ಮತ್ತೊಮ್ಮೆ ಚುನಾವಣೆ; ಮಗದೊಮ್ಮೆ ಪೈಪೋಟಿ

7
ದಕ್ಷಿಣ ಶಿಕ್ಷಕರ ಕ್ಷೇತ್ರ–ನಾಲ್ಕು ಜಿಲ್ಲೆಗಳಿಂದ 20,678 ಮತದಾರರು

ಮತ್ತೊಮ್ಮೆ ಚುನಾವಣೆ; ಮಗದೊಮ್ಮೆ ಪೈಪೋಟಿ

Published:
Updated:
ಮತ್ತೊಮ್ಮೆ ಚುನಾವಣೆ; ಮಗದೊಮ್ಮೆ ಪೈಪೋಟಿ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, 20,678 ಮತದಾರರು 9 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಈ ಬಾರಿ 1,013 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನ ಮರಿತಿಬ್ಬೇಗೌಡ, ಕಾಂಗ್ರೆಸ್‌ನ ಎಂ.ಲಕ್ಷ್ಮಣ್‌, ಬಿಜೆಪಿಯ ಬಿ.ನಿರಂಜನಮೂರ್ತಿ ನಡುವೆ ತ್ರಿಕೋನ ಪೈಪೋಟಿ ಏರ್ಪಟ್ಟಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. 28 ವಿಧಾನಸಭಾ ಕ್ಷೇತ್ರಗಳು, ನಾಲ್ಕು ಲೋಕಸಭಾ ಕ್ಷೇತ್ರಗಳು, 26 ತಾಲ್ಲೂಕುಗಳು ಹಾಗೂ 2,365 ಶಿಕ್ಷಣ ಸಂಸ್ಥೆಗಳನ್ನು ಈ ಕ್ಷೇತ್ರ ಒಳಗೊಂಡಿದೆ.‌

ಅಭ್ಯರ್ಥಿಗಳು ಈಗಾಗಲೇ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಸೋಮವಾರ ಶಾಲೆಗಳು ಪುನರಾರಂಭವಾಗುತ್ತಿದ್ದು, ಅಲ್ಲಿಗೂ ತೆರಳಿ ಶಿಕ್ಷಕರಲ್ಲಿ ಮತಯಾಚಿಸಲು ಎದುರು ನೋಡುತ್ತಿದ್ದಾರೆ. ‌ಪದವಿ ಕಾಲೇಜುಗಳಿಗೆ ರಜೆ ಇದ್ದರೂ ಮೌಲ್ಯಮಾಪನ ಸ್ಥಳಕ್ಕೇ ಹೋಗಿ ಮತಯಾಚಿಸುತ್ತಿದ್ದಾರೆ.

ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವ ಸರ್ಕಾರಿ, ಅನುದಾನ, ಅನುದಾನರಹಿತ ಪ್ರೌಢಶಾಲಾ, ಕಾಲೇಜು ಶಿಕ್ಷಕರು ಮತದಾನ ಮಾಡಬಹುದು. ಮೈಸೂರು ಹಾಗೂ ಮಂಡ್ಯದಲ್ಲಿ ಹೆಚ್ಚು ಮತದಾರರು ಇದ್ದಾರೆ. ಚಾಮರಾಜನಗರ ಕಡಿಮೆ ಮತದಾರರನ್ನು ಹೊಂದಿರುವ ಜಿಲ್ಲೆ.

ಜಾತಿ ಲೆಕ್ಕಾಚಾರ: ಜೆಡಿಎಸ್‌, ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದರೆ, ಬಿಜೆಪಿಯು ವೀರಶೈವ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಶಿಕ್ಷಕರ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಚಾರ ಫಲ ನೀಡುವುದಿಲ್ಲ ಎಂಬುದು ಕೆಲವರ ಲೆಕ್ಕಾಚಾರ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ 18 ವರ್ಷ ತುಂಬಿದ ಎಲ್ಲಾ ಜಾತಿ, ಧರ್ಮಗಳ ಮತದಾರರು ಮತ ಚಲಾಯಿಸುತ್ತಾರೆ. ಆಗ ಜಾತಿ ಲೆಕ್ಕಾಚಾರಗಳು ಮೇಲುಗೈ ಪಡೆಯುತ್ತವೆ. ಆದರೆ, ಶಿಕ್ಷಕರ ಕ್ಷೇತ್ರ ವ್ಯಾಪ್ತಿ ವಿಸ್ತಾರವಾಗಿದೆ. ಪ್ರಜ್ಞಾವಂತ ಮತದಾರರೇ ಇರುವ ಕಾರಣ ಜಾತಿ ಲೆಕ್ಕಾಚಾರಗಳು ಫಲ ನೀಡುವುದಿಲ್ಲ ಎಂಬುದು ಕೆಲವರ ವಾದ.

ಜೆಡಿಎಸ್‌ ಭದ್ರಕೋಟೆ: ಈ ಕ್ಷೇತ್ರ ಸತತ 18 ವರ್ಷಗಳಿಂದ ಜೆಡಿಎಸ್‌ನ ಭದ್ರಕೋಟೆಯಾಗಿದೆ. ವಿಧಾನ ಪರಿಷತ್‌ನ ಉಪಸಭಾಪತಿಯೂ ಆಗಿರುವ ಮರಿತಿಬ್ಬೇಗೌಡ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರು ಸತತ ನಾಲ್ಕನೇ ಬಾರಿ ಪುನರಾಯ್ಕೆ ಬಯಸಿದ್ದಾರೆ.

2000ರಲ್ಲಿ ಮೊದಲ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ವಿಧಾನ ಪರಿಷತ್‌ ಪ್ರವೇಶಿಸಿದ್ದರು. 2006ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುನರಾಯ್ಕೆಯಾಗಿದ್ದರು. 2012ರಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರು.

‘ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಭೆ ನಡೆಸಿದ್ದೇನೆ. ಮತದಾನಕ್ಕೆ ಕೇವಲ 10 ದಿನ ಬಾಕಿಯಿದ್ದು, ಪಕ್ಷದ ಶಾಸಕರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಪಕ್ಷದವರೇ ಮುಖ್ಯಮಂತ್ರಿ ಆಗಿರುವುದರಿಂದ ಮತ್ತಷ್ಟು ವಿಶ್ವಾಸದಿಂದ ಮತಯಾಚಿಸಲು ಧೈರ್ಯ ಬಂದಿದೆ’ ಎಂದು ಮರಿತಿಬ್ಬೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ನ ಭದ್ರಕೋಟೆಯನ್ನು ಭೇದಿಸಲು ಈ ಬಾರಿ ಕಾಂಗ್ರೆಸ್‌ ಪಣತೊಟ್ಟಂತಿದೆ. ಎಸಿಐಸಿಎಂನ ಸಂಚಾಲಕ ಎಂ.ಲಕ್ಷ್ಮಣ್ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಹಿಂದೆ 2010ರಲ್ಲಿ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. 2012ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿಕ್ಷಕರ ಕ್ಷೇತ್ರದಿಂದ ಕೇವಲ 700 ಮತಗಳಿಂದ ಪರಾಭವಗೊಂಡಿದ್ದರು.

‘18 ವರ್ಷಗಳಿಂದ ಒಬ್ಬ ಅಭ್ಯರ್ಥಿಯನ್ನೇ ಗೆಲ್ಲಿಸಿದ್ದಾರೆ. ಹೀಗಾಗಿ, ಈ ಬಾರಿ ನನಗೊಂದು ಅವಕಾಶ ನೀಡಿ. ಸೋತಾಗಲೂ ಶಿಕ್ಷಕರ ಹಿತಕ್ಕಾಗಿ ಹೋರಾಟ ನಡೆಸಿದ್ದೇನೆ. ಗೆದ್ದರೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ’ ಎಂದು ಹೇಳುತ್ತಾ ಲಕ್ಷ್ಮಣ್‌ ಪ್ರಚಾರದಲ್ಲಿ ತೊಡಗಿದ್ದಾರೆ.‌

ನಿರಂಜನಮೂರ್ತಿ ಇದೇ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು, ಇಂಗ್ಲಿಷ್ ಉಪನ್ಯಾಸಕರು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಿನ ಗೊಂದಲವನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸದಲ್ಲಿ ಅವರಿದ್ದಾರೆ.

‘ಈ ಬಾರಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಆಡಳಿತಾತ್ಮಕವಾಗಿ, ಶಿಕ್ಷಕನಾಗಿ ಶಿಕ್ಷಕರ ಸಮಸ್ಯೆಗಳ ಅರಿವು ನನಗಿದೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ನನಗೆ ಗೆಲುವು ಒಲಿಯಲಿದೆ’ ಎಂದು ನಿರಂಜನಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry