ಗ್ರಿಗರ್‌, ಸ್ವಿಟೋಲಿನಾಗೆ ಜಯ

7

ಗ್ರಿಗರ್‌, ಸ್ವಿಟೋಲಿನಾಗೆ ಜಯ

Published:
Updated:
ಗ್ರಿಗರ್‌, ಸ್ವಿಟೋಲಿನಾಗೆ ಜಯ

ಪ್ಯಾರಿಸ್‌: ನಾಲ್ಕನೇ ಶ್ರೇಯಾಂಕದ ಗ್ರಿಗರ್‌ ಡಿಮಿಟ್ರೊವ್‌ ಮತ್ತು ಎಲಿನಾ ಸ್ವಿಟೋಲಿನಾ ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಎರಡನೇ ಸುತ್ತು ಪ್ರವೇಶಿಸಿದರು.

ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಭಾನುವಾರ ಆರಂಭಗೊಂಡ ಟೂರ್ನಿಯ ಮೊದಲ ಸುತ್ತಿನಲ್ಲಿ ಬಲ್ಗೇರಿಯಾದ ಗ್ರಿಗರ್‌ ಈಜಿಪ್ಟ್‌ನ ಮೊಹಮ್ಮದ್ ಸಾಫ್ವಾತ್ ಅವರನ್ನು 6–1, 6–4, 7–6 (7/1)ರಿಂದ ಮಣಿಸಿದರು. ಆಸ್ಟ್ರೇಲಿಯಾದ ಅಜ್ಲಾ ತೊಮ್ಜಾನೊವಿಚ್‌ ಅವರನ್ನು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 7–5, 6–3ರಿಂದ ಸೋಲಿಸಿದರು.

ವಿಕ್ಟರ್ ಟ್ರೋಯ್ಕಿ ಅವರ ಜೊತೆ ಡಿಮಿಟ್ರೊವ್‌ ಅವರ ಮೊದಲ ಪಂದ್ಯ ನಿಗದಿಯಾಗಿತ್ತು. ಆದರೆ ಬೆನ್ನುನೋವಿನಿಂದ ಬಳಲಿದ ಟ್ರೋಯ್ಕಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಕಾರಣ ಸಾಫ್ವಾತ್‌ಗೆ ಅವಕಾಶ ನೀಡಲಾಯಿತು.

ಗ್ರ್ಯಾನ್‌ಸಲ್ಯಾಮ್‌ ಟೂರ್ನಿಯೊಂದರಲ್ಲಿ ಇದು ಸಾಫ್ವಾತ್ ಅವರ ಚೊಚ್ಚಲ ಪಂದ್ಯವಾಗಿತ್ತು. 182ನೇ ರ‍್ಯಾಂಕ್‌ ಹೊಂದಿರುವ ಟ್ರೋಯ್ಕಿ ಮೊದಲ ಎರಡು ಸೆಟ್‌ಗಳಲ್ಲಿ ಸುಲಭವಾಗಿ ಮಣಿ ದರೂ ನಿರ್ಣಾಯಕ ಸೆಟ್‌ನಲ್ಲಿ ಗ್ರಿಗರಿಗೆ ಕಠಿಣ ಸ್ಪರ್ಧೆ ಒಡ್ಡಿದರು.

ಇದರಿಂದ ಗಾಬರಿಗೊಂಡರೂ ನಂತರ ಸುಧಾರಿಸಿಕೊಂಡ ಡಿಮಿಟ್ರೊವ್‌ ಟೈ ಬ್ರೇಕರ್‌ನಲ್ಲಿ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊ ಪೊಲೊವ್‌ ಮುಂಗೈ ನೋವಿನಿಂದ ಬಳಲಿ ಹಿಂದೆ ಸರಿದ ಕಾರಣ ಇಟೆಲಿಯ ಸಿಮೋನ್ ಬೊಲೆಲಿ ಅವರಿಗೆ ಮುಖ್ಯ ಸುತ್ತು ಪ್ರವೇಶಿಸುವ ಅವಕಾಶ ಲಭಿಸಿತು.

ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಜೆಲ್ ಮೊನ್ಫಿಲ್ಸ್‌ ತಮ್ಮದೇ ದೇಶದ ಎಲಿಯಟ್ ಬ್ರೆಂಚೆಟ್ರಿಟ್ ಎದುರು 3–6, 6–1, 6–2, 6–1ರಿಂದ, ಬೋಸ್ನಿಯಾದ ಡಾಮಿರ್‌ ಜುಮುರ್‌ ಅಮೆರಿಕದ ಡೆನಿಸ್ ಕುಡ್ಲ ಎದುರು 6–4, 6–2, 6–2ರಿಂದ, ಮಲ್ಡೋವಾದ ರಡು ಆಲ್ಬೋಟ್‌ ಫ್ರಾನ್ಸ್‌ನ ಗ್ರೆಗೊರ್‌ ಬರೆರೆ ಎದುರು 4–6, 0–6, 7–5, 6–1, 6–2ರಿಂದ ಗೆದ್ದರು.

ಸುಧಾರಿಸಿಕೊಂಡ ಎಲಿನಾ: ಮೊದಲ ಸೆಟ್‌ನಲ್ಲಿ ನಿರಾಸೆ ಕಂಡರೂ ಸುಧಾರಿಸಿಕೊಂಡ ಎಲಿನಾ ಸ್ವಿಟೋಲಿನಾ ಎದುರಾಳಿಯನ್ನು 1–5, 7–5, 6–3ರಿಂದ ಸೋಲಿಸಿದರು. ಎಲಿನಾ 2015 ಮತ್ತು 2017ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಮಹಿಳೆಯರ ಇತರ ಪಂದ್ಯಗಳಲ್ಲಿ ರಷ್ಯಾದ ಎಕಟೇರಿನಾ ಮಕರೋವ ಚೀನಾದ ಜೆಂಗ್ ಸಾಯ್‌ ಸಾಯ್‌ ಅವರನ್ನು 6–4, 6–1ರಿಂದ, ಜೆಕ್ ಗಣರಾಜ್ಯದ ಬಾರ್ಬೊರಾ ಸ್ಟ್ರೈಕೊವಾ ಜಪಾನ್‌ನ ಕುರುಮಿ ನರಾ ಅವರನ್ನು 1–6, 6–3, 6–4ರಿಂದ, ಅಮೆರಿಕದ ಜೆನಿಫರ್ ಬ್ರಾಡಿ ಫ್ರಾನ್ಸ್‌ನ ಅಮಂಡೈನ್ ಹೆಸಿ ಅವರನ್ನು 6–1, 6–1ರಿಂದ ಮಣಿಸಿದರು. ಕ್ರೊವೇಷಿಯಾದ ಪೆಟ್ರಾ ಮ್ಯಾಟ್ರಿಕ್‌ ಚೀನಾದ ವಾಂಗ್‌ ಯಫಾನ್‌ ಎದುರು 6–2, 6–3ರಿಂದ, ಎಸ್ತೋನಿಯಾದ ಅನೆಟ್‌ ಕೊಂತವೇಟ್‌ ಅಮೆರಿಕದ ಮ್ಯಾಡಿಸನ್‌ ಬ್ರೆಂಗಲ್‌ ಎದುರು 6–1, 4–6, 6–2ರಿಂದ ಗೆಲುವು ಸಾಧಿಸಿದರು.

ಕಿರ್ಗಿಯೋಸ್‌ಗೆ ‘ನೋವು’

ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್‌ ಮೊದಲ ಸುತ್ತಿನ ಪಂದ್ಯವನ್ನೂ ಆಡಲಾಗದೆ ಟೂರ್ನಿಯಿಂದ ಮರಳಿದರು. ಹಿಂಗೈ ನೋವಿನಿಂದ ಬಳಲುತ್ತಿದ್ದ ಅವರು ಭರವಸೆಯಿಂದ ಇಲ್ಲಿಗೆ ಬಂದಿದ್ದರು. ಆದರೆ ಗುಣಮುಖರಾಗದ ಕಾರಣ ವಾಪಸಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry