ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಹಾವಳಿ: ಗ್ರಾಮಸ್ಥರಿಗೆ ಆತಂಕ

ಪುರಸಭೆ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು; ನಿವಾಸಿಗಳಿಂದ ಪ್ರತಿಭಟನೆ ಎಚ್ಚರಿಕೆ
Last Updated 28 ಮೇ 2018, 6:08 IST
ಅಕ್ಷರ ಗಾತ್ರ

ಸವದತ್ತಿ: ‘ಪಟ್ಟಣದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಿದ್ದು, ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆ ನೀಡುವುದರ ಜತೆಗೆ ನೇರವಾಗಿ ಮನೆಗಳಿಗೆ ನುಗ್ಗುತ್ತಿವೆ. ರೋಗ ಹರಡುವ ಭೀತಿಯಿಂದಾಗಿ ಹಂದಿಗಳ ನಿಯಂತ್ರಣಕ್ಕೆ ಪುರಸಭೆಗೆ ಸಾರ್ವಜನಿಕರು ಮಾಡಿದ ಮನವಿಯಿಂದ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಜನರು ದೂರುತ್ತಿದ್ದಾರೆ.

ಒಂದು ತಿಂಗಳಿಂದ ಮಾರಕ ರೋಗ ನಿಫಾ ವೈರಸ್‌ನಿಂದ ಜನರು ಆತಂಕದಲ್ಲಿದ್ದಾರೆ. ಇದನ್ನು ಗಮನದಲ್ಲಿರಿಸಿಕೊಂಡ ಪುರಸಭೆಯ ಮುಖ್ಯಾಧಿಕಾರಿ ಕೆ.ಐ ನಾಗನೂರ ಹಾಗೂ ಅಧಿಕಾರಿಗಳು ಹಂದಿಗಳ ಸಾಕಾಣಿಕೆದಾರರಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಹಂದಿಗಳನ್ನು ಬೇರಡೆ ಸ್ಥಳಾಂತರಿಸಿರಿ, ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಆದೇಶಿಸಿದ್ದಾರೆ.

ಪುರಸಭೆ ಅಧಿಕಾರಿಗಳು ಈ ಹಿಂದೆಯೂ ಅನೇಕ ಬಾರಿ ಮೌಖಿಕವಾಗಿ ಹೇಳಿದ್ದಲ್ಲದೆ, ಎಚ್ಚರಿಕೆಯ ನೋಟಿಸ್‌ ನೀಡಿದರು. ಆದರೆ ಮಾಲೀಕರು ಅದನ್ನು ಲೆಕ್ಕಿಸಲಿಲ್ಲ. ಅವರಿಗಾಗಿ ಪ್ರತ್ಯೇಕ ಸಭೆ ಕರೆದರೂ ಬರುವುದೇ ಇಲ್ಲ. ನಿಯಂತ್ರಣವನ್ನೂ ಮಾಡಲಿಲ್ಲ. ಇದೀಗ ಪಟ್ಟಣದಲ್ಲಿ ಪರಸ್ಥಿತಿ ಗಂಭೀರವಾಗಿದೆ. ಜನರು ಬೇಸತ್ತಿದ್ದಾರೆ.

‘ಮನೆ ಅಂಗಳದಲ್ಲಿ ಮಕ್ಕಳು ಆಟವಾಡದ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಹಂದಿಗಳು ನಮ್ಮ ಮಕ್ಕಳ ಮೇಲೆ ಹಾವಳಿ ಮಾಡುತ್ತವೆಯೋ ಎಂಬ ಆತಂಕದಲ್ಲಿ ಪಾಲಕರಿದ್ದಾರೆ. ಮಹಿಳೆಯರು ಮನೆಗೆಸಲದಲ್ಲಿ ತೊಡಗಿದ್ದಾಗ ಹಂದಿಗಳು ನೇರವಾಗಿ ಅಡುಗೆ ಮನೆಗೆ ಬರುತ್ತಿವೆ. ಇದರಿಂದ ಇಡೀ ಮನೆಯಲ್ಲಿ ಹೇಸಿಗೆ ಬೀಳುವುದಲ್ಲದೆ, ದುರ್ವಾಸನೆ ಉಂಟಾಗುತ್ತದೆ. ಈ ಕುರಿತು ಹಿರಿಯ ಆರೋಗ್ಯ ನೀರೀಕ್ಷಕ ಪ್ರಕಾಶ ಮಠದ ಅವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ’ ಎಂದು ನ್ಯೂ ಸ್ಟಾರ್‌ ಗ್ರೂಪ್‌ ಅಧ್ಯಕ್ಷ ಶಂಕರ ಇಜಂತಕರ ಬೇಸರ ವ್ಯಕ್ತಪಡಿಸಿದರು.

‘ಸಾರ್ವಜನಿಕರ ಆರೋಗ್ಯದ ಕುರಿತು ಸೂಕ್ತ ಕ್ರಮ ಕೈಗೊಳ್ಳದೆ ಕಾಲ ಹರಣ ಮಾಡಿದಲ್ಲಿ, ನ್ಯೂ ಸ್ಟಾರ್‌ ಗ್ರೂಪ್‌ನ ಎಲ್ಲ ಸದಸ್ಯರು ಪುರಸಭೆ ಎದುರು ಪ್ರತಿಭಟನೆ ಮಾಡುತ್ತಾರೆ’ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆ ಪಟ್ಟಣದಲ್ಲಿ ಬಹುತೇಕ ಜನರು ಬಯಲು ಶೌಚಾಲಯ ಬಳಸುತ್ತಿದ್ದರು. ಆಗ ಹಂದಿಗಳು ಊರ ಹೊರಗಡೆ ಇದ್ದವು. ಇದೀಗ ಜನ ಜಾಗೃತರಾಗಿದ್ದು, ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಂಡಿದ್ದರಿಂದ, ಹಂದಿಗಳು ಪಟ್ಟಣದ ಒಳಗೆ ಬಂದಿವೆ. ಆಗಾಗ ಅನ್ನಕ್ಕಾಗಿ ಶಾಲಾ ಆವರಣಗಳಲ್ಲಿ, ಮಠಗಳಲ್ಲಿ, ಮದುವೆ ಸಭೆ, ಸಮಾರಂಭಗಳಲ್ಲಿನ ಮುಸುರೆಗಾಗಿ ಧಾವಿಸಿ ಬರುತ್ತಿವೆ.

ಇಲ್ಲಿನ ಕೆಲ ಶಾಲೆಗಳಲ್ಲಿ ಬಿಸಿಯೂಟದ ಸಂದರ್ಭದಲ್ಲಿ ಏನೇ ಕ್ರಮ ಕೈಗೊಂಡರೂ ಹಂದಿಗಳು ರಾಜಾರೋಷವಾಗಿ ಒಳನುಸುಳುತ್ತಿವೆ. ನಿತ್ಯ ನೂರಾರು ಭಕ್ತರು ಬರುವ ಶ್ರೀಕಲ್ಮಠದಲ್ಲೂ ಹಂದಿಗಳು ತೊಂದರೆ ನೀಡಿವೆ. ಪಕ್ಕದಲ್ಲಿರುವ ಶಾಲೆಯ ಮಕ್ಕಳು ಊಟ ಮಾಡಲು ಇದೇ ಮಠಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಹಂದಿಗಳು ವಿದ್ಯಾರ್ಥಿಗಳ ಊಟದ ತಟ್ಟೆಯಲ್ಲಿ ಬಾಯಿ ಹಾಕಿದ ಪ್ರಸಂಗಗಳೂ ನಡೆದಿವೆ. ಬೈಕ್ ಸವಾರರು ಎಚ್ಚರ ತಪ್ಪಿದಲ್ಲಿ ಹಂದಿಗಳು ಅಡ್ಡಬಂದು ಅಪಘಾತವಾಗಿ ಗಾಯಗೊಂಡ ಪ್ರಕರಣಗಳಿವೆ.
**
ಹಂದಿಗಳ ಮಾಲೀಕರಿಗೆ ಈಗಾಗಲೇ ನೋಟಿಸ್‌ ಕೊಡಲಾಗಿದೆ. ಈ ಬಾರಿ ಕಾನೂನು ಕ್ರಮ ತಗೆದುಕೊಳ್ಳಲಾಗುವುದು
- ಕೆ.ಐ ನಾಗನೂರ, ಪುರಸಭೆ ಮುಖ್ಯಾಧಿಕಾರಿ 

ಸದಾಶಿವ ಮಿರಜಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT