ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಎಚ್‌ಡಿಕೆ ಮಹತ್ವದ ಸಭೆ

ಯಾವುದೇ ಸಮಸ್ಯೆ ಇಲ್ಲದೆ ಸಂಪುಟ ರಚನೆ: ಎಚ್‌ಡಿಕೆ ವಿಶ್ವಾಸ
Last Updated 28 ಮೇ 2018, 7:27 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಕಾರ್ಯವೈಖರಿ ಮತ್ತು ಆಶಯಗಳಿಗೆ ತೊಂದರೆಯಾಗದಂತೆ ಸಂಪುಟ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ಗುಲಾಂ ನಬಿ ಆಜಾದ್ ಮತ್ತು ರೇವಣ್ಣ ಅವರಡೊಡನೆ ಸೋಮವಾರ ಮುಂಜಾನೆ ನಡೆದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಸಂಪುಟ ರಚನೆ ವಿಚಾರದಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲಗಳು ಇಲ್ಲ. ಸಂಪುಟಕ್ಕೆ ಸೇರ್ಪಡೆಯಾಗುವವರ ಹೆಸರುಗಳನ್ನು ಸೋಮವಾರ ಸಂಜೆ ಅಥವಾ ಮಂಗಳವಾರ ಅಂತಿಮಗೊಳಿಸಲಾಗುವುದು. ಖಾತೆ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಸಮಸ್ಯೆಯಿಲ್ಲ. ಹಣಕಾಸು ಇಲಾಖೆ ಯಾರ ಕೈಲಿರಬೇಕು ಎಂಬುದರ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಕುಮಾರಸ್ವಾಮಿ ನುಡಿದರು.

ಹೆಸರುಗಳು ಅಂತಿಮಗೊಂಡ ಬಳಿಕ ರಾಹುಲ್ ಗಾಂಧಿ ಅವರ ಜೊತೆಗೆ ಚರ್ಚಿಸುತ್ತೇನೆ. ನಂತರವೇ ಸಂಪುಟದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಪಟ್ಟಿಯನ್ನು ಪ್ರಕಟಿಸಲಾಗುವುದು. ಮೈತ್ರಿ ಸರ್ಕಾರದ ಎರಡೂ ಪಾಲುದಾರ ಪಕ್ಷಗಳು ಔದಾರ್ಯ ತೋರುವ ಮೂಲಕ ಖಾತೆ ಹಂಚಿಕೊಳ್ಳಬೇಕಿದೆ. ರಾಜಕಾರಣದಲ್ಲಿ ಯಾರೂ ಶಾಶ್ವತ ವೈರಿಗಳಲ್ಲ. ಈ ಮಾತು ಎಲ್ಲರಿಗೂ ಅರ್ಥವಾಗಿದೆ. ಮೈತ್ರಿ ಸರ್ಕಾರ ಕುರಿತಂತೆ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್ ನಾಯಕರ ಬೆಂಬಲದ ಮುಲಾಜಿನಲ್ಲಿ ನಾನು ಸರ್ಕಾರ ರಚಿಸಿದ್ದೇನೆ’ ಎನ್ನುವುದು ನನ್ನ ಮಾತು. ಇದು ನಿಜವೂ ಹೌದು. ಈ ಮಾತು ಹೇಳಿದ ತಕ್ಷಣ ನಾನು ನಾಡಿನ ಜನರಿಗೆ ಅಗೌರವ ತೋರಿಸಿದಂತೆ ಆಗುವುದಿಲ್ಲ. ಕಾಂಗ್ರೆಸಿನ ಬೆಂಬಲದ ಮುಲಾಜು ನನಗಿದೆ. ಆದರೆ ಆ ಪಕ್ಷದ ಮುಲಾಜು ನನಗಿಲ್ಲ ಎಂದು ಹೇಳಿದರು.

‘ನಾನು ಒಂದು ಅರ್ಥದಲ್ಲಿ ಹೇಳಿದೆ. ನಮಗೆ ಆಗದವರು ಅದಕ್ಕೆ ಮತ್ತೊಂದು ಬಣ್ಣಕಟ್ಟಿ ಅಪಪ್ರಚಾರ ಮಾಡ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥವಾಗುತ್ತೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ಶಾಸಕ ಸಿದ್ದು ನ್ಯಾಮಗೌಡ ನಿಧನಕ್ಕೆ ಸಂತಾಪ

ಶಾಸಕ ಸಿದ್ದು ನ್ಯಾಮಗೌಡ ಅವರ ಸಾವು ರಾಜ್ಯಕ್ಕೆ ತುಂಬಲಾರದ ನಷ್ಟ. ಅವರು ರೈತಪರ ಇದ್ದ ವ್ಯಕ್ತಿ. ನೀರಾವರಿ ಕ್ಷೇತ್ರದಲ್ಲಿ ಅವರ ಸಾಧನೆ ದೊಡ್ಡದು. ಜನಸ್ನೇಹಿ ಶಾಸಕರಾಗಿಯೂ ಅವರು ಕೆಲಸ ಮಾಡಿದ್ದಾರೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕುಮಾರಸ್ವಾಮಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT