ಪಾಲಿಕೆ ಶೌಚಾಲಯದಲ್ಲೇ ದುರ್ನಾತ

4
ಉದ್ಘಾಟನೆಗಾಗಿ ಕಾದಿರುವ ಶೌಚಾಲಯಗಳು

ಪಾಲಿಕೆ ಶೌಚಾಲಯದಲ್ಲೇ ದುರ್ನಾತ

Published:
Updated:
ಪಾಲಿಕೆ ಶೌಚಾಲಯದಲ್ಲೇ ದುರ್ನಾತ

ಶಿವಮೊಗ್ಗ: ಬೆಳಕು ನೀಡುವ ಹಣತೆಯ ಬುಡದಲ್ಲೇ ಕತ್ತಲು ಎಂಬ ಮಾತಿಗೆ ಪೂರಕವಾಗಿದೆ ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಯವೈಖರಿ.

ಮಹಾನಗರ ಪಾಲಿಕೆ ಸ್ವಚ್ಛತೆಗೆ ಹೆಚ್ಚಿನ ಮನ್ನಣೆ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ತನ್ನ ಆಡಳಿತ ಕಚೇರಿ ಇರುವ, ಅದರಲ್ಲೂ ಪಾಲಿಕೆ ಆಯುಕ್ತರ ಕಚೇರಿ ಪಕ್ಕದಲ್ಲೇ ನಿರ್ಮಿಸಿರುವ ಹೈಟೆಕ್‌ ಶೌಚಾಲಯದ ಅವ್ಯವಸ್ಥೆಯನ್ನು ಕಂಡಾಗ ಪಾಲಿಕೆ ಇಲ್ಲಿ ಸ್ವಚ್ಛತೆಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡುತ್ತಿದೆ ಎನ್ನುವುದು ತಿಳಿಯುತ್ತದೆ.

ಇಲ್ಲಿರುವ ಶೌಚಾಲಯ ಗಬ್ಬೆದ್ದು ನಾರುತ್ತಿದೆ, ನೀರು ಸೋರುತ್ತಿದೆ. ಶೌಚಾಲಯ ವಿಷಯದಲ್ಲಿ ಊರಿಗೆಲ್ಲಾ ಪಾಠ ಮಾಡುತ್ತಾ ತನ್ನ ಆವರಣದ ಸ್ವಚ್ಛತೆಯನ್ನೇ ಪಾಲಿಕೆ ಮೆರೆತಿದೆ. ಸ್ವಚ್ಛ ಭಾರತ್‌ ಅಭಿಯಾನಕ್ಕೆ ಜೈ ಎಂದ, ಸ್ಮಾರ್ಟ್‌ ಸಿಟಿ ಆಗುವ ಅವಕಾಶ ಪಡೆದ ಶಿವಮೊಗ್ಗದ ಮಹಾನಗರ ಪಾಲಿಕೆ ಪ್ರಧಾನ ಕಚೇರಿಯಲ್ಲಿನ ಶೌಚಾಲಯದ ಸ್ಥಿತಿ ಕಂಡು ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಾಲಿಕೆ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ನಿರ್ಮಾಣಗೊಂಡಿರುವ ಶೌಚಾಲಯ ಸಂಪೂರ್ಣವಾಗಿ ಹೈಟೆಕ್ ಆಗಿದೆ. ಪುರುಷರು ಮೂತ್ರ ವಿಸರ್ಜಿಸಲು 3 ಯುರಿನರಿ ಸ್ಟ್ಯಾಂಡ್, ಒಂದು ಕಮೋಡ್, ಒಂದು ಸಾಮಾನ್ಯ ಟಾಯ್ಲೆಟ್ ಇವೆ. ಅದೇ ರೀತಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಇಲ್ಲಿಗೆ ಬರುವ ಸಾರ್ವಜನಿಕರು ಮೂಗು ಬಿಗಿಹಿಡಿದು ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ.

ಈ ಶೌಚಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಗುಟ್ಕಾ ಎಂಜಲು ಉಗುಳಿರುವುದು ಹೇಸಿಗೆ ತರಿಸುವಂತಿದೆ. ಇರುವ ಶೌಚಾಲಯಗಳಲ್ಲಿ ಬಾಗಿಲು ಭದ್ರಪಡಿಸಿಕೊಳ್ಳುವುದಕ್ಕೂ ವ್ಯವಸ್ಥೆ ಇಲ್ಲದ ಸ್ಥಿತಿ.

ಶೌಚಾಲಯಕ್ಕೆ ಬೀಗ: ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಹಲವೆಡೆ ಭಾರಿ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವರ್ಷಗಳೇ ಕಳೆದರೂ ಅವುಗಳಿಗೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಈ ಶೌಚಾಲಯಗಳು ಸಾರ್ವಜನಿಕ ಬಳಕೆಗೆ ಸಿಗದ ಕಾರಣ ಅನೇಕರು ಅನಿವಾರ್ಯವಾಗಿ ಬಯಲು ಶೌಚಕ್ಕೆ ಮುಂದಾಗುತ್ತಿದ್ದಾರೆ. ಇದರಿಂದ ವಾತಾವರಣ ಹದಗೆಡುತ್ತಿದೆ.

ನಗರದ ಮ್ಯಾಕ್ಸ್‌ ಆಸ್ಪತ್ರೆಯ ಮುಂಭಾಗ ಅಭಿವೃದ್ಧಿಪಡಿಸಿರುವ ಕನ್ಸರ್‌ವೆನ್ಸಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಈ ಶೌಚಾಲಯ ನಿರ್ಮಾಣಗೊಂಡು 2 ವರ್ಷಗಳೇ ಕಳೆದಿವೆ. ಆದರೆ ಈ ಶೌಚಾಲಯ ಇಂದಿಗೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಆಸ್ಪತ್ರೆಗೆ ಬರುವವರು, ಸಾರ್ವಜನಿಕರು, ಆಟೊ ಚಾಲಕರು ಹಾಗೂ ಸುತ್ತಮುತ್ತಲಿನ ಜನರು ಅನಿವಾರ್ಯವಾಗಿ ಬಯಲು ಶೌಚಾಲಯಕ್ಕೆ ತೆರಳುತ್ತಿದ್ದಾರೆ. ಶೀಘ್ರವೇ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇರುವ ಸಮಸ್ಯೆಗಳನ್ನು ಬಗೆಹರಿಸಿ, ಶೌಚಾಲಯಗಳ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

**

ಕೆಲವು ಶೌಚಾಲಯಗಳಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ನೀತಿ ಸಂಹಿತೆ ಮುಗಿದ ನಂತರ ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಿಗೊಳಿಸಲಾಗುವುದು

ನಾಗರಾಜ ಕಂಕಾರಿ, ಮೇಯರ್

**

ಪಾಲಿಕೆ ಆವರಣ ಹಾಗೂ ಇತರೆ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಪಾಲಿಕೆ ಈ ಬಗ್ಗೆ ಗಮನ ಹರಿಸಬೇಕು. ಶೌಚಾಲಯಗಳನ್ನು ಬಳಕೆಗೆ ಮುಕ್ತಗೊಳಿಸಬೇಕು

ಅವಿನಾಶ್‌, ನಾಗರಿಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry