ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಾಟಿ

7
ವಿಶ್ವಾಸಮತ ಗೆದ್ದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು

ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಾಟಿ

Published:
Updated:
ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಾಟಿ

ಬೆಂಗಳೂರು: ಮೈತ್ರಿ ಸರ್ಕಾರವು ವಿಶ್ವಾಸಮತ ಗೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ರೈತ ಬಸಪ್ಪ ಎಂಬುವರು ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದರು. ಈ ಬಗ್ಗೆ ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ಭಾನುವಾರ ಕರೆ ಮಾಡಿದ್ದ ಮುಖ್ಯಮಂತ್ರಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸೂಚಿಸಿದರು. ಈ ವೇಳೆ, ಉತ್ತರ ನೀಡಲು ಜಿಲ್ಲಾಧಿಕಾರಿ ತಡಬಡಾಯಿಸಿದರು.

ಇದರಿಂದ ಕುಪಿತಗೊಂಡ ಕುಮಾರಸ್ವಾಮಿ, ‘ಪ್ರತಿ ವ್ಯಕ್ತಿಯ ಜೀವ ಅಮೂಲ್ಯ. ಘಟನೆ ನಡೆದು 36 ಗಂಟೆಗಳು ಕಳೆದಿವೆ. ನಿಮ್ಮ ಬಳಿ ಯಾವು‌ದೇ ಮಾಹಿತಿ ಇಲ್ಲ. ಇದು ಜನರ ಸಮಸ್ಯೆಗೆ ಸ್ಪಂದಿಸುವ ರೀತಿಯಾ’ ಎಂದು ತರಾಟೆಗೆ ತೆಗೆದುಕೊಂಡರು. ‘ಎರಡು ತಿಂಗಳಿಂದ ನಿಮ್ಮ ಮನಸ್ಸಿಗೆ ಬಂದಂತೆ ಕಾರ್ಯನಿರ್ವಹಿಸಿದ್ದೀರಿ. ಇದರಿಂದ ಆಡಳಿತ ವ್ಯವಸ್ಥೆ ನಿತ್ರಾಣಗೊಂಡಿತ್ತು. ಇನ್ನು ಮುಂದೆ ಇಂತಹ ಧೋರಣೆಯನ್ನು ಸಹಿಸುವುದಿಲ್ಲ. ಉದಾಸೀನ ತೋರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದೂ ಎಚ್ಚರಿಕೆ ನೀಡಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರಿನ ಹೆಮ್ಮಿಗೆಪುರದಲ್ಲಿಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವತಿಯಿಂದ ನಡೆಯುತ್ತಿದ್ದ ಕಾಮಗಾರಿ ವೇಳೆ ರೋಡ್‌ರೋಲರ್‌ ಹರಿದು ಬಾಲಕ ಮೃತಪಟ್ಟಿದ್ದ. ಈ ಬಗ್ಗೆಯೂ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಯೊಬ್ಬರಿಂದ ಮುಖ್ಯಮಂತ್ರಿ ಹೆಚ್ಚಿನ ವಿವರ ಕೇಳಿದರು. ಘಟನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿ ಉತ್ತರಿಸಿದರು.

‘ಅಧಿಕಾರಿಗಳ ನಿರ್ಲಕ್ಷ್ಯದಿಂದಲೇಈ ಘಟನೆ ನಡೆದಿದೆ. ಬಾಲಕನ ಸಾವಿನ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿವೆ. ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದರೆ ಏನರ್ಥ. ಇದನ್ನೂ ಗಮನಿಸಿಲ್ಲ ಎಂದರೆ ನಿಮ್ಮ ಉದಾಸೀನಕ್ಕೆ ಇದಕ್ಕಿಂತ ನಿದರ್ಶನ ಬೇಕೇ’ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯಾದ ದಿನವೇ ಯಡಿಯೂರಪ್ಪ ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದವರನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು. ವಿಶ್ವಾಸಮತ ಗೆಲ್ಲುವ ತನಕ ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದುಕೊಳ್ಳದಂತೆ ಅವರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.

ಆದರೆ ಕುಮಾರಸ್ವಾಮಿ ‘ವಿಶ್ವಾಸಮತ ಪಡೆಯುವವರೆಗೆ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನನಗೆ ಯಡಿಯೂರಪ್ಪ ಅವರಂತೆ ಆತುರ ಇಲ್ಲ. ವಿಶ್ವಾಸಮತ ಸಿಕ್ಕ ಬಳಿಕವೇ ನನಗೆ ಅಧಿಕಾರ ಬರುತ್ತದೆ’ ಎಂದೂ ಕುಮಾರಸ್ವಾಮಿ ಅವರು ಸದನದಲ್ಲಿ ಹೇಳಿದ್ದರು.

ಈವರೆಗೆ ಅಧಿಕಾರಿಗಳ ವರ್ಗಾವಣೆ ಮಾಡದ ಕುಮಾರಸ್ವಾಮಿ, ಇರುವ ಅಧಿಕಾರಿಗಳಿಗೆ ಚಳಿ ಬಿಡಿಸುವ ಕೆಲಸ ಶುರು ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry