ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಗಳ ಮಾರಾಟ ಜೋರು

ನಾಗರಿಕರಿಗೆ ಶೋ ಪ್ಲಾಂಟ್‌ ಮೇಲೆ ಆಸಕ್ತಿ; ರೈತರಿಂದ ಹಣ್ಣು ಸಸಿಗಳ ಖರೀದಿ
Last Updated 28 ಮೇ 2018, 9:03 IST
ಅಕ್ಷರ ಗಾತ್ರ

ವಿಜಯಪುರ: ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ನಗರದ ವಿವಿಧಡೆ ಶೋ ಪ್ಲಾಂಟ್‌, ಹಣ್ಣು, ಹೂ ಸಸಿಗಳ ಖರೀದಿ ಜೋರಾಗಿದ್ದು, ಮಾರಾಟಗಾರರ ಮೊಗದಲ್ಲಿ ಸಂತಸ ಇಮ್ಮಡಿಗೊಂಡಿದೆ.

ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಸಕಾಲ ಎಂದುಕೊಂಡು ನಗರದ ಜನತೆ ಹೂ ಮತ್ತು ಶೋ ಪ್ಲಾಂಟ್‌ಗಳ, ರೈತ ಸಮುದಾಯ ಲಿಂಬಿ ಸೇರಿದಂತೆ ವಿವಿಧ ಹಣ್ಣು ಸಸಿಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ ಎದುರು, ಸೈನಿಕ ಶಾಲೆ ಮುಂಭಾಗ ಸೇರಿದಂತೆ ವಿವಿಧಡೆ ಸಸಿಗಳ ವ್ಯಾಪಾರ ಅಬ್ಬರಿಂದ ನಡೆಯುತ್ತಿದೆ.

‘ಪ್ರತಿ ವರ್ಷ ಮಳೆಗಾಲ ಆರಂಭಗೊಳ್ಳುವ ವೇಳೆ ಒಂದೆರಡು ಹೂವಿನ ಸಸಿಗಳನ್ನು ಕೊಂಡು ಮನೆಯ ಎದುರಿನ ಗಾರ್ಡನ್‌ನಲ್ಲಿ ನೆಡುತ್ತೇವೆ. ಬೇಸಿಗೆಯಲ್ಲಿ ಸರಿಯಾಗಿ ಹತ್ತುದಿಲ್ಲ. ಈ ಸಮಯದಲ್ಲಿ ನೆಡಿಸಿದರೇ ನೀರು ಹಾಕದಿದ್ದರೂ ಚೆನ್ನಾಗಿ ಬೆಳೆಯುತ್ತದೆ. ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕಳೆದ ಬಾರಿ ಇದ್ದಷ್ಟೆ ಐತಿ’ ಎನ್ನುತ್ತಾರೆ ನಗರದ ನಿವಾಸಿ ವೀಣಾ ಪಡ್ನೀಸ್.

‘ಈಗ ಚಲೋ ಮಳಿ ಆಗ್ಯಾದ. ಹೊಲದಾಗ ಹಚ್ಚಿದ್ರ ಗಿಡಗಳು ಹೊಗ್ಗುಣಿ ಆಗುದಿಲ್ಲ. ಹಿಂಗಾಗಿ ಐನೂರು ನಿಂಬಿ ಅಗೀ ಹಚ್ಚಾಕ ತಗೋಳಾಕತ್ತೀನಿ. ಎರಡ್ಮೂರ ಕಡೆ ನೋಡಿದ್ರಾಗ ಇಲ್ಲಿನ ಗಿಡಗೋಳ ಬೇಸ್‌ ಅನ್ಸ್ಯಾವ್‌. ಆದ್ರ ರೇಟ್‌ ಜರಾ ಹೆಚ್ಚಿಗೈತಿ ಅನ್ಸಾಕತ್ತಾದ. ಬಾಳ ತಗೋತೀವಿ ಅಂತ ಹೇಳಿ ಸ್ವಲ್ಪ ಕಡಿಮೆ ಮಾಡಿ ತಗೊಂಡ ಹೋಗ್ತೇವಿ. ನಿಂಬಿ ಹೊಲದ ಸುತ್ತಾ ಹಚ್ಚಾಕ ಒಂದಿಷ್ಟು ಮಾವಿನ ಗಿಡ, ಪೇರು ಗಿಡ, ಚಿಕ್ಕುನೂ ತಗೊತೀವಿ’ ಎಂದು ದೇವರ ಹಿಪ್ಪರಗಿಯ ರೈತ ನಾಗಪ್ಪ ಮಾವಿನ ಗಿಡದ ಹೇಳಿದರು.

‘ಹಲ ಬಗೆಯ ಹೂವು, ಹಣ್ಣು, ಶೋ ಪ್ಲಾಂಟ್‌ ಸಸಿಗಳನ್ನು ಆಂಧ್ರ ಪ್ರದೇಶದ ರಾಜಮಂಡ್ರಿ, ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ಪುಣೆಯಿಂದ ಖರೀದಿಸಿ ತಂದು ಮಾರುತ್ತೇವೆ. ಮಳೆಗಾಲದ ಮೂರು ತಿಂಗಳು ಮಾತ್ರ ಉತ್ತಮ ವ್ಯಾಪಾರ ಆಗುತ್ತದೆ. ಇನ್ನುಳಿದ ಒಂಬತ್ತು ತಿಂಗಳ ಮಾರಾಟ ಅಷ್ಟಕ್ಕಷ್ಟೆ. ಹಿಂಗಾಗಿ ಮಳೆಗಾಲದವರೆಗೆ ಉಳಿದ ಸಸಿಗಳನ್ನು ಸಂರಕ್ಷಿಸುವುದು ಸವಾಲಿನ ಕೆಲಸ’ ಎನ್ನುತ್ತಾರೆ ಸಸಿ ಮಾರಾಟಗಾರ ಆಂಧ್ರ ಪ್ರದೇಶದ ರಾಮು ಮೇಡಿದಾ.

ಸಸಿಗಳು ಮತ್ತು ದರ

ಲಿಂಬೆ ₹35 ರಿಂದ ₹125, ಚಿಕ್ಕು ₹125, ಮಾವು ₹70ರಿಂದ ₹125, ತೆಂಗು ₹125, ನೀಲಕಾಯಿ ₹125, ಪಪ್ಪಾಯಿ ₹40ರಿಂದ ₹80, ಹಲಸು ₹150, ಮೊಸಂಬಿ ₹125, ನಲ್ಲಿಕಾಯಿ ₹40ರಿಂದ ₹125, ಗುಲಾಬಿ ₹35ರಿಂದ ₹80, ದಾಸವಾಳ ₹40ರಿಂದ ₹80, ಸೇವಂತಿ ₹40ರಿಂದ ₹80, ಪಾಮ್‌ ₹10ರಿಂದ ₹200, ಅಶೋಕ ₹40ರಿಂದ ₹80, ಕ್ರಿಸ್‌ಮಸ್‌ ₹150, ತುಜಾ ₹80, ಕ್ರೋಟಾನ್ಸ್‌ ₹40ರಿಂದ ₹100ಗೆ ಮಾರಾಟ ಮಾಡಲಾಗುವುದು ಎಂದು ರಾಮು ತಿಳಿಸಿದರು.

**
ಮಳೆಗಾಲದಲ್ಲಿ ಸಸಿಗಳು ಹೆಚ್ಚು ವ್ಯಾಪಾರವಾಗುತ್ತದೆ. ಗ್ರಾಮೀಣರು ಹಣ್ಣಿನ ಸಸಿಗಳ ಹೆಚ್ಚು ಖರೀದಿಸಿದರೇ, ನಗರದಲ್ಲಿ ಶೋ ಪ್ಲಾಂಟ್‌ಗಳನ್ನು ಕೊಳ್ಳುತ್ತಾರೆ
ರಾಮು ಮೇಡಿದಾ, ಸಸಿಗಳ ವ್ಯಾಪಾರಿ

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT