4

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ: ಅಗತ್ಯ ಬಿದ್ದರೆ ಕೇಂದ್ರದ ಮೇಲೆ ಒತ್ತಡ- ಜಾಮದಾರ

Published:
Updated:
ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ: ಅಗತ್ಯ ಬಿದ್ದರೆ ಕೇಂದ್ರದ ಮೇಲೆ ಒತ್ತಡ- ಜಾಮದಾರ

ಬೆಂಗಳೂರು: ‘ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಹೇಳಿದರು.

ಮಹಾಸಭಾದ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಕಾರಣಕ್ಕೆ ಸ್ಥಗಿತಗೊಳಿಸಿದ ಮಹಾಸಭಾದ ಸದಸ್ಯತ್ವ ಅಭಿಯಾನ ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆ ಮತ್ತೆ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು.

ಪ್ರತ್ಯೇಕ ಧರ್ಮ ಮಾನ್ಯತೆಗೆ ಬೇಡಿಕೆ ಮುಂದಿಡುವ ಮೂಲಕ ಹಿಂದೂ ಧರ್ಮ ಒಡೆಯಲು ಯತ್ನಿಸಲಾಗುತ್ತಿದೆ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪದೇ ಪದೇ ಮಾಡಿದ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ‘ಲಿಂಗಾಯತರು ಹಿಂದೂ ಧರ್ಮದ ಭಾಗವೇ ಅಲ್ಲ. ಹಿಂದೂ ಧರ್ಮದ ಒಳಗೇ ಇಲ್ಲ. ಅಂದಮೇಲೆ ಧರ್ಮ ಒಡೆಯುವ ಪ್ರಶ್ನೆ ಎಲ್ಲಿ ಬಂತು’ ಎಂದು ಪ್ರಶ್ನಿಸಿದರು.

‘ನಾವು (ಲಿಂಗಾಯತರು) ಹಿಂದೂ ವಿರೋಧಿಗಳಲ್ಲ. ರಾಷ್ಟ್ರದ್ರೋಹಿಗಳೂ ಅಲ್ಲ. ಆದರೆ, ನಮ್ಮನ್ನು ಆ ರೀತಿ ಬಿಂಬಿಸುವ ಮೂಲಕ ನೀವು ಒಡಕು ಮೂಡಿಸುತ್ತಿದ್ದೀರಿ’ ಎಂದು ಮೋದಿ ಮತ್ತು ಶಾಗೆ ತಿರುಗೇಟು ನೀಡಿದರು.

‘ತಜ್ಞರ ಸಮಿತಿ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿ ಪ್ರತ್ಯೇಕ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿದೆ. ಬಸವ ತತ್ವ ಒಪ್ಪಿ ಬರುವ ವೀರಶೈವರೂ ಲಿಂಗಾಯತರು ಎಂಬ ಅಂಶ ಈ ವರದಿಯಲ್ಲಿ ಸ್ಪಷ್ಟವಾಗಿ ಇದೆ. ಹೀಗಾಗಿ, ವೀರಶೈವರನ್ನು ಹೊರಗಿಡುವ ಪ್ರಮೇಯವೇ ಇಲ್ಲ. ಆದರೆ, ಪಂಚಪೀಠದವರು ಮತ್ತು ಕೆಲವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಮಹಾಸಭಾದಲ್ಲಿ ಕಾಂಗ್ರೆಸ್‌ನವರು ಹೆಚ್ಚು ಇರಬಹುದು. ಆದರೆ, ನಮ್ಮ ಸಂಘಟನೆ ಪಕ್ಷಾತೀತ. ಹೋರಾಟವೂ ಪಕ್ಷಾತೀತ. ನಮ್ಮ ಹಿತ ಕಾಪಾಡುವವರೆಗೆ ನಮ್ಮ ಮತ ಎಂದು ಈ ಹಿಂದೆಯೇ ಹೇಳಿದ್ದೆವು’ ಎಂದೂ ಸ್ಪಷ್ಟಪಡಿಸಿದರು.

‘ಸಂಘಟನೆಗೂ ಚುನಾವಣೆಗೂ ಸಂಬಂಧ ಇಲ್ಲ’

‘ಚುನಾವಣೆಗೂ ಸಂಘಟನೆಗೂ ಸಂಬಂಧ ಇಲ್ಲ. ಹೀಗಾಗಿ, ಲೋಕಸಭಾ ಚುನಾವಣೆ ಗಮನದಲ್ಲಿಟ್ಟು ಹೋರಾಟ ಮುಂದುವರಿಸುತ್ತೇವೆ ಎಂಬ ವಾದದಲ್ಲಿ ಹುರುಳಿಲ್ಲ. ನಮ್ಮ ಮುಂದೆ ಯಾವುದೇ ರಹಸ್ಯ ಕಾರ್ಯಸೂಚಿಯೂ ಇಲ್ಲ’ ಎಂದು ಜಾಮದಾರ ಸ್ಪಷ್ಟಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಕ್ರಿಯವಾಗಿದ್ದ ಕೆಲವು ಸಚಿವರು ಸೋಲನುಭವಿಸಿದ ಬಗ್ಗೆ ಕೇಳಿದಾಗ, ‘ಪ್ರತ್ಯೇಕ ಧರ್ಮ ಹೋರಾಟ ಸೋಲಿಗೆ ಕಾರಣ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಸೋಲಿಗೆ ಸ್ಥಳೀಯ ಮತ್ತು ವೈಯಕ್ತಿಕ ಕಾರಣಗಳಿರಬಹುದು. ರಾಜ್ಯದಲ್ಲಿ ಶೇ 17ರಷ್ಟಿರುವ ಲಿಂಗಾಯತರೆಲ್ಲ ಬಿಜೆಪಿಗೆ ಮತ ಹಾಕಿದ್ದಾರೆ ಎನ್ನಲಾಗದು’ ಎಂದರು.

ಲಿಂಗಾಯತ ಧರ್ಮ ಮಾನ್ಯತೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧ

ಚಿತ್ರದುರ್ಗ: ‘ಕೇಂದ್ರ ಸರ್ಕಾರ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡದೇ ಇದ್ದರೆ ಸುಪ್ರೀಂ ಕೋರ್ಟ್ ಮೊರೆಹೋಗುತ್ತೇವೆ’ ಎಂದು ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಎಚ್ಚರಿಸಿದರು.

‘ಲಿಂಗಾಯತರ ಹೋರಾಟಕ್ಕೆ ಸ್ಪಂದಿಸಿದ ಕಾಂಗ್ರೆಸ್‌ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಕೇಂದ್ರದ ಮೇಲೆ ಒತ್ತಡ ಹೇರುವ ಭಾಗವಾಗಿ ಹೋರಾಟ ಮುಂದುವರಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ. ಬಳಿಕ ನವದೆಹಲಿಯಲ್ಲಿ ಬೃಹತ್‌ ರ‍್ಯಾಲಿ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಪ್ರತ್ಯೇಕ ಧರ್ಮದ ಹೋರಾಟವನ್ನು ಬಿಜೆಪಿ ಆರಂಭದಲ್ಲಿ ವಿರೋಧಿಸಿತ್ತು. ಆದರೆ, ಜನರ ಒತ್ತಡ ಹೆಚ್ಚಾದ ಪರಿಣಾಮ ಬೇಡಿಕೆ ಈಡೇರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲಿಂಗಾಯತ ಧರ್ಮದ ಬೇಡಿಕೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸ್ಪಂದಿಸದೇ ಇದ್ದರೆ ಕಾನೂನು ಹೋರಾಟ ಕೈಗೆತ್ತಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ಅಂಗೈಯಲ್ಲೇ ಆಕಾಶ ತೋರಿಸುತ್ತವೆ. ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳನ್ನು ಈಡೇರಿಸಲು ಆರ್‌ಬಿಐನಲ್ಲಿರುವ ಹಣವೂ ಸಾಲದು. ರೈತರ ಸಾಲಮನ್ನಾ ಸೇರಿದಂತೆ ಎಲ್ಲ ಭರವಸೆಗಳನ್ನು ಈಡೇರಿಸುವುದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಷ್ಟವಾಗಬಹುದು. ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳದು ಅನಿವಾರ್ಯ ಹೊಂದಾಣಿಕೆಯೇ ಹೊರತು ಅನೈತಿಕ ಸಂಬಂಧವಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry