ಅವಕಾಶಗಳ ಮಳೆಯಲ್ಲಿ ಮಿಂದ ವಿದ್ಯಾರ್ಥಿಗಳು

7
ಎರಡನೇ ದಿನವೂ ಮಾಹಿತಿ ಪಡೆದ ಸಾಕಷ್ಟು ಮಂದಿ

ಅವಕಾಶಗಳ ಮಳೆಯಲ್ಲಿ ಮಿಂದ ವಿದ್ಯಾರ್ಥಿಗಳು

Published:
Updated:
ಅವಕಾಶಗಳ ಮಳೆಯಲ್ಲಿ ಮಿಂದ ವಿದ್ಯಾರ್ಥಿಗಳು

ಬೆಂಗಳೂರು: ನೂತನ ಕೋರ್ಸ್‌ಗಳು, ಕಾಲೇಜುಗಳಲ್ಲಿನ ಸೌಲಭ್ಯ, ಉದ್ಯೋಗಾವಕಾಶ, ಶೈಕ್ಷಣಿಕ ಸಾಲ... ಹೀಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿನ ಸಾಲು ಸಾಲು ಅನುಮಾನಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ಶೈಕ್ಷಣಿಕ ಮೇಳ ಮಾಡಿತು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ಎಡ್ಯೂವರ್ಸ್‌’ ಶೈಕ್ಷಣಿಕ ಮೇಳದ ಎರಡನೇ ದಿನ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಗೊಂದಲಗಳನ್ನು ಬಗೆಹರಿಸಿಕೊಂಡರು.

ಸಿಇಟಿ ಮತ್ತು ಕಾಮೆಡ್‌–ಕೆ ಕುರಿತ ವಿಚಾರಗೋಷ್ಠಿಗಳು ಬಹುತೇಕ ಮೆಚ್ಚುಗೆಗೆ ಪಾತ್ರವಾಯಿತು. ‘ಸಿಇಟಿ, ಕಾಮೆಡ್‌–ಕೆ ಸೀಟುಗಳ ಆಯ್ಕೆ ಪ್ರಕ್ರಿಯೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಎನ್ನುತ್ತಾರೆ. ಆದರೆ, ವಿವರವಾಗಿ ಯಾರೂ ಹೇಳುವುದಿಲ್ಲ. ಇಲ್ಲಿ ಅದರ ಸಮಗ್ರ ಮಾಹಿತಿ ತಿಳಿದುಕೊಂಡೆವು’ ಎಂದು ಬಹಳಷ್ಟು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೇಳದಲ್ಲಿದ್ದ 64 ಮಳಿಗೆಗಳಲ್ಲಿ ಎಂಜಿನಿಯರಿಂಗ್‌ ಹಾಗೂ ನಿರ್ವಹಣೆ ಕೋರ್ಸ್‌ಗಳನ್ನು ಹೊಂದಿರುವ ಕಾಲೇಜುಗಳ ಸಂಖ್ಯೆ ಹೆಚ್ಚಿತ್ತು. ಅಲ್ಲದೆ, ವಿದ್ಯಾರ್ಥಿಗಳೂ ಈ ಕೋರ್ಸ್‌ಗಳ ಬಗ್ಗೆಯೇ ಹೆಚ್ಚು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು.

‘ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಎಂಡ್‌ ಕಮ್ಯೂನಿಕೇಷ್‌ ಎಂಜಿನಿಯರಿಂಗ್‌ ಕೋರ್ಸ್‌ಗಳ ಬಗ್ಗೆಯೇ ವಿದ್ಯಾರ್ಥಿಗಳು ಹೆಚ್ಚು ವಿಚಾರಿಸುತ್ತಿದ್ದರು’ ಎಂದು ದಯಾನಂದ ಸಾಗರ್‌ ಎಂಜಿನಿಯರ್‌ ಕಾಲೇಜಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸನಮ್ ತಿಳಿಸಿದರು.

‘ಸಾಫ್ಟ್‌ವೇರ್‌ ಕ್ಷೇತ್ರದಲ್ಲಿನ ವಿಫುಲ ಅವಕಾಶಗಳಿಂದಾಗಿ ನಮ್ಮಲ್ಲಿಗೆ ಬರುವ ವಿದ್ಯಾರ್ಥಿಗಳು ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ ಬಗ್ಗೆಯೇ ಆದ್ಯತೆಯಲ್ಲಿ ಕೇಳುತ್ತಾರೆ. ಇದರ ಜೊತೆಗೆ ವೈಮಾನಿಕ, ಮೆಕಾನಿಕಲ್‌ ಕೋರ್ಸ್‌ಗಳಿಗೂ ಬೇಡಿಕೆ ಹೆಚ್ಚಿದೆ’ ಎಂದು ಬಿಐಟಿ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ಡಾ. ಅಜೀಜ್‌ ಅಲಿ ಖಾನ್‌ ಹೇಳಿದರು.

‘ವಿದ್ಯಾರ್ಥಿಗಳ ಪ್ರತಿಕ್ರಿಯೆ ಚೆನ್ನಾಗಿದೆ. ಎಂಬಿಬಿಎಸ್‌ ಕೋರ್ಸ್‌ಗಾಗಿ ನಮ್ಮ ಕಾಲೇಜನ್ನೇ ಅರಸಿಕೊಂಡು ಬರುತ್ತಾರೆ. ಕಾಲೇಜಿನ ಸೌಲಭ್ಯಗಳ ಕುರಿತೂ ಪ್ರಶ್ನಿಸುತ್ತಿದ್ದರು’ ಎಂದು ಮಳಿಗೆ ಹೊಂದಿದ್ದ ಕೆ.ಎಲ್‌.ಇ. ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರೊ. ಡಾ.ಎ.ಮಮತಾ ವಿವರಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಬಂದವರೆಲ್ಲರೂ ಸಮಗ್ರವಾಗಿ ಮಾಹಿತಿ ಪಡೆದರು. ಸಣ್ಣ ಅನುಮಾನಗಳನ್ನು ಕೇಳಿ, ಕೆದಕಿ ಪರಿಹರಿಸಿಕೊಳ್ಳುತ್ತಿದ್ದರು. ಮುಖ್ಯವಾಗಿ ಇಂತಹ ಕೋರ್ಸ್‌ ತೆಗೆದುಕೊಂಡರೆ ಯಾವ ರೀತಿ ಉದ್ಯೋಗಾವಕಾಶಗಳಿವೆ

ಎಂಬುದನ್ನು ಕೇಳುತ್ತಿದ್ದರು.

ಮೊದಲೆಲ್ಲ ಹೆಚ್ಚು ಮಂದಿ ಎಂಬಿಎ ಕೋರ್ಸ್‌ ಬಗ್ಗೆಯೇ ವಿಚಾರಿಸುತ್ತಿದ್ದರು. ಈಗ ಟ್ರಾವೆಲ್‌, ಟೂರಿಸಂ, ಹೋಟೆಲ್‌ ಮ್ಯಾನೇಜ್‌ಮೆಂಟ್‌... ಹೀಗೆ ಭಿನ್ನ ಕೋರ್ಸ್‌ಗಳ ಬಗ್ಗೆಯೂ ಆಸಕ್ತಿಯಿಂದ ವಿಚಾರಿಸುತ್ತಾರೆ’ ಎಂದು ಜೆಮ್ಸ್‌ ಬಿ ಸ್ಕೂಲ್‌ನ ಹರಿಕೃಷ್ಣ ತಿಳಿಸಿದರು.

ರಾಮಯ್ಯ ವಿಶ್ವವಿದ್ಯಾಲಯದ ಕುರಿತು ಮಾಹಿತಿ ನೀಡುತ್ತಿದ್ದ ಮಳಿಗೆ ವಿದ್ಯಾರ್ಥಿಗಳಿಂದ ತುಂಬಿತ್ತು. ಪದವಿ, ಎಂಜಿನಿಯರಿಂಗ್‌, ಸ್ನಾತಕೋತ್ತರ ಕೋರ್ಸ್‌ಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ದೊರೆಯುತ್ತಿತ್ತು. ಇದೇ ರೀತಿ ಪ್ರೆಸಿಡೆನ್ಸಿ, ರೇವಾ, ಅಲಯನ್ಸ್‌, ಕೇಂಬ್ರಿಡ್ಜ್‌, ಕೆಎಲ್‌ಇ ಎಂಜಿನಿಯರಿಂಗ್‌ ಕಾಲೇಜುಗಳ ಮಳಿಗೆಗಳಲ್ಲಿಯೂ ಜನಜಂಗುಳಿ ಕಂಡುಬಂದಿತು.

‘ಅನಿಮೇಷನ್‌ಗೆ ಹೆಚ್ಚಿದ ಒಲವು’

ಮೇಳದಲ್ಲಿ ಅನಿಮೇಷನ್‌, ವಿನ್ಯಾಸ, ಛಾಯಾಚಿತ್ರದ ಕೋರ್ಸ್‌ಗಳನ್ನು ಹೊಂದಿದ್ದ ವಿಜ್‌ಟೂನ್ಜ್‌ ಅಕಾಡೆಮಿ ಎಲ್ಲರನ್ನು ಆಕರ್ಷಿಸುತ್ತಿತ್ತು. ವಿನ್ಯಾಸ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಗತಿಯಾಗುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳು ಈ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದರು. ‘ಸಾಂಪ್ರದಾಯಿಕ ಕೋರ್ಸ್‌ಗಳನ್ನು ಬಿಟ್ಟು ಮಕ್ಕಳು ಈ ಕೋರ್ಸ್‌ಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ, ಪೋಷಕರು ಸ್ವಲ್ಪ ಹಿಂಜರಿಕೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಕೋರ್ಸ್‌ಗಳನ್ನು ಬಗ್ಗೆ ವಿದ್ಯಾರ್ಥಿಗಳ ಒಲವು ಹೆಚ್ಚಾಗಿದೆ’ ಎನ್ನುತ್ತಾರೆ ಅಕಾಡೆಮಿಯ ಧನ್ಯಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry