ಮಾವಿನ ಮರದಿಂದ ಹಣ್ಣು ಕಿತ್ತು ಖರೀದಿ

7
ಕನಕಪುರ ವೆಂಕಟರಾಯನದೊಡ್ಡಿ ಗ್ರಾಮದಲ್ಲಿ ‘ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ’ ಸಂಭ್ರಮ

ಮಾವಿನ ಮರದಿಂದ ಹಣ್ಣು ಕಿತ್ತು ಖರೀದಿ

Published:
Updated:
ಮಾವಿನ ಮರದಿಂದ ಹಣ್ಣು ಕಿತ್ತು ಖರೀದಿ

ಕನಕಪುರ: ತಾಲ್ಲೂಕಿನ ವೆಂಕಟರಾಯನದೊಡ್ಡಿಯ ಮಾವು ಬೆಳೆಗಾರ ಮಂಜು ಅವರ ಮಾವಿನ ತೋಟದಲ್ಲಿ ಗ್ರಾಹಕರೇ ಮಾವಿನ ಮರದಿಂದ ನೇರವಾಗಿ ಹಣ್ಣುಗಳನ್ನು ಕಿತ್ತು ಖರೀದಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿಯು ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಯೋಜನೆಯಡಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಮಾವು ಕೊಳ್ಳಲು ಆಸಕ್ತಿ ಇರುವ ಗ್ರಾಹಕರಿಗೆ ಆನ್‌ಲೈನ್‌ ಮೂಲಕ ಯಾವ ಸ್ಥಳದಲ್ಲಿ ಮಾವು ದೊರೆಯುತ್ತದೆ ಎಂಬುದರ ಮಾಹಿತಿ ನೀಡಲಾಗಿತ್ತು.

ಬೆಂಗಳೂರು, ಮೈಸೂರು ಸೇರಿದಂತೆ ಹಲವು ಸ್ಥಳಗಳಿಂದ 60ಕ್ಕೂ ಹೆಚ್ಚು ರೈತರು ಮುಂಚಿತವಾಗಿ ಅವರ ಹೆಸರು ನೋಂದಾಯಿಸಿಕೊಂಡಿದ್ದರು.

ಈ ಮಾವಿನ ಪ್ರವಾಸಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ₹100 ಶುಲ್ಕವಾಗಿ ಕಟ್ಟಬೇಕಿರುತ್ತದೆ. ಒಂದು ಕುಟುಂಬವು ಕನಿಷ್ಠ 6 ಕೆ.ಜಿ ಮಾವಿನ ಹಣ್ಣು ಖರೀದಿ ಮಾಡಬೇಕಿರುತ್ತದೆ.

ಮಾವು ದೊರೆಯುವ ಸ್ಥಳದಲ್ಲೇ ಮಾವು ಬೆಳೆಗಾರರೇ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು. ಕಳೆದ ವರ್ಷದಿಂದ ಪ್ರಾರಂಭಗೊಂಡಿರುವ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಈ ವರ್ಷವು ಮುಂದುವರಿದಿರುತ್ತದೆ.

ತಾಲ್ಲೂಕಿನ ವೆಂಕಟರಾಯನದೊಡ್ಡಿ ಗ್ರಾಮದ ಮಾವು ಬೆಳೆಗಾರ ಮಂಜು ಅವರ ತೋಟವನ್ನು ಈ ಬಾರಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಮಾರು 16 ಎಕರೆ ಪ್ರದೇಶದಲ್ಲಿದ್ದ ಮಾವಿನ ತೋಟದಲ್ಲಿ ಬಾದಾಮಿ ಮತ್ತು ರಸಪುರಿ ಮಾವಿನ ತಳಿಗಳಿದ್ದವು.

ಟೂರಿಸಂಗೆ ಬಂದಿದ್ದ ಎಲ್ಲ ಗ್ರಾಹಕರು ತೋಟದಲ್ಲಿ ಓಡಾಡಿ ತಮಗೆ ಬೇಕಾದ ಬಲಿತ ಹಣ್ಣುಗಳನ್ನು ಕಿತ್ತು ಕ್ರೇಟ್‌ನಲ್ಲಿ ಸಂಗ್ರಹಿಸಿದ್ದರು. ಎಲ್ಲ ಗ್ರಾಹಕರು ಸೇರಿ 1500 ಕೆ.ಜಿ.ಯಷ್ಟು ತಾಜಾ ಹಣ್ಣುಗಳನ್ನು ಖರೀದಿ ಮಾಡಿದರು.

ಬಾದಾಮಿ 1 ಕೆ.ಜಿ.ಗೆ ₹ 50, ರಸಪೂರಿ 1 ಕೆ.ಜಿ.ಗೆ ₹ 40 ಬೆಲೆ ನಿಗದಿ ಮಾಡಲಾಗಿತ್ತು. ಯಾವ ಹಣ್ಣು ಹೇಗೆ ಕೀಳಬೇಕೆಂಬುದರ ಬಗ್ಗೆ ಇಲಾಖೆಯ ವತಿಯಿಂದ ಮೊದಲೇ ಮಾಹಿತಿ ನೀಡಲಾಗಿತ್ತು.

ಜಿಲ್ಲಾಧಿಕಾರಿ ಕ್ಯಾ.ಡಾ.ರಾಜೇಂದ್ರ ಅವರು ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಹಕರು ಮತ್ತು ರೈತರ ನಡುವೆ ನೇರ ಮಾರಾಟಕ್ಕೆ ಇದೊಂದು ಸೂಕ್ತ ವೇದಿಕೆಯಾಗಿದೆ ಎಂದರು.

ಈ ರೀತಿ ಮಾಡುವುದರಿಂದ ರೈತರಿಗೆ ಯಾವುದೇ ದಲ್ಲಾಳಿ ಕಮಿಷನ್‌ ಮತ್ತು ಸಾಗಾಣಿಕೆ ವೆಚ್ಚವಿಲ್ಲದೆ ಸ್ಥಳದಲ್ಲೇ ಮಾರಾಟ ಮಾಡಿ ನೇರವಾಗಿ ಹಣ ಪಡೆಯಬಹುದು ಎಂದರು.

ಗ್ರಾಹಕರು ನೇರವಾಗಿ ತೋಟಕ್ಕೆ ಹೋಗಿ ಅವರ ಸ್ವಂತ ತೋಟದಲ್ಲಿ ಹಣ್ಣು ಕೀಳುವಂತೆ ಅನುಭವದೊಂದಿಗೆ ಉತ್ತಮ ಗುಣಮಟ್ಟದ ತಾಜಾ ಹಣ್ಣುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ ಎಂದರು.

ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಧರಣೀಶ್‌ ಮಾತನಾಡಿ, ಎರಡೂ ತಾಲ್ಲೂಕಿನಲ್ಲಿ ವಿವಿಧ ತಳಿಗಳ ಮಾವನ್ನು ಅತಿ ಹೆಚ್ಚು ಬೆಳೆಯಲಾಗುತ್ತಿದೆ ಎಂದರು.

ಇಲ್ಲಿ ಉತ್ಕೃಷ್ಟವಾಗಿ ಮಾವಿನ ಫಸಲು ಬರುತ್ತಿದ್ದು ದೇಶದಲ್ಲೇ ಹೆಚ್ಚಿನ ಬೇಡಿಕೆಯಿದೆ. ಆದರೆ ರೈತರು ಮಾರಾಟ ಮಾಡಲು ಪ್ರಯಾಸ ಪಡಬೇಕು ಎಂದರು.

ಇಲ್ಲವೇ ಬೇರೆಯವರಿಗೆ ತೋಟವನ್ನು ಮಾರಾಟ ಮಾಡಬೇಕಿದೆ. ರೈತರಿಗೆ ನೇರವಾಗಿ ಗ್ರಾಹಕರ ಸಂಪರ್ಕ ಕಲ್ಲಿಸಲು ಕಳೆದೊಂದು ವರ್ಷದಿಂದ ಈ ಪ್ರಯತ್ನವನ್ನು ಮಾಡುತ್ತಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಜೆ.ಗುಣವಂತ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಹೇಂದ್ರಕುಮಾರ್‌, ತೋಟಗಾರಿಕೆ ಇಲಾಖೆಯ ಕುಮಾರ್‌ ಮತ್ತು ನಂಜುಂಡರಾಜೇ ಅರಸು ಮತ್ತು ಮಾವು ಬೆಳೆಗಾರ ತೋಟದ ಮಾಲಿಕ ಮಂಜುನಾಥ್‌ ಉಪಸ್ಥಿತರಿದ್ದರು.

ಕನಕಪುರದ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕ ಆರ್‌.ಹರೀಶ್‌ ಮಾತನಾಡಿ, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಹೊಸದಾಗಿ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಂ ಪ್ರಾರಂಭಿಸಿದೆ.

ವೆಂಕಟರಾಯನದೊಡ್ಡಿಯ ಮಾವು ಬೆಳೆಗಾರ ಮಂಜು ಅವರ 16 ಎಕರೆ ತೋಟವನ್ನು ಆಯ್ಕೆ ಮಾಡಿ ಮಾಹಿತಿಯನ್ನು ನೀಡಿತ್ತು. ಅವರು ಮಾವು ಕಟಾವು ಮಾಡದೆ ಬಿಟ್ಟಿದ್ದರು.

ಇಂದು ಗ್ರಾಹಕರು 1,500 ಕೆ.ಜಿ.ಖರೀದಿ ಮಾಡಿದ್ದಾರೆ. ಈ ವರ್ಷದಲ್ಲಿ ಮೊದಲನೆ ಕಾರ್ಯಕ್ರಮ ಇದಾಗಿದ್ದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry