ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ ಫಲಿತಾಂಶ: ಖಾಸಗಿ ಶಾಲೆಗಳಿಗಿಂತ ದೆಹಲಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೇಲುಗೈ ಸಾಧಿಸಲು ಕಾರಣವೇನು ಗೊತ್ತೆ?

Last Updated 29 ಮೇ 2018, 11:32 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿದ ಬಳಿಕ ಶಿಕ್ಷಣ ಮತ್ತು ಆರೋಗ್ಯ ವಲಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ವರ್ಷದ ಬಜೆಟ್‌ನ ಶೇ 24 ರಷ್ಟು ಮೊತ್ತವನ್ನು ಶಿಕ್ಷಣ ಕ್ಷೇತ್ರಕ್ಕೆ ಆಪ್‌ ಸರ್ಕಾರ ಮೀಸಲಿಟ್ಟಿತ್ತು. ಆ ನಡೆಯ ಫಲಿತಾಂಶವೀಗ ಹೊರಬಿದ್ದಂತೆ ಕಾಣುತ್ತಿದೆ. ಶನಿವಾರ ಪ್ರಕಟಗೊಂಡ ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶದಲ್ಲಿ ಖಾಸಗಿ ಶಾಲೆಗಳಿಗಿಂತ ದೆಹಲಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷದಲ್ಲಿ ಉತ್ತೀರ್ಣತೆಯ ಪ್ರಮಾಣ ಶೇ 88.36 ಇತ್ತು. ಈ ವರ್ಷ ಅದು ಶೇ 90.68ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳ ಪಾಸಾಗುವ ಪ್ರಮಾಣ ಶೇ 4.15ರಷ್ಟು ಹೆಚ್ಚಾಗಿ ಶೇ 88.35ಕ್ಕೆ ತಲುಪಿದೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಪ್ರಿನ್ಸ್‌ ಕುಮಾರ್‌ ಎಂಬ ವಿದ್ಯಾರ್ಥಿ ಶೇ 97 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. ಇತ ದೆಹಲಿ ಸಾರಿಗೆ ಸಂಸ್ಥೆಯಲ್ಲಿನ ಚಾಲಕರೊಬ್ಬರ ಮಗ. ಕುಮಾರ್‌ ಗಣಿತದಲ್ಲಿ 100, ಅರ್ಥಶಾಸ್ತ್ರದಲ್ಲಿ 99 ಮತ್ತು ರಸಾಯನ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿದ್ದಾನೆ.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದ ಬಳಿಕ ದೆಹಲಿಯ ಶಿಕ್ಷಣ ಸಚಿವ ಮನಿಷ್ ಸಿಸೋಡಿಯಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮೂಹಕ್ಕೆ ಟ್ವಿಟರ್‌ ಮೂಲಕ ಅಭಿನಂದನೆ ಸಲ್ಲಿಸಿದ್ದರು.

‘ನಮ್ಮ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕಾಲುಭಾಗವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ. ಅದರಿಂದ ಶಾಲೆಗಳಲ್ಲಿ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಶಾಲಾಕೊಠಡಿಗಳು, ಸಭಾಂಗಣ, ಗ್ರಂಥಾಲಯಗಳೊಂದಿಗೆ, ಈಜುಕೋಳ, ಪುಟ್ಬಾಲ್‌, ಹಾಕಿ ಮೈದಾನ ಮತ್ತು ಓಟದ ಟ್ರ್ಯಾಕ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಶಿಕ್ಷಕರಿಗೆ ಅಗತ್ಯವಾಗಿರುವ ಗುಣಮಟ್ಟದ ತರಬೇತಿ ನೀಡುತ್ತಿದ್ದೇವೆ’ ಎಂದು ಸಿಸೋಡಿಯಾ ಸಂದರ್ಶನವೊಂದರಲ್ಲಿ ಹೇಳಿದ್ದರು.

ದೆಹಲಿ ಸರ್ಕಾರ 2018–19 ನೇ ಸಾಲಿನ ಬಜೆಟ್‌ನಲ್ಲಿ ₹ 13,997(ಶೇ 26 ರಷ್ಟು) ಕೋಟಿಗಳನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ. ಈ ಮೊತ್ತದಲ್ಲಿ ಶಾಲಾ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಯ ತರಬೇತಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಮೂಡಿಸಲು ಯೋಜಿಸಿದೆ.

ಸಿಸೋಡಿಯಾ ಅವರಿಗೆ ಶಿಕ್ಷಣ ಸಲಹೆಗಾರರಾಗಿದ್ದ ಅತಿಶಿ ಮರ್ಲಿನಾ ಸಹ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇದು ಸಾಧ್ಯವಾಗಲಿದೆ ಎಂದು ಯಾರಾದರೂ ಊಹಿಸಿದ್ದರೇ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

**
ನಮ್ಮ ದೇಶದ ಬಹುದೊಡ್ಡ ದುರಂತವೆಂದರೆ ನಾವು ಶಿಕ್ಷಣಕ್ಕಾಗಿ ಹೆಚ್ಚು ಅನುದಾನ ಮೀಸಲಿಡುವುದಿಲ್ಲ. ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ, ಶಿಕ್ಷಣವನ್ನು ನಿರ್ಲಕ್ಷಿಸಿದ್ದೇವೆ. ಶಿಕ್ಷಣವೆಂಬ ಬುನಾದಿಯಿಲ್ಲದೆ, ದೇಶ ಕಟ್ಟಲು ಆಗುವುದಿಲ್ಲ.
–ಮನಿಷ್ ಸಿಸೋಡಿಯಾ
*

ಮುಖ್ಯಾಂಶಗಳು:

* ದೆಹಲಿ ವಲಯದಲ್ಲಿ 1000ಕ್ಕೂ ಹೆಚ್ಚು ಸಿಬಿಎಸ್‌ಇ ಪಠ್ಯದ ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ.

* 168 ಸರ್ಕಾರಿ ಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ(ಶೇ 100 ಫಲಿತಾಂಶ). ಕಳೆದ ವರ್ಷ 112 ಶಾಲೆಗಳು ಈ ಸಾಧನೆ ಮಾಡಿದ್ದವು.

* 638 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಕಳೆದ ವರ್ಷ ಈ ಸಾಧನೆ 554 ಶಾಲೆಗಳಲ್ಲಿ ಸಾಧ್ಯವಾಗಿತ್ತು.

* ಪರೀಕ್ಷೆ ಬರೆದ 1,12,826 ವಿದ್ಯಾರ್ಥಿಗಳಲ್ಲಿ 1,02,260(ಶೇ 90.68) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT