ಹೆಬ್ರಿ 60: ಸಾಂಸ್ಕೃತಿಕ ಕಲಾ ಸಂಗಮ

7
ಅಭಿನಂದನಾ ಗ್ರಂಥ ಸೇರಿ 17 ಪುಸ್ತಕಗಳ ಬಿಡುಗಡೆ, ಜೂನ್‌ 3ರಂದು ಕಲಾ ವೈಭವ

ಹೆಬ್ರಿ 60: ಸಾಂಸ್ಕೃತಿಕ ಕಲಾ ಸಂಗಮ

Published:
Updated:
ಹೆಬ್ರಿ 60: ಸಾಂಸ್ಕೃತಿಕ ಕಲಾ ಸಂಗಮ

ಮಂಡ್ಯ: ಹಿರಿಯ ಸಾಹಿತಿ ಡಾ.ಪ್ರದೀಪ್‌ ಕುಮಾರ್‌ ಹೆಬ್ರಿ ಅವರಿಗೆ 60 ವರ್ಷ ತುಂಬುತ್ತಿರುವ ಅಂಗವಾಗಿ ಜೂನ್‌ 3ರಂದು ಅಭಿನಂದನಾ ಗ್ರಂಥ ಸೇರಿ ಒಟ್ಟು 17 ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ. ಅವುಗಳಲ್ಲಿ ಹೆಬ್ರಿ ಅವರ 12 ಪುಸ್ತಕ ಲೋಕಾರ್ಪಣೆಯಾಗುತ್ತಿವೆ.

ನಾಲ್ವಡಿ ಕೃಷ್ಣರಾಜ ಕಲಾಮಂದಿರ ದಲ್ಲಿ ಸಾಂಸ್ಕೃತಿಕ ಉತ್ಸವದ ಜೊತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕವಿ, ಕಾವ್ಯ, ಸಂಗೀತ, ನೃತ್ಯ, ಜಾನಪದ ಸಂಗಮಿಸುತ್ತಿದ್ದು ಮಂಡ್ಯದ ಜನತೆ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ‘ರಾಜ ದೀಪ’ ಅಭಿನಂದನಾ ಗ್ರಂಥ, ಡಾ.ಹೆಬ್ರಿ ಅವರ 12 ಪುಸ್ತಕ ಹಾಗೂ ನಾಡಿನ ವಿವಿಧ ಸಾಹಿತಿಗಳು ಹೆಬ್ರಿ ಅವರ ಕಾವ್ಯಕೃಷಿ ಕುರಿತು ಕಟ್ಟಿದ 4 ಗ್ರಂಥಗಳು ಲೋಕಾರ್ಪಣೆಯಾಗುತ್ತಿವೆ.

ಸಾಂಸ್ಕೃತಿಕ ಸಂಭ್ರಮದಲ್ಲಿ ಗುರುದೇವೆ ಲಲಿತಕಲಾ ಅಕಾಡೆಮಿ, ಚಿದಂಬರನಟೇಶ ನಾಟ್ಯ ಶಾಲಾ, ನೃತ್ಯ ಕೃಪಾ ಕಲಾಶಾಲೆ, ಮೃಡಾನಿ ಸ್ಕೂಲ್‌ ಆಫ್‌ ಡಾನ್ಸ್‌ ತಂಡಗಳು ಭರತನಾಟ್ಯ ಕಾರ್ಯಕ್ರಮ ನೀಡುತ್ತಿವೆ. ರೋಟರಿ ವಿದ್ಯಾಸಂಸ್ಥೆ, ಡ್ಯಾಫೊಡಿಲ್ಸ್‌ ಪಬ್ಲಿಕ್‌ ಶಾಲೆ, ಶಾರದಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಜನಪದ ನೃತ್ಯ ಕಾರ್ಯ ಕ್ರಮ ನೀಡುತ್ತಿದ್ದಾರೆ. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಸುಸ್ವರ ಸಂಗೀತ ಶಾಲೆ, ಕಾವ್ಯಗಂಗಾ ಸುಮಗ ಸಂಗೀತ ಬಳಗದ ಕಲಾವಿದರು ಗಾಯನ ಕಾರ್ಯಕ್ರಮ ನೀಡುತ್ತಿದ್ದಾರೆ.‌

ವಿದ್ಯಾಗಣಪತಿ ಗಮಕ ಶಿಕ್ಷಣ ಶಾಲೆ, ರಂಜನಿ ಕಲಾವೇದಿಕೆಯಿಂದ ಕಾವ್ಯವಾಚನ ನಡೆಯಲಿದೆ. ಶ್ರೀಕೃಣ್ಣ ಮಂಡಳಿಯಿಂದ ಚಂಡೆವಾದನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ವಚನ ಗಾಯನ, ಕರಾವಳಿ ಸಾಂಸ್ಕೃತಿಕ ಒಕ್ಕೂಟದಿಂದ ಯಕ್ಷಗಾನ, ಪ್ರತಿಭೆ ವೇದಿಕೆಯಿಂದ ವಾದ್ಯ ಸಂಗೀತ, ಚೈತನ್ಯ ಬಳಗದಿಂದ ರಂಗಗೀತೆ, ಸಂಸ್ಕೃತಿ ಸಂಘಟನೆಯಿಂದ ಕಾವ್ಯಾಭಿನಂದನೆ ಕಾರ್ಯಕ್ರಮ ನಡೆಯಲಿದೆ.

ಜೂನ್‌ 3ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ನಡೆಯಲಿದ್ದು ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸ್ಕೃತಿ ಸಂಘಟನೆ ಅಧ್ಯಕ್ಷ ಕೆ.ಪ್ರಹ್ಲಾದರಾವ್‌ ಅಧ್ಯಕ್ಷತೆ ವಹಿಸುವರು. ಸಾಹಿತಿ ಚಂದ್ರಕಾಂತ ಕರದಳ್ಳಿ ಅಭಿನಂದನಾನುಡಿಗಳನ್ನಾಡುವರು. ಅತಿಥಿಗಳಾಗಿ ಎಂ.ಎಸ್‌.ಆತ್ಮಾನಂದ, ಬೆಳ್ಳೂರು ಶಿವರಾಂ, ಡಾ.ಟಿ.ಎಸ್‌.ಸತ್ಯನಾರಾಯಣರಾವ್‌, ಡಾ.ಜಿ.ಎ. ರಮೇಶ್‌, ವಿ.ಎಸ್‌.ಶ್ರೀದೇವಿ ಭಾಗವಹಿಸುವರು. ಡಾ.ಹೆಬ್ರಿ ಅವರ ಕಾವ್ಯ ಕುರಿತು ಗುಲ್ಬರ್ಗ ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ವಿದ್ಯಾರ್ಥಿನಿ ಶಿವಬಸಮ್ಮ ಅವರಿಗೆ ಇದೇ ಸಂದರ್ಭದಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯಲಿದೆ.

‘ಕಾವ್ಯ ಸಾಂಗತ್ಯದಲ್ಲಿ ಆನಂದ ಅನುಭವಿಸಿದ್ದೇನೆ ನಿಜ, ಆದರೆ ಒಳಗೊಳಗೆ ನೋವನ್ನೂ ಕಂಡಿದ್ದೇನೆ. ನಾವು ವಿದ್ಯಾವಂತರಾದೆವು, ಬುದ್ಧಿವಂತ ರಾದೆವು, ಆದರೆ ಪ್ರಜ್ಞಾವಂತರಾಗಲಿಲ್ಲ ಎಂಬು ನೋವು ನನ್ನನ್ನು ಕಾಡುತ್ತಿದೆ. ನಾವು ಅಕ್ಷರ ಕಲಿತು ಸಾಕ್ಷರರಾಗಲಿಲ್ಲ, ರಾಕ್ಷಸರಾಗುತ್ತಿದ್ದೇವೆ. ಕಾಯಕ, ದಾಸೋಹದ ಅರಿವು ನಮಗೆ ಆಗಲೇ ಇಲ್ಲ. ಅಹಂಕಾರ, ನಾನತ್ವ ನಮ್ಮೊಳಗಿದೆ. ಸಮಷ್ಟಿ ಪ್ರಜ್ಞೆ ನಮ್ಮೊಳಗೆ ಅರಳಲಿಲ್ಲ. ಇನ್ನೊಬ್ಬರನ್ನು ಒಪ್ಪಿಕೊಳ್ಳುವ ಗುಣವನ್ನೇ ಬೆಳೆಸಿಕೊಳ್ಳಲಿಲ್ಲ. ನಮಗೆ ಸಮಾಜದಿಂದ ಎಲ್ಲಾ ಸಿಕ್ಕಿದ್ದರೂ ನಾವು ಸಮಾಜಕ್ಕೆ ಏನು ಕೊಟ್ಟೆವು ಎಂದಾಗ ಗಾಢ ಮೌನ ಆವರಿಸಿಕೊಳ್ಳುತ್ತದೆ. ಮೌನವನ್ನು ಮೀರಿದ ಸಮಷ್ಟಿ ಪ್ರಜ್ಞೆ ನಮ್ಮೊಳಗೆ ಮೂಡಬೇಕು, ಕಾಯಕಯೋಗಿ, ದಾಸೋಹಿಗಳಾಗಬೇಕು’ ಎಂದು ಡಾ. ಹೆಬ್ರಿ ಹೇಳಿದರು.

ಬಿಡುಗಡೆಯಾಗಲಿರುವ ಕೃತಿಗಳು

ಹೆಬ್ರಿ ಅವರ ಕೃತಿಗಳು; ಯಾರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ, ನಿಮ್ಮ ಕೃತಿ– ನನ್ನ ಓದು, ಪ್ರಭು ಅಲ್ಲಮ, ಕಂಪಸೂಸುವ ಕುಸುಮ, ಡಾ.ಬಿ.ಆರ್‌.ಅಂಬೇಡ್ಕರ್‌, ಆರೋಗ್ಯ ಸಂಪದ, ತೋಟಮಲ್ಲಿಗೆ ಹೂವು, ಮಡಿವಾಳ ಮಾಚಿ ತಂದೆ, ನಂದನ, ಸುಖೀ ಬದುಕು, ಭಕ್ತಿಗೆ ಅನುಭಾವವೇ ಬೀಜ, ದೀಪ ಚಿಂತನೆ.

ಹೆಬ್ರಿ ಅವರ ಕಾವ್ಯದ ಕುರಿತು ಬರೆದಿರುವ ಕೃತಿಗಳು; ಡಾ.ಎಸ್‌.ಶ್ರೀನಿವಾಸ ಶೆಟ್ಟಿ ಅವರ ‘ಕೃತಿ ಕನ್ನಡಿ’, ಡಾ.ಪಿ.ಸುಮಾರಾಣಿ ಶಂಭು ಅವರ ‘ನವ ಕಾವ್ಯ ನಿಧಿ’, ಡಾ.ಕರುಣಾಕರ ಎನ್‌ ಶೆಟ್ಟಿ ಅವರ ‘ಪ್ರದೀಪಾವಲೋಕನ’, ಭಾಸ್ಕರ ಮಾಳ್ವ ಸುರತ್ಕಲ್‌ ಅವರ ‘ಕಾವ್ಯ ತಪಸ್ವಿ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry