವಾಗಲಿಲ್ಲ. 50ನೇ ನಿಮಿಷದಲ್ಲಿ ಕರೀಂ ಬೆನ್ಜೆಮಾ ಗೋಲು ಗಳಿಸುವ ಮೂಲಕ ರಿಯಲ್‌ ಮ್ಯಾಡ್ರಿಡ್‌ಗೆ ಮುನ್ನಡೆ ಗಳಿಸಿಕೊಟ್ಟರು. ನಾಲ್ಕೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದ ಸಾಡಿಯೊ ಮಾನೆ ತಿರುಗೇಟು ನೀಡಿದರು.

ನಂತರ ಮಿಂಚಿನ ಆಟವಾಡಿದ ಬೇಲ್‌ ಎದುರಾಳಿಗಳನ್ನು ನಿರಾಸೆಗೊಳಿಸಿದರು.

ಮೊಹಮ್ಮದ್ ಸಲಾಗೆ ಗಾಯ: ಮೊದಲಾರ್ಧದ ಅರ್ಧ ತಾಸಿನಲ್ಲೇ ಲಿವರ್‌ಪೂಲ್‌ಗೆ ಭಾರಿ ಪೆಟ್ಟು ಬಿತ್ತು. ಲೀಗ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿ ದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮೊಹಮ್ಮದ್ ಸಲಾ ಹೆಗಲಿಗೆ ಗಾಯಗೊಂಡು ಮರಳಿದರು. ಎದುರಾಳಿ ತಂಡದ ಸರ್ಜಿಯೊ ರಾಮೋಸ್ ಅವರಿಗೆ ಡಿಚ್ಚಿ ಹೊಡೆದು ಅವರು ಗಾಯಗೊಂಡಿದ್ದರು.

ಇದು ಮ್ಯಾಡ್ರಿಡ್‌ಗೆ ಐದು ವರ್ಷ ಗಳಲ್ಲಿ ಮೂರು ಪ್ರಶಸ್ತಿ ಗೆಲ್ಲುವ ಹಾದಿ ಯನ್ನು ಸುಗಮಗೊಳಿಸಿತು.

ಒಟ್ಟಾರೆ ಇದು ಮ್ಯಾಡ್ರಿಡ್‌ನ 13ನೇ ಪ್ರಶಸ್ತಿಯಾಗಿದೆ. ರಿಯಲ್ ಮ್ಯಾಡ್ರಿಡ್‌ ತಂಡದ ಗೆಲುವಿನೊಂದಿಗೆ ತಾವು ತರಬೇತಿ ನೀಡಿದ ತಂಡ ಚಾಂಪಿಯನ್ಸ್‌ ಲೀಗ್‌ನಲ್ಲಿ ನಿರಂತರ ಮೂರು ಬಾರಿ ಪ್ರಶಸ್ತಿ ಗೆದ್ದ ದಾಖಲೆಯನ್ನು ಜಿನೆದಿನ್ ಜಿದಾನೆ ತಮ್ಮದಾಗಿಸಿಕೊಂಡರು. ‘ಇದು ಅತ್ಯುತ್ತಮ ತಂಡ. ಇಂಥ ತಂಡಕ್ಕೆ ಇನ್ನಷ್ಟು ಸಾಧನೆ ಮಾಡುವ ಸಾಮರ್ಥ್ಯ ಇದೆ’ ಎಂದು ಜಿದಾನೆ ಅಭಿಪ್ರಾಯಪಟ್ಟರು.

'ಸಲಾ ವಿಶ್ವಕಪ್‌ನಲ್ಲಿ ಆಡಲಿದ್ದಾರೆ'

ಗಾಯಗೊಂಡ ಮೊಹಮ್ಮದ್ ಸಲಾ ವಿಶ್ವಕಪ್‌ನಲ್ಲಿ ಆಡಲು ತೊಂದರೆ ಇಲ್ಲ ಎಂದು ಈಜಿಪ್ಟ್‌ ರಾಷ್ಟ್ರೀಯ ತಂಡದ ವೈದ್ಯರು ಭರವಸೆ ವ್ಯಕ್ತಪಡಿಸಿದ್ದಾರೆ. ಸಲಾ ಅವರ ಭುಜದ ಎಕ್ಸ್‌ರೇ ತೆಗೆಸಲಾಗಿದ್ದು ಗಾಯ ಗಂಭೀರವಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ತಂಡದ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT