ಗಾಳಿ,ಮಳೆಗೆ ನಲುಗಿದ ಹುಬ್ಬಳ್ಳಿ

7
ಧಾರವಾಡ, ಕಲಘಟಗಿ, ಅಣ್ಣಿಗೇರಿಯಲ್ಲೂ ಉತ್ತಮ ಮಳೆ

ಗಾಳಿ,ಮಳೆಗೆ ನಲುಗಿದ ಹುಬ್ಬಳ್ಳಿ

Published:
Updated:
ಗಾಳಿ,ಮಳೆಗೆ ನಲುಗಿದ ಹುಬ್ಬಳ್ಳಿ

ಹುಬ್ಬಳ್ಳಿ: ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯು ನಗರದಲ್ಲಿ ಅವಾಂತರವನ್ನೇ ಸೃಷ್ಟಿಸಿತು. ಬಿರುಗಾಳಿಗೆ ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿ ಬಿದ್ದ ಪರಿಣಾಮ ಹತ್ತಾರು ಕಾರು, ಬೈಕು ಮತ್ತು ಮನೆಗಳು ಜಖಂಗೊಂಡಿವೆ.

1 ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದ ಜನ, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಒಂದರ ಹಿಂದೆ ಒಂದರಂತೆ ಬಂದೆರಗಿದ ಸಿಡಿಲಿನ ಹೊಡೆತಕ್ಕೆ ಜನ ಬೆಚ್ಚಿಬಿದ್ದರು.

ವಿದ್ಯಾನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಕಾಂಪೌಂಡ್‌ ಸಂಪೂರ್ಣವಾಗಿ ಉರುಳಿಬಿದ್ದಿದ್ದು, ಕಾಲೇಜಿನ ಆವರಣ ನೀರಿನಿಂದ ಆವೃತವಾಗಿತ್ತು.

ಗಿರಣಿ ಚಾಳದಲ್ಲಿ ಮೂರು ಮನೆಗಳ ಚಾವಣಿ ಹಾರಿಹೋಗಿದ್ದು, ಮನೆಯಲ್ಲಿ ನೀರು ತುಂಬಿದ ಪರಿಣಾಮ ನಿವಾಸಿಗಳು ಪರದಾಡಿದರು. ಮನೆಯೊಳಗೆ ತುಂಬಿದ್ದ ನೀರನ್ನು ಹೊರಹಾಕಲು ಪರದಾಡಿದರು.

ಚನ್ನಪೇಟೆಯ ವಿಠ್ಠಲ ಪೇಟೆ, ಹೊಸೂರು ಮಾರುತಿ ದೇವಸ್ಥಾನ ಬಳಿ, ಹೊಸೂರು ವಾಣಿ ಸರ್ಕಲ್‌ ಬಳಿ, ತೊರವಿ ಓಣಿಯ ಪೆಟ್ರೋಲ್‌ ಬಂಕ್‌ ಎದುರು, ನವ ಅಯೋಧ್ಯಾನಗರ ನಾಲ್ಕನೇ ಕ್ರಾಸ್‌, ಸದರಸೋಪಾದ ಕಟಗಾರ ಓಣಿ, ಹಳೇ ಹುಬ್ಬಳ್ಳಿಯ ಹಿರೇಪೇಟೆ, ಪಡದೇನಕಲ್‌ ಕೌದಿಮಠದ ಶಾಮಿಯಾನ ಅಂಗಡಿ ಸಮೀಪ, ಮೂರುಸಾವಿರ ಮಠದ ಸಮೀಪ ದತ್ತಾತ್ರೇಯ ಮಂದಿರ ಮತ್ತು ಸಂಗಮ ಹೋಟೆಲ್‌ ಸಮೀಪ, ಆರ್‌.ಎನ್‌.ಶೆಟ್ಟಿ, ಕಾಂಪೌಂಡ್‌ ಬಳಿ, ಸಿದ್ಧಾರೂಢ ನಗರ 2ನೇ ಕ್ರಾಸ್‌, ಗೋಕುಲ ರಸ್ತೆಯ ಕೆಇಸಿ ಲೇಔಟ್‌, ಗಾಂಧಿನಗರ, ಅಪೂರ್ವನಗರದ ಉದ್ಯಾನ ಬಳಿ, ರವಿನಗರ 2ನೇ ಕ್ರಾಸ್‌, ಲಿಂಗರಾಜ ನಗರದ ಶೆಟ್ಟರ್ ಲೇಔಟ್‌ ಸೇತುವೆ ಹತ್ತಿರ, ವಿದ್ಯಾನಗರದ ಓಲ್ಡ್‌ ಇನ್‌ಕಮ್‌ಟ್ಯಾಕ್ಸ್‌ ಆಫೀಸ್‌ ರಸ್ತೆ ಹಾಗೂ ಪಡದಯ್ಯನ ಹಕ್ಕಲದಲ್ಲಿರುವ ಸ್ಮಶಾನ ಹತ್ತಿರ ಮರಗಳು ಹತ್ತಾರು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು.

ವಿದ್ಯಾನಗರದ ಓಲ್ಡ್‌ ಇನ್‌ಕಮ್‌ ಟ್ಯಾಕ್ಸ್‌ ಆಫೀಸ್‌ ರಸ್ತೆ ಹಾಗೂ ಪಕ್ಕದ ರಸ್ತೆಯಲ್ಲಿ ಬೃಹದಾಕಾರದ ಎರಡು ಮರಗಳು ಉರುಳಿ ಬಿದ್ದು ಪರಿಣಾಮ ಮೂರು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಹೊಸೂರಿನಲ್ಲಿ ಮರ ಉರುಳಿ ಬಿದ್ದು, ಕಾರೊಂದು ಜಖಂಗೊಂಡಿದೆ. ವಿದ್ಯಾನಗರದ ವಿಘ್ನೇಶ್ವರ ಶಾಲಾ ಆವರಣದಲ್ಲಿ ನಡೆಯುತ್ತಿದ್ದ ಸಂತೆ ಪ್ರದೇಶಕ್ಕೆ ನುಗ್ಗಿದ ಮಳೆ ನೀರಲ್ಲಿ ಕಾಯಿಪಲ್ಲೆಗಳು ಕೊಚ್ಚಿ ಹೋಗಿ ವ್ಯಾಪಾರಿಗಳು ಪರದಾಡಿದರು.

ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಹತ್ತಿರ ಅಂಗಡಿ ಒಂದರ ಜಾಹೀರಾತು ಫಲಕ ಗಾಳಿಗೆ ಹಾರಿ, ರಸ್ತೆಯ ಮೇಲೆ ಬಿದ್ದ ಪರಿಣಾಮ ವಾಹನ ಸವಾರರಿಗೆ ಅಡಚಣೆಯಾಯಿತು.

ಬಿರುಗಾಳಿ–ಮಳೆಯಿಂದ ನಗರದ ವಿವಿಧ ಪ್ರದೇಶದಲ್ಲಿ ಅನಾಹುತವಾಗಿರುವ ಕುರಿತು 30ಕ್ಕೂ ಹೆಚ್ಚು ದೂರುಗಳು ಮಹಾನಗರ ಪಾಲಿಕೆಯ ಸಹಾಯವಾಣಿ ಕೇಂದ್ರಕ್ಕೆ ಬಂದಿವೆ ಎಂದು ಕೇಂದ್ರದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತಮ ಮಳೆ: ಧಾರವಾಡ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿಯಿಂದ ಭಾನುವಾರ ಸಂಜೆ ವರೆಗೆ ಉತ್ತಮ ಮಳೆಯಾಗಿದೆ.

ಧಾರವಾಡ, ಕಲಘಟಗಿ ಹಾಗೂ ಅಣ್ಣಿಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಸಂಜೆ ಬಾರಿ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚುಕಾಲ ಸುರಿದ ರಭಸದ ಮಳೆ ತಂಪನ್ನೆರೆಯಿತು. ಬೆಳಿಗ್ಗೆ 7ರವರೆಗೆ ಸಣ್ಣಗೆ ಮಳೆ ಸುರಿಯುತ್ತಲೇ ಇತ್ತು.

ಹೀಗಿದ್ದರೂ ಭಾನುವಾರ ಬೆಳಿಗ್ಗೆ ಬಿಸಿ ಝಳ ಹೆಚ್ಚಾಗಿತ್ತು. ಅಣ್ಣಿಗೇರಿ, ಕಲಘಟಗಿಯಲ್ಲಿ ಬಿರುಗಾಳಿ–ಮಳೆಯಿಂದ ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry