ಸಂತೆಯೊಳಗೊಂದು.. ಮಕ್ಕಳ ಸಂತೆ

7

ಸಂತೆಯೊಳಗೊಂದು.. ಮಕ್ಕಳ ಸಂತೆ

Published:
Updated:
ಸಂತೆಯೊಳಗೊಂದು.. ಮಕ್ಕಳ ಸಂತೆ

ಬೇಸಿಗೆಯ ರಜಾ ದಿನಗಳಲ್ಲಿ ಶಾಲಾ ಮಕ್ಕಳು ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಹೆತ್ತವರು ಕೂಡ ಮಕ್ಕಳ ಆಸೆಯನ್ನು ಮನ್ನಿಸಿ ಪ್ರೇಕ್ಷಣೀಯ ತಾಣಗಳಿಗೆ ಕರೆದುಕೊಂಡು ಹೋಗಿ ಅವರನ್ನು ಖುಷಿಪಡಿಸುತ್ತಾರೆ. ಇನ್ನೂ ಕೆಲವು ಮಕ್ಕಳು ಊರಿನ ಸಂಘ ಸಂಸ್ಥೆಗಳು ಆಯೋಜನೆ ಮಾಡಿರುವ ಬೇಸಿಗೆ ಶಿಬಿರಗಳಲ್ಲಿ ಭಾಗಿಯಾಗುತ್ತಾರೆ. ಅಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ಸಾಹಿತ್ಯ, ನಟನೆ ಮುಂತಾದ ಕಲಾಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಕಲಿತು ರಜಾದಿನಗಳನ್ನು ಅಮೂಲ್ಯವಾಗಿಸಿಕೊಳ್ಳುತ್ತಾರೆ. ಮುಂದೆ ಇವೆಲ್ಲವೂ ಮಕ್ಕಳ ವ್ಯಕ್ತಿತ್ವ ಹಾಗೂ ಬೌದ್ಧಿಕಜ್ಞಾನ ವಿಕಸನಗೊಳ್ಳಲು ಸಹಕಾರಿಯಾಗುತ್ತವೆ.

ಉಡುಪಿ ಜಿಲ್ಲೆಯ ಉತ್ತರದ ಶಿರಭಾಗದ ಊರು ಶಿರೂರು. ಇಲ್ಲಿಯ ‘ಜೇಸಿಐ ಶಿರೂರು’ ಸಂಘಟನೆಯು ಸಮಾಜಮುಖಿಯಾಗಿ ವಿನೂತನ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಮಾಡುತ್ತಲೇ ಬಂದಿದೆ. ಅದರಂತೆ ಈ ಸಲದ ಬೇಸಿಗೆ ಶಿಬಿರವನ್ನು ಶಾಲಾ ಮಕ್ಕಳಿಗಾಗಿ ‘ಸಂತೆಯೊಳಗೊಂದು..ಮಕ್ಕಳ ಸಂತೆ’ ಎನ್ನುವ ಘೋಷವಾಕ್ಯದ ಅಡಿಯಲ್ಲಿ ವಿನೂತನ ಪರಿಕಲ್ಪನೆಯೊಂದಿಗೆ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು.

ಶಿರೂರಿನಲ್ಲಿ ವಾರದ ಸಂತೆ ಗುರುವಾರದಂದು ಗ್ರಾಮದ ಹೃದಯಭಾಗದ ಮಾರ್ಕೆಟ್ ಬಳಿ ನಡೆಯುತ್ತದೆ. ಬಯಲುಸೀಮೆ, ಮಲೆನಾಡು ಭಾಗದ ವೃತ್ತಿ ವ್ಯಾಪರಸ್ಥರು ಇಲ್ಲಿಗೆ ವ್ಯಾಪಾರಕ್ಕೆ ಹೆಚ್ಚಾಗಿ ಬರುತ್ತಾರೆ. ಅನುಭವಿ ವ್ಯಾಪಾರಸ್ಥರ ನುಡುವೆ ಒಂದನೇ ತರಗತಿಯಿಂದ ಹಿಡಿದು ಹತ್ತನೇ ತರಗತಿಯಲ್ಲಿ ಓದುತ್ತಿರುವ 40 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು. ಎಲ್ಲ ಪುಟಾಣಿಗಳೂ ಕೂಡ ಸಂತೆ ನಡೆಯುವ ಜಾಗದ  ಆಯಕಟ್ಟಿನ ಸ್ಥಳವನ್ನು ಗುರುತಿಸಿ, ಅಲ್ಲಿ ವ್ಯಾಪಾರ ಮಾಡಲು 35 ಅಂಗಡಿಗಳನ್ನು ತೆರೆದಿದ್ದರು. ತಮ್ಮ ಮನೆಯಲ್ಲಿ ಬೆಳೆಯುವ ಸೊಪ್ಪು- ತರಕಾರಿ, ಹಣ್ಣು ಹಂಪಲು, ತೆಂಗಿನಕಾಯಿಗಳನ್ನು ತಂದು ಮಾರಾಟ ಮಾಡಿದರು. ಮೀನುಗಾರರ ಮಕ್ಕಳು ಒಣ ಮತ್ತು ಹಸಿ ಮೀನುಗಳನ್ನು ತಂದು ಮಾರಾಟ ಮಾಡಿದರು. ನಗು ಮೊಗದಿಂದ ಗ್ರಾಹಕರನ್ನು ಆಹ್ವಾನಿಸುತ್ತಾ, ತಮ್ಮ ಮಾತಿನ ಮೋಡಿಯಿಂದ ವ್ಯಾಪಾರ ಕುದುರಿಸಿದರು. ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭಿಸಿದ 'ಸಂತೆಯೊಳಗೊಂದು.. ಮಕ್ಕಳ ಸಂತೆ’ಯಲ್ಲಿ ಮಾರಾಟಕ್ಕಿಟ್ಟ ಎಲ್ಲಾ ಸಾಮಾನುಗಳು ಬಿಕರಿ ಮಾಡಿದರು.  ಎಲ್ಲಾ ಮಕ್ಕಳು ಸೇರಿ ಒಟ್ಟು ₹20 ಸಾವಿರ ವ್ಯಾಪಾರ ನಡೆಸಿದರು. ಸಂತೆ ಮುಗಿಸಿದ ನಂತರ ಎಲ್ಲಾ  ಮಕ್ಕಳು ಹೊಸ ಅನುಭವದಲ್ಲಿಯೇ ಗೆಲುವಿನ ನಗು ಅರಳಿಸಿದರು. ಅಧಿಕ ವ್ಯಾಪಾರ ಮಾಡಿದ ವಿದ್ಯಾರ್ಥಿಯನ್ನು ಗುರುತಿಸಿ, ಜೇಸಿಐ ಬಹುಮಾನ ನೀಡಿತು.

‘ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯಪುಸ್ತಕದ ಚೌಕಟ್ಟಿನ ಒಳಗೆ ಪೂರಕವಾದ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಲ್ಲಿ ಹೊರಪ್ರಪಂಚದ ಅರಿವು, ವ್ಯಾವಹಾರಿಕ ಜ್ಞಾನ, ಗ್ರಾಹಕರನ್ನು ಸೆಳೆಯುವ ರೀತಿ, ಲೆಕ್ಕಾಚಾರ, ನ್ಯಾಯಸಮ್ಮತ ವ್ಯಾಪಾರ, ಜನಸಂಪರ್ಕ ಇವೆಲ್ಲವು ಅಗತ್ಯವಾಗಿ ಬೇಕಾಗುತ್ತದೆ. ಆ ಉದ್ದೇಶದಿಂದ ‘ಸಂತೆಯೊಳಗೊಂದು ಮಕ್ಕಳ ಸಂತೆ’ ಸಂಯೋಜಿಸಿದ್ದೆವು’ ಎನ್ನುತ್ತಾರೆ ವೃತ್ತಿಯಲ್ಲಿ ಶಿಕ್ಷಕರಾಗಿರುವ ಪ್ರಸ್ತುತ ಶಿರೂರು ಜೇಸಿಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ.

ಅಂದಹಾಗೆ, ಪಾಂಡುರಂಗ ಅಳ್ವೆಗದ್ದೆ ಹಾಗೂ ಜೇಸಿಐ ಪದಾಧಿಕಾರಿಗಳು ಮಕ್ಕಳು ಸಂತೆಯಲ್ಲಿ ವ್ಯಾಪಾರಕ್ಕೆ ಕೂರುವ ಮುನ್ನ ಅವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವ್ಯವಹಾರ ಜ್ಞಾನದ ಬಗ್ಗೆ ಮಾಹಿತಿ ಒದಗಿಸಿದ್ದರು. ಇದರಿಂದಾಗಿ ಮಕ್ಕಳು ಸಂತೆಯಲ್ಲಿ ಆತ್ಮವಿಶ್ವಾಸದಿಂದ ವ್ಯಾಪಾರ ನಡೆಸಲು ಸಾಧ್ಯವಾಯಿತು. ಜೇಸಿಐ ಸಂಕಲ್ಪಿಸಿದ ವಿನೂತನ ಪರಿಕಲ್ಪನೆ ಕೊನೆಗೂ ಯಶಸ್ವಿಯಾಗಿ ಇತರ ಸಂಘ ಸಂಸ್ಥೆಗಳ ಗಮನಕ್ಕೂ ಬಂದು ಅನುಕರಣೆಗಳಿಗೂ ಸಾಕ್ಷಿಯಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry