ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಾಳಿ, ಮಳೆ

7
ಪ್ರವಹಿಸುತ್ತಿದ್ದ ವಿದ್ಯುತ್‌ ತಂತಿ ತಗುಲಿ ವಿಜಯಪುರ ಜಿಲ್ಲೆಯಲ್ಲಿ ವ್ಯಕ್ತಿ ಸಾವು

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಾಳಿ, ಮಳೆ

Published:
Updated:
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಾಳಿ, ಮಳೆ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದೆ.

ಕೊಡಗು ಜಿಲ್ಲೆಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಸಂಜೆ ಗುಡುಗು, ಮಿಂಚು ಸಹಿತ ಮಳೆ ಆಗಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ. ಗೋಣಿಕೊಪ್ಪಲು, ಶನಿವಾರಸಂತೆ, ವಿರಾಜಪೇಟೆ, ಕುಶಾಲನಗರದಲ್ಲೂ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿಯೂ ಉತ್ತಮ ಮಳೆ ಸುರಿದಿದೆ. ಬೆಟ್ಟಗೇರಿ, ಅಪ್ಪಂಗಳ ಭಾಗದಲ್ಲಿ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿವೆ.

ಹಾಸನ ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಅರ್ಧ ತಾಸು ಗುಡುಗು ಸಹಿತ ಉತ್ತಮ ಮಳೆ ಸುರಿಯಿತು. ತಾಲ್ಲೂಕಿನ ಸಾಲಗಾಮೆ ಹೋಬಳಿ, ದುದ್ದ ಹೋಬಳಿ, ಶಾಂತಿಗ್ರಾಮ, ಕಟ್ಟಾಯ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಆಗಿದ್ದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ. ಸಕಲೇಶಪುರ ಹಾಗೂ ಆಲೂರು ತಾಲ್ಲೂಕಿನಲ್ಲಿ ಮಳೆಯಾಗಿದೆ.

ಮೈಸೂರು ನಗರ ಸೇರಿದಂತೆ ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಅಲ್ಲಲ್ಲಿ ಮಳೆಯಾಗಿದೆ.

ಧಾರವಾಡ, ವಿಜಯಪುರ ಹಾಗೂ ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಸಂಜೆ ಸಿಡಿಲಿನ ಆರ್ಭಟದೊಂದಿಗೆ ಆಲಿಕಲ್ಲು ಸಹಿತ ಬಿರುಸಿನ ಮಳೆಯಾಗಿದೆ. ಬಿರುಗಾಳಿಗೆ ಮರಗಳು ಮತ್ತು ವಿದ್ಯುತ್‌ ಕಂಬಗಳು ಉರುಳಿ ಬಿದ್ದಿದ್ದು ಹತ್ತಾರು ಕಾರು, ಬೈಕ್‌ ಮತ್ತು ಮನೆಗಳು ಜಖಂಗೊಂಡಿವೆ.

ವ್ಯಕ್ತಿ ಸಾವು: ಪ್ರವಹಿಸುತ್ತಿದ್ದ ವಿದ್ಯುತ್‌ ತಂತಿ ಕಡಿದು ಬಿದ್ದು, ವಿಜಯಪುರ ಜಿಲ್ಲೆಯ ನಾಲತವಾಡದಲ್ಲಿ ಗದ್ದೆಪ್ಪ ಬಂಡಿವಡ್ಡರ (52) ಎಂಬುವವರು ಮೃತಪಟ್ಟಿದ್ದಾರೆ.

ಸಿಡಿಲು ಬಡಿದು ಸಾವು: ಕಲಘಟಗಿ ತಾಲ್ಲೂಕಿನ ಹಸರಂಬಿ ಗ್ರಾಮದ ರೈತ ಶಿವಾಜಿ ಸಾಗರೇಕರ (45) ಎಂಬುವವರು ಭಾನುವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ, ಭಟ್ಕಳ, ಕಾರವಾರ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ.

ಉತ್ತಮ ಮಳೆ: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಜೇವರ್ಗಿ ತಾಲ್ಲೂಕಿನ ನೆಲೋಗಿ ಮತ್ತು ಕಲಬುರ್ಗಿ ತಾಲ್ಲೂಕಿನ ಹುಲ್ಲೂರ ಗ್ರಾಮಗಳಲ್ಲಿ ಅತಿ ಹೆಚ್ಚು, 84 ಮಿ.ಮೀ. ಮಳೆಯಾಗಿದೆ.

ಕಮಲಾಪುರ ತಾಲ್ಲೂಕಿನ ರಾಜನಾಳ ಹಾಗೂ ಕಮಲಾಪುರಗಳಲ್ಲಿ ಬಾಳೆ ಬೆಳೆ ನಾಶವಾಗಿದೆ. ಅಫಜಲಪುರ ತಾಲ್ಲೂಕಿನ ಮಾದಾಬಾಳ ತಾಂಡಾದಲ್ಲಿ ಒಂದು ಎತ್ತು ಹಾಗೂ ಬೀದರ್‌ ಜಿಲ್ಲೆಯ ಔರಾದ್‌ ತಾಲ್ಲೂಕಿನ ಮಹಾರಾಜವಾಡಿಯಲ್ಲಿ ಎರಡು ಆಕಳು ಸಿಡಿಲು ಬಡಿದು ಮೃತಪಟ್ಟಿವೆ.

3 ಗಂಟೆ ಚಾರ್ಮಾಡಿ ಘಾಟಿ ಸ್ಥಗಿತ

ಮಂಗಳೂರು/ ಮೂಡಿಗೆರೆ: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮತ್ತು ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.

ರಾತ್ರಿ 7.30 ಕ್ಕೆ ಪ್ರಾರಂಭವಾದ ಮಳೆ, ತಡರಾತ್ರಿಯವರೆಗೂ ಬಿರುಸಿನಿಂದ ಸುರಿಯಿತು. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 234 ರ ಚೀಕನಹಳ್ಳಿ ಗೋಣಿಬೀಡಿನ ನಡುವೆ ಮರವೊಂದು ಉರುಳಿ ಹೆದ್ದಾರಿಗೆ ಬಿದ್ದ ಪರಿಣಾಮ ಒಂದು ಗಂಟೆ ಕಾಲ ಬೇಲೂರು– ಮೂಡಿಗೆರೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry