ಕಾಂಕ್ರೀಟ್‌ ರಸ್ತೆ; ರಾಷ್ಟ್ರಪತಿಗೆ ಪತ್ರ

6
ಕುಂದನಹಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಶಿವಣ್ಣ ಶ್ರಮಕ್ಕೆ ಸಂದ ಪ್ರತಿಫಲ

ಕಾಂಕ್ರೀಟ್‌ ರಸ್ತೆ; ರಾಷ್ಟ್ರಪತಿಗೆ ಪತ್ರ

Published:
Updated:
ಕಾಂಕ್ರೀಟ್‌ ರಸ್ತೆ; ರಾಷ್ಟ್ರಪತಿಗೆ ಪತ್ರ

ಪಿರಿಯಾಪಟ್ಟಣ: ತಮ್ಮ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಿಕೊಡಲು ಛಲಬಿಡದ ತ್ರಿವಿಕ್ರಮನಂತೆ ಅಧಿಕಾರಿಗಳ ಬೆನ್ನು ಹತ್ತಿ ಅಂತಿಮವಾಗಿ ₹ 22 ಲಕ್ಷ ವೆಚ್ಚದ ರಸ್ತೆ ನಿರ್ಮಿಸುವಲ್ಲಿ ಯಶಸ್ವಿಯಾದ ಸಾಮಾಜಿಕ ಕಾರ್ಯಕರ್ತ, ಕುಂದನಹಳ್ಳಿ ಗ್ರಾಮದ ಶಿವಣ್ಣ ಇತರರಿಗೆ ಮಾದರಿಯಾಗಿದ್ದಾರೆ.

ಬಿ.ಎಂ.ರಸ್ತೆಗೆ ಹೊಂದಿಕೊಂಡಂ ತಿರುವ ಕುಂದನಹಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಅಂಗನವಾಡಿ ಕೇಂದ್ರದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಅದನ್ನು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಶಿವಣ್ಣ ಹಲವು ಬಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ರೋಸಿ ಹೋದ ಶಿವಣ್ಣ ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ದೂರು ನೀಡಿದರು. ಅಲ್ಲಿಯೂ  6 ತಿಂಗಳು ಕಾದರೂ ರಸ್ತೆ ದುರಸ್ತಿ ಬಗ್ಗೆ ಗಮನಹರಿಸದಿದ್ದಾಗ ಸರ್ಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ, ಲೋಕೋಪಯೋಗಿ ಸಚಿವ, ಮುಖ್ಯಮಂತ್ರಿ, ರಾಜ್ಯಪಾಲ, ಪ್ರಧಾನಮಂತ್ರಿ, ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು.

ಅವರ ಮನವಿಗೆ ಸ್ಪಂದಿಸಿದ ರಾಷ್ಟ್ರಪತಿಗಳ ಕಾರ್ಯಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಸ್ತೆ ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಿತು. ರಾಷ್ಟ್ರಪತಿಗಳ ಕಾರ್ಯಾಲಯದ ಪತ್ರ ನೋಡಿ ದಿಢೀರ್‌ ಎಚ್ಚೆತ್ತ ಹಿರಿಯ ಅಧಿಕಾರಿಗಳು ₹ 22 ಲಕ್ಷ ವೆಚ್ಚದಲ್ಲಿ 360 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ 280 ಮೀಟರ್ ಕಾಂಕ್ರೀಟ್ ಚರಂಡಿ ನಿರ್ಮಿಸುವಂತೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಬಗ್ಗೆ ಅಂದಾಜು ಪಟ್ಟಿ ತಯಾರಿಸಿ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದ ಅವರು ಕೇವಲ 3 ತಿಂಗಳಿನಲ್ಲಿ ಗುಣಮಟ್ಟದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಿದ್ದಾರೆ.

ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದ ವೇಳೆ ಚುನಾವಣೆ ಘೋಷಣೆಯಾಗಿದ್ದರಿಂದ ಗುತ್ತಿಗೆ ದಾರರು ಹಾಗೂ ಅಧಿಕಾರಿಗಳು ನೀತಿ ಸಂಹಿತೆ ನೆಪವೊಡ್ಡಿ ಕಾಮಗಾರಿ ಯನ್ನು ಅರ್ಧಕ್ಕೆ ನಿಲ್ಲಿಸಿದರು. ಕೂಡಲೇ ಜಾಗೃತರಾದ ಶಿವಣ್ಣ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಆಯೋಗ ನೀತಿಸಂಹಿತೆ ಜಾರಿಗೂ ಮೊದಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ ಗೊಂಡಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸದೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿತ್ತು.

**

ರಸ್ತೆಯ ಗುಣಮಟ್ಟವನ್ನು ಗಮನಿಸಿದರೆ ಕನಿಷ್ಠ 20 ವರ್ಷವಾದರೂ ಬಾಳಿಕೆ ಬರುವಂತಿದೆ. ಕೊನೆಗೂ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ

ಶಿವಣ್ಣ, ಸಾಮಾಜಿಕ ಕಾರ್ಯಕರ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry