ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಸಂಪಾದನೆಗಾಗಿ ಶಿಕ್ಷಣ ಪಡೆಯಿರಿ

ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಸಲಹೆ
Last Updated 28 ಮೇ 2018, 7:11 IST
ಅಕ್ಷರ ಗಾತ್ರ

ಸೇಡಂ: ಶಿಕ್ಷಣ ವ್ಯಾಪಾರೀಕರಣ ವಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಗಾಗಿ ಶಿಕ್ಷಣ ಪಡೆಯಬೇಕೆ ಹೊರತು ಉದ್ಯೋಗಕ್ಕಾಗಿ ಶಿಕ್ಷಣ ಸೀಮಿತವಾಗಬಾರದು ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಸಲಹೆ ನೀಡಿದರು.

ಪಟ್ಟಣದ ನೀಲಗಂಗಮ್ಮ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ 2017- 18 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಯಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಪಡೆದ ಜ್ಞಾನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಉದ್ಯೋಗಕ್ಕಾಗಿ ಪಡೆದ ಶಿಕ್ಷಣದಿಂದ ಜೀವನದಲ್ಲಿ ವಿಫಲತೆ ಅನುಭವಿಸ ಬೇಕಾಗುತ್ತದೆ. ಉದ್ಯೋಗಕ್ಕಾಗಿ ಓದಿದವರು ಜೀವನ ದಲ್ಲಿ ಆತ್ಮವಿಶ್ವಾಸ ಕಳೆದುಕೊಂಡು ನಿರುತ್ಸಾಹಿ ಗಳಾಗುತ್ತಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾವು ಜ್ಞಾನ ಸಂಪಾದಿಸಿ, ದೇಶದ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಉತ್ತಮ ಅಂಕ ಪಡೆದು ಐಎಎಸ್ ಅಧಿಕಾರಿಗಳಾಗಿದ್ದಾರೆ. ಆದರೆ ಅವರಲ್ಲಿ ಸುಮಾರು ಶೇ 85ರಷ್ಟು ಭ್ರಷ್ಟರಿದ್ದಾರೆ. ನಿವೃತ್ತಿಯ ನಂತರ ಅವರ ಆಸ್ತಿ ಸಾವಿರಾರು ಕೋಟಿ ಆಗಿರುತ್ತದೆ. ಇಂತಹ ಭ್ರಷ್ಟ ಅಧಿಕಾರಿಗಳಾಗುವ ಬದಲು ಉತ್ತಮ ಭಾರತೀಯ ನಾಗರಿಕ ನಾಗುವುದು ಮೇಲು. ಪಾಲಕರು ತಮ್ಮ ಮಕ್ಕಳನ್ನು ದೇಶಕಟ್ಟುವ ನಾಗರಿಕರನ್ನಾಗಿ ಬೆಳೆಸಬೇಕೆ ಹೊರತು ಉದ್ಯೋಗಕ್ಕಾಗಿ ರಸ್ತೆಯ ಮೇಲೆ ಅಲೆದಾಡುವ ನಿರುದ್ಯೋಗಿಯನ್ನಾಗಿ ಮಾಡಬೇಡಿ’ ಎಂದು ಮನವಿ ಮಾಡಿದರು.

ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ ಮಾತನಾಡಿ, ‘ಪ್ರಸ್ತುತ ಸಮಾಜ ಕಲುಷಿತಗೊಂಡಿದ್ದು, ಮೋಸ, ದರೋಡೆ, ವಂಚನೆ, ಕೊಲೆ, ಅತ್ಯಾಚಾರ ದಂತಹ ಪ್ರಕರಣಗಳು ಸಾಮಾನ್ಯ ವಾಗಿವೆ. ಮತ್ತೊಂದೆಡೆ ಪರಿಸರ ಮಾಲಿನ್ಯದಿಂದ ಮಾನವನಿಗೆ ಭಯಾನಕ ರೋಗಗಳು ಹರಡುತ್ತಿವೆ. ವಿದ್ಯಾರ್ಥಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಬುದ್ಧಿವಂತರಾಗಿ ಬೆಳೆಯಬೇಕು’ ಎಂದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಆಡಳಿತಾ ಧಿಕಾರಿ ಶಿವಯ್ಯ ಮಠಪತಿ, ಕಾರ್ಯದರ್ಶಿ ಡಾ.ಉದಯಕುಮಾರ ಶಹಾ, ಎಸ್.ಎಸ್ ಹಿರೇಮಠ, ಭೀಮಾಶಂಕರ ಮಠಪತಿ, ಪಿ.ಭೀಮ ರೆಡ್ಡಿ, ಶಿವಾರೆಡ್ಡಿ ಹೂವಿನ ಬಾವಿ, ಮನೋಹರ ದೊಂತಾ, ಸದಾನಂದ ಬೂದಿ, ರಾಮಚಂದ್ರ ಜೋಶಿ ಇದ್ದರು. ಬಸವರಾಜ ಮಾಲಿಪಾಟೀಲ ಸ್ವಾಗತಿಸಿದರು.

**
ಪದವಿಯಲ್ಲಿ ಮೂರು ಬಾರಿ ಸಂಪ್ಲಿಮೆಂಟರಿ ಪರೀಕ್ಷೆ ಕಟ್ಟಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ. ಜೀವನದ ಸೋಲು, ಯಶಸ್ಸಿಗೆ ಕಾರಣವಾಗುತ್ತವೆ
–  ಬಸವರಾಜ ಪಾಟೀಲ, ಸೇಡಂ ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT