ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟ: ಕುಡಿಯುವ ನೀರಿಗೆ ತತ್ವಾರ

ಒಂದು ವಾರದಿಂದ ನೀರಿಗೆ ಸಮಸ್ಯೆ; ಭಕ್ತರು ಹಾಗೂ ಸ್ಥಳೀಯರ ಪರದಾಟ
Last Updated 28 ಮೇ 2018, 10:20 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಒಂದು ವಾರದಿಂದಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ಪ್ರಯಾಣಿಕರು ಹಾಗೂ ಇಲ್ಲಿನ ನಾಗರಿಕರಿಗೆ ತೀವ್ರ ತೊಂದರೆ ಉಂಟಾಗಿದೆ.

ನಂಜಯ್ಯನ ಮಠ ವರದಿಯನ್ವಯ ಯರಗಂಬಳ್ಳಿ ಗ್ರಾಮ ಪಂಚಾಯಿತಿ ಯಿಂದ ಬೇರ್ಪಟ್ಟ ಬಿಳಿಗಿರಿರಂಗನ ಬೆಟ್ಟವನ್ನು ಪ್ರತ್ಯೇಕ ಪಂಚಾಯಿತಿಯನ್ನು ರಚಿಸಿ ವರ್ಷವೇ ಉರುಳಿದೆ. ಆದರೆ, ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿದ್ಯುತ್‌ ವ್ಯತ್ಯಯ, ಕೊಳವೆಬಾವಿ ದುರಸ್ತಿ ನೆಪವೊಡ್ಡಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಖಾಸಗಿ ಜಮೀನು ಅಥವಾ ದೂರದಲ್ಲಿರುವ ಕೊಳವೆಬಾವಿಗಳಿಂದ ತುಂಬಿಸಿಕೊಂಡು ಬರಬೇಕಾಗಿದೆ.

ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಕಾಡುಪ್ರಾಣಿ ಭಯದ ಜೊತೆಗೆ ಪ್ರಯಾಸಪಡುವ ಸ್ಥಿತಿ ಇದೆ ಎಂದು ಸ್ಥಳೀಯರಾದ ಅಂಗಡಿ ನಾಗೇಂದ್ರ ಅಳಲು ತೋಡಿಕೊಂಡರು.

ಬಿಳಿಗಿರಿರಂಗನಬೆಟ್ಟ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿ ದಿನನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಅವರಿಗೂ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ ಎಂದರು.

ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಇರುತ್ತದೆ. ದೊಡ್ಡ ರಥದ ಬೀದಿಯಿಂದ ರೇಷ್ಮೆ ಕಾರ್ಖಾನೆಯವರೆಗೆ 8 ಕೈಪಂಪುಗಳಿವೆ. ಆದರೆ, ಇದರೊಳಗಿನ ಪೈಪುಗಳೇ ಮಾಯವಾಗಿವೆ. ಇದನ್ನರಿಯದ ಹೊರಗಿನಿಂದ ಬಂದ ಭಕ್ತರು ಕೈಪಂಪುಗಳನ್ನು ಒತ್ತಿ ಸುಸ್ತಾಗುತ್ತಾರೆ. ನಂತರ ಸ್ಥಳೀಯರನ್ನು ವಿಚಾರಿಸಿ ಬೇರೆಡೆ ಹೋಗುತ್ತಾರೆ ಎಂದು ಇಲ್ಲಿನ ನಿವಾಸಿ ಮಹಾದೇವಸ್ವಾಮಿ ಹೇಳಿದರು.

ಹಣಕೊಟ್ಟು ನೀರು ಕೊಳ್ಳುವ ಪರಿಸ್ಥಿತಿ

ನೀರಿನ ತೊಂಬೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುವುದಿಲ್ಲ. ಹರಕೆ ಹೊತ್ತ ಭಕ್ತರು ಇಲ್ಲೇ ಅರವಟ್ಟಿಗೆ ಮಾಡಿ ಅಡುಗೆ ಮಾಡಲೂ ಪರದಾಡುವ ಸ್ಥಿತಿ ಇದೆ. ಹಣ ಪಾವತಿಸಿ 20 ಲೀಟರ್‌ ನೀರಿನ ಬಾಟಲಿಗಳನ್ನು ಖರೀದಿಸುವಂತಾಗಿದೆ ಎಂದು ಭಕ್ತರಾದ ನಾಗೇಶ, ಮಂಜುನಾಥ ದೂರಿದರು.

ಅಲ್ಲದೆ ಇರುವ ಒಂದೇ ಒಂದು ಸಾರ್ವಜನಿಕ ಶೌಚಾಲಯಕ್ಕೂ ಸಮರ್ಪಕ ನೀರು ಪೂರೈಕೆಯಾಗದೆ ಇದರ ಬಳಕೆಯೂ ಸಮರ್ಪಕವಾಗಿ ಆಗುತ್ತಿಲ್ಲ. ಪ್ರಯಾಣಿಕರ ಪರಿಸ್ಥಿತಿ ಅಯೋಮಯವಾಗಿದೆ ಎನ್ನುತ್ತಾರೆ ಮೈಸೂರಿನ ವಾಸಿ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT