ಹರಪನಹಳ್ಳಿಗೆ ಮಾವಿನ ಲಗ್ಗೆ

7
ವೈವಿಧ್ಯಮಯ ತಳಿಯ ಹಣ್ಣುಗಳು l ಕಳೆದ ವರ್ಷಕ್ಕಿಂತ ದರವೂ ಕಡಿಮೆ

ಹರಪನಹಳ್ಳಿಗೆ ಮಾವಿನ ಲಗ್ಗೆ

Published:
Updated:
ಹರಪನಹಳ್ಳಿಗೆ ಮಾವಿನ ಲಗ್ಗೆ

ಹರಪನಹಳ್ಳಿ: ಪಟ್ಟಣದ ಪ್ರಮುಖ ರಸ್ತೆಗಳ ಬದಿ, ಹಣ್ಣಿನ ಅಂಗಡಿಗಳಲ್ಲಿ ಜೋಡಿಸಿಟ್ಟಿರುವ ವಿವಿಧ ಬಗೆಯ ಮಾವಿನ ಹಣ್ಣುಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ಹಣ್ಣುಗಳ ರಾಜನೆಂದೇ ಖ್ಯಾತಿ ಹೊಂದಿರುವ ಮಾವು ಹರಪನಹಳ್ಳಿ ಜನರ ಹಣ್ಣಿನ ಸುಗ್ಗಿ ತಣಿಸಲು ಲಗ್ಗೆ ಇಟ್ಟಿದೆ! ಪಟ್ಟಣದ ಮಾರುಕಟ್ಟೆಯಲ್ಲಿ ಸದ್ಯ ಬದಾಮಿ, ಕೇಸರ್, ಕಾಲಾಪಾಡ್, ಬೆನುಷಾ, ರಸಪುರಿ, ಮಲ್ಲಿಕಾ, ಸಕ್ಕರ್ ಬುಟ್ಲಿ, ಸಿಂಧೂರಿ, ತೋತಾಪುರಿ, ಮಲಗೋಬಾ ಸೇರಿದಂತೆ ಜವಾರಿ ಮಾವಿನ ಹಣ್ಣುಗಳು ಮಾರಾಟಕ್ಕೆ ಲಭ್ಯ ಇವೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಬೆಂಗಳೂರು, ಚಿಂತಾಮಣಿ, ಸಂತೇಬೆನ್ನೂರು ಮುಂತಾದ ಕಡೆಗಳಿಂದ ಹಣ್ಣುಗಳು ಮಾರಾಟಕ್ಕೆ ಬರುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾವಿನ ಹಣ್ಣುಗಳ ದರ ಈ ಬಾರಿ ಕಡಿಮೆಯಿದೆ.

ಮಾರುಕಟ್ಟೆಗೆ ಎಲ್ಲ ತಳಿಗಳ ಹಣ್ಣುಗಳು ಒಂದೇ ಬಾರಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ದರ ಕಡಿಮೆ ಆಗಿದೆ. ಸಿಂಧೂರ, ತೋತಾಪುರಿ ಕೆ.ಜಿಗೆ ₹ 30-40 ಇದ್ದರೇ ಸಕ್ಕರೆಬುಟ್ಲಿ ಹಣ್ಣು ₹ 100ರಿಂದ 120 ಗೆ ಮಾರಾಟ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಬದಾಮಿ (ಆಫೋಸ್) ಹಣ್ಣಿನ ಬೆಲೆ ₹ 50-60 ಇದೆ. ಉಳಿದಂತೆ ಎಲ್ಲ ಹಣ್ಣುಗಳ ಬೆಲೆ ಕಳೆದ ಬಾರಿಗಿಂತ ₹ 20-30 ಕಡಿಮೆ ಬೆಲೆಗೆ ಸಿಗುತ್ತಿವೆ.

ಪಟ್ಟಣದ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಲಭ್ಯವಿದೆ. ಆದರೂ ವ್ಯಾಪಾರದ ಭರಾಟೆ ಹೇಳಿಕೊಳ್ಳುವಷ್ಟು ಜೋರಾಗಿಲ್ಲ. ಏಪ್ರಿಲ್ ತಿಂಗಳ ಆರಂಭದಲ್ಲಿದ್ದ ಉತ್ಸಾಹದ ವಹಿವಾಟು ಮೇ ತಿಂಗಳು ಕಳೆದಂತೆ ಕ್ಷೀಣಿಸುತ್ತಾ ಸಾಗಿದೆ.

‘ಲಾಭಕ್ಕಿಂತ ನಷ್ಟವೇ ಹೆಚ್ಚು’

ರೈತರಿಗೆ ಈ ಬಾರಿ ಲಾಭಕ್ಕಿಂತ ನಷ್ಟವೇ ಹೆಚ್ಚು. ತಾಲ್ಲೂಕಿನ 280 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಸುಮಾರು 2500ರಿಂದ 3000 ಸಾವಿರ ಟನ್ ಮಾವು ಇಳುವರಿ ಗುರಿ ಹೊಂದಲಾಗಿತ್ತು. ಎರಡು ವಾರಗಳಿಂದ ಬೀಸಿದ ಗಾಳಿ-ಮಳೆಗೆ ಮಾವು ಉದುರಿ ರೈತರು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಶಶಿಕಲಾ.

**

ತಾಲ್ಲೂಕಿನಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿದ್ದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಮಾವಿನಹಣ್ಣು ವ್ಯಾಪಾರ ಜೋರಾಗಿತ್ತು. ನಂತರ ಕಡಿಮೆ ಆಗಿದೆ

- ಅಬ್ದುಲ್ ಜಾಕೀರ್, ಹಣ್ಣಿನ ವ್ಯಾಪಾರಿ‌

**


‘ಮಳೆ ಬಂದಾಗ ಹಣ್ಣು ತಿನ್ನಬೇಕು’ ಎಂಬ ನಾಣ್ನುಡಿ ತಾಲ್ಲೂಕಿನಲ್ಲಿ ಪ್ರಚಲಿತವಿದೆ. ಈ ಬಾರಿ ಬಿಸಿಲಿನ ಝಳ ಹೆಚ್ಚಿತ್ತು. ಮಳೆ ಬಿದ್ದಿರುವುದರಿಂದ ರೈತರು ಈಗ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಆರಂಭದಲ್ಲಿದ್ದ ವ್ಯಾಪಾರ ಈಗಿಲ್ಲ. ಮುಂದೆ ವ್ಯಾಪಾರ ಕುದುರಿಕೊಳ್ಳುವ ಆಶಾಭಾವವಿದೆ

- ಇಮ್ರಾನ್, ಹಣ್ಣಿನ ವ್ಯಾಪಾರಿ 

**

ಮಾವಿನ ಹಣ್ಣಿನ ಸೀಜನ್ ಬಂತು ಎಂದರೆ ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ. ಹೋಳಿಗೆ ಜೊತೆ ಮಾವಿನ ಹಣ್ಣಿನ ಸೀಕರಣೆ ಚೆನ್ನಾಗಿರುತ್ತೆ

ರಾಜು, ಹರಪನಹಳ್ಳಿ ನಾಗರಿಕ

**

–ಪ್ರಹ್ಲಾದ ಗೊಲ್ಲಗೌಡರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry