ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಎತ್ತಲಿದೆ ಅತ್ಯಾಧುನಿಕ ಕ್ಯಾನ್ಸರ್‌ ಆಸ್ಪತ್ರೆ

ನಾಲ್ಕೈದು ಜಿಲ್ಲೆಗಳ ಏಕೈಕ ಚಿಕಿತ್ಸಾ ಕೇಂದ್ರ, ‘ಸುವರ್ಣ ಮಂಡ್ಯ’ದ ಸವಿನೆನಪಿಗಾಗಿ ಕಟ್ಟಡ
Last Updated 28 ಮೇ 2018, 9:46 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ಕಿದ್ವಾಯಿ ಕ್ಯಾನ್ಸರ್‌ ಪೆರಿಫೆರಲ್‌ ಘಟಕ ಮೇಲ್ದರ್ಜೆಗೇರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ₹ 56 ಕೋಟಿ ಅನುದಾನದಲ್ಲಿ ಅತ್ಯಾಧುನಿಕ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ತಲೆ ಎತ್ತುತ್ತಿದೆ.

ಮಿಮ್ಸ್‌ ಆವರಣದಲ್ಲಿದ್ದ ಟಿ.ಬಿ ಚಿಕಿತ್ಸಾ ಘಟಕ, ದಾಖಲಾತಿ ವಿಭಾಗವನ್ನು ತೆರವುಗೊಳಿಸಲಾಗಿದ್ದು ಆ ಜಾಗದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದೆ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಇನ್ನೂ ಭೂಮಿಪೂಜೆ ನೆರವೇರಿಸಿಲ್ಲ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಶೀಘ್ರ ಭೂಮಿಪೂಜೆ ನೆರವೇರಲಿದೆ.

ಕ್ಯಾನ್ಸರ್‌ಪೀಡಿತ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಒತ್ತಡ ಕಡಿಮೆ ಮಾಡಲು ಮಂಡ್ಯ ಹಾಗೂ ಕಲಬುರ್ಗಿಯಲ್ಲಿ 1994ರಲ್ಲಿ ಎರಡು ಅಂಗಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಆಗಿನಿಂದಲೂ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಯ ಕ್ಯಾನ್ಸರ್‌ ರೋಗಿಗಳಿಗೆ ಮಂಡ್ಯ ಘಟಕ ಗುಣಮಟ್ಟದ ಸೇವೆ ನೀಡುತ್ತಿತ್ತು.

ಭಾರತೀಯ ವೈದ್ಯಕೀಯ ಮಂಡಳಿ (ಎಂಐಸಿ) ನಿರ್ದೇಶನದಂತೆ ಸತಂತ್ರವಾಗಿದ್ದ ಮಂಡ್ಯ ಕ್ಯಾನ್ಸರ್‌ ಘಟಕ 2007ರಲ್ಲಿ ಮಿಮ್ಸ್‌ ಆಸ್ಪತ್ರೆಯೊಂದಿಗೆ ವಿಲೀನವಾಯಿತು. ನಾಲ್ಕು ಜಿಲ್ಲೆಗಳ ರೋಗಿಗಳಿಗೆ ಸೇವೆ ನೀಡುತ್ತಿದ್ದ ಈ ಘಟಕವನ್ನು ಮೇಲ್ದರ್ಜೆಗೇರಿಸುವ ಒತ್ತಾಯ ಮೊದಲಿನಿಂದಲೂ ಇತ್ತು. ರಮ್ಯಾ ಅವರು ಸಂಸದೆಯಾಗಿದ್ದ ಸಂದರ್ಭದಲ್ಲಿ ಕ್ಯಾನ್ಸರ್‌
ಘಟಕವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತು. ಈ ಹಿನ್ನೆಲೆಯಲ್ಲಿ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಮಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಖಾಲಿ ಇದ್ದ ಟಿ.ಬಿ ಘಟಕದಲ್ಲಿ ನೂತನ ಆಸ್ಪತ್ರೆ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಯಿತು.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಮಾದರಿಯಲ್ಲೇ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆ ನೀಡುವ ಯೋಜನೆ ಸಿದ್ಧಪಡಿಸಲಾಯಿತು. ಆರಂಭದಲ್ಲಿ ₹ 38 ಕೋಟಿಗೆ ಯೋಜನೆ ಸಿದ್ಧವಾಗಿತ್ತು. ಆದರೆ ಹಲವು ಕಾರಣಗಳಿಂದ ಯೋಜನೆ ಮುಂದಕ್ಕೆ ಹೋಯಿತ್ತು. ಇತ್ತೀಚೆಗೆ ಮಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ.ಮಂಜುಳಾ ಅವರು ಮಿಮ್ಸ್‌ಗೆ ಭೇಟಿ ನೀಡಿ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಒಂದು ತಿಂಗಳಿಂದ ಕಾಮಗಾರಿ ಭರದಿಂದ ಸಾಗಿದೆ. ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ಕಾಮಗಾರಿ ಆರಂಭವಾಗಿದೆ.

ಹೆಚ್ಚಾದ ವೆಚ್ಚ: ಯೋಜನೆ ಸಿದ್ಧವಾದಾಗ ₹ 38 ಕೋಟಿಗೆ ಅಂತಿಮಗೊಳಿಸಲಾಗಿತ್ತು. ಆದರೆ ಕಾಮಗಾರಿ ಆರಂಭವಾಗುವುದು ತಡವಾದ ಕಾರಣ ಯೋಜನಾ ವೆಚ್ಚ ಹೆಚ್ಚಾಗಿದೆ. ಕಟ್ಟಡ ನಿರ್ಮಾಣ ವೆಚ್ಚ, ಅತ್ಯಾಧುನಿಕ ವೈದ್ಯಕೀಯ ಸಲಕರಣೆ, ಸಿಬ್ಬಂದಿ ನೇಮಕ ಸೇರಿ ಒಟ್ಟು ವೆಚ್ಚ ₹ 56 ಕೋಟಿಗೇರಿದೆ. ಕೇಂದ್ರ ಸರ್ಕಾರ ₹ 38 ಕೋಟಿ ಬಿಡುಗಡೆ ಮಾಡುತ್ತಿದ್ದು ಉಳಿದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

‘ಕಾನ್ಯರ್‌ಗೆ ಸಿಗುವ ವಿಶ್ವದ ಪ್ರಸಿದ್ಧ ಅತ್ಯಾಧುನಿಕ ಚಿಕಿತ್ಸೆ ಮಂಡ್ಯದಲ್ಲೂ ಸಿಗುತ್ತದೆ. ಆ ಉದ್ದೇಶದಿಂದಲೇ ಆಧುನಿಕ ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಶೀಘ್ರ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿ ಉತ್ತಮ ಚಿಕಿತ್ಸೆ ದೊರೆತರೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಒತ್ತಡ ಕಡಿಮೆಯಾಗುತ್ತದೆ. ಈ ಉದ್ದೇಶದಿಂದ ಕಿದ್ವಾಯಿ ಆಸ್ಪತ್ರ ನಿರ್ದೇಶಕರೇ ಯೋಜನೆ ರೂಪಿಸಿದ್ದಾರೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಜಿ.ಎಂ.ಪ್ರಕಾಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT