ಸೋರುವ ಬಸ್‌ಗಳು: ನಿಲ್ದಾಣದಲ್ಲಿ ಸುಖಭಂಗ!

7
ಪುತ್ತೂರು ಹೊಸ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಳೆಗಾಲಕ್ಕೆ ಮೊದಲೇ ದುರವಸ್ಥೆ

ಸೋರುವ ಬಸ್‌ಗಳು: ನಿಲ್ದಾಣದಲ್ಲಿ ಸುಖಭಂಗ!

Published:
Updated:
ಸೋರುವ ಬಸ್‌ಗಳು: ನಿಲ್ದಾಣದಲ್ಲಿ ಸುಖಭಂಗ!

ಪುತ್ತೂರು : ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದ ಬಹುತೇಕ ಬಸ್‌ಗಳು ಮಳೆ ಬಂದಾಗ ಸೋರುತ್ತಿದ್ದು,  ಮಳೆಯ ಸಂದರ್ಭದಲ್ಲಿ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದು ಬಿಡಿ, ಮಧ್ಯೆ ನಿಂತುಕೊಂಡು ಪ್ರಯಾಣಿಸಲು ಕೂಡ ಕಷ್ಟಕರ ಸ್ಥಿತಿಗೆ ತಲುಪಿದೆ. ಸುಖಕರ ಪ್ರಯಾಣ ಇಲ್ಲಿ ಬರೀ ಹೆಸರಿಗಷ್ಟೇ. ದುಸ್ತರ ಪ್ರಯಾಣ ಪ್ರಯಾಣಿಕರ ಪಾಲಿನದ್ದಾಗಿದೆ.

‘ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಸೇರಿದ ಗ್ರಾಮಾಂತರ ಸಂಚಾರದ ಹೆಚ್ಚಿನ ಬಸ್ಸುಗಳು `ಗುಜರಿ' ಬಸ್‌ಗಳಂತಿದ್ದು, ಅಂತಹ ಬಹುತೇಕ ಬಸ್‌ಗಳಲ್ಲಿ ಮಳೆಯ ನೀರು ಸೋರುತ್ತಿದೆ.  ಕಿಟಿಕಿ ಗಾಜುಗಳು ಒಡೆದು  ಮತ್ತು ರಬ್ಬರ್ ಬೀಡಿಂಗ್ ವ್ಯವಸ್ಥೆ ಕೆಟ್ಟಿರುವ ಕಾರಣ ನೀರು ಒಳಗೆ ಬೀಳುತ್ತಿದೆ. ಮಳೆ ಬಂತೆಂದರೆ  ಸೀಟು ಒದ್ದೆ, ಸೀಟಿನ ಕೆಳಗಡೆಯೂ ನೀರು ತುಂಬಿ ಕಾಲಿಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಸುಗಮ ಸಂಚಾರದ ದುರ್ಗಮ ವ್ಯವಸ್ಥೆ’ ಎಂದು ಪ್ರಯಾಣಿಕರು ದೂರುತ್ತಿದ್ದಾರೆ.

ಈಗಾಗಲೇ ಮಳೆ ಆರಂಭವಾಗಿದೆ. ಮಳೆಯ ಸಂದರ್ಭದಲ್ಲಿ ಬಸ್‌ಗಳು ಸೋರುತ್ತಿರುವುದು ಕೆಎಸ್‌ಆರ್‌ಟಿಸಿ  ಚಾಲಕ -ನಿರ್ವಾಹಕರ ಗಮನಕ್ಕೂ ಬಂದಿದೆ. ಪ್ರಯಾಣಿಕರು ಈ ಸಿಬ್ಬಂದಿಯನ್ನು ತರಾಟೆಗೆತ್ತಿಕೊಂಡಿರುವ ಘಟನೆಗಳೂ ನಡೆದಿವೆ. ಎಡಬಿಡದೆ ಮಳೆ ಸುರಿಯುವ ಮಳೆಗಾಲದ ದಿನ ಸಮೀಪಿಸುತ್ತಿದೆ .ಆದರೂ ಕೆಎಸ್‌ಆರ್‌ಟಿಸಿ  ಬಸ್ ಸೋರಿಕೆಯ ತಡೆಗೆ ಮುಂದಾಗಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಸೋರುವ ಬಸ್‌ಗಳ ಮಾಡಿಗೆ ಚಾವಣಿಗೆ ಟರ್ಪಾಲ್ ಅಳವಡಿಸುವ ಕೆಲಸ ಆಗಿಲ್ಲ. ಗಾಜು , ಕಿಟಿಕಿಗಳಿಗೆ ಹೊಸ ಗಾಜು, ಕಿಟಿಕಿ ಬಾಗಿಲಿನೀರು ಸೋರದಂತೆ ರಬ್ಬರ್ ಬೀಡಿಂಗ್ ವ್ಯವಸ್ಥೆ ಆಗಿಲ್ಲ ಎಂಬ ಆರೋಪಗಳು ಪ್ರಯಾಣಿರಿಂದ ಕೇಳಿ ಬರುತ್ತಿದೆ. ಈಗಾಗಲೇ ಮಳೆ ಆರಂಭಗೊಂಡಿದೆ. ಶಾಲಾ ಕಾಲೇಜುಗಳುಶುರುವಾಗಿವೆ. ಇನ್ನು ಯಾವಾಗ ಸಮಸ್ಯೆಯನ್ನು ಸರಿಪಡಿಸುವುದು ಎಂಬುವುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪ್ರಯಾಣಿಕರ ಪ್ರಶ್ನೆ.

ಅಪಾಯ: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಸ್ಗಳು ಪ್ರವೇಶ ಮಾಡುವ ಭಾಗದಲ್ಲಿ ಕೊಳಚೆ ನೀರು ಹರಿಯುವ ಚರಂಡಿಯ ಮೇಲೆ ಅಳವಡಿಸಲಾಗಿರುವ ಮೂರು ಗ್ರಿಲ್ಸ್ ಎದ್ದು ಹೋಗಿದ್ದು, ಅದನ್ನು ಗಮನಿಸದೆ ಈ ಭಾಗದಲ್ಲಿ ನಡೆದಾಡಿದರೆ ಕಾಲು ಮುರಿತಕ್ಕೊಳಗಾಗುವ ಅಪಾಯ ಎದುರಾಗಿದೆ. ಈ ಭಾಗದಲ್ಲಿಯೇ ಬಹುತೇಕ ಮಂದಿ ಬಸ್ ನಿಲ್ದಾಣ ಪ್ರವೇಶ ಮಾಡುವುದರಿಂದ ಹಾಗೂ ಹೊರ ಹೋಗುವುದರಿಂದ ಪ್ರಯಾಣಿಕರ ಪಾಲಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಆಗ್ರಹ : ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಬಸ್ ಸಂಚಾರ ವ್ಯವಸ್ಥೆಯಲ್ಲಿಯೂ ಬಹಳಷ್ಟು ಸುಧಾರಣೆಯಾಗಿದೆ. ಆದರೆ ಸೋರುತ್ತಿರುವ ಬಸ್‌ಗಳಿಗೆ ಆದಷ್ಟು ಶೀಘ್ರವಾಗಿ ಮಳೆಗಾಲಕ್ಕೆ ಮುನ್ನವೇ ಮೋಕ್ಷ ನೀಡುವ ಮೂಲಕ ಪ್ರಯಾಣಿಕರ ಹಿತ ಕಾಯಬೇಕು.

ಸೊಳ್ಳೆ ಕಾಟ ತಪ್ಪಿಸಲು ಕ್ರಮಕೈಗೊಳ್ಳಬೇಕು. ಪ್ರವೇಶ ಭಾಗದಲ್ಲಿರುವ ಚರಂಡಿಯ ಮೇಲೆ ಅಳವಡಿಸಲಾಗಿರುವ ಗ್ರಿಲ್ಸ್ಗಳು ಎದ್ದು ಹೋಗಿ ಅಪಾಯದ ಸ್ಥಿತಿಯಲ್ಲಿರು ವುದರಿಂದ ಅದನ್ನು ಸರಿಪಡಿಸುವ ವ್ಯವಸ್ಥೆ ಆಗಬೇಕು ಎಂಬುವುದು ಕೆಎಸ್‌ಆರ್‌ಟಿಸಿಯನ್ನು ಅವಲಂಬಿಸಿರುವ ಪ್ರಯಾಣಿಕರ ಆಗ್ರಹವಾಗಿದೆ.

ಪ್ರಯಾಣಿಕ ಪ್ರಭುಗೆ ಫ್ಯಾನ್‌ ಇಲ್ಲ

ಬಸ್‌ ನಿಲ್ದಾಣವೇನೋ ‘ಸುಸಜ್ಜಿತ’ವಾಗಿದೆ. ಆದರೆ  ಇದರೊಳಗೆ ಪ್ರಯಾಣಿಕರು ಕುಳಿತುಕೊಳ್ಳುವ ಜಾಗಗಳಲ್ಲೆಲ್ಲೂ ಗಾಳಿಗಾಗಿ ಫ್ಯಾನ್‌ ಅಳವಡಿಸಿಲ್ಲ ಎಂಬುದು ನಿತ್ಯ ಪ್ರಯಾಣಿಸುವ ಜನರ ಆಕ್ರೋಶ. ಬೇಸಿಗೆಯಲ್ಲಿ ಸಮಸ್ಯೆ, ರಾತ್ರಿ ಸೊಳ್ಳೆ ದಾಳಿಯಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಫ್ಯಾನ್‌ ರಕ್ಷಣೆಯೂ ಇಲ್ಲ ಎಂದು ದೂರಿದ್ದಾರೆ.

ಸೊಳ್ಳೆ ಕಾಟ

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಅತ್ಯಾಧುನಿಕ ತಂತ್ರಜ್ಞಾನದ ಬಸ್‌ನಿಲ್ದಾಣವೆಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಆದರೆ ಬಸ್ ನಿಲ್ದಾಣದಲ್ಲಿ ಬೆಂಗಳೂರು, ಮೈಸೂರು ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರು ಬಸ್‌ಗಾಗಿ ಕಾದು ಕುಳಿತು ಕೊಳ್ಳವ ಆಸನ ವ್ಯವಸ್ಥೆ ಇರುವ ಭಾಗದಲ್ಲಿ ಫ್ಯಾನ್‌ಗಳನ್ನು ಅಳವಡಿಸದ ಕಾರಣ ಈಗ ಸೊಳ್ಳೆಗಳ ಕಾಟ ಆರಂಭವಾಗಿದೆ. ಮಳೆ ಆರಂಭವಾದ ಬಳಿಕವಂತೂ ಸಂಜೆ ಮತ್ತು ರಾತ್ರಿ ವೇಳೆ ಇಲ್ಲಿ ಸೊಳ್ಳೆಗಳ ಕಾಟ ಅತಿಯಾಗಿದೆ.

ಶಶಿಧರ್ ರೈ ಕುತ್ಯಾಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry