ಲಕ್ಷ ಎಕರೆಗೆ ಹನಿ ನೀರಾವರಿ ವ್ಯವಸ್ಥೆ

7
ಯುವಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ: ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಯೋಜನೆ

ಲಕ್ಷ ಎಕರೆಗೆ ಹನಿ ನೀರಾವರಿ ವ್ಯವಸ್ಥೆ

Published:
Updated:
ಲಕ್ಷ ಎಕರೆಗೆ ಹನಿ ನೀರಾವರಿ ವ್ಯವಸ್ಥೆ

ಬೆಳಗಾವಿ: ‘ಕಾಗವಾಡ ಕ್ಷೇತ್ರದ ಲಕ್ಷಕ್ಕೂ ಅಧಿಕ ಕೃಷಿ ಜಮೀನನ್ನು ಹನಿ ನೀರಾವರಿ ವ್ಯವಸ್ಥೆಗೆ ಒಳಪಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇನೆ. ಇದರಿಂದ ನೀರಿನ ಮಿತವ್ಯಯವೂ ಸಾಧ್ಯವಾಗುತ್ತದೆ. ರೈತರಿಗೂ ಅನುಕೂಲವಾಗುತ್ತದೆ’ ಎಂದು ನೂತನ ಶಾಸಕ, ಕಾಂಗ್ರೆಸ್‌ನ ಶ್ರೀಮಂತ ಪಾಟೀಲ ತಿಳಿಸಿದರು.

ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಅವರು, ತಮ್ಮ ಉದ್ದೇಶಗಳು ಹಾಗೂ ಕೈಗೊಳ್ಳಲಿರುವ ಯೋಜನೆಗಳ ಕುರಿತು ‘ಪ್ರಜಾವಾಣಿ’ಯೊಂದಿಗೆ ಹಂಚಿ ಕೊಂಡರು.

ನಿಮ್ಮ ಆದ್ಯತೆಗಳೇನು?

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗಮನ ನೀಡಲಾಗುವುದು. ನೀರಾವರಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಕೆಲವೆಡೆ ಕುಡಿಯುವ ನೀರಿಗೆ ತತ್ವಾರ ಇದೆ. ವಿಶೇಷವಾಗಿ ತೋಟಗಳ ವಸತಿಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು,. ಕಾಮಗಾರಿ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡಲ್ಲಿ ಬಹಳ ಅನುಕೂಲವಾಗಲಿದೆ. ಮುಂದಿನ 50 ವರ್ಷಗಳವರೆಗೂ ಬಾಳಿಕೆ ಬರುವಂತಹ ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಲಾಗುವುದು. ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳು ತ್ವರಿತಗತಿಯಲ್ಲಿ ಆಗುವಂತೆ ನಿಗಾ ವಹಿಸಲಾಗುವುದು.

ಕ್ಷೇತ್ರದ ಸಮಸ್ಯೆಗಳೇನು, ಪರಿಹಾರಕ್ಕೆ ಏನು ಮಾಡುತ್ತೀರಿ?

30 ಹಳ್ಳಿಗಳು ಬರಗಾಲಪೀಡಿತವಾಗಿವೆ. ಅಲ್ಲಿ, ನಾನು ಅಧ್ಯಕ್ಷನಾಗಿರುವ ಕೆಂಪವಾಡ ಸಕ್ಕರೆ ಕಾರ್ಖಾನೆಯಿಂದ ಕೆಲವೆಡೆ ಏತ ನೀರಾವರಿ ಯೋಜನೆಗಳನ್ನು ಮಾಡಿದ್ದೇನೆ. ಕೃಷ್ಣಾ ನದಿಯಿಂದ 25 ಕಿ.ಮೀ.ವರೆಗೆ ಪೈಪ್‌ ಅಳವಡಿಸಿ ನೀರು ತರಲಾಗುತ್ತಿದೆ. ಅಂದಾಜು 10ಸಾವಿರ ಎಕರೆಯಲ್ಲಿ ಹನಿ ನೀರಾವರಿ ಮೂಲಕ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಬಹಳಷ್ಟು ರೈತರಿಗೆ ಅನುಕೂಲವಾಗಿದೆ. ತೋಟಗಾರಿಕೆ ಹಾಗೂ ಕಬ್ಬು ಬೆಳೆಗೆ ಹನಿ ನೀರಾವರಿ ಸೂಕ್ತವಾಗಿದೆ. ಈ ಪದ್ಧತಿಯಲ್ಲಿ ಕಬ್ಬು ಬೇಸಾಯ ಮಾಡುವುದರಿಂದ ಶೇ 50ರಷ್ಟು ನೀರನ್ನು ಉಳಿಸಬಹುದಾಗಿದೆ. ಈ ಯೋಜನೆ ಮೂಲಕ ಕ್ಷೇತ್ರವು ಇಡೀ ರಾಜ್ಯದ ಗಮನಸೆಳೆಯುವಂತೆ ಮಾಡುವ ಗುರಿ ಇದೆ.

ಜ್ವಲಂತ ಸಮಸ್ಯೆಗಳೇನು?

ಕೃಷ್ಣಾ ನದಿ ದಂಡೆಯಲ್ಲಿರುವ ಜಮೀನುಗಳಲ್ಲಿ ಸವಳು–ಜವಳು ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಈ ಜಮೀನುಗಳು ಕೃಷಿಗೆ ಯೋಗ್ಯ ಇಲ್ಲದಂತಾಗಿವೆ. ಕ್ಷೇತ್ರದಲ್ಲಿ 20ಸಾವಿರ ಎಕರೆಗೂ ಹೆಚ್ಚಿನ ಪ್ರದೇಶ ಈ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅನುದಾನ ತಂದು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಈ ಬವಣೆ ನಿವಾರಿಸಲಾಗುವುದು. ಕೃಷಿಗೆ ಯೋಗ್ಯವಾಗುವಂತೆ ಮಾಡಲಾಗುವುದು.

ಹೊಸ ಆಲೋಚನೆಗಳೇನಿವೆ?

ಕ್ಷೇತ್ರದಲ್ಲಿ ಹಿಂದೆ, ಯಾವುದೇ ವಿಶೇಷ ಸಾಧನೆ ಆಗಿಲ್ಲ. ಸರ್ಕಾರದ ಅನುದಾನದಲ್ಲಿ ಕೈಗೊಂಡ ಕಾಮಗಾರಿ

ಗಳು ಗುಣಮಟ್ಟದಿಂದ ಕೂಡಿಲ್ಲ. ಇದರಿಂದಾಗಿ ಕೆಲವೇ ತಿಂಗಳುಗಳಲ್ಲಿ ಹಾಳಾಗಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ, ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವಾಗಿಸಬೇಕು ಎನ್ನುವ ಧ್ಯೇಯ ನನ್ನದು. ಪಾರದರ್ಶಕ ಆಡಳಿತ ನೀಡಬೇಕು ಎನ್ನುವ ಗುರಿ ಇದೆ. ಸಾಂಪ್ರದಾಯಿಕ ಕೃಷಿಯಿಂದಾಗಿ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತಿಲ್ಲ. ಇದಕ್ಕಾಗಿ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಕುರಿತು ಕಾಲಕಾಲಕ್ಕೆ ರೈತರಿಗೆ ತರಬೇತಿ ನೀಡಲಾಗುವುದು. ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯದಿಂದ ತಜ್ಞರನ್ನು ಕರೆಸಿ ಮಾರ್ಗದರ್ಶನ ಮಾಡಿಸಲಾಗುವುದು. ಇದಕ್ಕಾಗಿ ಸಭಾಂಗಣವೊಂದನ್ನು ನಿರ್ಮಿಸುವ ಆಲೋಚನೆ ಇದೆ.

ಯುವಜನರಿಗೆ ಹೇಗೆ ನೆರವಾಗುತ್ತೀರಿ?

ಯುವಜನರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು.  ಇದರಿಂದ, ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಮತ್ತು ರೈತರಿಗೆ ಅನುಕೂಲವಾಗುತ್ತದೆ. ದುಡಿಯುವ ಕೈಗಳಿಗೆ ಕೆಲಸ ಸಿಕ್ಕಂತಾಗುತ್ತದೆ. ನಮ್ಮದೇ ಸರ್ಕಾರ ಇರುವುದರಿಂದ ಅನುದಾನ ತರಲು ಕಷ್ಟವಾಗುವುದಿಲ್ಲ.

**

ಕ್ಷೇತ್ರದ 2 ಕಡೆ ಕಚೇರಿ ತೆರೆಯಲಾಗುವುದು. ನಿತ್ಯ 2 ಗಂಟೆಗಳನ್ನು ಜನರ ಕುಂದುಕೊರತೆ ಆಲಿಸಿ, ಪರಿಹರಿಸಲು ಮೀಸಲಿಡಲಾಗುವುದು. ಅಧಿಕಾರಿಗಳನ್ನೂ ಆಹ್ವಾನಿಸಲಾಗುವುದು

- ಶ್ರೀಮಂತ ಪಾಟೀಲ, ಶಾಸಕ, ಕಾಗವಾಡ ಕ್ಷೇತ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry